ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಅಭಿವೃದ್ಧಿಗೆ ₹ 18 ಲಕ್ಷ ಮಂಜೂರು

Last Updated 7 ಜೂನ್ 2017, 7:17 IST
ಅಕ್ಷರ ಗಾತ್ರ

ಕಾರವಾರ: ‘ಜಿಲ್ಲೆಯ ಪ್ರಗತಿಗೆ ಶ್ರಮಿಸುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯು ಕೃಷಿ ಪೂರಕ ಚಟುವಟಿಕೆಗಳಿಗೆ ಪ್ರಸಕ್ತ ಸಾಲಿನಲ್ಲಿ ₹ 18 ಲಕ್ಷ ಅನುದಾನವನ್ನು ಮಂಜೂರು ಮಾಡಿದೆ’ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಎಂ.ಲಕ್ಷ್ಮಣ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಾರಿ ಜಿಲ್ಲೆಯ ನಾಲ್ಕು ಕೆರೆಗಳ ಹೂಳೆತ್ತುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಬಗ್ಗೆ ತೀರ್ಮಾನಿಸಿದ್ದೇವೆ. ಶಿರಸಿ ತಾಲ್ಲೂಕಿನ ಕಾಯಿಗುಡ್ಡೆ ಕೆರೆ, ಬಿಸಿಲಕೊಪ್ಪದ ಕೆರೆಯನ್ನು ಈಗಾಗಲೇ ಗುರುತಿಸಲಾಗಿದ್ದು, ಯಲ್ಲಾಪುರ ಹಾಗೂ ಹಳಿಯಾಳದ ತಲಾ ಒಂದೊಂದು ಕೆರೆಯನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದೇವೆ.  ಈ ನಾಲ್ಕು ಕೆರೆಗಳಿಗೆ ತಲಾ ₹ 5 ಲಕ್ಷ ವಿನಿಯೋಗಿಸಲಾಗುವುದು ಹಾಗೂ ಮುಂದಿನ ಜನವರಿ ನಂತರ ಈ ಕಾಮಗಾರಿಗೆ ಚಾಲನೆ ನೀಡಲಿದ್ದೇವೆ’ ಎಂದು ಹೇಳಿದರು.

‘ಕೃಷಿ ಯಂತ್ರಾಧಾರೆ’ಯಲ್ಲಿ ಸಾಧನೆ: ‘ಸರ್ಕಾರದ ಯೋಜನೆಯಡಿ ಜಿಲ್ಲೆಯ 11 ಹೋಬಳಿ ಕೇಂದ್ರಗಳಲ್ಲಿ ಕೃಷಿ ಯಂತ್ರೋಪಕರಣ ಬಾಡಿಗೆ ಆಧಾರಿತ ಸೇವಾ ಕೇಂದ್ರವನ್ನು ತೆರೆಯಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಬೇಕಾದ ಟ್ರ್ಯಾಕ್ಟರ್‌, ಟಿಲ್ಲರ್‌, ನಾಟಿ ಯಂತ್ರ ಹಾಗೂ ಕಟಾವು ಯಂತ್ರವನ್ನು ಇಡಲಾಗಿದೆ.

ಇವುಗಳಿಗೆ ಖರೀದಿಗೆ ಪ್ರತಿ ಕೇಂದ್ರಕ್ಕೆ ಸರ್ಕಾರ ₹ 50 ಲಕ್ಷ ನೀಡಿದ್ದು ಸಂಸ್ಥೆ ವತಿಯಿಂದ ₹ 25 ಲಕ್ಷ ಬಂಡವಾಳ ಹೂಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 21,000ಕ್ಕೂ ಅಧಿಕ ರೈತರು ಬಾಡಿಗೆ ಯಂತ್ರಗಳ ಪ್ರಯೋಜನೆ ಪಡೆದಿದ್ದಾರೆ. ಈ ಬಾರಿಯು 890 ರೈತ ಕುಟುಂಬಗಳಿಗೆ ಇದರ ಲಾಭವನ್ನು ತಲುಪಿಸುವ ಗುರಿ ಹೊಂದಿದ್ದೇವೆ’ ಎಂದು ವಿವರಿಸಿದರು.

ಶ್ರಿಪದ್ಧತಿ ಭತ್ತದ ಬೇಸಾಯ: ‘ಸಂಸ್ಥೆ ವತಿಯಿಂದ ಜಿಲ್ಲೆಯ ರೈತರಿಗೆ ಶ್ರೀಪದ್ಧತಿ ಭತ್ತದ ಬೇಸಾಯವನ್ನು ಪರಿಚಯಿಸಿ, ತರಬೇತಿ ನೀಡಲಾಗಿದೆ. 2016–17ರಲ್ಲಿ 238 ಕುಟುಂಬಗಳಲ್ಲಿ 207 ಎಕರೆ ಪ್ರದೇಶದಲ್ಲಿ ಈ ಪದ್ಧತಿಯನ್ನು ಅನುಸರಿಸಲಾಗಿದೆ. ಇದರಿಂದ ರೈತರು ಹಿಂದಿಗಿಂತ ಎರಡು ಪಟ್ಟು ಹೆಚ್ಚು ಇಳುವರಿಯನ್ನು ಪಡೆದಿದ್ದಾರೆ. ಅಲ್ಲದೇ ಕಗ್ಗಾ ಭತ್ತ, ಸೋನಾ ಮಸೂರಿ, ಸಣ್ಣಕ್ಕಿ ಭತ್ತವನ್ನು ನಾಟಿ ಮಾಡಲಾಗಿದೆ’ ಎಂದು ಹೇಳಿದರು.

ಗುರಿಗಳು: ‘2017–18ನೇ ಸಾಲಿನಲ್ಲಿ 830 ಕುಟುಂಬಗಳಿಗೆ ಸೋಲಾರ್ ಅಳವಡಿಕೆ, 165 ಕುಟುಂಬಗಳಿಗೆ ಗೋಬರ್‌ಗ್ಯಾಸ್‌ ರಚನೆ, 485 ಕುಟುಂಬಗಳಿಗೆ ಶ್ರೀಪದ್ಧತಿ ಅನುಷ್ಠಾನ, 3,900 ಶೌಚಾಲಯ ನಿರ್ಮಾಣ, 377 ನಿರ್ಗತಿಕರಿಗೆ ಮಾಶಾಸನ ವಿತರಣೆ ಮಾಡಲಾಗುವುದು’ ಎಂದರು.  

ಜಿಲ್ಲಾ ಎಂಐಎಸ್‌ ಯೋಜನಾಧಿಕಾರಿ ಸ್ವಪ್ನಾ ಪ್ರಕಾಶ್‌, ಯೋಜನಾಧಿಕಾರಿಗಳಾದ ಎಂ.ಎಸ್‌.ಈಶ್ವರ, ಹರೀಶ್‌ ಪಾವಸ್ಕರ್‌, ಎಸ್‌.ಜನಾರ್ದನ, ನಾರಾಯಣ ಪಾಲನ್‌, ಕೇಶವ ದೆವಾಂಗ ಹಾಜರಿದ್ದರು.

14,807 ಪ್ರಗತಿಬಂಧು ಸಂಘಗಳ  ರಚನೆ
‘ರೈತ ಸಮುದಾಯದ ಸಂಘಟನೆಗಾಗಿ, ಶ್ರಮ ವಿನಿಮಯದಿಂದ ಕೂಲಿಯಾಳುಗಳ ಸಮಸ್ಯೆ ನಿವಾರಣೆಗಾಗಿ ಮತ್ತು ಮಹಿಳೆಯರಲ್ಲಿ ಸ್ವ ಉದ್ಯೋಗದ ಮುಖಾಂತರ ಆರ್ಥಿಕ ಸಬಲೀಕರಣಕ್ಕಾಗಿ ಜಿಲ್ಲೆಯಾದ್ಯಂತೆ 14,807 ಪ್ರಗತಿಬಂಧು ಸ್ವಸಹಾಯ ಸಂಘಗಳನ್ನು ರಚಿಸಲಾಗಿದೆ.

ಈ ಸಂಘಗಳಲ್ಲಿ ಪ್ರತಿ ವಾರ ಸದಸ್ಯರಿಂದ ತಲಾ ₹ 10ರಿಂದ 20 ಉಳಿತಾಯ ಮಾಡುತಿದ್ದು, ಈವರೆಗೆ ಒಟ್ಟು ₹ 48.49 ಕೋಟಿ ಉಳಿತಾಯ ಆಗಿರುತ್ತದೆ’ ಎಂದು ಲಕ್ಷ್ಮಣ್‌ ಹೇಳಿದರು.

* *  

ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭವಾಗಿ 12 ವರ್ಷಗಳಾಗಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದೇವೆ
ಎಂ.ಲಕ್ಷ್ಮಣ
ಯೋಜನೆಯ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT