ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣವೂ ಅಲ್ಲ, ಸುಲಭವೂ ಅಲ್ಲ...

Last Updated 7 ಜೂನ್ 2017, 19:30 IST
ಅಕ್ಷರ ಗಾತ್ರ

ಅಥ್ಲೀಟ್ಸ್ ಟುಡೆ ತಂಡ
ಭಾರತದಲ್ಲಿ ಕ್ರೀಡೆ, ಮನರಂಜನೆ ಜತೆಗೆ ಅತಿ ಹೆಚ್ಚು ವರಮಾನವನ್ನು ತಂದುಕೊಡುವ ಕ್ಷೇತ್ರವಾಗಿದೆ. ಕ್ರಿಕೆಟ್, ಹಾಕಿ, ಕಬಡ್ಡಿ, ಟೆನಿಸ್, ಬ್ಯಾಡ್ಮಿಂಟನ್ ಹೀಗೆ ಹಲವಾರು ಕ್ರೀಡೆಗಳು ಕ್ರೀಡಾಪಟುಗಳಿಗೆ ಪ್ರತಿಷ್ಠೆ ಮತ್ತು ವರಮಾನ ತಂದುಕೊಡುತ್ತಿವೆ.

ಆದರೆ ಅಥ್ಲೀಟ್ಸ್ ವಿಭಾಗದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಸಂಭಾವನೆ ನೀಡುವುದು ಕಡಿಮೆಯೇ! ಇದನ್ನು ಗಮನಿಸಿದ ಯುವ ಅಥ್ಲೀಟ್‌ಗಳ ತಂಡ, ಅಥ್ಲೀಟ್ಸ್ ಟುಡೆ ಎಂಬ ಕಂಪೆನಿ ಹುಟ್ಟುಹಾಕಿದ್ದು, ಈ ಮೂಲಕ ಉದಯೋನ್ಮುಖ ಯುವಕರಿಗೆ ಪ್ರಾಯೋಜಕರನ್ನು ಹುಡುಕಿಕೊಡುವ ಕೆಲಸ ಮಾಡುತ್ತಿದೆ.

ಹೈದರಾಬಾದ್‌ನ ಅಭಿಷೇಕ್ ಶರ್ಮಾ ಮತ್ತು ರಾಧಿಕ ಅರೋರ ಅಥ್ಲೀಟ್ಸ್ ಟುಡೆ ಕಂಪೆನಿಯನ್ನು 10 ತಿಂಗಳ ಹಿಂದೆ ಪ್ರಾರಂಭಿಸಿದರು. ಇದೀಗ ಆಸಕ್ತಿ ಇರುವ ಗೆಳೆಯರು ಬಂದು ಅಥ್ಲೀಟ್ಸ್ ಟುಡೆ ತಂಡವನ್ನು ಸೇರಿದ್ದಾರೆ. ಒಟ್ಟು ತಂಡದಲ್ಲಿ 10 ಜನ ಸದಸ್ಯರಿದ್ದಾರೆ.

ಅಥ್ಲೀಟ್ಸ್‌ನಲ್ಲಿ ಆಸಕ್ತಿ ಇರುವವರಿಗೆ, ಅಂದರೆ 15 ರಿಂದ 19 ವರ್ಷದೊಳಗಿನ ಪ್ರತಿಭಾವಂತರಿಗೆ ಪ್ರಾಯೋಜಕರನ್ನು ಹುಡುಕಿಕೊಡುತ್ತಿದ್ದಾರೆ. ಕಳೆದ ಹತ್ತು ತಿಂಗಳಲ್ಲಿ 15 ಲಕ್ಷ ರೂಪಾಯಿ ಮೊತ್ತದ ಪ್ರಾಯೋಜಕತ್ವವನ್ನು ನೀಡಲಾಗಿದೆ ಎಂದು ಅಭಿಷೇಕ್ ಶರ್ಮಾ ಹೇಳುತ್ತಾರೆ. 

ಅಥ್ಲೀಟ್ಸ್ ಟುಡೆ ಮುಖ್ಯ ಉದ್ದೇಶ ಪ್ರತಿಭಾವಂತರಿಗೆ ಹಣಕಾಸು ನೆರವು ನೀಡುವುದು. ಇದನ್ನು ಹೊರತುಪಡಿಸಿದರೆ ಕ್ರೀಡೆಗೆ ಸಂಬಂಧಿಸಿದಂತೆ ಇವೆಂಟ್ ಮ್ಯಾನೇಜ್್ಮೆಂಟ್, ಕ್ರೀಡಾ ಅಕಾಡೆಮಿಗಳ ಸ್ಥಾಪನೆಗೆ ನೆರವು ಹಾಗೂ ಕ್ರೀಡಾಪಟುಗಳಿಗೆ ಉಚಿತವಾಗಿ ಆಪ್ತಸಮಾಲೋಚನೆ ಮಾಡಲಾಗುವುದು.

ಗ್ರಾಮೀಣ ಅಥವಾ ಸಣ್ಣ ಸಣ್ಣ ಪಟ್ಟಣಗಳಲ್ಲಿ ಕ್ರೀಡಾ ಅಕಾಡೆಮಿಗಳನ್ನು ಸ್ಥಾಪಿಸುವವರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಖಿನ್ನತೆಯಿಂದ ಬಳಲುತ್ತಿರುವ ಕ್ರೀಡಾಪಟುಗಳಿಗೆ ಉಚಿತವಾಗಿ ಕೌನ್ಸೆಲಿಂಗ್ ನಡೆಸಿ ಅವರ ಚಿಕಿತ್ಸೆಗೆ ನೆರವು ನೀಡಲಾಗುತ್ತದೆ ಎಂದು ರಾಧಿಕಾ ಹೇಳುತ್ತಾರೆ.
ಇದು ಲಾಭರಹಿತ ಸಂಸ್ಥೆಯಾಗಿದ್ದು, ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ, ಕ್ರೀಡಾಪಟುಗಳನ್ನು ಬೆಳೆಸುವ ಧ್ಯೇಯದೊಂದಿಗೆ ಅಥ್ಲೀಟ್ಸ್‌ ಟುಡೆ ಕೆಲಸ ಮಾಡುತ್ತಿದೆ.
www.athletestoday.org

****
ಹರೀಶ್
ಸರ್ಕಾರಿ ಕೆಲಸಕ್ಕೆ ಗುಡ್ ಬೈ ಹೇಳಿ ಲೋಳೆಸರ ಬೆಳೆದು ನಿರುದ್ಯೋಗಿ ಯುವಕರಿಗೆ ಮಾದರಿಯಾಗಿರುವ ಯುವ ರೈತ ಹರೀಶ್ ಅವರ ಕಥೆ ಇದು.

ಹರೀಶ್ ರಾಜಸ್ತಾನದವರು. ಎಂಜಿನಿಯರಿಂಗ್ ಪದವಿ ಪಡೆದು ದೆಹಲಿ ಐಐಟಿಯಲ್ಲಿ ಎಂಬಿಎ ಪದವಿ ಪಡೆದರು. ಈ ಪದವಿ ಪಡೆದ ವರ್ಷದಲ್ಲೇ ಅವರಿಗೆ ಸರ್ಕಾರಿ ಉದ್ಯೋಗ ದೊರೆಯಿತು.

ಅದ್ಯಾಕೋ ಆ ಉದ್ಯೋಗ ಅವರಿಗೆ ಇಷ್ಟವಾಗಲಿಲ್ಲ. ಮನೆಯವರ ವಿರೋಧದ ನಡುವೆಯೂ ಕೆಲಸಕ್ಕೆ ರಾಜೀನಾಮೆ ಕೊಟ್ಟು ದೆಹಲಿಗೆ ತೆರಳಿದರು. ಈ ವೇಳೆ ಯಾವುದಾದರೂ ಉದ್ಯಮ ಆರಂಭಿಸುವ ಬಗ್ಗೆ ಆಲೋಚಿಸತೊಡಗಿದರು. 

ಸಹಜವಾಗಿಯೇ ಏನು ಮಾಡಬೇಕು ಎಂಬ ಗೊಂದಲ ಇತ್ತು. ಹೊಸ ಹೊಸ ಉದ್ಯಮಗಳ ಬಗ್ಗೆ ಮಾಹಿತಿ ಪಡೆಯುವುದಕ್ಕಾಗಿ ವಿವಿಧ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಿದ್ದರು. ದೆಹಲಿ ಕೃಷಿ ವಿಶ್ವವಿದ್ಯಾಲಯದ ಕಾರ್ಯಾಗಾರವೊಂದು ಹರೀಶ್ ಅವರ ಬದುಕನ್ನೇ ಬದಲಿಸಿತು.

ಅಲ್ಲಿ ಅವರು ಅತಿ ಕಡಿಮೆ ನೀರನ್ನು ಬಳಸಿ ಅಲೋವೆರಾ ಬೆಳೆಯುವುದರ ಬಗ್ಗೆ ತರಬೇತಿ ಪಡೆದರು. ದೆಹಲಿಯಿಂದ 25 ಸಾವಿರ ಅಲೋವೆರಾ ಸಸಿಗಳನ್ನು ರಾಜಸ್ತಾನಕ್ಕೆ ತಂದು ಕೃಷಿಕಾಯಕವನ್ನು ಆರಂಭಿಸಿದರು.

ಹೀಗೆ ಆರಂಭವಾದ ಹರೀಶ್ ಅವರ ಕೃಷಿ ಉದ್ಯಮ ಇಂದು ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದೆ. ಪ್ರಾರಂಭದಲ್ಲಿ ಅಲೋವೆರಾವನ್ನು ಪತಂಜಲಿ ಸೇರಿದಂತೆ ವಿವಿಧ ಆಯುರ್ವೇದ ಕಂಪೆನಿಗಳಿಗೆ ಮಾರಾಟ ಮಾಡುತ್ತಿದ್ದರು.

ಇದೀಗ ‘ನ್ಯಾಚುರೆಲೊ ಆಗ್ರೊ’ ಎಂಬ ಕಂಪೆನಿ ಸ್ಥಾಪಿಸಿದ್ದಾರೆ. ಅಲೋವೆರಾದಿಂದ ತಯಾರಿಸಬಹುದಾದ ಎಲ್ಲ ರೀತಿಯ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಭಾರತ ಸೇರಿದಂತೆ ಮಧ್ಯಪ್ರಾಚ್ಯ, ಅರಬ್ ಹಾಗೂ ಆಫ್ರಿಕಾ ದೇಶಗಳಲ್ಲಿ ಅಲೋವೆರಾ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಇದೆ ಎನ್ನುತ್ತಾರೆ ಹರೀಶ್.

ಮುಂದಿನ ದಿನಗಳಲ್ಲಿ ಅಲೋವೆರಾ  ಉದ್ಯಮವನ್ನು ದೇಶದ ಬರಪೀಡಿತ ಪ್ರದೇಶಗಳಿಗೆ ವಿಸ್ತರಿಸಿ ಯುವಕರಿಗೆ ಉದ್ಯೋಗ ಕಲ್ಪಿಸುವ ಗುರಿ ಇದೆ ಎಂದು ಹೇಳುತ್ತಾರೆ.
www.natureloagro.org

****
ದರ್ಶನಾ ಎಂ.ವಿ.
ಆ ಯುವತಿ 12ನೇ ತರಗತಿ ವಿದ್ಯಾರ್ಥಿನಿ. ಪಠ್ಯ ಪುಸ್ತಕವನ್ನು ಓದುವಾಗ ಅಥವಾ ಪರೀಕ್ಷೆ ಬರೆಯುವಾಗ ಭೂತಗನ್ನಡಿ ಬಳಸುವುದು   ಆಕೆಗೆ ಅನಿವಾರ್ಯವಾಗಿತ್ತು. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಶ್ರಮವಹಿಸಿ, ಶ್ರದ್ಧೆಯಿಂದ ಓದಿ ಸಿಬಿಎಸ್್ಸಿಯ 12ನೇ ತರಗತಿಯಲ್ಲಿ 3ನೇ ರ್‍್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ದರ್ಶನಾ ಎಂ.ವಿ ಎಂಬ ಅಂಧ ಯುವತಿ ಈ ಸಾಧನೆ ಮಾಡಿರುವುದು. ತಮಿಳುನಾಡಿನ ಕೃಷ್ಣಗಿರಿಯವರಾದ ದರ್ಶನಾ ಹುಟ್ಟಿದ್ದು ಬಡ ಕುಟುಂಬದಲ್ಲಿ. ಮೈಕ್ರೊಕಾರ್ನಿಯಾ ಎಂಬ ಕಣ್ಣಿನ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ. ಎಡಗಣ್ಣು ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿದ್ದು, ಬಲಗಣ್ಣು ಮಸುಕುಮಸುಕಾಗಿ ಕಾಣುತ್ತದೆ. ಹಲವಾರು ಆಸ್ಪತ್ರೆಗಳಿಗೆ ತೋರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ದರ್ಶನಾ.

‘ಮನೆಯವರು, ಶಿಕ್ಷಕರು ಮತ್ತು ಸಹಪಾಠಿಗಳು ನನ್ನ ಓದಿಗೆ ನೆರವಾದರು. ಪಠ್ಯಪುಸ್ತಕದ ಅಕ್ಷರಗಳು ಚಿಕ್ಕದಾಗಿದ್ದರಿಂದ ಅವು ಕಾಣುತ್ತಿರಲಿಲ್ಲ. ಈ ವೇಳೆ ಗೆಳೆಯರು ಭೂತಗನ್ನಡಿ ಹಿಡಿದು ನನ್ನ ಓದಿಗೆ ಸಹಾಯ ಮಾಡುತ್ತಿದ್ದರು. ಅದೇ ರೀತಿ ಮನೆಯವರು ಸಹ ನೆರವು ನೀಡುತ್ತಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ.

ಚೆನ್ನೈನಲ್ಲಿ ಕಾಮರ್ಸ್ ಪದವಿಗೆ ಸೇರಿರುವ ದರ್ಶನಾ, ಮುಂದೆ ಐಐಟಿ ಅಥವಾ ಐಐಎಂನಲ್ಲಿ ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಉದ್ಯಮಿಯಾಗಬೇಕು ಎಂಬ ಕನಸನ್ನು ಹೊಂದಿದ್ದಾರೆ. ಇದರ ಜತೆಗೆ ಶಾಸ್ತ್ರೀಯ ಸಂಗೀತದಲ್ಲೂ ಆಸಕ್ತಿ ಇದ್ದು ಹಿಂದೂಸ್ತಾನಿ ಸಂಗೀತ ಕಲಿತಿದ್ದಾರೆ. ‘ನನ್ನ ಗುರಿ ಇರುವುದು ಶಿಕ್ಷಣದತ್ತ.

ಸಂಗೀತ ನನ್ನ ಪ್ರವೃತ್ತಿ’ ಎಂದು ಅವರು ಹೇಳುತ್ತಾರೆ. ಅಂಗವಿಕಲರಿಗೆ ಕೇಂದ್ರ ಸರ್ಕಾರ ಕೈಗಾರಿಕೆ ಅಥವಾ ಉದ್ಯಮ ಆರಂಭಿಸಲು ₹25 ಲಕ್ಷಕ್ಕೂ ಹೆಚ್ಚು ಹಣಕಾಸು ನೆರವನ್ನು ನೀಡುತ್ತದೆ. ಈ ಯೋಜನೆಯ ಸೌಲಭ್ಯ ಪಡೆದು ಉದ್ಯಮ ಸ್ಥಾಪಿಸುತ್ತೇನೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT