ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ ಅದಿರಿಗೆ, ಈಗ ಹೂಳಿಗೆ ಲಗ್ಗೆ!

ರೈತರು ಹೋದರು, ಉದ್ಯಮಿಗಳು ಬಂದರು
Last Updated 7 ಜೂನ್ 2017, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಗಣಿಗಾರಿಕೆ ಉತ್ತುಂಗ ಸ್ಥಿತಿಯಲ್ಲಿದ್ದಾಗ ನಗರದ ಹಾದಿ ಬೀದಿಗಳಲ್ಲಿ ಟಿಪ್ಪರ್‌ ಲಾರಿಗಳದ್ದೇ ಕಾರುಬಾರು, ಅವುಗಳದ್ದೇ ಸದ್ದು ಕೇಳಿ ಬರುತ್ತಿತ್ತು. ಅದೆಲ್ಲ ಈಗ ಇತಿಹಾಸ. ಆದರೆ, ಅಂತಹದ್ದೊಂದು ದೃಶ್ಯ ಈಗ ತುಂಗಭದ್ರಾ ಜಲಾಶಯದಲ್ಲಿ ನೋಡಲು ಸಿಗುತ್ತಿದೆ. ಅದು ಕಬ್ಬಿಣದ ಅದಿರಿಗಾಗಿ ಅಲ್ಲ, ಕೆಂಪು ಮಣ್ಣಿಗೆ!

ತುಂಗೆಯ ಒಡಲಿನಲ್ಲಿರುವ ಕೆಂಪು ಮಣ್ಣಿಗೆ ಭಾರಿ ಬೇಡಿಕೆ ಇದೆ. ಅದರಲ್ಲೂ ಇಟ್ಟಿಗೆ ತಯಾರಿಸಲು ಅದು ಹೇಳಿ ಮಾಡಿಸಿದಂತಿದೆ. ಅದರ ಮೇಲೆ ಇದೀಗ ಉದ್ಯಮಿಗಳ ಕಣ್ಣು ಬಿದ್ದಿದ್ದು, ರೈತರ ಹೆಸರಿನಲ್ಲಿ ತಮ್ಮ ಇಟ್ಟಿಗೆ ಕಾರ್ಖಾನೆಗಳಿಗೆ ಮಣ್ಣು ಕೊಂಡೊಯ್ಯುತ್ತಿದ್ದಾರೆ. ಈ ಕೆಲಸಕ್ಕೆ ಅವರಿಗೆ ವರವಾದುದು ‘ಹೂಳಿನ ಜಾತ್ರೆ’.

ಜಲಾಶಯದಲ್ಲಿ ತುಂಬಿರುವ ಹೂಳು ತೆಗೆಯಲು ರೈತ ಸಂಘವು ‘ಹೂಳಿನ ಜಾತ್ರೆ’ ಹಮ್ಮಿಕೊಂಡಿದೆ. ಯಾವುದೇ ಭಾಗದ ರೈತರು ಬಂದು ಹೂಳಿನ ಮಣ್ಣು ಕೊಂಡೊಯ್ಯಬಹುದು ಎಂದು ತಿಳಿಸಲಾಗಿತ್ತು.  ಸುಮಾರು ಎರಡು ವಾರಗಳವರೆಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೂಳು ಸಾಗಿಸಿದರು. ಆದರೆ, ಈಗ ಆ ಸ್ಥಿತಿ ಇಲ್ಲ. ರೈತರ ಸಂಖ್ಯೆ ಕುಸಿದಿದೆ.

ಬೆರಳೆಣಿಕೆಯಷ್ಟು ಟ್ರ್ಯಾಕ್ಟರ್‌ಗಳೂ ಈಗ ಕಂಡು ಬರುತ್ತಿಲ್ಲ. ಅವುಗಳ ಜಾಗವನ್ನು ಟಿಪ್ಪರ್‌ಗಳು ಆಕ್ರಮಿಸಿಕೊಂಡಿವೆ. ದೈತ್ಯ ಹಿಟಾಚಿಗಳೂ ಬಂದಿವೆ. ನಿತ್ಯ ನೂರಾರು ಟನ್‌ ಮಣ್ಣು ತಾಲ್ಲೂಕಿನ ಮರಿಯಮ್ಮನಹಳ್ಳಿ, ಕೊಂಡನಾಯಕನಹಳ್ಳಿಯ ಇಟ್ಟಿಗೆ ಬಟ್ಟಿಗಳ ಪಾಲಾಗುತ್ತಿದೆ.

ಹೆದ್ದಾರಿ ನಿರ್ಮಾಣಕ್ಕೆ ಎಲ್‌ ಅಂಡ್‌ ಟಿ ಕಂಪೆನಿಯು ಜಲಾಶಯದ ಮಣ್ಣು ಕೊಂಡೊಯ್ಯುತ್ತಿದ್ದು, ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಗೆ ರಾಜಧನ ಕಟ್ಟುತ್ತಿದೆ. ಆದರೆ, ರೈತರು ತೆಗೆದುಕೊಂಡು ಹೋಗುತ್ತಿರುವ ಹೂಳಿಗೆ ಶುಲ್ಕ ವಿಧಿಸದಿರಲು ಮಂಡಳಿ ತೀರ್ಮಾನಿಸಿದೆ.

ಗಾಗಿ ಇಟ್ಟಿಗೆ ಕಾರ್ಖಾನೆಯ ಮಾಲೀಕರು ಟಿಪ್ಪರ್‌ಗಳಿಗೆ ‘ಹೂಳಿನ ಜಾತ್ರೆ’ ಬ್ಯಾನರ್‌ ಹಾಕಿಕೊಂಡು ಯಾರಿಗೂ ಅನುಮಾನ ಬರದಂತೆ ಮಣ್ಣು ಕೊಂಡೊಯ್ಯುತ್ತಿದ್ದಾರೆ. ಈ ರೀತಿ ‘ಹೂಳಿನ ಜಾತ್ರೆ’ಯ ಸ್ವರೂಪ ಸಂಪೂರ್ಣ  ಬದಲಾಗಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

‘ರೈತರು ತಮ್ಮ ಹೊಲಗಳಿಗೆ ಮಣ್ಣು ಕೊಂಡೊಯ್ಯುವುದಾದರೆ ಯಾವುದೇ ಅಭ್ಯಂತರವಿಲ್ಲ. ಅದಕ್ಕೆ ಶುಲ್ಕ ಕೂಡ ವಿಧಿಸುವ ಅಗತ್ಯವಿಲ್ಲ ಎಂದು ತುಂಗಭದ್ರಾ ಮಂಡಳಿ ತಿಳಿಸಿತ್ತು. ಅದನ್ನೇ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಕ್ಕೆ ಸೇರಬೇಕಾದ ರಾಜಧನ ಪಾವತಿಸದೇ ವಂಚನೆ ಮಾಡುತ್ತಿದ್ದಾರೆ’ ಎಂದು ಸಿಪಿಎಂ ಮುಖಂಡ ಜಂಬಯ್ಯ ನಾಯಕ ಹೇಳಿದರು.

‘ಜಲಾಶಯದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಗಳು ನಿಜಕ್ಕೂ ಆಘಾತಕಾರಿ. ಹಿಂದೆ ಅಕ್ರಮ ಗಣಿಗಾರಿಕೆಯಿಂದ ಇಡೀ ಜಿಲ್ಲೆಗೆ ಕೆಟ್ಟ ಹೆಸರು ಬಂದಿತ್ತು. ಈಗ ಮಣ್ಣಿನಿಂದ ಮತ್ತೊಮ್ಮೆ ಕೆಟ್ಟ ಹೆಸರು ಬರುವುದು ಬೇಡ. ಕೂಡಲೇ ಅದಕ್ಕೆ ಮಂಡಳಿ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

*
ರೈತರೇ ಟಿಪ್ಪರ್‌ಗಳಲ್ಲಿ ತಮ್ಮ ಜಮೀನಿಗೆ ಮಣ್ಣು ಕೊಂಡೊಯ್ಯುತ್ತಿದ್ದಾರೆ. ಇಟ್ಟಿಗೆ ಕಾರ್ಖಾನೆಗೆ ಒಂದೇ ಒಂದು ಲಾರಿ ಹೋಗುತ್ತಿಲ್ಲ.
-ದರೂರು ಪುರುಷೋತ್ತಮಗೌಡ, ಜಿಲ್ಲಾ ಅಧ್ಯಕ್ಷ, ರೈತ ಸಂಘ ಬಳ್ಳಾರಿ

*
ಕೆಲವು ಇಟ್ಟಿಗೆ ಕಾರ್ಖಾನೆಯವರು ಮಣ್ಣು ಕೊಂಡೊಯ್ಯುತ್ತಿರುವುದು ಗೊತ್ತಾಗಿದೆ. ಅವರಿಂದ ದಂಡ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ
-ಡಿ. ರಂಗಾರೆಡ್ಡಿ, ಕಾರ್ಯದರ್ಶಿ, ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT