ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆರೆ,ರಸ್ತೆ ಅಭಿವೃದ್ಧಿಗೆ ₹10 ಕೋಟಿ’

Last Updated 7 ಜೂನ್ 2017, 19:46 IST
ಅಕ್ಷರ ಗಾತ್ರ

ಬೆಂಗಳೂರು: ಶಿವಪುರ ಮತ್ತು  ನೆಲಗದರನಹಳ್ಳಿಗೆ ಹೊಂದಿಕೊಂಡಿರುವ ಸೊಂಡೆಕೊಪ್ಪಕ್ಕೆ ಸಂಪರ್ಕ ರಸ್ತೆ ನಿರ್ಮಿಸಲು ಹಾಗೂ ನೆಲಗದರನಹಳ್ಳಿ ಕೆರೆ ಅಭಿವೃದ್ಧಿಪಡಿಸಲು ಮೇಯರ್‌ ನಿಧಿಯಿಂದ ₹ 10 ಕೋಟಿ ಅನುದಾನ ಒದಗಿಸುವುದಾಗಿ ಮೇಯರ್‌ ಜಿ.ಪದ್ಮಾವತಿ ಅವರು ಭರವಸೆ ನೀಡಿದರು.

ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡ್‌ಗೆ ಬುಧವಾರ ಭೇಟಿ ನೀಡಿದ ಅವರು ಸ್ಥಳೀಯರಿಂದ ಅಹವಾಲು ಆಲಿಸಿದರು.

‘ಕೈಗಾರಿಕೆಗಳ ತ್ಯಾಜ್ಯ ನೀರು ಸೇರಿ ನೆಲಗದರನಹಳ್ಳಿ ಕೆರೆಯ ನೀರು ಕಲುಷಿತಗೊಂಡಿದೆ. ಇದರಿಂದ ಸ್ಥಳೀಯರಿಗೆ ಚರ್ಮದ ಸಮಸ್ಯೆಯೂ ಕಾಣಿಸಿಕೊಂಡಿದೆ. ಈ ಜಲಮೂಲಕ್ಕೆ ಕೈಗಾರಿಕೆ ತ್ಯಾಜ್ಯ ನೀರು ಸೇರುವುದನ್ನು ತಡೆಯಬೇಕು’ ಎಂದು ಸ್ಥಳೀಯರು ಅಳಲು ತೋಡಿಕೊಂಡರು.

ಮೇಯರ್‌ ನಿಧಿಯಿಂದ ಕೆರೆ ಅಭಿವೃದ್ಧಿಗೆ ₹ 4.5 ಕೋಟಿ ಹಾಗೂ ಸೊಂಡೆಕೊಪ್ಪಕ್ಕೆ ಸಂಪರ್ಕ ರಸ್ತೆ ನಿರ್ಮಿಸಲು  ₹ 5 ಕೋಟಿ ಅನುದಾನ ಒದಗಿಸುವಂತೆ ವಾರ್ಡ್‌ನ ಪಾಲಿಕೆ ಸದಸ್ಯೆ ಲಲಿತಾ ತಿಮ್ಮನಂಜಯ್ಯ ಮನವಿ ಮಾಡಿದರು.

‘1.2 ಕಿ.ಮೀ ಉದ್ದದ ಈ ರಸ್ತೆಯು ಕೆರೆಗೆ ಹೊಂದಿಕೊಂಡ ಜಾಗದಲ್ಲಿ ನಿರ್ಮಾಣವಾಗಲಿದೆ. ಇದಕ್ಕೆ ಪ್ರತ್ಯೇಕ ಭೂಸ್ವಾಧೀನ ಅಗತ್ಯವಿಲ್ಲ. ಕೆಲವು ಕಡೆ ಮೋರಿಗಳನ್ನು ನಿರ್ಮಿಸಬೇಕಾಗುತ್ತದೆ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ರಾಜಗೋಪಾಲನಗರದಲ್ಲಿ 35 ವರ್ಷಗಳಿಂದ  1,200 ಕುಟುಂಬಗಳು  ನೆಲೆಸಿವೆ. ಅವರಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಶಿವಪುರ ಕಾಲೊನಿ ನಿವಾಸಿಗಳಿಗೂ ಹಕ್ಕುಪತ್ರ ನೀಡಲಾಗಿದೆ. ಅವುಗಳನ್ನು ಪರಿಶೀಲಿಸಿ ಖಾತೆ ಮಾಡಿಸಿಕೊಡಬೇಕು’ ಎಂದು ಲಲಿತಾ ಅವರು ಕೋರಿದರು. ಈ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮೇಯರ್‌ ಭರವಸೆ ನೀಡಿದರು.

ನಿರ್ಮಾಣ ಹಂತದಲ್ಲಿರುವ ಸಮುದಾಯಭವನ ಹಾಗೂ ರಂಗಮಂದಿರ ಕಾಮಗಾರಿಯನ್ನು ಅವರು ಪರಿಶೀಲಿಸಿದರು. ಶಾಸಕ ಎಸ್‌.ಮುನಿರಾಜು ಜತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT