ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿದೆ ‘ವಿಜ್ಞಾನ ಎಕ್ಸ್‌ಪ್ರೆಸ್‌’ ವಿಶೇಷ ರೈಲು

ಹವಾಮಾನ ಬದಲಾವಣೆ ಬಗ್ಗೆ ಜಾಗೃತಿ ಮೂಡಿಸುವ ಆಶಯ
Last Updated 7 ಜೂನ್ 2017, 20:09 IST
ಅಕ್ಷರ ಗಾತ್ರ

ಬೆಂಗಳೂರು: ಹವಾಮಾನ ಬದಲಾವಣೆ ಬಗ್ಗೆ ಜಾಗೃತಿ ಮೂಡಿಸುವ ‘ವಿಜ್ಞಾನ ಎಕ್ಸ್‌ಪ್ರೆಸ್‌’ ವಿಶೇಷ ರೈಲು ನಗರಕ್ಕೆ ಬಂದಿದ್ದು, 11ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ.

ಆಂಧ್ರಪ್ರದೇಶದ ಕಲ್ಲೂರಿನಿಂದ ನಗರದ ವೈಟ್‌ಫೀಲ್ಡ್‌ಗೆ ಬಂದಿರುವ ಈ ರೈಲು 8ರವರೆಗೆ ವೈಟ್‌ಫೀಲ್ಡ್‌ ನಿಲ್ದಾಣದಲ್ಲಿರಲಿದೆ.  9ರಿಂದ 11ರವರೆಗೆ ಕೆಂಗೇರಿ ನಿಲ್ದಾಣದಲ್ಲಿ ಪ್ರದರ್ಶನ ನೀಡಲಿದೆ. ಸೆಪ್ಟೆಂಬರ್‌ಗೆ ಯಾತ್ರೆ ಮುಗಿಸುವ ಇದು 19,000 ಕಿ.ಮೀ ಪ್ರಯಾಣಿಸಿ 68 ನಿಲ್ದಾಣಗಳಲ್ಲಿ ಪ್ರದರ್ಶನ ನೀಡುವ ಗುರಿ ಹೊಂದಿದೆ.

ಸೈನ್ಸ್‌ ಎಕ್ಸ್‌ಪ್ರೆಸ್‌ ಕ್ಲೈಮೇಟ್‌ ಆ್ಯಕ್ಷನ್‌: ಪ್ರತಿ ವರ್ಷ ಒಂದೊಂದು ವಿಷಯವನ್ನು ಆಧರಿಸಿ ಈ ರೈಲು ದೇಶದಾದ್ಯಂತ ಪ್ರವಾಸ ಮಾಡುತ್ತದೆ. ಹವಾಮಾನದ ಕುರಿತು ಮಾಹಿತಿ ನೀಡಲು ‘ವಿಜ್ಞಾನ ಎಕ್ಸ್‌ಪ್ರೆಸ್’ ಅನ್ನು ಪುನರ್ ವಿನ್ಯಾಸಗೊಳಿಸಿ ‘ಸೈನ್ಸ್‌ ಎಕ್ಸ್‌ಪ್ರೆಸ್‌ ಕ್ಲೈಮೇಟ್‌ ಆ್ಯಕ್ಷನ್‌’ (ಎಸ್‌ಇಸಿಎ) ಎಂಬ ಹೆಸರು ಇಡಲಾಗಿದೆ. ಎರಡನೇ ಹಂತದ ಈ ಪ್ರಯಾಣಕ್ಕೆ ಫೆ.17ರಂದು ನವದೆಹಲಿಯಲ್ಲಿ ಚಾಲನೆ ನೀಡಲಾಯಿತು.

13 ಬೋಗಿಗಳಲ್ಲಿ ಪ್ರದರ್ಶನ: ಹವಾಮಾನ ಬದಲಾವಣೆ ಎಂದರೇನು, ಅದರ ಪರಿಣಾಮಗಳು ಹಾಗೂ ಪರಿಹಾರ ಏನು ಎಂಬುದನ್ನು 13 ಬೋಗಿಗಳಲ್ಲಿ ವಿವರಿಸಲಾಗಿದೆ. ಹಸಿರು ಮನೆ ಪರಿಣಾಮ, ತಾಪಮಾನ ಏರಿಕೆ, ಮಳೆ ವ್ಯತ್ಯಯ, ಸಮುದ್ರದ ನೀರಿನ ಮಟ್ಟಏರಿಕೆಯಿಂದ ಕೃಷಿ, ಅರಣ್ಯ ಮತ್ತು ಜೀವವೈವಿಧ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಅಲ್ಲದೆ, ನೀರು ಮತ್ತು ವಿದ್ಯುತ್‌ನ ಮಿತ ಬಳಕೆ, ನವೀಕರಿಸಬಹುದಾದ ಇಂಧನ ಶಕ್ತಿ ಹಾಗೂ ಸರಳ ವಿಜ್ಞಾನದ ಪ್ರಾತ್ಯಕ್ಷಿಕೆಗಳೂ ಇವೆ. ನಮ್ಮ ಜೀವನಶೈಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಸಮತೋಲನವನ್ನು ಮರುಸ್ಥಾಪಿಸುವ ಬಗ್ಗೆ ತಿಳಿಸಲಾಗಿದೆ.

ಹವಾಮಾನ ಬದಲಾವಣೆ ಕುರಿತು ಆಗಿರುವ ಅಂತರರಾಷ್ಟ್ರೀಯ ಒಪ್ಪಂದಗಳ ಬಗ್ಗೆ ಮಾಹಿತಿ, ಜೈವಿಕ ತಂತ್ರಜ್ಞಾನ ಇಲಾಖೆಯಲ್ಲಿ ಆಗುತ್ತಿರುವ ಕಾರ್ಯಕ್ರಮಗಳು, ರಾಷ್ಟ್ರೀಯ ಅನ್ವೇಷಣೆ ಪ್ರತಿಷ್ಠಾನದಿಂದ (ಎನ್‌ಐಎಫ್) ಹೊಸ ಅನ್ವೇಷಣೆಗಳ ಪ್ರದರ್ಶನ ಇರುತ್ತದೆ.

5ನೇ ತರಗತಿವರೆಗಿನ ಮಕ್ಕಳಿಗಾಗಿ ವಿಜ್ಞಾನ, ಗಣಿತ ಮತ್ತು ಪರಿಸರಕ್ಕೆ ಸಂಬಂಧಿಸಿದ ಒಗಟುಗಳನ್ನು ಬಿಡಿಸುವ ಆಟಗಳನ್ನು ಇಡಲಾಗಿದೆ. ಕೈಯಲ್ಲಿಯೇ ವಿಜ್ಞಾನ ಪ್ರಯೋಗಾಲಯ ವಿಷಯದ ಅಡಿಯಲ್ಲಿ ಮಕ್ಕಳೇ ವಿವಿಧ ಪ್ರಯೋಗಗಳನ್ನು ಮಾಡುವ ಅವಕಾಶ ಕಲ್ಪಿಸಲಾಗಿದೆ.

490 ನಿಲ್ದಾಣಗಳ ಭೇಟಿ: 2007ರ ಅಕ್ಟೋಬರ್‌ನಲ್ಲಿ ಸೈನ್ಸ್‌ ಎಕ್ಸ್‌ಪ್ರೆಸ್‌ ರೈಲಿಗೆ ಮೊದಲು ಚಾಲನೆ ನೀಡಲಾಯಿತು. ಈಗಾಗಲೇ ಈ ರೈಲು ದೇಶದಾದ್ಯಂತ 1.52 ಲಕ್ಷ ಕಿ.ಮೀ ಸಂಚರಿಸಿ 8 ಸುತ್ತುಗಳನ್ನು ಯಶಸ್ವಿಯಾಗಿ ಪೂರೈಸಿದೆ. ಒಟ್ಟು 490 ನಿಲ್ದಾಣಗಳಲ್ಲಿ ಪ್ರದರ್ಶನ ನೀಡಿದ್ದು, 1.62 ಕೋಟಿ ಜನರು ಇದನ್ನು ವೀಕ್ಷಿಸಿದ್ದಾರೆ.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಜೈವಿಕ ತಂತ್ರಜ್ಞಾನ ಇಲಾಖೆ, ರೈಲ್ವೆ ಇಲಾಖೆ, ಭಾರತೀಯ ವನ್ಯಜೀವಿ ಸಂಸ್ಥೆ (ಡಬ್ಲೂಐಐ)  ವಿಕ್ರಂ ಸಾರಾಭಾಯ್ ಸಮುದಾಯ ಜ್ಞಾನ ಕೇಂದ್ರದ ಸಹಯೋಗದಲ್ಲಿ ಈ ರೈಲನ್ನು ಅಭಿವೃದ್ಧಿ ಪಡಿಸಲಾಗಿದೆ.

ಜಾಯ್ ಆಫ್ ಸೈನ್ಸ್ ಲ್ಯಾಬ್
ವಿಜ್ಞಾನ ಎಕ್ಸ್‌ಪ್ರೆಸ್‌ನಲ್ಲಿ ನಡೆಸುವ ‘ಜಾಯ್ ಆಫ್ ಸೈನ್ಸ್ ಲ್ಯಾಬ್‌’ಗೆ (ಜೆಒಎಸ್) 6ರಿಂದ 9ನೇ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಸಂಬಂಧಿಸಿದ ಶಾಲಾ ಮುಖ್ಯಸ್ಥರು ಮೊದಲೇ ನೋಂದಣಿ ಮಾಡಿಸಬೇಕು. ನೋಂದಣಿ ಮಾಡಲು 9428405407 ಅಥವಾ scienceexpress@gmail.comಗೆ ಇ-ಮೇಲ್ ಕಳುಹಿಸಬಹುದು.

ಪ್ರವೇಶ ಉಚಿತ : ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವೀಕ್ಷಣೆಗೆ ಅವಕಾಶವಿದ್ದು, ಪ್ರವೇಶ ಉಚಿತವಾಗಿರುತ್ತದೆ. ವಿದ್ಯಾರ್ಥಿಗಳು ಶಾಲೆ ವತಿಯಿಂದ ಪಾಲ್ಗೊಳ್ಳುವುದಾದಲ್ಲಿ ಮೇಲ್ವಿಚಾರಕರಾಗಿ ಬರುವ ಶಿಕ್ಷಕರ ಗುರುತು ಪತ್ರ ನೀಡಿ ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳಬಹುದು.

ಬೋಗಿಯಲ್ಲಿ ಮೊಬೈಲ್‌, ಕ್ಯಾಮೆರಾ, ಬ್ಯಾಗ್‌, ಬೆಂಕಿ ಪೊಟ್ಟಣ, ಸಿಗರೇಟ್‌, ಬೀಡಿ, ತಂಬಾಕು ಉತ್ಪನ್ನಗಳು, ನೀರಿನ ಬಾಟಲಿ, ದ್ರವವಸ್ತು, ಚೂಪಾದ ವಸ್ತುಗಳನ್ನು  ತೆಗೆದುಕೊಂಡು ಹೋಗುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT