ಮೆಟ್ರೊ: ಮೊದಲ ಹಂತ ಲೋಕಾರ್ಪಣೆಗೆ ಕೊನೆಗೂ ಮುಹೂರ್ತ

7

ಮೆಟ್ರೊ: ಮೊದಲ ಹಂತ ಲೋಕಾರ್ಪಣೆಗೆ ಕೊನೆಗೂ ಮುಹೂರ್ತ

Published:
Updated:
ಮೆಟ್ರೊ: ಮೊದಲ ಹಂತ ಲೋಕಾರ್ಪಣೆಗೆ ಕೊನೆಗೂ ಮುಹೂರ್ತ

ಬೆಂಗಳೂರು: ‘ನಮ್ಮ ಮೆಟ್ರೊ’ ಉತ್ತರ–ದಕ್ಷಿಣ ಕಾರಿಡಾರ್‌ನ ಯಲಚೇನಹಳ್ಳಿ– ಸಂಪಿಗೆ ರಸ್ತೆ ಮಾರ್ಗದ ಕಾಮಗಾರಿ ಪೂರ್ಣಗೊಳ್ಳುವುದರೊಂದಿಗೆ ಮೊದಲ ಹಂತ ಸಂಪನ್ನಗೊಂಡಂತಾಗಿದೆ.  ಮೊದಲ ಹಂತದ ಯೋಜನೆಯನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಜೂನ್‌ 17ರಂದು ಉದ್ಘಾಟಿಸುವುದು ಬಹುತೇಕ ಖಚಿತ.

ಉದ್ಘಾಟನೆಯ ದಿನಾಂಕವನ್ನು ಬೆಂಗಳೂರು ಮೆಟ್ರೊ ನಿಗಮವು ಅಧಿಕೃತವಾಗಿ ಪ್ರಕಟಿಸುವುದು  ಮಾತ್ರ ಬಾಕಿ ಇದೆ.

‘ನಮ್ಮ ಮೆಟ್ರೊ ಮೊದಲ ಹಂತವನ್ನು ಲೋಕಾರ್ಪಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಯವರನ್ನು ಕೋರಿದ್ದರು. ರಾಷ್ಟ್ರಪತಿಯವರು ಇದೇ 17 ಹಾಗೂ 18ರಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಇದೇ 17ರಂದು ನಮ್ಮ ಮೆಟ್ರೊ ಮೊದಲ ಹಂತ ಲೋಕಾರ್ಪಣೆ ಮಾಡಲಿದ್ದಾರೆ’ ಎಂದು ಮುಖ್ಯಮಂತ್ರಿ  ಕಚೇರಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ನಿಗಮ ಸನ್ನದ್ಧ: ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಮೊದಲ ಹಂತ ಪೂರ್ಣಗೊಂಡ ಸಂಭ್ರಮದ ಕ್ಷಣವನ್ನು ಸ್ಮರಣೀಯವಾಗಿ ಆಚರಿಸಲು ಸಿದ್ಧತೆ ನಡೆಸಿದೆ.

‘ಮೆಟ್ರೊ ಮೊದಲ ಹಂತದ ಉದ್ಘಾಟನೆಗೆ ಸಿದ್ಧತೆಗಳು ನಡೆದಿವೆ. ಅನೇಕ ಅಡೆತಡೆಗಳ ನಡುವೆಯೂ, ನಗರದ ಸಾರಿಗೆ ವ್ಯವಸ್ಥೆಯನ್ನು ಉನ್ನತ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದ ತೃಪ್ತಿ ನಮ್ಮದು’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ ಸಿಂಗ್ ಖರೋಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಲಚೇನಹಳ್ಳಿ– ಸಂಪಿಗೆ ರಸ್ತೆ ಮಾರ್ಗದಲ್ಲಿ ಸಂಚಾರ ಆರಂಭಿಸಲು ಅಡ್ಡಿ ಇಲ್ಲ. ಸುರಂಗ ಮಾರ್ಗದ ಚಿಕ್ಕಪೇಟೆ ಹಾಗೂ ಕೆ.ಆರ್‌.ಮಾರುಕಟ್ಟೆ ನಿಲ್ದಾಣಗಳಲ್ಲಿ ಬಾಕಿ ಉಳಿದಿರುವ ಸಣ್ಣಪುಟ್ಟ ಕಾರ್ಯಗಳೂ ವಾರದೊಳಗೆ ಪೂರ್ಣಗೊಳ್ಳಲಿವೆ’ ಎಂದು ಅವರು ತಿಳಿಸಿದರು.

ವಾರಾಂತ್ಯದೊಳಗೆ ಸಿಆರ್‌ಎಸ್‌ ವರದಿ:  ಯಲಚೇನಹಳ್ಳಿ– ಸಂಪಿಗೆ ರಸ್ತೆ ಮಾರ್ಗದ ಸುರಕ್ಷತಾ ತಪಾಸಣೆ ಪೂರ್ಣ ಗೊಳಿಸಿರುವ ರೈಲು ಸುರಕ್ಷತಾ ಆಯುಕ್ತ (ದಕ್ಷಿಣ ವೃತ್ತ) ಕೆ.ಎ.ಮನೋಹರನ್‌ ಅವರು ಈ ಕುರಿತ ವರದಿ ಸಿದ್ಧಪಡಿಸುತ್ತಿದ್ದಾರೆ. ‘ಈ ಮಾರ್ಗವನ್ನು ಪ್ರಯಾಣಿಕರ ಸಂಚಾರಕ್ಕೆ ಮುಕ್ತಗೊಳಿಸುವ ಮುನ್ನ ಮಹತ್ತರವಾದ ಬದಲಾವಣೆ ಅಗತ್ಯ ಇಲ್ಲ’ ಎಂದು ಅವರು ಈಗಾಗಲೇ ತಿಳಿಸಿದ್ದಾರೆ. ಅವರು ತಪಾಸಣೆಯ ವರದಿಯನ್ನು ಈ ವಾರದಲ್ಲೇ ಸಲ್ಲಿಸುವ ನಿರೀಕ್ಷೆ ಇದೆ.

ನನಸಾಗುತ್ತಿದೆ ದಶಕದ ಕನಸು: ಈ ಮಾರ್ಗದ ಯೋಜನೆ ಸಿದ್ಧವಾಗಿ 10 ವರ್ಷಗಳೇ ಕಳೆದಿವೆ. ಯಲಚೇನಹಳ್ಳಿ, ಜೆ.ಪಿ.ನಗರ,  ಬನಶಂಕರಿ, ಜಯನಗರ, ಬಸವನಗುಡಿ, ಕೆ.ಆರ್‌.ಮಾರುಕಟ್ಟೆ ಹಾಗೂ ಚಿಕ್ಕಪೇಟೆಯ ಜನರ ಮೆಟ್ರೊ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.  ಭೂಸ್ವಾಧೀನ ಪ್ರಕ್ರಿಯೆ ಆರಂಭವಾದಂದಿನಿಂದಲೂ ಈ ಭಾಗದ ಜನರು ಮೆಟ್ರೊದಲ್ಲಿ ಸಂಚರಿಸುವ ದಿನಕ್ಕಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದರು.

ನ್ಯಾಷನಲ್‌ ಕಾಲೇಜು ನಿಲ್ದಾಣದಿಂದ ಯಲಚೇನಹಳ್ಳಿವರೆಗಿನ ಎತ್ತರಿಸಿದ ಮಾರ್ಗ ಮೂರು ವರ್ಷಗಳ ಹಿಂದೆಯೇ ಪೂರ್ಣಗೊಂಡಿದೆ. ನ್ಯಾಷನಲ್‌ ಕಾಲೇಜು ನಿಲ್ದಾಣದಿಂದ ಸಂಪಿಗೆ ರಸ್ತೆವರೆಗಿನ ಸುರಂಗ ಮಾರ್ಗದ ಕಾಮಗಾರಿ ವಿಳಂಬವಾಗಿದ್ದರಿಂದ ನಗರದ ದಕ್ಷಿಣದ ಪ್ರದೇಶಗಳಿಗೆ ಮೆಟ್ರೊ ಸಂಪರ್ಕವೂ ವಿಳಂಬವಾಗಿತ್ತು.

ಖುಷಿಯ ಜೊತೆ ನೋವು: ‘ನಾನು ಮೆಟ್ರೊ ಸಾರಿಗೆಯ ವಿರೋಧಿಯಲ್ಲ. ಆದರೆ, ಈ ಮೆಟ್ರೊ ಹಳಿಯ ಹಿಂದೆ ಅನೇಕ ಮಂದಿಯ ನೋವು ಅಡಗಿದೆ ಎಂಬುದನ್ನು ಜನ ಮರೆಯಬಾರದು’ ಎನ್ನುತ್ತಾರೆ ಜಯನಗರದ ಮುರಳಿ.

‘ಮೊದಲ ಹಂತದ  ಕಾಮಗಾರಿ ಸಲುವಾಗಿ ನಾವು ಅನೇಕ ವರ್ಷ ಹಲವು ರೀತಿಯ ಸಂಕಷ್ಟ ಅನುಭವಿಸಿದ್ದೇವೆ. ಈ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭವಾಗುವಾಗ ಎರಡನೇ ಹಂತದ ಕಾಮಗಾರಿಗೆ ಸಿದ್ಧತೆ ನಡೆದಿದೆ.

ಈ ಕಾಮಗಾರಿ ಲಕ್ಷ್ಮಣ ರಾವ್‌  ಉದ್ಯಾನದ ಮತ್ತಷ್ಟು ಮರಗಳಿಗೆ ಆಪತ್ತು ತರಲಿದೆ.  ಆರ್‌್.ವಿ.ಕಾಲೇಜು ನಿಲ್ದಾಣದ ಬಳಿ ಒಂದು ಮಾರ್ಗದ ಮೇಲೆ ಮತ್ತೊಂದು ಮಾರ್ಗ ನಿರ್ಮಿಸಬೇಕಾದ ಅಗತ್ಯ ಇರುತ್ತಿರಲಿಲ್ಲ. ನಿಗಮದವರು ಸಮರ್ಪಕವಾಗಿ  ಯೋಜನೆ ರೂಪಿಸುತ್ತಿದ್ದರೆ ಈ  ಆವಾಂತರಗಳನ್ನು ತಪ್ಪಿಸಬಹುದಿತ್ತು’ ಎನ್ನುತ್ತಾರೆ ಅವರು.

‘ಕಾತರದಿಂದ ಕಾಯುತ್ತಿದ್ದೇವೆ’

‘ನಾವು ಮೆಟ್ರೊ ಸಂಪರ್ಕಕ್ಕಾಗಿ ಕಾತರದಿಂದ ಕಾಯುತ್ತಿದ್ದೇವೆ. ಈಗ ಆ ಕ್ಷಣ ಸನ್ನಿಹಿತವಾಗಿರುವ ಸುದ್ದಿ ಕೇಳಿ ಖುಷಿಯಾಗುತ್ತಿದೆ’ ಎನ್ನುತ್ತಾರೆ ಬಸವನಗುಡಿಯ ಶಿಕ್ಷಕಿ ಕೀರ್ತಿ.

‘ಯೋಜನೆಯ ಅನುಷ್ಠಾನ ತಡವಾದರೂ, ಕೊನೆಗೂ ಮೆಟ್ರೊದಲ್ಲಿ ಸಂಚರಿಸುವ ಯೋಗ ಬಂತಲ್ಲ ಎಂಬ ಸಮಾಧಾನ. ಆದರೆ, ನಿಗಮವು ಈ ಯೋಜನೆಯನ್ನು ಇನ್ನಷ್ಟು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಬೇಕಿತ್ತು. ಈ ಯೋಜನೆ ಲಕ್ಷ್ಮಣ ರಾವ್‌ ಉದ್ಯಾನದ  ಮರಗಳಿಗೆ ಕುತ್ತು ತಂದ ಬಗ್ಗೆ ಬೇಸರವಿದೆ’ ಎನ್ನುತ್ತಾರೆ ಜಯನಗರದ ಆದರ್ಶ ವಿಚಾರ ವೇದಿಕೆಯ ಅಧ್ಯಕ್ಷ ಡಾ. ಜಿ.ಟಿ.ಸುಭಾಷ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry