ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್‌ನಲ್ಲಿ ಐಎಸ್‌ ದಾಳಿ: 12 ಸಾವು

Last Updated 7 ಜೂನ್ 2017, 17:41 IST
ಅಕ್ಷರ ಗಾತ್ರ

ಟೆಹರಾನ್ (ಎಎಫ್‌ಪಿ): ಇರಾನ್ ಸಂಸತ್ ಭವನ ಹಾಗೂ ಧಾರ್ಮಿಕ ನಾಯಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ಸಮಾಧಿ ಮೇಲೆ ಬಂದೂಕುಧಾರಿಗಳು ಹಾಗೂ ಆತ್ಮಾಹುತಿ ದಾಳಿಕೋರರು ಬುಧವಾರ ನಡೆಸಿದ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ.

ಎರಡೂ ಘಟನೆಗಳಲ್ಲಿ 42 ಜನ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಅಂತರ್ಜಾಲ ತಾಣ ಮಿಝನ್ ವರದಿ ಮಾಡಿದೆ.

ಅಧಿವೇಶನದ ಸಂದರ್ಭದಲ್ಲೇ ದಾಳಿ ನಡೆಸಿದ ಬಂದೂಕುಧಾರಿಯನ್ನು ಐದು  ಗಂಟೆಗಳ ಕಾರ್ಯಾಚರಣೆ ಬಳಿಕ ಹೊಡೆದುರುಳಿಸಲಾಯಿತು. ಮಧ್ಯಾಹ್ನ ಮೂರು ಗಂಟೆ ವೇಳೆಗೆ ಕಾರ್ಯಾಚರಣೆ ಅಂತ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ನಡೆಯುತ್ತಿದ್ದ ವೇಳೆಯೇ ದಾಳಿಕೋರರ ವಿಡಿಯೊ ಬಿಡುಗಡೆ ಮಾಡಿದ ಐಎಸ್‌, ಇದೇ ಮೊದಲ ಬಾರಿಗೆ ಇರಾನ್‌ನಲ್ಲಿ ನಡೆಸಿದ ವಿಧ್ವಂಸಕ ಕೃತ್ಯದ ಹೊಣೆ ಹೊತ್ತುಕೊಂಡಿದೆ.

ಕಲಾಪ ನಡೆಯುತ್ತಿದ್ದ ವೇಳೆ ಬಂದೂಕು ಹಿಡಿದು ಕಚೇರಿ ಒಳನುಗ್ಗಿದ ದಾಳಿಕೋರರ ಪೈಕಿ ಒಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.

ಮಹಿಳೆಯರ ಉಡುಪು ಧರಿಸಿದ್ದ ಪುರುಷ ಬಂದೂಕುಧಾರಿಗಳು ದಾಳಿ ನಡೆಸಿದರು ಎಂದು ಉಪ ಅಂತರಿಕ ಸಚಿವ ಮಹಮ್ಮದ್ ಹೊಸೈನ್ ಜೊಲ್ಫಾಗರಿ ತಿಳಿಸಿದರು.

ಕಟ್ಟಡದ ನಾಲ್ಕನೇ ಮಹಡಿಯಲ್ಲಿದ್ದ ದಾಳಿಕೋರರು ಕೆಳಗೆ ರಸ್ತೆಯಲ್ಲಿ ಓಡಾಡುತ್ತಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

‘ನಾನು ಈ ಬೀದಿಯಲ್ಲಿ ಹೋಗುತ್ತಿದ್ದಾಗ ಮಕ್ಕಳು ಪಟಾಕಿ ಹಿಡಿದು ಆಟವಾಡುತ್ತಿದ್ದಾರೆ ಎಂದು ತಿಳಿದಿದ್ದೆ. ಆದರೆ ಜನರು ದಾಳಿಯಿಂದ ತಪ್ಪಿಸಿಕೊಳ್ಳಲು ಹಾಗೂ ಅಡಗಿಕೊಳ್ಳಲು ಯತ್ನಿಸುತ್ತಿದ್ದರು’ ಎಂದು ಇಬ್ರಾಹಿಂ ಘನಿಮಿ ಎಂಬುವರು ಹೇಳಿದರು.

(ಸಂಸತ್ ಭವನದ ಕಟ್ಟಡದಲ್ಲಿದ್ದ ಮಗುವೊಂದನ್ನು ಭದ್ರತಾ ಸಿಬ್ಬಂದಿ ರಕ್ಷಿಸಿದರು)

ಸೇನಾ ಹೆಲಿಕಾಪ್ಟರ್‌ಗಳು ಕಟ್ಟಡದ ಮೇಲಿನಿಂದ ಗಸ್ತು ನಡೆಸಿದವು. ದಾಳಿ ನಡೆಯುತ್ತಿದ್ದಂತೆ ಕಚೇರಿಯೊಳಗಿನ ಮೊಬೈಲ್ ಹಾಗೂ ದೂರವಾಣಿ ಸಂಪರ್ಕವನ್ನು ತಕ್ಷಣ ಸ್ಥಗಿತಗೊಳಿಸಲಾಯಿತು. ಭವನದ ಮುಖ್ಯದ್ವಾರಗಳನ್ನು ಮುಚ್ಚಲಾಯಿತು. ಸಂಸದರನ್ನು ಕಚೇರಿಯ ಒಳಗೇ ಇರುವಂತೆ ಸೂಚಿಸಲಾಯಿತು ಎಂದು ಐಎಸ್ಎನ್‌ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಂಸತ್ ಭವನದ ಮೇಲೆ ದಾಳಿ ನಡೆದ ಕೆಲ ಹೊತ್ತಿನಲ್ಲೇ ರಾಜಧಾನಿ ಟೆಹರಾನ್ ಹೊರವಲಯದಲ್ಲಿರುವ ಇರಾನ್ ಧಾರ್ಮಿಕ ನಾಯಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ಸಮಾಧಿ ಮೇಲೆ ಆತ್ಮಾಹುತಿ ದಾಳಿಕೋರ ಹಾಗೂ ಬಂದೂಕುಧಾರಿಗಳು ದಾಳಿ ನಡೆಸಿದರು.
ಈ ವೇಳೆ ಒಬ್ಬ ಸೈನಿಕ ಮೃತಪಟ್ಟಿದ್ದು, ಒಬ್ಬ ದಾಳಿಕೋರನನ್ನು ಹತ್ಯೆ ಮಾಡಲಾಯಿತು. ಮಹಿಳೆಯನ್ನು ಬಂಧಿಸಲಾಗಿದೆ.

‘ದೇವರ ಇಚ್ಛೆ’
ಕಚೇರಿ ಒಳಗೆ ಚಿತ್ರೀಕರಿಸಲಾದ 24 ಸೆಕೆಂಡ್‌ನ ವಿಡಿಯೊವನ್ನು ಐಎಸ್‌ನ ಅಮಖ್ ಸುದ್ದಿಸಂಸ್ಥೆ ಬಿಡುಗಡೆ ಮಾಡಿದೆ.  ಇದರಲ್ಲಿ ಕೇಳಿಬರುವ ಒಬ್ಬ ವ್ಯಕ್ತಿಯ ಧ್ವನಿಯು ಅರೇಬಿಕ್‌ ಭಾಷೆಯಲ್ಲಿದ್ದು, ದೇವರನ್ನು ಹೊಗಳುವ ಧಾಟಿಯಲ್ಲಿದೆ. ‘ನಾವು ಹೊರಡುತ್ತೇವೆಂದು ನೀವು ಯೋಚಿಸುತ್ತಿದ್ದೀರಾ. ನಾವಿಲ್ಲೇ ಇರುತ್ತೇವೆ. ಇದು ದೇವರ ಇಚ್ಛೆ’ ಎಂದು ಒಂದು ಧ್ವನಿ ಹೇಳುತ್ತದೆ. ಮತ್ತೊಬ್ಬ ವ್ಯಕ್ತಿಯ ಧ್ವನಿ ಕೂಡಾ ಇದನ್ನೇ ಪುನರುಚ್ಚರಿಸುತ್ತದೆ.

* ಇದೊಂದು ಹೇಡಿತನದ ಕೃತ್ಯ. ಭಯೋತ್ಪಾದನೆ ವಿರುದ್ಧದ ಇರಾನ್ ಹೋರಾಟವನ್ನು ತಡೆಯಲು ಮಾಡಿದ ಯತ್ನವಿದು

-ಅಲಿ ಲರಿಜನಿ, ಸ್ಪೀಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT