ಕುಸಿದ ಮನೆ ಹೇಳುತ್ತಿದೆ ಕರುಣಾಜನಕ ಕಥೆ

7
ಸತತ ಬರಗಾಲದಿಂದ ತತ್ತರಿಸಿರುವ ದೊಡ್ಡಕವಲಂದೆ ಹೋಬಳಿ

ಕುಸಿದ ಮನೆ ಹೇಳುತ್ತಿದೆ ಕರುಣಾಜನಕ ಕಥೆ

Published:
Updated:
ಕುಸಿದ ಮನೆ ಹೇಳುತ್ತಿದೆ ಕರುಣಾಜನಕ ಕಥೆ

ಮೈಸೂರು: ಒಡೆಯನನ್ನು ಕೆಲಸಕ್ಕೆ ಬೀಳ್ಕೊಟ್ಟು ಮುಚ್ಚಿರುವ ಬಾಗಿಲುಗಳು, ಗುಳೆ ಹೋಗಿ ವರ್ಷಗಳೇ ಕಳೆದಿರುವ ಬಗ್ಗೆ ಕುರುಹು ನೀಡುವ ಕುಸಿದ ಮನೆಗಳು, ಪಾಳುಬಿದ್ದ ಹೊಲಗಳು ಹಾಗೂ ಮಕ್ಕಳು ನಗರ ಸೇರಿಕೊಂಡಿರುವುದರಿಂದ ಅನಾಥವಾಗಿರುವ ಹಿರಿಯ ಜೀವಗಳು...

ಜಿಲ್ಲೆಯ ಅತ್ಯಂತ ಬರಪೀಡಿತ ಪ್ರದೇಶ ಎನಿಸಿರುವ ನಂಜನಗೂಡು ತಾಲ್ಲೂಕು ದೊಡ್ಡಕವಲಂದೆ ಹೋಬಳಿಯ ಕಾರ್ಯ, ಕಾರ್ಯಪುರ, ಹನುಮನಪುರ, ಕಾಗೆಮರಹಳ್ಳಿ, ರಾಮಶೆಟ್ಟಿಪುರ, ಹಾಡ್ಯ, ಚೆನ್ನಂಬಳ್ಳಿ, ಬಾಣೂರು, ಅರಳಿಕಟ್ಟೆಹುಂಡಿ ಗ್ರಾಮಗಳಲ್ಲಿ ಕಂಡುಬರುವ ದೃಶ್ಯವಿದು. ಈ ಗ್ರಾಮಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಸೇರಿವೆ.

ಸತತ ಬರಗಾಲ ಈ ಭಾಗದ ಜನರ ಜೀವನವನ್ನು ದುಸ್ತರಗೊಳಿಸಿದೆ. ಬೆಳೆ ನಷ್ಟ, ಅತಿಯಾದ ಸಾಲ, ನೀರಿಗೆ ತತ್ವಾರ, ಜಾನುವಾರುಗಳಿಗೆ ಮೇವಿನ ಸಮಸ್ಯೆಯಿಂದ ಕಂಗಾಲಾಗಿರುವ ರೈತರು ಉದ್ಯೋಗ ಅರಸಿ ನಗರಗಳಿಗೆ ಗುಳೆ ಹೋಗಿದ್ದಾರೆ. ಜಮೀನುಗಳಲ್ಲಿ ಕೂಲಿ ಇಲ್ಲದಿರುವುದರಿಂದ ಕಾರ್ಮಿಕರಿಗೆ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಸಿಗುತ್ತಿಲ್ಲ.

ಹೆಚ್ಚಿನ ಗ್ರಾಮಗಳಿಗೆ ಬಸ್ ಸೌಕರ್ಯವಿಲ್ಲ. ಖಾಸಗಿ ಬಸ್‌ಗಳನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕಾಗೆಮರಹಳ್ಳಿ ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಪಾಳು ಬಿದ್ದಿದೆ. ಇಲ್ಲಿನ ಪ್ರಾಥಮಿಕ ಶಾಲೆಯಲ್ಲಿ 100 ಮಕ್ಕಳಿದ್ದು, ಇಬ್ಬರೇ ಶಿಕ್ಷಕರು. ಊರಿನ ಬಹುತೇಕ ಯುವಕರು ಪಟ್ಟಣ ಸೇರಿದ್ದು, ವಯಸ್ಸಾದ ಪೋಷಕರು ಮಾತ್ರ ಇಲ್ಲಿದ್ದಾರೆ. ಕಾರ್ಯ ಗ್ರಾಮದ ಕೆಲವರು ಊರು ತೊರೆದು ಐದಾರು ವರ್ಷಗಳು ಕಳೆದಿದ್ದು, ಅವರ ಮನೆಗಳು ಕುಸಿದಿವೆ.

ಊರು ಹೊಲವಾಯಿತು: ಕಾಗೆಮರಹಳ್ಳಿ ಬಳಿ ಇದ್ದ ರಾಮಶೆಟ್ಟಿಪುರ ಗ್ರಾಮದಲ್ಲಿ ಈಗ ಒಂದೂ ಮನೆ ಇಲ್ಲ. ಹೆಚ್ಚಿನವರು ಸುತ್ತಮುತ್ತಲಿನ ದೊಡ್ಡ ಗ್ರಾಮ ಹಾಗೂ ಪಟ್ಟಣ ಸೇರಿಸಿಕೊಂಡಿದ್ದಾರೆ. ಆ ಊರು ಈಗ ಹೊಲಗಳಾಗಿ ಪರಿವರ್ತನೆಗೊಂಡಿದೆ. ಅದಕ್ಕೆ ಬಾವಿಗಳು, ಕೆರೆಗಳು, ಮನೆ ಅಡಿಪಾಯ ಮೌನ ಸಾಕ್ಷಿಯಾಗಿವೆ.

ಗ್ರಾಮಕ್ಕೆ ಕರೆ ತರಲು ಪ್ರಯತ್ನ

ಮೈಸೂರು:
ಸಾಮೂಹಿಕವಾಗಿ ಗುಳೆ ಹೋಗಿರುವ ಅರಳಿಕಟ್ಟೆಹುಂಡಿ ಗ್ರಾಮದ ನಿವಾಸಿಗಳನ್ನು ಮರಳಿ ಕರೆ ತರಲು ಜಿಲ್ಲಾಡಳಿತ ಪ್ರಯತ್ನ ನಡೆಸುತ್ತಿದೆ. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ವರದಿ ನೀಡಿದ್ದಾರೆ.

‘ಗ್ರಾಮಕ್ಕೆ ಸೌಲಭ್ಯ ಒದಗಿಸಲಾಗುವುದು. ಸದ್ಯ ಎರಡು ಕುಟುಂಬಗಳು ಮಾತ್ರ ಇವೆ. ಬಹಳ ಹಿಂದೆಯೇ ಗ್ರಾಮ ತೊರೆದಿರುವವರು ಮೈಸೂರಿನಲ್ಲಿ ಮನೆ ಮಾಡಿಕೊಂಡು ವ್ಯಾಪಾರದಲ್ಲಿ ತೊಡಗಿದ್ದಾರೆ. ದಿನಕ್ಕೆ ₹ 400ರ ವರೆಗೆ ಸಂಪಾದಿಸುತ್ತಿದ್ದಾರೆ’ ಎಂದು ನಂಜನಗೂಡು ತಹಶೀಲ್ದಾರ್‌ ಎಂ.ದಯಾನಂದ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry