ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ, ತೆಲಂಗಾಣದಲ್ಲಿ ಪ್ಲಾಸ್ಟಿಕ್‌ ಅಕ್ಕಿ ಆತಂಕ

ಉಂಡೆ ಮಾಡಿ ನೆಲಕ್ಕೆ ಬಡಿದರೆ ಪುಟಿದೇಳುವ ಅನ್ನ; ಆರೋಗ್ಯದ ಮೇಲೆ ಪರಿಣಾಮ
Last Updated 7 ಜೂನ್ 2017, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ಅನ್ನವನ್ನು ಬಟ್ಟಲಿಗೆ ಹಾಕಿದರೆ ಸಾಕು; ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನ ಅನ್ನವನ್ನು ಚೆಂಡಿನ ರೀತಿಯಲ್ಲಿ ಉಂಡೆ ಮಾಡಿ ನೆಲಕ್ಕೆ ಎಸೆದು ಅದು ಪುಟಿದೇಳುತ್ತಿದೆಯೇ ಎಂದು ನೋಡುತ್ತಾರೆ!

–ತಾವು ತಿನ್ನಲು ಹೊರಟಿರುವ ಅನ್ನ ನಿಜವಾದದ್ದೋ ಅಥವಾ ಪ್ಲಾಸ್ಟಿಕ್‌ ಅಕ್ಕಿಯಿಂದ ಮಾಡಿದ್ದೋ ಎಂಬುದನ್ನು  ತೆಲುಗರು ಈಗೀಗ ಪರೀಕ್ಷಿಸುವ ಬಗೆ ಇದು.

ಪ್ಲಾಸ್ಟಿಕ್‌ ಅಕ್ಕಿಯಿಂದ ಮಾಡಿದ ಅನ್ನ ಚೆಂಡಿನಂತೆ ಪುಟಿದೇಳುತ್ತದೆ ಎಂಬ ವದಂತಿಯಿಂದಾಗಿ ಅವರು ಹೀಗೆ ಮಾಡುತ್ತಿದ್ದಾರೆ.

ಹೈದರಾಬಾದ್‌ ಸೇರಿದಂತೆ ಎರಡೂ ರಾಜ್ಯಗಳ ಹಲವು ನಗರ ಮತ್ತು ಪಟ್ಟಣಗಳಲ್ಲಿ ಅಂಗಡಿಗಳಲ್ಲಿ ಸಿಗುವುದು ನಿಜವಾದ ಅಕ್ಕಿ ಅಲ್ಲ ಎಂಬ ಭಯ ಜನರನ್ನು ಕಾಡುತ್ತಿದೆ. ಪ್ಲಾಸ್ಟಿಕ್‌ ಅಕ್ಕಿಯಿಂದ ಮಾಡಿದ ಅನ್ನವು ಹೊಟ್ಟೆಗೆ ಸಂಬಂಧಿಸಿದ ಗಂಭೀರ ಕಾಯಿಲೆಗಳನ್ನು ತರುತ್ತದೆ ಎಂಬ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಜನರಲ್ಲಿನ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಚೀನಾ ಮತ್ತು ವಿಯೆಟ್ನಾಂನಲ್ಲಿ ತಯಾರಿಸಿದ್ದು ಎನ್ನಲಾದ ಪ್ಲಾಸ್ಟಿಕ್‌ ಅಕ್ಕಿಯನ್ನು ಜಪ್ತಿ ಮಾಡಲು ಮಾಪನಶಾಸ್ತ್ರ ಇಲಾಖೆ ಕ್ರಮಕೈಗೊಂಡಿದೆ.

ಮೊದಲ ಪ್ರಕರಣ:  ಪ್ಲಾಸ್ಟಿಕ್‌ ಅಕ್ಕಿಯಿಂದ ಆಹಾರ ಸಿದ್ಧಪಡಿಸಿದ ಮೊದಲ ಪ್ರಕರಣ ಸರೂರ್‌ನಗರದಲ್ಲಿ ವರದಿಯಾಗಿದೆ. ಹೋಟೆಲ್‌ ಒಂದರಲ್ಲಿ ಪತ್ರಕರ್ತರೊಬ್ಬರಿಗೆ ಕೃತಕ ಅಕ್ಕಿಯಿಂದ ಮಾಡಿದ ಬಿರಿಯಾನಿ ನೀಡಲಾಗಿತ್ತು ಎನ್ನಲಾಗಿದೆ.

ಬಿರಿಯಾನಿಯು ನೋಡಲು ಪ್ಲಾಸ್ಟಿಕ್‌ ಅಕ್ಕಿಯಿಂದ ಮಾಡಿದಂತೆ ಕಾಣುತ್ತದೆ ಮತ್ತು ವಾಸನೆಯೂ ಅದೇ ರೀತಿ ಇದೆ ಎಂದು ಆ ಪತ್ರಕರ್ತ ದೂರು ನೀಡಲು ಯತ್ನಿಸಿದಾಗ ಹೋಟೆಲ್‌ ಮಾಲೀಕರು, ಅವರಿಗೆ ಹೊಡೆದಿದ್ದರು. ನಂತರ ಪೊಲೀಸರು ಮಾಲೀಕರನ್ನು ಬಂಧಿಸಿ, ಬಿರಿಯಾನಿ ಮಾದರಿಯನ್ನು ವಶಕ್ಕೆ ತೆಗೆದುಕೊಂಡಿದ್ದರು.

‘ನಾನು ಸ್ವಲ್ಪ ಬಿರಿಯಾನಿಯನ್ನು ಉಂಡೆ ಮಾಡಿ ನೆಲಕ್ಕೆ ಬಡಿದೆ. ಅದು ಚೆಂಡಿನ ರೀತಿ ಪುಟಿಯಿತು’ ಎಂದು  ಪತ್ರಕರ್ತ ಹೇಳಿದ್ದಾರೆ.
ಪ್ರಕರಣ 2: ಮೀರ್‌ಪೇಟೆಯಲ್ಲಿ ಅಶೋಕ್‌ ಎಂಬುವವರು 25 ಕೆಜಿ ಅಕ್ಕಿಯನ್ನು ಸ್ಥಳೀಯ ವ್ಯಾಪಾರಿ ಕೈಯಿಂದ ಖರೀದಿಸಿದ್ದರು. ₹1,100 ಬೆಲೆಯ ಅಕ್ಕಿಯನ್ನು ಆ ವ್ಯಾಪಾರಿ ₹900ಗೆ ಕೊಟ್ಟಿದ್ದರು.

‘ಆ ಅನ್ನವನ್ನು ತಿಂದ ನಂತರ ನನಗೆ ವಾಕರಿಕೆ ಬಂತು. ಮಾದಕ ದ್ರವ್ಯ ಸೇವಿಸಿದವನಂತೆ ಗಂಟೆಗಟ್ಟಲೆ . ಸುದ್ದಿವಾಹಿನಿಗಳಲ್ಲಿ ಪ್ಲಾಸ್ಟಿಕ್‌ ಅಕ್ಕಿ ಬಗ್ಗೆ ವರದಿ ನೋಡಿದ ನಂತರ, ಅನ್ನವನ್ನು ನೆಲಕ್ಕೆ ಎಸೆದು ನೋಡಿದೆ. ಅದು ಪುಟಿಯಿತು’ ಎಂದು ಅಶೋಕ್‌ ಪೊಲೀಸರಿಗೆ ತಿಳಿಸಿದ್ದಾರೆ. ಅನ್ನದಿಂದ ಮಾಡಿದ ಚೆಂಡು ಪುಟಿದೇಳುವುದನ್ನು ಅವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.

ಅಮೀರ್‌ಪೇಟೆ ಮತ್ತು ಹೈಟೆಕ್‌ ಸಿಟಿಯಲ್ಲಿರುವ ಹಲವು ಹಾಸ್ಟೆಲ್‌ಗಳು ಪ್ಲಾಸ್ಟಿಕ್‌ ಅಕ್ಕಿಯಿಂದ ಮಾಡಿದ ಆಹಾರದ ಬಗ್ಗೆ ಮತ್ತು ಪ್ಲಾಸ್ಟಿಕ್‌ ಮೊಟ್ಟೆಗಳ ಬಗ್ಗೆ ದೂರು ನೀಡಿವೆ.

ಮತ್ತೊಂದು ಪ್ರಕರಣ: ಆಂಧ್ರದ ಪ್ರಕಾಶಂ ಜಿಲ್ಲೆಯ ಓಗುರು  ಗ್ರಾಮದ ನಿವಾಸಿ ಪೊಲಿಪುಡಿ ಮಾಧವ ಎಂಬುವವರು ಕಂದುಕೂರುವಿನಲ್ಲಿರುವ ಮೋರ್‌ ಸ್ಟೋರ್‌ನಿಂದ 25 ಕೆಜಿ ಅಕ್ಕಿ ಚೀಲವನ್ನು ವಿಶೇಷ ರಿಯಾಯಿತಿ ದರ ₹900 ನೀಡಿ ಖರೀದಿಸಿದ್ದರು.

ಅಕ್ಕಿಯನ್ನು ಬೇಯಿಸಿದಾಗ ಪ್ಲಾಸ್ಟಿಕ್‌ ವಾಸನೆ ಬರುತ್ತಿದ್ದ ಬಗ್ಗೆ ಮತ್ತು ಅದರ ಪುಟಿದೇಳುವ ಗುಣದ ಬಗ್ಗೆ ಅವರು ದೂರು ನೀಡಿದ್ದಾರೆ. ಇದರ ಆಧಾರದಲ್ಲಿ ತಹಶೀಲ್ದಾರ್‌ ಅವರು ಆ ಮಳಿಗೆಯಿಂದ ಗಜಾನನ ಬ್ರ್ಯಾಂಡ್‌ನ 25 ಅಕ್ಕಿ ಚೀಲಗಳನ್ನು ವಶಪಡಿಸಿಕೊಂಡು, ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಆದರೆ, ಪ್ಲಾಸ್ಟಿಕ್‌ ಅಕ್ಕಿಯ ಸುದ್ದಿಯನ್ನು ‘ಜ್ಞಾನ ವಿಜ್ಞಾನ ವೇದಿಕೆ’ ಎಂಬ ಸಾಮಾಜಿಕ ಜಾಗೃತಿ ಮೂಡಿಸುವ ಸಂಸ್ಥೆ ತಳ್ಳಿಹಾಕಿದೆ. ಭ್ರಾಂತಿಯಿಂದಾಗಿ ಜನರಲ್ಲಿ ಈ ಭಯ ನಿರ್ಮಾಣವಾಗಿದೆ ಎಂದು ಹೇಳಿದೆ.

‘ಪ್ಲಾಸ್ಟಿಕ್‌ ಅಕ್ಕಿ ಎಂಬುದಿಲ್ಲ. ವಾಸ್ತವದಲ್ಲಿ ಅದರ ತಯಾರಿಕೆ ವೆಚ್ಚ ಭತ್ತ ಬೆಳೆಯುವುದಕ್ಕಿಂತ ಹೆಚ್ಚಾಗುತ್ತದೆ.  ಜೊತೆಗೆ, ಯಾವುದೇ ಅಕ್ಕಿಯಿಂದ ಮಾಡಿದ ಅನ್ನ  ಪುಟಿದೇಳುತ್ತದೆ’ ಎಂದು ವೇದಿಕೆಯ ಪ್ರಧಾನ ಕಾರ್ಯದರ್ಶಿ ಟಿ. ರಮೇಶ್‌ ಹೇಳಿದ್ದಾರೆ.

ಪರೀಕ್ಷೆ ಸುಲಭ
ಅಕ್ಕಿಯು ಅಸಲಿಯೇ ಅಥವಾ ಪ್ಲಾಸ್ಟಿಕ್‌ನಿಂದ ಮಾಡಿದ್ದೇ ಎಂಬುದನ್ನು ಅತ್ಯಂತ ಸುಲಭವಾಗಿ ಪತ್ತೆ ಮಾಡಬಹುದು ಎಂದು ರಮೇಶ್‌ ಹೇಳಿದ್ದಾರೆ.

‘ಒಂದು ಚಮಚ ಅಕ್ಕಿಯನ್ನು ಒಂದು ಲೋಟ ನೀರಿಗೆ ಹಾಕಿ. ಅಕ್ಕಿ ನೀರಿನಲ್ಲಿ ತೇಲಿದರೆ, ಅದನ್ನು ಪ್ಲಾಸ್ಟಿಕ್‌ ಅಕ್ಕಿ ಎಂದು  ಪರಿಗಣಿಸಬಹುದು’ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT