ವಿವಿಧೆಡೆ ಉತ್ತಮ ಮಳೆ, ಕೆರೆಗಳಲ್ಲಿ ನೀರು ಸಂಗ್ರಹ

7
ಬತ್ತಿ ಬೀಡು ಸೆಳೆದಿದ್ದ ನಿಡಶೇಸಿ ಕೆರೆಗೆ ಮತ್ತೆ ಜೀವಕಳೆ, ಮಳೆ ನೀರಿನಲ್ಲಿ ಕೊಚ್ಚಿಹೋದ ಬಾಲಕಿ

ವಿವಿಧೆಡೆ ಉತ್ತಮ ಮಳೆ, ಕೆರೆಗಳಲ್ಲಿ ನೀರು ಸಂಗ್ರಹ

Published:
Updated:
ವಿವಿಧೆಡೆ ಉತ್ತಮ ಮಳೆ, ಕೆರೆಗಳಲ್ಲಿ ನೀರು ಸಂಗ್ರಹ

ಕುಷ್ಟಗಿ: ಮಂಗಳವಾರ ಸಂಜೆ ಸುರಿದ ಕುಂಭದ್ರೋಣ ಮಳೆಯಲ್ಲಿ ತಾಲ್ಲೂಕಿನ ಹಿರೇಮುಕ್ತಿನಾಳ ಗ್ರಾಮದಲ್ಲಿ ದುರುಗಮ್ಮ (8)  ಕೊಚ್ಚಿಹೋಗಿದ್ದು, ಹಲವು ಕೃಷಿಹೊಂಡಗಳು ನೀರಿನ ರಭಸಕ್ಕೆ ಒಡೆದಿವೆ.

ಗ್ರಾಮದ ದುರುಗಪ್ಪ ಮಾದರ ಅವರ  ಪುತ್ರಿ ದುರುಗಮ್ಮ, ಎರಡನೇ ತರಗತಿಯಲ್ಲಿ ಓದುತ್ತಿದ್ದಳು. ಆಕೆ ಇತರೆ ಬಾಲಕಿಯರೊಂದಿಗೆ ಮನೆಗೆ ತೆರಳುತ್ತಿದ್ದಾಗ ದಾರಿ ಮಧ್ಯೆ  ಕೊರಕಲಿನಲ್ಲಿ ರಭಸದ ಸೆಳವಿಗೆ ಸಿಕ್ಕು ನೀರುಪಾಲಾಗಿದ್ದಾಳೆ.

ಹಡಗಲಿ ಗ್ರಾಮದಲ್ಲಿ ಮಳೆಯಿಂದ ನೆನೆದ ಸುಮಾರು15 ಕುರಿಗಳು ಸಾವಿಗೀಡಾಗಿವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪಟ್ಟಣದಲ್ಲಿ  9.6 ಸೆಂ.ಮೀ ಮಳೆಯಾಗಿದೆ. ದೋಟಿಹಾಳದಲ್ಲಿ 33 ಮಿ.ಮೀ, ಹನುಮನಾಳದಲ್ಲಿ 25 ಮಿ.ಮೀ, ಕಿಲಾರಟ್ಟಿ ಮಳೆ ಮಾಪನ ಕೇಂದ್ರದಲ್ಲಿ 11.2 ಮಿ.ಮೀ ಮತ್ತು ಹನುಮಸಾಗರದಲ್ಲಿ 10 ಮಿ.ಮೀ ಮಳೆಯಾಗಿದೆ.

ತಾಲ್ಲೂಕಿನ ಹನುಮಸಾಗರ ಹೋಬಳಿ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಉತ್ತಮ ಮಳೆ ಸುರಿದಿದೆ. ಮಳೆಗೆ ಮದಲಗಟ್ಟಿ ಬಳಿ ಇರುವ ನಿಡಶೇಸಿ ಕೆರೆಯಲ್ಲಿ ನೀರು ಸಂಗ್ರಹವಾಗಿದ್ದು, ಇದು  ರೈತರ ಸಂತಸಕ್ಕೆ ಕಾರಣವಾಗಿದೆ.

ಕೃಷಿ ಇಲಾಖೆ ಸಹಾಯಧನದಲ್ಲಿ ನಿರ್ಮಾಣಗೊಂಡಿರುವ ಅನೇಕ ಕೃಷಿ ಹೊಂಡಗಳ ಕೋಡಿಗಳು ನೀರಿನ ರಭಸಕ್ಕೆ  ಒಡೆದುಹೋಗಿವೆ.  ಅಲ್ಲದೆ, ಕೋಡಿಗೆ ಅಳವಡಿಸಿದ್ದ  ಪೈಪ್‌ಗಳು ಸಹ  ಕಿತ್ತು ಹೋಗಿವೆ. ಜಮೀನಿನ ಮೇಲ್ಮಣ್ಣು ಕೊಚ್ಚಿಹೋಗಿದೆ.

ಭೇಟಿ: ಮಳೆ ನೀರಿಗೆ ಕೊಚ್ಚಿಹೋದ ಹಿರೇಮುಕ್ತಿನಾಳ ಗ್ರಾಮದ ಬಾಲಕಿಯ ಕುಟುಂಬಕ್ಕೆ ಬುಧವಾರ ಭೇಟಿ ನೀಡಿದ ತಹಶೀಲ್ದಾರ್‌ ಎಂ.ಗಂಗಪ್ಪ, ಬಾಲಕಿಯ   ಅಂತ್ಯ ಸಂಸ್ಕಾರಕ್ಕೆ ₹ 5,000 ನೆರವು ನೀಡಿದರು.

‘ನೈಸರ್ಗಿಕ ವಿಕೋಪ ಪರಿಹಾರ ನಿಧಿಯಿಂದ ₹ 4 ಲಕ್ಷ ಮತ್ತು ಶಿಕ್ಷಣ ಇಲಾಖೆ ವಿದ್ಯಾರ್ಥಿ ಕಲ್ಯಾಣ ನಿಧಿಯಿಂದ ₹ 50 ಸಾವಿರ ಹಣ ಮಂಜೂರಾತಿಗೆ ಪ್ರಸ್ತಾವ  ಸಲ್ಲಿಸಲಾಗುವುದು’ ಎಂದು ಹೇಳಿದರು.

ಯಲಬುರ್ಗಾ ವರದಿ: ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿ ಸುರಿದ ಮಳೆಗೆ  ಹೊಲ ಗದ್ದೆಗಳಲ್ಲಿ  ನೀರು ಸಂಗ್ರಹಗೊಂಡಿದ್ದು, ಅನೇಕ ಕಡೆಗಳಲ್ಲಿ ಒಡ್ಡು ಒಡೆದುಹೋಗಿವೆ. ಪಟ್ಟಣದ ಜೀವನಾಡಿ ಕೆಂಪು ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದ್ದು, ಜನರ ಹರ್ಷಗೊಂಡಿದ್ದಾರೆ.

ತಾಲ್ಲೂಕಿನ ನಾಲ್ಕು ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ನಿಂಗಾಪುರ, ಯಡ್ಡೋಣಿ ಹಾಗೂ ಹಿರೇವಂಕಲಕುಂಟಾ ಪ್ರದೇಶವನ್ನು ಹೊರತುಪಡಿಸಿ ಉಳಿದಂತೆ ಬಹುತೇಕ ಭಾಗದಲ್ಲಿ ಉತ್ತಮ ಮಳೆಯಾಗಿರುವುದರಿಂದ ಬಿತ್ತನೆಗೆ ಸಜ್ಜಾಗಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ತಾಲ್ಲೂಕಿನಲ್ಲಿ 377 ಮಿ.ಮೀ ಮಳೆ ಸುರಿದಿದೆ. ಈ ಪೈಕಿ ಯಲಬುರ್ಗಾ ವ್ಯಾಪ್ತಿಯಲ್ಲಿ 64.0 ಮಿ.ಮೀ, ಕುಕನೂರ ಭಾಗ 60.2 ಮಿ.ಮೀ, ನಿಂಗಾಪುರ 18.8 ಮಿ.ಮೀ, ಮಂಗಳೂರು 64.1 ಮಿ.ಮೀ, ಬೇವೂರು 113.4 ಮಿ.ಮೀ, ಯಡ್ಡೋಣಿ 28.2 ಮಿ.ಮೀ, ಹಿರೇವಂಕಲಕುಂಟಾ 28.4 ಮಿ.ಮೀ ಮಳೆ ಸುರಿದಿದೆ. 

ಯಲಬುರ್ಗಾದ ಕೆಂಪು ಕೆರೆಯಲ್ಲಿ ನೀರು ಸಂಗ್ರಹವಾಗಿರುವುದು ಪಟ್ಟಣದ ಜನತೆಗೆ ಹರ್ಷಕ್ಕೆ ಕಾರಣವಾಗಿದೆ.  ಹಾಗೆಯೇ, ತಾಲ್ಲೂಕಿನ  ಸಂಗನಾಳ, ಮುಧೋಳ ಪ್ರದೇಶದಲ್ಲಿ  ಹೆಚ್ಚಿನ ಮಳೆ ಸುರಿದಿದ್ದರಿಂದ ಸಂಗನಾಳ ಹಳ್ಳ ಭರ್ತಿಯಾಗಿದೆ. 

ಮಳೆಯಿಂದಾಗಿ  ರೈತರು ಬಿತ್ತನೆಗೆ ಸಜ್ಜಾಗುತ್ತಿದ್ದಾರೆ.

ಕಾರಟಗಿ ವರದಿ: ಇಲ್ಲಿ ಮಂಗಳವಾರ ರಾತ್ರಿ ಆರಂಭಗೊಂಡ ಮಳೆ ಬುಧವಾರ ಬೆಳಗಿನಜಾವದವರೆಗೆ  ಸುರಿಯಿತು. ಮಳೆಯಿಂದಾಗಿ ಬುಧವಾರ  ವಾತಾವರಣ ತಂಪಾಗಿತ್ತು.

ಮಳೆ ಕಾರಣ ವಿದ್ಯುತ್‌ ಸಂಪರ್ಕ ಕಡಿತವಾದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು.  7.4 ಮಿ.ಮೀ ಮಳೆಯಾಗಿದೆ.

**

ನಿಡಶೇಸಿ ಕೆರೆ ಭರ್ತಿಯಾದರೆ ಕುಷ್ಟಗಿ ಪಟ್ಟಣದ ಅರ್ಧದಷ್ಟು ಕೊಳವೆಬಾವಿಗಳಲ್ಲಿ ಜೀವಸೆಲೆ ಉಕ್ಕುತ್ತದೆ. ಕೆರೆ ನೀರು ಪೋಲಾಗದಂತೆ ತಡೆಯಬೇಕು

-ಅಭಿನಂದನ.ಪಿ.ಗೋಗಿ,

ಕುಷ್ಟಗಿ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry