ದೈತ್ಯ ರಾಕೆಟ್ ಉಡಾವಣೆ ಇಸ್ರೊ ಹೊಸ ಸಾಧನೆ

7

ದೈತ್ಯ ರಾಕೆಟ್ ಉಡಾವಣೆ ಇಸ್ರೊ ಹೊಸ ಸಾಧನೆ

Published:
Updated:
ದೈತ್ಯ ರಾಕೆಟ್ ಉಡಾವಣೆ ಇಸ್ರೊ ಹೊಸ ಸಾಧನೆ

ಭಾರಿ ತೂಕದ ಜಿಎಸ್‌ಎಲ್‌ವಿ ಮಾರ್ಕ್ –3 ಡಿ1 ರಾಕೆಟ್‌ ಅನ್ನು ಗಗನಕ್ಕೆ ಯಶಸ್ವಿಯಾಗಿ ಹಾರಿಸುವ ಮೂಲಕ ಇಸ್ರೊ ತಾನು ಅಭಿವೃದ್ಧಿಪಡಿಸಿದ ಕ್ಲಿಷ್ಟಕರ ಕ್ರಯೋಜೆನಿಕ್‌ ತಂತ್ರಜ್ಞಾನವನ್ನು ವಿಶ್ವಕ್ಕೆ ಪ್ರದರ್ಶಿಸಿದೆ. ಅಣು ಪರೀಕ್ಷೆಯನ್ನು ನಡೆಸಿದ ಸಂದರ್ಭದಲ್ಲಿ ತಂತ್ರಜ್ಞಾನ ಹಸ್ತಾಂತರ ನಿಷೇಧವನ್ನು ಭಾರತವು ಎದುರಿಸಿತ್ತು.

ಮಿತ್ರರಾಷ್ಟ್ರವಾದ ರಷ್ಯಾ ಸಹ ಕ್ರಯೋಜೆನಿಕ್‌ ತಂತ್ರಜ್ಞಾನ ನೀಡಲು ನಿರಾಕರಿಸಿತ್ತು. ಅತಿ ಭಾರದ ತೂಕವನ್ನು ನಿಗದಿತ ಕಕ್ಷೆಗೆ ತಳ್ಳಲು ಈ ತಂತ್ರಜ್ಞಾನ ಅತ್ಯಗತ್ಯ. ಇಂತಹ ತಂತ್ರಜ್ಞಾನವನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸಿ ಜಿಎಸ್‌ಎಲ್‌ವಿ ಮೂಲಕ ಈಗ ವಿಶ್ವಕ್ಕೆ ಪ್ರದರ್ಶಿಸಿದಂತಾಗಿದೆ. ಈ ಮೂಲಕ ಇಂತಹ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ ಕೆಲವೇ ದೇಶಗಳ ಗುಂಪಿಗೆ ಭಾರತವೂ ಸೇರಿದೆ.

ಜಿಎಸ್‌ಎಲ್‌ವಿ ಮಾರ್ಕ್– 3 ಡಿ1ರಾಕೆಟ್‌ನಲ್ಲಿ ಘನ, ದ್ರವ ಇಂಧನದ ಜೊತೆಯಲ್ಲಿ ಕ್ರಯೋಜೆನಿಕ್‌ ಸಹ ಬಳಸಲಾಗಿದೆ. ಈ ತಂತ್ರಜ್ಞಾನ ಕ್ಲಿಷ್ಟಕರವಾಗಿದ್ದರೂ ಉಡಾವಣಾ ವೇಳೆ ಯಾವುದೇ ತೊಂದರೆಯನ್ನು ಅನುಭವಿಸಲಿಲ್ಲ ಎಂದು ‘ಲಿಕ್ವಿಡ್‌ ಪ್ರೊಪಲ್ಶನ್‌ ಸಿಸ್ಟಂ’ ನಿರ್ದೇಶಕ ಎಸ್‌.ಸೋಮನಾಥ್‌ ಹೇಳಿದ್ದಾರೆ.

ರಾಕೆಟ್‌ ಉಡಾವಣೆಯಾದ ಐದು ನಿಮಿಷದ ನಂತರ ಕ್ರಯೋಜೆನಿಕ್‌ ಎಂಜಿನ್‌ 640 ಸೆಕೆಂಡ್‌ ಕಾಲ ಉರಿದಿದೆ. ಈ ಯಶಸ್ಸಿನ ಹಿಂದೆ ಇಸ್ರೊ ವಿಜ್ಞಾನಿಗಳ ಒಂದೂವರೆ ದಶಕಗಳ ಪರಿಶ್ರಮವಿದೆ ಎನ್ನುವುದನ್ನು ಮರೆಯುವಂತಿಲ್ಲ. ತಂತ್ರಜ್ಞಾನ ನೀಡಲು ರಷ್ಯಾ ನಿರಾಕರಿಸಿದ ನಂತರ ಕ್ರಯೋಜೆನಿಕ್‌ ಎಂಜಿನ್‌ ಅಭಿವೃದ್ಧಿಗೆ ಪೆಟ್ಟು ಬಿದ್ದಿದ್ದು ನಿಜ.

ಇದನ್ನು ಸವಾಲಾಗಿ ಸ್ವೀಕರಿಸಿದ ಇಸ್ರೊ ದೇಶೀಯವಾಗಿ ಎಂಜಿನ್‌ ಅಭಿವೃದ್ಧಿಪಡಿಸಿ 2014ರ ಡಿಸೆಂಬರ್‌ನಿಂದ 199 ಬಾರಿ ಪರೀಕ್ಷೆಗೆ ಒಡ್ಡಿತ್ತು. ಇದರಲ್ಲಿ ಯಶಸ್ಸನ್ನು ಕಂಡ ನಂತರವೇ ಇದರ ಮೂಲಕ 3136 ಕೆ.ಜಿ ತೂಕದ ಸಂಪರ್ಕ ಉಪಗ್ರಹ ಜಿ ಸ್ಯಾಟ್‌– 19 ಅನ್ನು ಗಗನಕ್ಕೆ ಸೇರಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ದೈತ್ಯ ತೂಕದ ರಾಕೆಟ್‌ ಯಶಸ್ಸಿನ ನಂತರ ಇಸ್ರೊಗೆ ಉಪಗ್ರಹ ಉಡಾವಣೆಯ ಅವಕಾಶಗಳ ಮಹಾಪೂರವೇ ಲಭಿಸುವ ಸಾಧ್ಯತೆಯಿದೆ. ಇದರ ಜೊತೆಗೆ ನಾಲ್ಕು ಟನ್‌ಗಿಂತ ಹೆಚ್ಚು ತೂಕದ ಸ್ವದೇಶಿ ಉಪಗ್ರಹ ಉಡಾವಣೆಗಳಿಗಾಗಿ ವಿದೇಶಿ ರಾಕೆಟ್‌ಗಳ ಮೇಲಿನ ಅವಲಂಬನೆ ತಪ್ಪಲಿದೆ. ಉಪಗ್ರಹ ಸಿದ್ಧಪಡಿಸಲು ತಗುಲುವ ವೆಚ್ಚಕ್ಕಿಂತ ಉಡಾವಣಾ ವೆಚ್ಚ ನಾಲ್ಕು ಪಟ್ಟು ಹೆಚ್ಚಾಗುತ್ತದೆ.

ಇಸ್ರೊ ಕಡಿಮೆ ವೆಚ್ಚದಲ್ಲಿ ಉಡಾವಣೆಗೆ ಮುಂದಾದರೆ ವಿದೇಶಿ ಉಪಗ್ರಹಗಳ ಉಡಾವಣೆಯ ಲಾಭವೂ ಭಾರತಕ್ಕೆ ಲಭಿಸುತ್ತದೆ. ಲಾಭದ ದೃಷ್ಟಿಯಲ್ಲಿ ಜಿಎಸ್‌ಎಲ್‌ವಿ ಮಾರ್ಕ್– 3 ಅವಕಾಶಗಳ ಮಹಾಪೂರವನ್ನೇ ದೊರಕಿಸಬಹುದು. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಅಂತರಿಕ್ಷಕ್ಕೆ ಮಾನವನನ್ನು ಕಳಿಸುವ ಕನಸು ಸಹ ಈ ಯಶಸ್ಸಿನಿಂದ ಗರಿ ಬಿಚ್ಚಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry