ಕಲಾಪಕ್ಕೆ ಸಚಿವರು,ಶಾಸಕರ ಗೈರು

7
ಗೈರಾದ ಸಚಿವರ ಹೆಸರು ಓದಿದ ಸಭಾಧ್ಯಕ್ಷ ಕೋಳಿವಾಡ

ಕಲಾಪಕ್ಕೆ ಸಚಿವರು,ಶಾಸಕರ ಗೈರು

Published:
Updated:
ಕಲಾಪಕ್ಕೆ ಸಚಿವರು,ಶಾಸಕರ ಗೈರು

ಬೆಂಗಳೂರು: ರಾಜ್ಯವನ್ನು ಕಾಡುತ್ತಿರುವ ಭೀಕರ ಬರಗಾಲದ ಮಧ್ಯೆಯೇ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲಿ ಸಚಿವರು, ಶಾಸಕರು ಪಾಲ್ಗೊಳ್ಳದೇ ಇರುವುದು ಸದನದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.

ಕಳೆದ ಮೂರು ದಿನಗಳಿಂದಲೂ ಬೆಳಿಗ್ಗೆ ಮತ್ತು ಮಧ್ಯಾಹ್ನ  ಕೋರಂ ಇಲ್ಲದೇ ಕಲಾಪ ಆರಂಭವಾಗುವುದು ಅರ್ಧಗಂಟೆ ವಿಳಂಬವಾಗುತ್ತಿದೆ.

ಬುಧವಾರ ಮಧ್ಯಾಹ್ನ 35 ನಿಮಿಷ ತಡವಾಗಿ ಕಲಾಪ ಆರಂಭವಾದಾಗ ಆಡಳಿತ ಪಕ್ಷದ ಮೊದಲ ಸಾಲಿನಲ್ಲಿ ಯಾವ ಸಚಿವರೂ ಇರಲಿಲ್ಲ. ಹಿಂದಿನ ಸಾಲಿನಲ್ಲಿ ನಾಲ್ವರು ಸಚಿವರು ಮಾತ್ರ ಹಾಜರಿದ್ದರು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸಾಲಿನಲ್ಲಿ ಶಾಸಕರ ಸಂಖ್ಯೆಯೂ ವಿರಳವಾಗಿತ್ತು.

ಇಲಾಖಾವಾರು ಬೇಡಿಕೆಗಳ ಮೇಲೆ ಚರ್ಚೆ ಆರಂಭಿಸಿದ ಬಿಜೆಪಿಯ ಡಿ.ಎನ್‌. ಜೀವರಾಜ್‌, ‘ಯುದ್ಧ ಮಾಡಬೇಕಾದರೆ ಶತ್ರು ಸೈನ್ಯ ಬಲವಾಗಿರಬೇಕು. ಇಲ್ಲಿ ಶತ್ರುಗಳೇ ಇಲ್ಲದೆ ಹೋರಾಡುವ ಪರಿಸ್ಥಿತಿ ನಮ್ಮದಾಗಿದೆ’ ಎಂದು ವ್ಯಂಗ್ಯವಾಡಿದರು.

ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ,  ಸದನದಲ್ಲಿ ಹಾಜರಿರಬೇಕಾದ ಸಚಿವರ ಪಟ್ಟಿಯನ್ನು ಓದಿದರು.

‘ಸದನದಲ್ಲಿ ಎಲ್ಲ ಸಚಿವರೂ ಹಾಜರಿರುತ್ತಾರೆ ಎಂದು ಕಲಾಪ ಸಲಹಾ ಸಮಿತಿ ಸಭೆಯಲ್ಲಿ  ಮುಖ್ಯಮಂತ್ರಿ ಭರವಸೆ ನೀಡಿದ್ದರು. ವಿರೋಧ ಪಕ್ಷ ಪ್ರಸ್ತಾಪಿಸಿದ ವಿಷಯಗಳನ್ನು ಬರೆದುಕೊಂಡು ಉತ್ತರ ಕೊಡುವುದು ಯಾರು? ಸಭಾಧ್ಯಕ್ಷರು ಚಾಟಿ ಬೀಸಬೇಕು’ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಲಕ್ಷ್ಮಣ ಸವದಿ, ‘ಸಚಿವರಿಲ್ಲದ ಕಾರಣಕ್ಕೆ ಕಲಾಪವನ್ನು ನಾಳೆಗೆ ಮುಂದೂಡಿದ್ದೇನೆ ಎಂದು ರೂಲಿಂಗ್‌ ನೀಡಿ. ರಾಜ್ಯದ ಜನರಿಗೆ ಸರ್ಕಾರದ ಬೇಜವಾಬ್ದಾರಿ ಗೊತ್ತಾಗಲಿ.   ಇನ್ನು ಮುಂದೆ ಅಧಿವೇಶನ ನಡೆಸುವ ಬದಲು ಸಭಾಧ್ಯಕ್ಷರಿಗೆ ಟಿಪ್ಪಣಿ ನೀಡುವ ಪದ್ಧತಿ ಜಾರಿಗೆ ತನ್ನಿ. ಪ್ರತಿನಿತ್ಯದ ಕಲಾಪಕ್ಕೆ ₹70 ಲಕ್ಷ ಖರ್ಚು ಮಾಡುವುದು ತಪ್ಪುತ್ತದೆ’ ಎಂದರು.

‘ನೋಟಿಸ್‌ ಕೊಡಿ’

‘ಸದನಕ್ಕೆ ಹಾಜರಾಗದ ಸಚಿವರಿಗೆ ಮುಖ್ಯ ಸಚೇತಕರಿಂದ ನೋಟಿಸ್ ಕೊಡಿಸಿ’ ಎಂದು ಕಾಂಗ್ರೆಸ್‌ ಶಾಸಕ ಅಪ್ಪಾಜಿ ನಾಡಗೌಡ ಹೇಳಿದರು.

‘ಸಚಿವರು, ಆಡಳಿತ ಪಕ್ಷದ ಶಾಸಕರು ಸದನದಲ್ಲಿ ಇರುವಂತೆ ನೋಡಿಕೊಳ್ಳಬೇಕಾದುದು ಸಚೇತಕ ಅಶೋಕ ಪಟ್ಟಣ ಜವಾಬ್ದಾರಿ. ಅವರಿಂದ ಎಲ್ಲರಿಗೂ ನೋಟಿಸ್‌ ಕೊಡಿಸುವ ಕೆಲಸವನ್ನು ಸಭಾಧ್ಯಕ್ಷರು ಮಾಡಬೇಕು’ ಎಂದು ಒತ್ತಾಯಿಸಿದರು.

ಹಾಜರಿದ್ದ ಸಚಿವರು

ರಾಮಲಿಂಗಾರೆಡ್ಡಿ, ಎಂ. ಕೃಷ್ಣಪ್ಪ, ಕೃಷ್ಣ ಬೈರೇಗೌಡ, ಪ್ರಮೋದ್‌ ಮಧ್ವರಾಜ್‌. ಗೈರು ಹಾಜರಾದವರು: ಆರ್‌.ವಿ. ದೇಶಪಾಂಡೆ, ಎಚ್‌.ಕೆ. ಪಾಟೀಲ, ಬಸವರಾಜ ರಾಯರಡ್ಡಿ, ಎಚ್.ಸಿ. ಮಹದೇವಪ್ಪ, ಡಿ.ಕೆ. ಶಿವಕುಮಾರ್‌, ತನ್ವೀರ್ ಸೇಠ್‌, ರಮೇಶ ಜಾರಕಿಹೊಳಿ, ಎಸ್‌.ಎಸ್‌. ಮಲ್ಲಿಕಾರ್ಜುನ್‌, ಎ. ಮಂಜು, ಈಶ್ವರ ಖಂಡ್ರೆ, ಶರಣ ಪ್ರಕಾಶ ಪಾಟೀಲ.

* ಸಚಿವರು ಹಾಗೂ ಆಡಳಿತ ಪಕ್ಷದ ಶಾಸಕರು ಕಲಾಪದಲ್ಲಿ ಪಾಲ್ಗೊಳ್ಳದೇ ಇರುವುದು ದುರ್ದೈವದ ಸಂಗತಿ

–ಕೆ.ಬಿ. ಕೋಳಿವಾಡ, ವಿಧಾನಸಭಾಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry