ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌; ಸೆಮಿಫೈನಲ್‌ಗೆ ನಡಾಲ್‌

Last Updated 7 ಜೂನ್ 2017, 19:30 IST
ಅಕ್ಷರ ಗಾತ್ರ

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಹಂಬಲದಲ್ಲಿದ್ದ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ಬುಧವಾರ ಆಘಾತ ಅನುಭವಿಸಿದ್ದಾರೆ.

ವಿಶ್ವ ಕ್ರಮಾಂಕಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿರುವ ನೊವಾಕ್‌ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಕಂಡಿದ್ದಾರೆ. ಪುರುಷರ ಸಿಂಗಲ್ಸ್‌ ವಿಭಾಗದ ಹೋರಾಟದಲ್ಲಿ ಆಸ್ಟ್ರಿಯಾದ ಡೊಮಿನಿಕ್‌ ಥಿಯೆಮ್‌ 7–6, 6–3, 6–0ರಲ್ಲಿ ಹಾಲಿ ಚಾಂಪಿಯನ್‌ ನೊವಾಕ್‌ ಅವರನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಇಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದ ನೊವಾಕ್‌ ಮೊದಲ ಸೆಟ್‌ನಲ್ಲಿ ದಿಟ್ಟ ಹೋರಾಟ ನಡೆಸಿದರು. ಆರನೇ ಶ್ರೇಯಾಂಕ ಹೊಂದಿದ್ದ ಥಿಯೆಮ್‌ ಕೂಡ ಮೋಡಿ ಮಾಡಿದರು. ಹೀಗಾಗಿ 6–6ರಲ್ಲಿ ಸಮಬಲ ಕಂಡುಬಂದಿತ್ತು. ‘ಟೈ’ ಬ್ರೇಕರ್‌ನಲ್ಲಿ ಗುಣಮಟ್ಟದ ಆಟ ಆಡಿದ ಡೊಮಿ ನಿಕ್‌, ಸರ್ಬಿಯಾದ ಆಟಗಾರನ ಸವಾಲು ಮೀರಿ ನಿಂತರು.

ಎರಡನೇ ಸೆಟ್‌ನಲ್ಲೂ ಉಭಯ ಆಟಗಾರರ ನಡುವೆ ಜಿದ್ದಾ ಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಮೊದಲ ಆರು ಗೇಮ್‌ಗಳಲ್ಲಿ ಇಬ್ಬರೂ ಸಮ ಬಲದಿಂದ ಹೋರಾಡಿದರು. ಆ ನಂತರ  ಪರಾಕ್ರಮ ಮೆರೆದ ಥಿಯೆಮ್‌ ತಮ್ಮ ಸರ್ವ್‌ ಉಳಿಸಿ ಕೊಳ್ಳುವ ಜೊತೆಗೆ ಎದುರಾಳಿಯ ಸರ್ವ್‌ ಮುರಿದು ಸೆಟ್‌ ತಮ್ಮದಾಗಿಸಿಕೊಂಡರು.

ಆದರೆ ಮೂರನೇ ಹಾಗೂ ನಿರ್ಣಾ ಯಕ ಸೆಟ್‌ನಲ್ಲಿ ನೊವಾಕ್‌ ಸಂಪೂರ್ಣ ವಾಗಿ ಮಂಕಾದರು. ಆಸ್ಟ್ರಿಯಾದ ಆಟ ಗಾರನ ರ್‍ಯಾಕೆಟ್‌ನಿಂದ ಸಿಡಿಯುತ್ತಿದ್ದ ಶರ ವೇಗದ ಸರ್ವ್‌ಗಳಿಗೆ ನಿರುತ್ತರರಾದ ಅವರು ಸುಲಭವಾಗಿ ಸೋಲಿಗೆ ಶರಣಾದರು.ಇನ್ನೊಂದು ಪಂದ್ಯದಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌ 6–2, 2–0ರಲ್ಲಿ ತಮ್ಮದೇ ದೇಶದ ಪ್ಯಾಬ್ಲೊ ಕರೆನೊ ವಿರುದ್ಧ ಗೆದ್ದರು.

ಎರಡನೇ ಸೆಟ್‌ನ ವೇಳೆ ಪ್ಯಾಬ್ಲೊ ಗಾಯಗೊಂಡು ಅಂಗಳ ತೊರೆದರು. ಎಂಟರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಸ್ವಿಟ್ಜರ್‌ ಲೆಂಡ್‌ನ 32 ವರ್ಷದ ಆಟಗಾರ ಸ್ಟಾನಿಸ್ಲಾಸ್‌ ವಾವ್ರಿಂಕ 6–3, 6–3, 6–1ರಲ್ಲಿ ಕ್ರೊವೇಷ್ಯಾದ ಮರಿನ್‌ ಸಿಲಿಕ್‌ ಅವರನ್ನು ಪರಾಭವಗೊಳಿಸಿದರು. ಈ ಮೂಲಕ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಹಿರಿಯ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು.

ಪ್ಲಿಸ್ಕೋವಾ
ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ರುಮೇನಿ ಯಾದ ಸಿಮೊನಾ ಹಲೆಪ್‌ 3–6, 7–6, 6–0ರಲ್ಲಿ ಎಲಿನಾ ಸ್ವಿಟೋಲಿನಾ ಅವರನ್ನು ಮಣಿಸಿದರು. ಇನ್ನೊಂದು ಹಣಾಹಣಿಯಲ್ಲಿ ಕ್ಯಾರೋಲಿನಾ ಪ್ಲಿಸ್ಕೋ ವಾ 7–6, 6–4 ರಲ್ಲಿ ಕ್ಯಾರೋಲಿನಾ ಗಾರ್ಸಿಯಾ ವಿರುದ್ಧ ಗೆದ್ದರು.

ಫೈನಲ್‌ಗೆ ಬೋಪಣ್ಣ ಜೋಡಿ: ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಭಾರತದ ರೋಹನ್‌ ಬೋಪಣ್ಣ ಮತ್ತು ಕೆನಡಾದ ಗೇಬ್ರಿಯೆಲಾ ದಬ್ರೋವ್‌ಸ್ಕಿ ಅವರು ಫೈನಲ್‌ ಪ್ರವೇಶಿಸಿದರು.

ಸೆಮಿಫೈನಲ್‌ನಲ್ಲಿ ಬೋಪಣ್ಣ ಮತ್ತು ಗೇಬ್ರಿಯೆಲಾ 7–5, 6–3ರಲ್ಲಿ ಆ್ಯಂಡ್ರಿಾ ಹ್ಲಾವಕೊವಾ ಮತ್ತು ಎಡೌರ್ಡ್‌ ರೋಜರ್‌ ವಸೆಲಿನ್‌ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT