ಸಂಗೀತಕ್ಕೆ ಸಾಹಿಲ್‌ ಸಾಥ್‌

7

ಸಂಗೀತಕ್ಕೆ ಸಾಹಿಲ್‌ ಸಾಥ್‌

Published:
Updated:
ಸಂಗೀತಕ್ಕೆ ಸಾಹಿಲ್‌ ಸಾಥ್‌

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಅಭ್ಯಾಸ ಮಾಡಿಯೂ, ಮನಸ್ಸು ಬಯಸಿದ ಕ್ಷೇತ್ರದತ್ತ ಹೊರಳಿದವರು ಸಾಹಿಲ್‌ ಮದಾನ್‌. ಬಗೆಬಗೆಯ ಸಂಗೀತ ಹೊಮ್ಮಿಸಬೇಕು, ಆ ಅಲೆಯಲ್ಲಿ ಜನ ಮಿಂದೇಳಬೇಕು, ಕುಣಿಯಬೇಕು, ಖುಷಿಪಡುವಂತೆ ಮಾಡಬೇಕು ಎನ್ನುವ  ಆಸೆಯಲ್ಲಿ ಡಿಜೆಯಿಂಗ್‌ ಕ್ಷೇತ್ರವನ್ನು ಸಾಹಿಲ್‌ ಅಪ್ಪಿಕೊಂಡರು.

ಮೊದಲಿನಿಂದಲೂ ಇದ್ದ ಸಂಗೀತದೊಲವಿಗೆ ಡಿಜೆಯಿಂಗ್‌ ಎನ್ನುವ ಸ್ಪಷ್ಟ ರೂಪವನ್ನು ಅವರು ಕಂಡುಕೊಂಡಿದ್ದು ಕಾಲೇಜು ದಿನಗಳಲ್ಲಿ. ಅದೇ ಒಲವನ್ನು ಪೋಷಿಸಿದ ಅವರು ನಗರದ ‘ಐ ಲವ್‌ ಮ್ಯೂಸಿಕ್‌ ಅಕಾಡೆಮಿ’ಯಲ್ಲಿ ಸೌಂಡ್‌ ಎಂಜಿನಿಯರಿಂಗ್‌ ಕೋರ್ಸ್‌ ಮಾಡಿಕೊಂಡರು. ಒಂದೂವರೆ ವರ್ಷದಿಂದ ಗಿಟಾರ್‌ ಅನ್ನೂ ಕಲಿಯುತ್ತಿದ್ದಾರೆ.

ವಚನ ಚಿನ್ನಪ್ಪ, ಕೆಮಿಕಲ್‌ ಬ್ರದರ್ಸ್‌, ಪ್ರಾಡಿಜಿ ಮುಂತಾದವರ ಸಂಗೀತಗಳನ್ನು ಕೇಳಿದಾಗಲೆಲ್ಲಾ ಸಾಹಿಲ್‌ ಮನದೊಳಗಿನ ಡಿಜೆ ಎಚ್ಚೆತ್ತುಕೊಳ್ಳುತ್ತಿದ್ದ. ರಾಕ್‌, ಫಂಕ್‌, ಹಿಪ್‌ಹಾಪ್‌, ಬೇಸ್‌, ಪಾಪ್‌ ಮುಂತಾದ ಶೈಲಿಯ ಸಂಗೀತವೂ ಅವರ ಹುಮ್ಮಸ್ಸನ್ನು ಹೆಚ್ಚಿಸುತ್ತಿತ್ತು. ಅಂದಹಾಗೆ ವಚನ ಚಿನ್ನಪ್ಪ ಸಾಹಿಲ್‌ ಅವರ ಮಾರ್ಗದರ್ಶಕರು.

‘ನನ್ನ ತಂದೆತಾಯಿ ವಿಷಯದಲ್ಲಿ ನಾನು ತುಂಬಾ ಅದೃಷ್ಟವಂತ. ಸಂಪಾದನೆಯ ಗಟ್ಟಿತನ ಇಲ್ಲದ ಡಿಜೆಯಿಂಗ್‌ ಆಯ್ದುಕೊಳ್ಳುತ್ತೇನೆ ಎಂದಾಗ ನಿಜವಾಗಲೂ ಅವರಿಗೆ ಶಾಕ್‌ ಆಯಿತು. ಆದರೆ ಅವರು ಬೇಡ ಎನ್ನಲಿಲ್ಲ. ನಿನ್ನಿಷ್ಟದ ಕ್ಷೇತ್ರದಲ್ಲಿಯೇ ಮುಂದುವರಿ ಎಂದು ಹರಸಿದರು’ ಎಂದು ನೆನಪಿಸಿಕೊಳ್ಳುತ್ತಾರೆ ಅವರು.

ಎಲ್ಲವನ್ನೂ ಅವಕಾಶವಾಗಿಯೇ ನೋಡುವ ಈ ಕ್ಷೇತ್ರದಲ್ಲಿ ಸದಾ ಆರೋಗ್ಯಕರ ಸ್ಪರ್ಧೆಯೇ ಇರುತ್ತದೆಯಂತೆ. ಹೊಸತರ ಪ್ರಯೋಗ, ಅಥವಾ ಉತ್ತಮ ಸಂಗೀತ ನುಡಿಸಿದರೆ ಅದು ಕಲಿಕೆಯಾಗುತ್ತದೆ. ಹೀಗೆ ಒಬ್ಬರು ಇನ್ನೊಬ್ಬರಿಂದ ಕಲಿಯುತ್ತಾ ಬೆಳೆಯುವುದು ಈ ಕ್ಷೇತ್ರದ ಗುಣವಂತೆ.

ಸನ್‌ಬರ್ನ್‌, ಸೂಪರ್‌ಸಾನಿಕ್‌, ಹಮ್ಮಿಂಗ್‌ ಟ್ರೀ, ಬ್ಲೂ ಫ್ರಾಗ್‌, ವೇರ್‌ಹೌಸ್‌, ಪೆಬಲ್‌, ಇಂಡಿಗೊ ಲೈವ್‌ ಮ್ಯೂಸಿಕ್‌ ಬಾರ್‌, ಸೋಶಿಯಲ್‌ ಸೇರಿದಂತೆ ನಗರದ ಬಹುತೇಕ ಕ್ಲಬ್‌ಗಳಲ್ಲಿ ಅವರು ಸಂಗೀತ ಸುಧೆ ಹರಿಸಿದ್ದಾರೆ. ದೋಹಾ, ಮಾರ್ವೆಲ್ಲಾ ಬೀಚ್‌ ಹೀಗೆ ಬೇರೆ ಬೇರೆ ಪ್ರದೇಶಗಳ ಕಾರ್ಯಕ್ರಮಗಳಲ್ಲಿ ಅವರು ಡಿಜೆ ಆಗಿ ಕೆಲಸ ಮಾಡಿದ್ದಾರೆ.

ಅವರ ಪ್ರಕಾರ ಸದ್ಯ ಟೆಕ್ನೊ, ಹೌಸ್‌ ಮ್ಯೂಸಿಕ್‌ ಹೆಚ್ಚು ಪ್ರಚಲಿತದಲ್ಲಿದೆ. ಕಮರ್ಷಿಯಲ್‌ ಹಾಗೂ ರಾಕ್‌ ಸಂಗೀತ  ಕೂಡ ತನ್ನ ಜನಪ್ರಿಯತೆ ಕಳೆದುಕೊಂಡಿಲ್ಲ.

‘ಡಿಜೆ ಆದವನಿಗೆ ಸಂಗೀತ ಜ್ಞಾನ ತುಂಬಾ ಮುಖ್ಯ. ಪ್ರೇಕ್ಷಕರಿಗೆ ಎಂಥ ಸಂಗೀತ ಇಷ್ಟವಾಗುತ್ತದೆ, ಯಾವ ಹಾಡಿನ ನಂತರ ಯಾವ ಹಾಡು ಹಾಕಿದರೆ ಜನರು ಖುಷಿ ಪಡುತ್ತಾರೆ, ಎಂಥ ಪ್ರೇಕ್ಷಕ ವರ್ಗಕ್ಕೆ ಯಾವ ಶೈಲಿಯ ಸಂಗೀತ ರುಚಿಸುತ್ತದೆ ಎಂಬೆಲ್ಲಾ ಲೆಕ್ಕಾಚಾರ ಹಾಕಲು ಸಂಗೀತ ಜ್ಞಾನ ಇದ್ದರೆ ಮಾತ್ರ ಸುಲಭ’ ಎನ್ನುವುದು ಸಾಹಿಲ್‌ ಅನುಭವ.

ಜನಪ್ರಿಯತೆಯ ಅಲೆಯಲ್ಲಿರುವ ಸಾಹಿಲ್‌ ನಿತ್ಯವೂ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಬ್ಯುಸಿ ಇರುತ್ತಾರೆ. ಕಾರ್ಯಕ್ರಮಕ್ಕಾಗಿ ಪೂರ್ವತಯಾರಿ ಇದ್ದರೂ, ಪ್ರೇಕ್ಷಕರ ಮೂಡ್‌ ನೋಡಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳುತ್ತಾರೆ.

ಅಂದಹಾಗೆ, ಸಾಹಿಲ್‌ ಡಿಜೆಯಿಂಗ್‌ ಅಷ್ಟೇ ಅಲ್ಲ, ಇತ್ತೀಚೆಗೆ ‘ಫ್ರೆಶ್‌ ಗ್ರೌಂಡ್‌’  ಎನ್ನುವ ಸಂಗೀತ ಆಲ್ಬಂ ಒಂದನ್ನೂ ಬಿಡುಗಡೆ ಮಾಡಿದ್ದಾರೆ. ಪ್ರಯಾಣ ಹೋಗುವುದು ಎಂದರೆ ಅವರಿಗೆ ಇಷ್ಟ. ಕ್ರೀಡೆಯ ಬಗೆಗೆ ವಿಶೇಷ ಒಲವು. ಕ್ರಿಕೆಟ್‌ ಅವರಿಗೆ ಆಪ್ತ. ಬಗೆಬಗೆಯ ಸಂಗೀತ ಕೇಳುವುದು, ಅವುಗಳನ್ನು ಸಂಗ್ರಹಿಸುವುದು ಅವರ ಹವ್ಯಾಸ.

‘ಡಿ.ಜೆ. ಕ್ಷೇತ್ರಕ್ಕೆ ಬಂದಮೇಲೆ ದಿನಚರಿ ತುಸು ಬದಲಾಗುತ್ತದೆ. ಬೇರೆ ವೃತ್ತಿಗಳಲ್ಲಿ ರಾತ್ರಿ ಪಾಳಿ ಇದ್ದರೆ ಬದುಕು ಹೇಗಿರುತ್ತದೋ ಹಾಗೆಯೇ ಡಿಜೆಗಳ ಬದುಕೂ ಎಂದುಕೊಳ್ಳಬೇಕು. ನಾನು ರೂಢಿಸಿಕೊಂಡ ಕೆಲವು ಹವ್ಯಾಸಗಳು ನನ್ನ ಜೀವನ ಕ್ರಮಕ್ಕೆ ಪೆಟ್ಟು ನೀಡಿಲ್ಲ. ಬೆಳಿಗ್ಗೆ ಬೇಗ ಏಳುತ್ತೇನೆ. ಮುಂಜಾನೆಯ ಸಮಯ ದೇಹ ದಂಡನೆಗೆ ಮೀಸಲಿಟ್ಟಿದ್ದೇನೆ. ಸೈಕ್ಲಿಂಗ್, ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತೇನೆ. ಹಗಲಿನಲ್ಲಿಯೂ ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿ ಇರುತ್ತೇನೆ. ಎಲ್ಲರಂತೆಯೇ ನಾನೂ ಇದ್ದೇನೆ’ ಎನ್ನುತ್ತಾರೆ ಸಾಹಿಲ್‌.  

****

ಡಿಜೆಯಾಗಿ ಯಾವ ಸಂಗೀತ ಶೈಲಿ ನಿಮ್ಮ ಆಯ್ಕೆ ಎನ್ನುವ ಬಗೆಗೆ ಸ್ಪಷ್ಟತೆ ಇರಲಿ. ಯಶಸ್ಸು ಬೇಗನೆ ಸಿಗುವುದಿಲ್ಲ. ತಾಳ್ಮೆ, ಕಠಿಣ ಪರಿಶ್ರಮ ಈ ಕ್ಷೇತ್ರದಲ್ಲಿ ತೀರಾ ಮುಖ್ಯ. ಕ್ರಿಯಾಶೀಲತೆ ತೋರುವ ವಿವಿಧ ಮಾರ್ಗಗಳನ್ನು ಹುಡುಕುತ್ತಲೇ ಇರಬೇಕು

ಸಾಹಿಲ್‌ ಮದಾನ್‌,  ಡಿ.ಜೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry