‘ಟೈಗರ್‌’ ವಲಯದಲ್ಲಿ ‘ಹೆಬ್ಬುಲಿ’!

7

‘ಟೈಗರ್‌’ ವಲಯದಲ್ಲಿ ‘ಹೆಬ್ಬುಲಿ’!

Published:
Updated:
‘ಟೈಗರ್‌’ ವಲಯದಲ್ಲಿ ‘ಹೆಬ್ಬುಲಿ’!

‘ಹುಲಿ ಬೋನಿನಲ್ಲಿದೆ ಅಂದ್ರೆ ಹುಲಿಗೆ ಸೇಫ್ಟಿ ಅಂತಲ್ಲ. ಹುಲಿಯಿಂದ ನಿಮಗೆ ಸೇಫ್ಟಿ’ –ಹೀಗೆ ಗರ್ಜಿಸಿ ಎದುರಾಳಿಗಳ ಮುಖದ ಮೇಲೆ ಕೈಯಪ್ಪಳಿಸಿದ್ದೇ, ಪುಡಿರೌಡಿಗಳೆಲ್ಲ ಗಾಳಿಯಲ್ಲಿ ತೇಲಾಡಿ ನೆಲಕ್ಕುದುರಿದರು.

ಟ್ರೇಲರ್‌ನಲ್ಲಿನ ಇದೊಂದೇ ಡೈಲಾಗ್‌ ‘ಟೈಗರ್‌’ ಒಂದು ಆ್ಯಕ್ಷನ್‌ ಚಿತ್ರ ಎಂಬುದನ್ನು ಸಾರಿ ಹೇಳಿತ್ತು.

ಪ್ರದೀಪ್‌ ನಾಯಕನಾಗಿರುವ, ನಂದಕಿಶೋರ್‌ ನಿರ್ದೇಶನದ ‘ಟೈಗರ್‌’ ಚಿತ್ರ ಇದೇ ತಿಂಗಳ 16ರಂದು ತೆರೆಗೆ ಬರಲು ಸಜ್ಜಾಗಿದೆ. ಒಂದು ಟ್ರೇಲರ್‌ ಮತ್ತು ಹಾಡು ತೋರಿಸಿ ಬಿಡುಗಡೆಯ ವಿಷಯವನ್ನು ಹಂಚಿಕೊಳ್ಳಲಿಕ್ಕಾಗಿಯೇ ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು.ಪ್ರದೀಪ್‌

ಅಲ್ಲಿ ‘ಟೈಗರ್‌’ ಬಗ್ಗೆ ಮಾತನಾಡಲು ‘ಹೆಬ್ಬುಲಿ’ (ಸುದೀಪ್‌) ಬಂದಿತ್ತು. ಅದರ ಬರುವಿಕೆಗೆ ಕಾಯುವುದರಲ್ಲಿಯೇ ಎರಡು ಗಂಟೆ ಕಳೆದುಹೋಗಿತ್ತು. ಪತ್ರಕರ್ತರ ತಾಳ್ಮೆಯ ಕಟ್ಟೆ ಒಡೆಯುವ ಹೊತ್ತಿಗೆ ಸರಿಯಾಗಿ ಸುದೀಪ್‌ ವೇದಿಕೆಯ ಮೇಲಿದ್ದರು.

‘ಈ ಚಿತ್ರದ ಮೂಲಕ ಪ್ರದೀಪ್‌ ಅವರ ರೀ ಇಂಟ್ರೊಡಕ್ಷನ್‌ ಮಾಡಲಾಗುತ್ತಿದೆ’ ಎಂಬ ಮಾತನ್ನು ಅಲ್ಲಗಳೆದ ಅವರು, ‘ಇದು ರೀ ಇಂಟ್ರೊಡಕ್ಷನ್‌  ಅಲ್ಲ, ಸರಿಯಾದ ಇಂಟ್ರೊಡಕ್ಷನ್‌’ ಎಂದು ತಿದ್ದಿದರು.

‘ಪ್ರದೀಪ್‌ ಅದ್ಭುತ ಪ್ರತಿಭೆ. ಅನುಭವ ಆಗುತ್ತಿರುವಂತೆಯೆ ಅವರೊಳಗಿನ ನಟನೂ ಮಾಗುತ್ತಿದ್ದಾನೆ’ ಎಂಬ ಶಹಬಾಸ್‌ಗಿರಿಯನ್ನೂ ನೀಡಿದರು. ಹಿಂದೊಮ್ಮೆ ಸುದೀಪ್‌ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದರಂತೆ. ಅದಕ್ಕೆ ಪ್ರದೀಪ್‌ ಅವರೇ ನಾಯಕ. ಆ ಅನುಭವದ ಆಧಾರದಿಂದಲೇ ಅವರು ಪ್ರದೀಪ್‌ಗೆ ‘ನಿರ್ದೇಶಕರ ನಟ’ ಎಂಬ ಪ್ರಮಾಣಪತ್ರ ನೀಡಿದರು.

ಅಳಿಯನ ಮೇಲಿನ ವ್ಯಾಮೋಹಕ್ಕೆ ಕೆ. ಶಿವರಾಮ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ನಮ್ಮಿಂದ ಎಷ್ಟು ಸಾಧ್ಯವೋ ಎಲ್ಲವನ್ನೂ ಮಾಡಿದ್ದೇವೆ. ಇಪ್ಪತ್ನಾಲ್ಕು ಹಿರಿಯ ನಟರು, ಏಳು ಹಾಸ್ಯನಟರು ಈ ಚಿತ್ರದಲ್ಲಿದ್ದಾರೆ. ಈ ಎಲ್ಲವೂ ಸಾಧ್ಯವಾಗಿದ್ದು ಒಳ್ಳೆಯ ಕಥೆಯಿಂದ. ಅದು ಜನರಿಗೆ ಮೆಚ್ಚುಗೆ ಆಗುತ್ತದೆ’ ಎಂಬ ನಂಬಿಕೆ ಅವರದು.

ನಿರ್ದೇಶಕ ನಂದಕಿಶೋರ್‌, ‘ಇದು ಪಕ್ಕಾ ಕಮರ್ಷಿಯಲ್‌ ಚಿತ್ರ. ಸಣ್ಣ ಸಂದೇಶವೂ ಇದೆ. ಪ್ರೇಮ, ಹಾಸ್ಯ, ಆ್ಯಕ್ಷನ್‌ ಎಲ್ಲವನ್ನೂ ಸೇರಿಸಿ ಮನರಂಜನೆಯ ಪ್ಯಾಕೇಜ್‌ ನೀಡಿದ್ದೇವೆ’ ಎಂದರು. ನೈರಾ ಬ್ಯಾನರ್ಜಿ ‘ಟೈಗರ್‌’ ಗರ್ಜನೆಗೆ ಪ್ರೇಮರಾಗದ ಜತೆ ನೀಡಲಿದ್ದಾರೆ.

‘ಸಿನಿಮಾ ಬಿಡುಗಡೆಯ ಪೋಸ್ಟರ್‌ ನೋಡುವ ಈ ದಿನಕ್ಕಾಗಿ ಎರಡು ವರ್ಷಗಳಿಂದ ಕಾಯುತ್ತಿದ್ದೆ. ಎರಡು ವರ್ಷಗಳ ಪರಿಶ್ರಮ ತೆರೆಯ ಮೇಲೆ ಬರುತ್ತಿರುವ ಸಮಾಧಾನ ಇದೆ. ಸಿನಿಮಾ ಸೋಲುತ್ತದೋ ಗೆಲ್ಲುತ್ತದೋ ಜನರಿಗೆ ಬಿಟ್ಟಿದ್ದು’ ಎಂದು ಸ್ಥಿತಪ್ರಜ್ಞನಂತೆ ಮಾತನಾಡಿದರು ಪ್ರದೀಪ್‌.

ಸುಧಾಕರ್‌ ಛಾಯಾಗ್ರಹಣ, ಯೋಗಾನಂದ್‌ ಮುದ್ದಾನ್‌ ಸಂಭಾಷಣೆ ಇರುವ ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ಜಾಕ್‌ ಮಂಜು ವಹಿಸಿಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry