ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯತ್ತ ಚಕ್ರದ ಪಯಣ...

Last Updated 7 ಜೂನ್ 2017, 19:30 IST
ಅಕ್ಷರ ಗಾತ್ರ

ಚಕ್ರದ ಇತಿಹಾಸದಲ್ಲಿ 19ನೇ ಶತಮಾನ ಅತ್ಯಂತ ಮಹತ್ವದ ಅವಧಿ. ಕ್ರಾಂತಿಕಾರಕ ಗಾಲಿಯ ಆವಿಷ್ಕಾರವಾಗಿ ಜಗತ್ತಿನ ಅಭಿವೃದ್ಧಿಗೆ ಹೊಸ ದಿಕ್ಕು ತೋರಿದ ಶತಮಾನ ಅದು. ಇದಕ್ಕೆಲ್ಲ ನಾಂದಿ ಹಾಡಿದ್ದು  ಜಿ.ಎಫ್‌. ಬೌವೆರ್‌. ತಂತಿಗಳನ್ನು ಕಂಬಿಗಳನ್ನಾಗಿ ಬಳಸಿ ಅವುಗಳನ್ನು ಚಕ್ರದ ಪಟ್ಟಿ (ರಿಮ್‌) ಮತ್ತು ನಡುಭಾಗಕ್ಕೆ (ಹಬ್‌) ಬಿಗಿದ ಗಾಲಿಯನ್ನು (ವೈರ್‌ ಟೆನ್ಷನ್‌ ಸ್ಪೋಕ್‌) ರೂಪಿಸಿ, ಅದಕ್ಕೆ ಅವರು ಹಕ್ಕುಸ್ವಾಮ್ಯ ಪಡೆದರು.

ಇದಾದ ಕೆಲವೇ ವರ್ಷಗಳಲ್ಲಿ ರಬ್ಬರ್‌ ಬಳಸಿ ಚಕ್ರ ತಯಾರಿಸುವ ಉಪಾಯ ಕೆಲವರಿಗೆ ಹೊಳೆಯಿತು. ಅದರಲ್ಲಿ ಮೊದಲಿಗರು ಸ್ಕಾಟ್ಲೆಂಡ್‌ನ ರಾಬರ್ಟ್‌ ವಿಲಿಯಮ್‌ ಥಾಮ್ಸನ್‌. 

ರಬ್ಬರ್‌ನಿಂದ ತಯಾರಿಸಿದ ಚಕ್ರ ತುಂಬಾ ಗಟ್ಟಿ. ಇದರಿಂದ ಗಾಡಿಗಳಲ್ಲಿ ಆರಾಮದಾಯಕ ಸಂಚಾರ ಸಾಧ್ಯವಿಲ್ಲ.  ನಿಧಾನವಾಗಿ ಸಾಗುವ ಬಂಡಿಗಳಿಗೆ ಮಾತ್ರ ಇದು ಸೂಕ್ತ ಎಂಬ ಅರಿವು ಅಂದಿನವರಿಗಾಯಿತು. ರಬ್ಬರಿನ ಚಕ್ರದೊಳಗೆ ಗಾಳಿ ತುಂಬಿದರೆ ಈ ಎಲ್ಲ ಸಮಸ್ಯೆಗೆ ಪರಿಹಾರ ಸಾಧ್ಯ ಎಂಬುದನ್ನೂ ಕಂಡುಕೊಂಡರು.

ಆಗ ರೂಪುಗೊಂಡಿದ್ದೇ ಗಾಳಿ ತುಂಬಿದ ರಬ್ಬರ್‌ ಚಕ್ರ! ಇದರ ರೂವಾರಿ ರಾಬರ್ಟ್‌ ವಿಲಿಯಮ್‌ ಥಾಮ್ಸನ್‌. 1845ರಲ್ಲಿ ಅವರು ಈ ಆವಿಷ್ಕಾರದ ಹಕ್ಕುಸ್ವಾಮ್ಯ ಪಡೆದರು. ಹಾಗಿದ್ದರೂ ಅವರು ವಾಣಿಜ್ಯ ಉದ್ದೇಶಕ್ಕೆ ಈ ಚಕ್ರಗಳನ್ನು ತಯಾರಿಸಲಿಲ್ಲ. ಹಾಗಾಗಿ ತಂತಿ ಕಂಬಿಯ ಚಕ್ರಗಳೇ ಬಳಕೆಯಲ್ಲಿದ್ದವು. ಸರಿ ಸುಮಾರು 1870ರ ದಶಕದವರೆಗೆ ಗಾಲಿಯ ಮಾರುಕಟ್ಟೆಯಲ್ಲಿ ಈ ಚಕ್ರಗಳೇ ಆಧಿಪತ್ಯ ಸಾಧಿಸಿದ್ದವು.

1880ರ ದಶಕದಲ್ಲಿ ಚಕ್ರ ತನ್ನ ಮಗ್ಗಲು ಬದಲಿಸಿತು. ಈ ದಶಕದಲ್ಲಿ ನಡೆದ ಕ್ರಾಂತಿಕಾರಕ ಬೆಳವಣಿಗೆ, ಆಗ ತಾನೇ ಚಿಗುರೊಡೆಯುತ್ತಿದ್ದ ವಾಹನ ಉದ್ಯಮಕ್ಕೆ ಚಿಮ್ಮು ಹಲಗೆಯಾಯಿತು. 1888ರಲ್ಲಿ ಸ್ಕಾಟ್ಲೆಂಡ್‌ನವರೇ ಆದ ಪಶು ತಜ್ಞ ಜಾನ್‌ ಡುನ್‌ಲೊಪ್‌ ಎಂಬುವವರು ಥಾಮ್ಸನ್‌ ಅವರ ಗಾಳಿ ತುಂಬಿದ  ಚಕ್ರವನ್ನು ಮತ್ತಷ್ಟು ಸುಧಾರಿಸಿ ಹೊಸ ರೂಪ ನೀಡಿ, ಅದಕ್ಕೆ ಹಕ್ಕುಸ್ವಾಮ್ಯ ಪಡೆದರು.

ಇದು, ಆಧುನಿಕ ಚಕ್ರದ ತಯಾರಿಕೆಗೆ ನಾಂದಿ ಹಾಡಿದ ಬೆಳವಣಿಗೆಯಾಯಿತು. ಜಾನ್‌ ಅವರು ರೂಪಿಸಿದ್ದ ಚಕ್ರದಿಂದ ಆರಾಮದಾಯಕ ಸಂಚಾರ ಸಾಧ್ಯವಾಯಿತು. ಅದುವರೆಗೂ ಸೈಕಲ್‌ಗಳಲ್ಲಿ ಬಳಸುತ್ತಿದ್ದ ಗಡಸಾದ ರಬ್ಬರ್‌ ಚಕ್ರಗಳ ಸ್ಥಾನದಲ್ಲಿ ಗಾಳಿ ತುಂಬಿದ ಹೊಸ ಗಾಲಿಗಳು ಕುಳಿತವು.
1886ರಲ್ಲಿ ಕಾರ್ಲ್‌ ಬೆಂಜ್‌ ಅವರು ಸ್ಥಾಪಿಸಿದ್ದ ಬೆಂಜ್‌ ಕಂಪೆನಿ ಜಗತ್ತಿನ ಮೊದಲ ಆಧುನಿಕ (ಪೆಟ್ರೋಲ್‌ ಚಾಲಿತ) ಕಾರನ್ನು ಅಭಿವೃದ್ಧಿಪಡಿಸಿತು.

ಮೂರು ಚಕ್ರಗಳನ್ನು ಹೊಂದಿದ್ದ ಈ ಕಾರಿಗೆ ಡುನ್‌ಲೊಪ್‌ ರೂಪಿಸಿದ್ದ ಗಾಳಿ ತುಂಬಿದ ಗಾಲಿಗಳನ್ನು 1888ರಲ್ಲಿ ಅಳವಡಿಸಿತ್ತು. ಲೋಹದಿಂದ ತಯಾರಿಸಲಾಗಿದ್ದ ಗಾಲಿಗಳಿಗೆ ರಬ್ಬರ್‌ಗಳನ್ನು ಹೊದಿಸಿ, ಗಾಳಿಯನ್ನು ತುಂಬಲಾಗಿತ್ತು. 1895ರ ನಂತರ ವಾಹನಗಳಲ್ಲಿ ಈ ಚಕ್ರಗಳ ಬಳಕೆ ಮತ್ತಷ್ಟು ಜನಪ್ರಿಯಗೊಂಡಿತು.

20ನೇ ಶತಮಾನದ ನಂತರ ಚಕ್ರಗಳಿಗೆ ಹೊಸ ಸ್ಪರ್ಶ ಸಿಕ್ಕಿತು. ವಾಹನೋದ್ಯಮ ಹೆಚ್ಚು ಜನಪ್ರಿಯವಾಯಿತು. 1931ರ ದಶಕದಲ್ಲಿ ಆವಿಷ್ಕಾರಗೊಂಡ  ಕೃತಕ ರಬ್ಬರ್‌ (ಸಿಂಥೆಟಿಕ್‌ ರಬ್ಬರ್‌), ಹೊಸ ನಮೂನೆಯ ಚಕ್ರಗಳ ತಯಾರಿಕೆಯ ಸಾಧ್ಯತೆಯನ್ನು ಮುಂದಿಟ್ಟಿತು.
ಅದುವರೆಗೂ ಚಕ್ರಗಳ ತಯಾರಿಕೆಗೆ ನೈಸರ್ಗಿಕ ರಬ್ಬರನ್ನೇ ಬಳಸಲಾಗುತ್ತಿತ್ತು. ಇದರಿಂದಾಗಿ ಅವುಗಳಿಗೆ ಬೇಡಿಕೆ ಹೆಚ್ಚಾಗಿತ್ತು.

ರಬ್ಬರ್‌ ಕೊರತೆಯ ಕಾರಣಕ್ಕೆ ಚಕ್ರಗಳನ್ನು ಭಾರಿ ಪ್ರಮಾಣದಲ್ಲಿ ತಯಾರಿಸಲು ಸಾಧ್ಯವಾಗುತ್ತಿರಲಿಲ್ಲ. ಕೃತಕ ರಬ್ಬರ್‌ ಸೃಷ್ಟಿಯಿಂದಾಗಿ ಚಕ್ರ ತಯಾರಿಕೆ, ವಾಹನ ಉದ್ಯಮಗಳು ಮತ್ತಷ್ಟು ಚಿಗಿತುಕೊಂಡವು. ಕಾಲಕ್ರಮೇಣ ಇಂಧನವನ್ನು ಉಳಿಸಲು ನೆರವಾಗುವಂತಹ ಚಕ್ರಗಳ ತಯಾರಿಕೆಗೆ ಕಂಪೆನಿಗಳು ಮುಂದಾದವು.

1940ರ ದಶಕದ ನಂತರ ಜಗತ್ತಿನಾದ್ಯಂತ ಇಂತಹ ಪ್ರವೃತ್ತಿ ಆರಂಭವಾಯಿತು. ಆ ಸಮಯದಲ್ಲಿ ತೈಲ ಬೆಲೆ ಗಗನಮುಖಿಯಾಗಿದ್ದರಿಂದ ಕಡಿಮೆ ಇಂಧನ ಬಳಸುವಂತಹ ವಾಹನಗಳನ್ನು ತಯಾರಿಸುವುದು ಕಂಪೆನಿಗಳಿಗೆ ಅನಿವಾರ್ಯವಾಯಿತು. ಅದಕ್ಕೆ ಅನುಗುಣವಾಗಿ ಚಕ್ರಗಳನ್ನು ರೂಪಿಸಬೇಕಾಯಿತು.

1947ರಲ್ಲಿ ಮೊದಲ ಟ್ಯೂಬ್‌ಲೆಸ್‌ ಚಕ್ರ ಮಾರುಕಟ್ಟೆಗೆ ಬಂತು. 1949ರಲ್ಲಿ ರೇಡಿಯಲ್‌ ಚಕ್ರವೂ ಬಂತು. 1970ರ ದಶಕದ ನಂತರ ಚಕ್ರಗಳ ಸುರಕ್ಷತೆಗೆ ಹೆಚ್ಚು ಗಮನ ನೀಡಲು ಕಂಪೆನಿಗಳು ಆರಂಭಿಸಿದವು. ಅದಕ್ಕೆ ಪೂರಕವಾಗಿ ಚಕ್ರಗಳ ವಿನ್ಯಾಸ, ತಯಾರಿಕೆಯಲ್ಲಿ ಕೆಲವು ಬದಲಾವಣೆಗಳನ್ನೂ ಮಾಡಿದವು.

20ನೇ ಶತಮಾನದ ಕೊನೆಗೆ ಪರಿಸರಸ್ನೇಹಿ ಚಕ್ರಗಳ ಬಗ್ಗೆ ಹೆಚ್ಚು ಚರ್ಚೆ ಆರಂಭವಾಯಿತು. ಹೈಡ್ರೋಜನ್‌, ವಿದ್ಯುತ್‌ ಕಾರುಗಳ ಪರಿಕಲ್ಪನೆ ಮೊಳಕೆಯೊಡೆಯುತ್ತಿದ್ದಂತೆ ಅದಕ್ಕೆ ಹೊಂದಿಕೆಯಾಗುವ ಚಕ್ರಗಳ ತಯಾರಿಕೆಗೆ  ಕಂಪೆನಿಗಳು ಮುಂದಾದವು.

ಈಗ ಗಾಳಿಯ ಅಗತ್ಯವಿಲ್ಲದ ಚಕ್ರಗಳ ಬಗ್ಗೆ (ಎನ್‌ಪಿಟಿ) ಚರ್ಚೆಯಾಗುತ್ತಿದೆ. ವಿನೂತನ ವಸ್ತುವಿನಿಂದ ತಯಾರಿಸಲಾಗುವ ಈ ಚಕ್ರಗಳನ್ನು ಮರು ಬಳಕೆ ಅಥವಾ ಮರು ಸಂಸ್ಕರಣೆ ಮಾಡಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಪರಿಸರಸ್ನೇಹಿ ಕಾರುಗಳಲ್ಲೂ ಇವುಗಳನ್ನು ಬಳಸಬಹುದು ಎಂಬುದು ಅವರ ವಾದ.

****
ಅಸಂಖ್ಯ ವಸ್ತುಗಳು

ಚಕ್ರ ಅಥವಾ ಗಾಲಿ ಎಂದ ಕೂಡಲೇ ನಮಗೆ ತಕ್ಷಣ ನೆನಪಾಗುವುದು ವಾಹನಗಳೇ. ಯಾಕೆಂದರೆ ನಮಗೆ ಸುಲಭವಾಗಿ ಕಾಣುವುದು ಅವುಗಳೇ. ಆದರೆ, ಚಕ್ರದ ವ್ಯಾಪ್ತಿ ದೊಡ್ಡದು. ಎಂಜಿನ್‌, ಯಂತ್ರೋಪಕರಣಗಳಲ್ಲಿ ಬಳಸುವ,  ಗಾಲಿಯಂತಹ ರಚನೆಯನ್ನು ಹೊಂದಿರುವ ಬಿಡಿ ಭಾಗಗಳ ತಯಾರಿಕೆಗೆ ಪ್ರೇರಣೆಯಾಗಿದ್ದು ಚಕ್ರಗಳೇ ಎಂಬುದನ್ನು  ಯಾರೂ ಮರೆಯಬಾರದು. ಇದನ್ನು ಗಮನದಲ್ಲಿಟ್ಟುಕೊಂಡರೆ, ಗಾಲಿಯಿಂದ ಪ್ರೇರಣೆಗೊಂಡು ರೂಪುಗೊಂಡ ಅಸಂಖ್ಯ ವಸ್ತುಗಳು ಕಣ್ಣಿಗೆ ಗೋಚರಿಸುತ್ತವೆ.

****
ಚಕ್ರ ಮತ್ತು ಸಂಕೇತ
ಚಕ್ರ ಬರೇ ವಸ್ತುವಲ್ಲ. ಅದು ಹಲವು ಸಂಕೇತಗಳನ್ನು ಪ್ರತಿಧ್ವನಿಸುತ್ತದೆ. ಒಂದೊಂದು ರಾಷ್ಟ್ರದಲ್ಲಿ, ಒಂದೊಂದು ಧರ್ಮದಲ್ಲಿ ಅದನ್ನು ಬೇರೆ ಬೇರೆ ಸಂಕೇತದಿಂದ ಗುರುತಿಸುತ್ತಾರೆ. ಪ್ರಾಚೀನ ಕಾಲದಿಂದಲೂ ಇದು ಚಾಲ್ತಿಯಲ್ಲಿದೆ.

ಉದಾಹರಣೆಗೆ ಕಾಲವನ್ನು, ಜೀವನವನ್ನು ತಿರುಗುವ ಚಕ್ರಕ್ಕೆ ಹೋಲಿಸುವ ಸಂಪ್ರದಾಯ ನಮ್ಮಲ್ಲಿದೆ. ಚಕ್ರವು ಪ್ರಗತಿಯ ಸಂಕೇತವೂ ಹೌದು. ಪುರಾತನ ಚೀನಾದಲ್ಲಿ ಇದು ಆರೋಗ್ಯದ ಸಂಕೇತವಾಗಿತ್ತು. ಬೌದ್ಧ ಧರ್ಮದಲ್ಲಿ ‘ಧರ್ಮಚಕ್ರ’ದ (ಎಂಟು ಕಡ್ಡಿಗಳನ್ನು ಹೊಂದಿರುವ ಚಕ್ರ. ಬುದ್ಧ ಬೋಧಿಸಿದ ಎಂಟು ತತ್ವಗಳನ್ನು ಇವು ಪ್ರತಿನಿಧಿಸುತ್ತವೆ) ಪರಿಕಲ್ಪನೆ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT