ಪರ್ಯಾಯ ರಸ್ತೆ ವಾಹನ ಸಂಚಾರಕ್ಕೆ ಮುಕ್ತ

7
‘ಅಷ್ಟಪಥ ಸಿಗ್ನಲ್‌ ಫ್ರೀ ಕಾರಿಡಾರ್‌’ ಯೋಜನೆ

ಪರ್ಯಾಯ ರಸ್ತೆ ವಾಹನ ಸಂಚಾರಕ್ಕೆ ಮುಕ್ತ

Published:
Updated:
ಪರ್ಯಾಯ ರಸ್ತೆ ವಾಹನ ಸಂಚಾರಕ್ಕೆ ಮುಕ್ತ

ಬೆಂಗಳೂರು: ಓಕಳಿಪುರ ಜಂಕ್ಷನ್‌ನಿಂದ ಕಾರಂಜಿ ವೃತ್ತದವರೆಗಿನ (ಸಂಗೊಳ್ಳಿ ರಾಯಣ್ಣ ವೃತ್ತ)  ‘ಅಷ್ಟಪಥ  ಸಿಗ್ನಲ್‌ ಫ್ರೀ ಕಾರಿಡಾರ್‌’ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ.

ಈ ಮಾರ್ಗದಲ್ಲಿರುವ ರೈಲ್ವೆ ಸೇತುವೆಯನ್ನು ಮರುವಿನ್ಯಾಸಗೊಳಿಸಲು ಹಾಗೂ ರೈಲ್ವೆ ಹಳಿಯ ಪಕ್ಕದಲ್ಲಿ ನಿರ್ಮಾಣವಾಗಲಿರುವ ಮೇಲ್ಸೇತುವೆಯ ಗರ್ಡರ್‌ಗಳನ್ನು ಜೋಡಿಸುವ ಸಲುವಾಗಿ, ಹಳೆಯ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮೆಜೆಸ್ಟಿಕ್‌ ಮತ್ತು ಮಲ್ಲೇಶ್ವರ ಕಡೆಯಿಂದ  ರಾಜಾಜಿನಗರ ಆರನೇ ಬ್ಲಾಕ್‌ ಕಡೆಗೆ ಸಂಪರ್ಕ ಕಲ್ಪಿಸಲು ಪರ್ಯಾಯ ರಸ್ತೆಯನ್ನು ನಿರ್ಮಿಸಲಾಗಿದೆ.

ರಸ್ತೆ ಲೋಕಾರ್ಪಣೆ: ಈ ಪರ್ಯಾಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರು ಮಂಗಳವಾರ  ಚಾಲನೆ ನೀಡಿದರು. ಈ ರಸ್ತೆಯು ಅಷ್ಟಪಥದ ಕಾರಿಡಾರ್‌ನ ಭಾಗವಾಗಲಿದೆ.

ಬಳಿಕ ಸಚಿವರು ಹಾಗೂ ಮೇಯರ್‌ ಜಿ.ಪದ್ಮಾವತಿ ಅವರು ಈ ಕಾಮಗಾರಿಯ ಪರಿಶೀಲನೆ ನಡೆಸಿದರು. ಈ ಕಾರಿಡಾರ್‌ ರೈಲ್ವೆ ಅಂಡರ್‌ಪಾಸ್‌ ಹಾಗೂ ಎರಡು ಮೇಲ್ಸೇತುವೆಗಳನ್ನೊಳಗೊಂಡಿದೆ. ಪ್ರತಿ ಮೇಲ್ಸೇತುವೆಯೂ ತಲಾ ಎರಡು ಲೂಪ್‌ಗಳನ್ನು (ಯು–ಆಕಾರದ ಮಾರ್ಗ) ಹೊಂದಿರಲಿದೆ.

ಈ ಕಾರಿಡಾರ್‌ನ ಕಾಮಗಾರಿಗೆ ಬಿಬಿಎಂಪಿ ₹ 102 ಕೋಟಿ ವೆಚ್ಚ ಮಾಡಲಿದೆ. ಇಲ್ಲಿ  ಕಾರಿಡಾರ್‌ಗಾಗಿ ರೈಲ್ವೆ ಇಲಾಖೆಗೆ ಸೇರಿದ  3 ಎಕರೆ 20 ಗುಂಟೆ   ಜಾಗವನ್ನು ಬಳಸಿಕೊಳ್ಳಲಾಗಿದೆ. ಅದಕ್ಕೆ ಪರ್ಯಾಯವಾಗಿ ಬಿಬಿಎಂಪಿ ಬಿನ್ನಿಮಿಲ್‌ನಿಂದ ಅಷ್ಟೇ ಪ್ರಮಾಣದ ಜಾಗವನ್ನು ಖರೀದಿಸಿ ರೈಲ್ವೆ ಇಲಾಖೆಗೆ ಹಸ್ತಾಂತರಿಸಿದೆ. ಇದಕ್ಕಾಗಿ ಬಿಬಿಎಂಪಿ ₹ 158 ಕೋಟಿ ಬಿನ್ನಿಮಿಲ್‌ ಸಂಸ್ಥೆಗೆ ಪಾವತಿಸಿದೆ.

ಯೋಜನೆಗಾಗಿ ರೈಲ್ವೆ ಸಿಬ್ಬಂದಿಯ  ವಸತಿಗೃಹಗಳನ್ನು  ತೆರವುಗೊಳಿಸಲಾಗಿದೆ. ಇವುಗಳ ಮರುನಿರ್ಮಾಣಕ್ಕಾಗಿ ₹ 9 ಕೋಟಿ ಪಾವತಿಸಿದೆ. ಕಾರಿಡಾರ್‌ ಹಾದುಹೋಗುವ ಜಾಗದಲ್ಲಿದ್ದ ರನ್ನಿಂಗ್‌ ರೂಂ ಸ್ಥಳಾಂತರದ ಸಲುವಾಗಿ ₹ 3 ಕೋಟಿ ನೀಡಿದೆ.

ಬಾಕ್ಸ್‌ ಪುಷಿಂಗ್‌ ತಂತ್ರಜ್ಞಾನ ಬಳಸಿ  ರೈಲ್ವೆ ಕೆಳಸೇತುವೆ ನಿರ್ಮಿಸುವ ಕಾಮಗಾರಿಯನ್ನು ರೈಲ್ವೆ ಇಲಾಖೆಯವರೇ ನಿರ್ವಹಿಸಲಿದ್ದಾರೆ. ಇದಕ್ಕೆ ತಗಲುವ ವೆಚ್ಚವನ್ನು  ರೈಲ್ವೆ ಇಲಾಖೆಗೆ ಬಿಬಿಎಂಪಿ ಪಾವತಿಸಿದೆ.

ಈ ಕಾರಿಡಾರ್‌ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಹಾಗೂ ನಗರ ರೈಲು ನಿಲ್ದಾಣಗಳಿಗೆ ತಡೆರಹಿತ ಸಂಪರ್ಕ ಒದಗಿಸಲಿದೆ. ಮಲ್ಲೇಶ್ವರದಿಂದ ಮೆಜೆಸ್ಟಿಕ್‌  ಹಾಗೂ ರಾಜಾಜಿನಗರ 6ನೇ ಬ್ಲಾಕ್‌ ಕಡೆಗೆ ಹೋಗುವ ವಾಹನಗಳಿಗೆ ಹಾಗೂ ಮೆಜೆಸ್ಟಿಕ್‌ನಿಂದ ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ, ನಾಗರಬಾವಿ, ಮಲ್ಲೇಶ್ವರ ಹಾಗೂ ಮಾಗಡಿ ರಸ್ತೆ ಕಡೆಗೆ ಹೋಗುವ ವಾಹನಗಳಿಗೆ ಅನುಕೂಲವಾಗಲಿವೆ.

‘ಓಕಳಿಪುರ ಮೆಜೆಸ್ಟಿಕ್‌ನ ಪ್ರವೇಶದ್ವಾರವಿದ್ದಂತೆ. ಇಲ್ಲಿ ರೈಲ್ವೆ ಕೆಳಸೇತುವೆಯಲ್ಲಿ ಪದೇ ಪದೇ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಮಳೆ ಬಂದಾಗಲಂತೂ ಇಲ್ಲಿ ಮೂರು– ನಾಲ್ಕು ಕಿ.ಮೀ.ಗಳಷ್ಟು ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದವು. ಎಂಟು ಪಥಗಳ ತಡೆರಹಿತ ಕಾರಿಡಾರ್‌ನಿಂದ ಈ ಸಮಸ್ಯೆಗಳು ಪರಿಹಾರ ಆಗಲಿವೆ’ ಎಂದು   ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

15 ವರ್ಷ ಹಿಂದಿನ ಯೋಜನೆ: ಬಿಬಿಎಂಪಿ 2002ರಲ್ಲೇ ಈ ಯೋಜನೆ ಸಿದ್ಧಪಡಿಸಿತ್ತು. 2012ರ ಫೆ.2ರಂದು ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಭೂಮಿ ಹಸ್ತಾಂತರ ವಿವಾದದಿಂದಾಗಿ ಕಾಮಗಾರಿ ಆರಂಭವಾಗಿರಲಿಲ್ಲ.

ಈ ಯೋಜನೆಗೆ ಶನೀಶ್ವರ ದೇವಸ್ಥಾನದ ಬಳಿಯ ಜಾಗ ಬಿಟ್ಟುಕೊಡಲು ರೈಲ್ವೆ ಇಲಾಖೆ   ಆರಂಭದಲ್ಲಿ ಒಪ್ಪಿರಲಿಲ್ಲ.  ಬಿನ್ನಿ ಮಿಲ್‌ನಿಂದ ಜಾಗ ಖರೀದಿಸಿ ಹಸ್ತಾಂತರ ಮಾಡಲು ಬಿಬಿಎಂಪಿ ಒಪ್ಪಂದ ಮಾಡಿಕೊಂಡ ಮೇಲೆ ಯೋಜನೆ ಚುರುಕು ಪಡೆದುಕೊಂಡಿತು.

‘ಯೋಜನೆಗೆ ಬಿಬಿಎಂಪಿ 2015ರಲ್ಲಿ ಕಾರ್ಯಾದೇಶ ನೀಡಿತ್ತು. ನಮಗೆ ರೈಲ್ವೆ ಇಲಾಖೆಯ ಜಾಗ ಹಸ್ತಾಂತರವಾಗಿದ್ದು 2016ರಲ್ಲಿ.  ಹಾಗಾಗಿ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ’ ಎಂದು   ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ಯೋಜನೆ) ಕೆ.ಟಿ. ನಾಗರಾಜ್‌ ತಿಳಿಸಿದರು.

ಸೆಪ್ಟೆಂಬರ್‌ಗೆ ಮೊದಲ ಹಂತ ಪೂರ್ಣ

‘ಈ ಕಾರಿಡಾರ್‌ ಯೋಜನೆಯನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸುತ್ತಿದ್ದೇವೆ. ಮೊದಲ ಹಂತದ ಕಾಮಗಾರಿ ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ’ ಎಂದು  ಕೆ.ಟಿ. ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯೋಜನೆಯ ಶೇ 50ರಷ್ಟು ಕೆಲಸಗಳ ಮುಗಿದಿವೆ. 2017ರ ಡಿಸೆಂಬರ್‌ ಅಂತ್ಯದೊಳಗೆ  ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‘ಮೇಲ್ಸೇತುವೆಯ ಗರ್ಡರ್‌ಗಳನ್ನು ಬೇರೆ ಜಾಗದಲ್ಲಿ ಸಿದ್ಧಪಡಿಸಿ ಇಲ್ಲಿ ತಂದು ಜೋಡಿಸಲಾಗುತ್ತದೆ. ಗರ್ಡರ್‌ಗಳ ನಿರ್ಮಾಣ ಪ್ರಗತಿಯಲ್ಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry