ಶ್ರೀಗಂಧ ಕಳ್ಳತನ ಈಗಲೂ ನಡೆಯುತ್ತಿದೆ: ರಮಾನಾಥ ರೈ

7

ಶ್ರೀಗಂಧ ಕಳ್ಳತನ ಈಗಲೂ ನಡೆಯುತ್ತಿದೆ: ರಮಾನಾಥ ರೈ

Published:
Updated:
ಶ್ರೀಗಂಧ ಕಳ್ಳತನ ಈಗಲೂ ನಡೆಯುತ್ತಿದೆ: ರಮಾನಾಥ ರೈ

ಬೆಂಗಳೂರು: ‘ಶ್ರೀಗಂಧದ ಕಳ್ಳತನ ಹಿಂದೆಯೂ ಇತ್ತು, ಈಗಲೂ ನಡೆಯುತ್ತಿದೆ. ನಾವು ಇದನ್ನು ಸಂಪೂರ್ಣ ನಿಯಂತ್ರಣ ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಮನಸ್ಸು ಒಪ್ಪುವುದಿಲ್ಲ’ ಎಂದು ಅರಣ್ಯ ಸಚಿವ ರಮಾನಾಥ ರೈ ವಿಧಾನಪರಿಷತ್‌ನಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು.

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನಲ್ಲಿ ಶ್ರೀಗಂಧದ ಗಿಡಗಳು ಕಳ್ಳತನ ಆಗುತ್ತಿರುವ ಬಗ್ಗೆ ಕಾಂಗ್ರೆಸ್ ಸದಸ್ಯ ಶ್ರೀಕಾಂತ ಎಲ್. ಘೋಟ್ನೇಕರ್ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು. ‘ಅರಣ್ಯಗಳಲ್ಲಿ ನಡೆಯುತ್ತಿರುವ ಶ್ರೀಗಂಧದ ಕಳ್ಳತನ ನಿಯಂತ್ರಣಕ್ಕೆ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದರು.

ಅಗತ್ಯಕ್ಕೆ ಅನುಗುಣವಾಗಿ ಮರಗಳನ್ನು ಕಡಿಯುವುದು ಮತ್ತು ಹೊಸದಾಗಿ ಸಸಿಗಳನ್ನು ನೆಡುವುದು ಕಾಲಕಾಲಕ್ಕೆ ನಡೆಯುತ್ತದೆ. ವಿವಿಧ ಉದ್ದೇಶಗಳಿಗೆ ಲಕ್ಷಾಂತರ ಎಕರೆ ಅರಣ್ಯ ನಾಶವಾಗಿದೆ ಎಂದು ಅವರು ಹೇಳಿದರು.

‘ಶಿರಸಿ ಅರಣ್ಯ ವಲಯಕ್ಕೆ ಸಂಬಂಧಿಸಿದ ಹೊನ್ನಗದ್ದೆ, ನಿರನ್ನಳ್ಳಿ, ಶಿಗೇಹಳ್ಳಿ, ಇಟಗುಳಿ ಭಾಗಗಳಲ್ಲಿ ಗಂಧದ ಗಿಡಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಿರಂತರವಾಗಿ ಕಳ್ಳತನ ನಡೆಯುತ್ತಿದೆ. ಅರಣ್ಯಾಧಿಕಾರಿಯ ಮನೆಯಲ್ಲಿಯೇ ಕದ್ದರೂ ಕಳ್ಳರನ್ನು ಹಿಡಿಯಲು ಸಾಧ್ಯವಾಗಿಲ್ಲ’ ಎಂದು ಶ್ರೀಕಾಂತ ಘೋಟ್ನೇಕರ್ ಆರೋಪಿಸಿದರು.

ಹಿಜಬ್‌ ಧರಿಸಿದ್ದಕ್ಕೆ 40 ನಿಮಿಷ ತಪಾಸಣೆ!

ಬೆಂಗಳೂರು: ಅಧಿವೇಶನ ನೋಡಲು ಹಿಜಬ್ ಧರಿಸಿ ಹೋಗಿದ್ದ  ವಿದ್ಯಾರ್ಥಿನಿಯೊಬ್ಬರನ್ನು ವಿಧಾನಸೌಧದ ಭದ್ರತಾ ಸಿಬ್ಬಂದಿ ಬುಧವಾರ ಸುಮಾರು 40 ನಿಮಿಷ ತಪಾಸಣೆ ನಡೆಸಿದ್ದಾರೆ.

ಕೋರಮಂಗಲದ ಕಾಲೇಜಿನ 30ಕ್ಕೂ ಅಧಿಕ ವಿದ್ಯಾರ್ಥಿನಿಯರು ಅಧಿವೇಶನ ನೋಡಲು ಹೋಗಿದ್ದರು. ಈ ಪೈಕಿ ವಿದ್ಯಾರ್ಥಿನಿಯೊಬ್ಬರು ತಲೆಗೆ ಹಿಜಬ್ ಧರಿಸಿದ್ದರು.

ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಅದನ್ನು ತೆಗೆಯುವಂತೆ ಹೇಳಿದರು. ಇದಕ್ಕೆ ವಿದ್ಯಾರ್ಥಿನಿ ವಿರೋಧ ವ್ಯಕ್ತಪಡಿಸಿದರು. ಬಳಿಕ ಮಹಿಳಾ ಭದ್ರತಾ ಸಿಬ್ಬಂದಿಯೊಬ್ಬರು ಅವರನ್ನು ಪ್ರತ್ಯೇಕ ಕೊಠಡಿಗೆ ಕರೆದೊಯ್ದು ತಪಾಸಣೆ ನಡೆಸಿ ಅಧಿವೇಶನ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು.

‘ಹಿಜಬ್ ತೆಗೆಯಲು ವಿದ್ಯಾರ್ಥಿನಿ ನಿರಾಕರಿಸಿದರು. ಹೀಗಾಗಿ, ಭದ್ರತಾ ದೃಷ್ಟಿಯಿಂದಾಗಿ ಅವರನ್ನು  ಪ್ರತ್ಯೇಕ ಕೊಠಡಿಗೆ ಕರೆದೊಯ್ದು ತಪಾಸಣೆ ನಡೆಸಲಾಗಿದೆ. ಇದರಲ್ಲಿ ವಿದ್ಯಾರ್ಥಿನಿಯ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶವಿರಲಿಲ್ಲ’ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

‘20 ಸಾವಿರ ಮಹಿಳೆಯರ ನಾಪತ್ತೆ’

ಬೆಂಗಳೂರು:
ರಾಜ್ಯದಲ್ಲಿ ಕಳೆದ  ನಾಲ್ಕು ವರ್ಷಗಳಲ್ಲಿ 20 ಸಾವಿರ ಮಹಿಳೆಯರು ನಾಪತ್ತೆ  ಆಗಿದ್ದಾರೆ  ಎಂದು ಬಿಜೆಪಿಯ ಗೋವಿಂದ ಕಾರಜೋಳ ಆರೋಪಿಸಿದರು.

ವಿಧಾನಸಭೆಯಲ್ಲಿ ಬುಧವಾರ ವಿತ್ತೀಯ ಕಾರ್ಯಕಲಾಪದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಕಾಣೆಯಾದ ಮಹಿಳೆಯರ ಪತ್ತೆಗೆ ಸರ್ಕಾರ ಗಂಭೀರ ಪ್ರಯತ್ನ ನಡೆಸಿಲ್ಲ’ ಎಂದೂ ದೂರಿದರು.

ಕಾಣೆಯಾದವರ ಪೈಕಿ 1974 ಮಹಿಳೆಯರನ್ನು ಮಾತ್ರ ಪತ್ತೆ ಮಾಡಲಾಗಿದೆ. ಉಳಿದವರ ಕಥೆ ಏನಾಗಿದೆ, ಅವರು ಬದುಕಿದ್ದಾರೋ ಇಲ್ಲವೋ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry