ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ತಾಳಕ್ಕೆ ಕುಣಿಯದ ಆರ್‌ಬಿಐ

Last Updated 7 ಜೂನ್ 2017, 19:30 IST
ಅಕ್ಷರ ಗಾತ್ರ

ಮುಂಬೈ: ಬಡ್ಡಿ ದರ ಕಡಿತಕ್ಕೆ ಕೇಂದ್ರ ಸರ್ಕಾರದಿಂದ ತೀವ್ರ ಒತ್ತಡ ಕಂಡುಬಂದಿದ್ದರೂ, ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್ ನೇತೃತ್ವದಲ್ಲಿನ ಹಣಕಾಸು ನೀತಿ ಸಮಿತಿಯು (ಎಂಪಿಸಿ),  ಯಥಾಸ್ಥಿತಿ ಕಾಯ್ದುಕೊಂಡಿದೆ.

ಸದಸ್ಯ ರವೀಂದ್ರ ಎಚ್‌. ಧೋಲಾಕಿಯಾ ಅವರ ಭಿನ್ನಮತದ (5–1) ಹೊರತಾಗಿಯೂ ಉಳಿದ ಸದಸ್ಯರು ಬಡ್ಡಿ ದರಗಳನ್ನು ತಗ್ಗಿಸಲು ಮುಂದಾಗಿಲ್ಲ.

ಹಣದುಬ್ಬರವು ನಿರಂತರವಾಗಿ ಕೆಳಮಟ್ಟದಲ್ಲಿ ಇರುವುದರಿಂದ ಬಡ್ಡಿ ದರ ಕಡಿತಕ್ಕೆ ಪೂರಕ ವಾತಾವರಣ ಇದೆ ಎಂದು ಹಣಕಾಸು ಸಚಿವಾಲಯ ಬಲವಾಗಿ ಪ್ರತಿಪಾದಿಸಿದ್ದರೂ, ಆರ್‌ಬಿಐ ಅದಕ್ಕೆ ಕಿವಿಗೊಟ್ಟಿಲ್ಲ.

‘ಎಂಪಿಸಿ’ಯ ನಿರ್ಧಾರಕ್ಕೆ ಹಣಕಾಸು ಸಚಿವಾಲಯ ತನ್ನ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.  ಬಡ್ಡಿ ದರ ಕಡಿತ ಮಾಡದಿರುವುದಕ್ಕೆ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಅವರೂ  ಹತಾಶೆ ವ್ಯಕ್ತಪಡಿಸಿದ್ದಾರೆ.

‘ದೇಶಿ ಆರ್ಥಿಕತೆ ಎರಡು ವರ್ಷಗಳಲ್ಲಿ ಅತ್ಯಂತ ಕಡಿಮೆ ದರದಲ್ಲಿ ಬೆಳವಣಿಗೆ ದಾಖಲಿಸಿದೆ. ಸಾಲ ನೀಡಿಕೆ ಪ್ರಮಾಣವು 25 ವರ್ಷಗಳ ಹಿಂದಿನ ಮಟ್ಟದಲ್ಲಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಬಡ್ಡಿ ದರ ಕಡಿತ ಅನಿವಾರ್ಯವಾಗಿತ್ತು’ ಎಂದು ಅವರು ಹೇಳಿದ್ದಾರೆ.

ಎಂಪಿಸಿ ದೃಢ ನಿಲುವು: ಬಡ್ಡಿ ದರ ಕಡಿತ ಮಾಡಬೇಕೆಂಬ ಒತ್ತಾಯಕ್ಕೆ ಮಣಿಯದ ‘ಎಂಪಿಸಿ’ ತನ್ನ ಸ್ವಾಯತ್ತತೆ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ.

ಖಾಸಗಿ ಬಂಡವಾಳ ಹೂಡಿಕೆ ಹೆಚ್ಚಿಸಲು ಬಡ್ಡಿ ದರ ಕಡಿತ ಮಾಡಬೇಕು ಎಂದು ಸರ್ಕಾರ ಒತ್ತಾಯಿಸುತ್ತಿತ್ತು. ಈ ಸಂಬಂಧ  ಸಮಿತಿಯ ಸದಸ್ಯರ ಜತೆ ಚರ್ಚಿಸಲೂ ಬಯಸಿತ್ತು. ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಸದಸ್ಯರ ಭೇಟಿಗೆ ದಿನವನ್ನೂ ನಿಗದಿ ಮಾಡಿದ್ದರು.  ಚರ್ಚೆಗೆ ಅವಕಾಶ ಮಾಡಿಕೊಡದಿರಲು ಸದಸ್ಯರು ಒಮ್ಮತದ ನಿರ್ಧಾರ ಕೈಗೊಂಡಿದ್ದರು.

‘ಬಡ್ಡಿ ದರ ನಿಗದಿ ಮಾಡುವ ಸಮಿತಿಯ ಸ್ವಾಯತ್ತತೆಗೆ ಧಕ್ಕೆ ತರುವ ಉದ್ದೇಶ ಸರ್ಕಾರಕ್ಕೆ ಇದ್ದಿರಲಿಲ್ಲ. ಅರ್ಥ ವ್ಯವಸ್ಥೆ ಮತ್ತು ಹಣದುಬ್ಬರದ ಬಗ್ಗೆ  ಮಾಹಿತಿ ಹಂಚಿಕೊಳ್ಳುವುದಷ್ಟೇ ಸರ್ಕಾರದ ಉದ್ದೇಶವಾಗಿತ್ತು’ ಎಂದು ಅರವಿಂದ ಸುಬ್ರಮಣಿಯನ್‌ ಹೇಳಿದ್ದಾರೆ.

ಗೃಹ ಸಾಲ ಅಗ್ಗ
ಗೃಹ ಸಾಲ ವಿತರಣೆಗೆ ಸಂಬಂಧಿಸಿದಂತೆ ಕೆಲ ನಿಯಮಗಳಲ್ಲಿ ಸಡಿಲಿಕೆ ಮಾಡಿರುವುದರಿಂದ ₹ 30 ಲಕ್ಷದಿಂದ ₹ 75 ಲಕ್ಷವರೆಗಿನ ಸಾಲದ ಮೇಲಿನ ಬಡ್ಡಿ ದರಗಳು  ಕಡಿಮೆಯಾಗುವ ಸಾಧ್ಯತೆ ಇದೆ.

ಗೃಹ ಸಾಲಕ್ಕೆ ತೆಗೆದು ಇರಿಸುವ ಬಂಡವಾಳದ ಮೊತ್ತವನ್ನು (risk weights) ಆರ್‌ಬಿಐ ತಗ್ಗಿಸಿದೆ. ₹ 75 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಸಾಲಕ್ಕೆ ಪ್ರತ್ಯೇಕವಾಗಿ ತೆಗೆದು ಇರಿಸುವ ಮೊತ್ತದ ಪ್ರಮಾಣವನ್ನು ಸದ್ಯದ ಶೇ 75 ರಿಂದ ಶೇ 50ಕ್ಕೆ ಮತ್ತು ₹ 30 ಲಕ್ಷದಿಂದ ₹ 75 ಲಕ್ಷದವರೆಗಿನ ಸಾಲಕ್ಕೆ ಶೇ 35ಕ್ಕೆ ನಿಗದಿಪಡಿಸಲಾಗಿದೆ.

ಬದಲಾಗದ ರೆಪೊ ದರ
*6.25% ಶಾಸನಬದ್ಧ ನಗದು ಅನುಪಾತ (ಎಸ್‌ಎಲ್ಆರ್‌) ಕಡಿತ 0.5% 20% ಕ್ಕೆ ಇಳಿಕೆ.
* 2017–18ರಲ್ಲಿ ಆರ್ಥಿಕ ವೃದ್ಧಿ ದರದ ಮುನ್ನೋಟ 7.4 % ರಿಂದ  7.3% ಇಳಿಕೆ.

ಗವರ್ನರ್‌  ಉರ್ಜಿತ್‌ ಪಟೇಲ್‌
* ಕೃಷಿ ಸಾಲ ಮನ್ನಾ  ಮಾಡಲು ಮುಂದಾಗುವ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ.
* ವಿತ್ತೀಯ ಕೊರತೆ ಹೆಚ್ಚಳ  ಮತ್ತು ಹಣದುಬ್ಬರ ಏರಿಕೆ ನಿರೀಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT