ಸುಷ್ಮಾರಿಂದ ಚತುರ ಟ್ವೀಟ್‌: ಟ್ವಿಟರಿಗರ ಮೆಚ್ಚುಗೆ

7

ಸುಷ್ಮಾರಿಂದ ಚತುರ ಟ್ವೀಟ್‌: ಟ್ವಿಟರಿಗರ ಮೆಚ್ಚುಗೆ

Published:
Updated:
ಸುಷ್ಮಾರಿಂದ ಚತುರ ಟ್ವೀಟ್‌: ಟ್ವಿಟರಿಗರ ಮೆಚ್ಚುಗೆ

ನವದೆಹಲಿ: ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರಿಗೆ ನೆರವು ನೀಡಲು ಪ್ರಯತ್ನಿಸುತ್ತಿರುವ ತಮ್ಮ ಹಾಗೂ ಸಚಿವಾಲಯದ ಕಾಲೆಳೆಯಲು ಯತ್ನಿಸಿದ ಟ್ವಿಟರ್‌ ಬಳಕೆದಾರರೊಬ್ಬರಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಜಾಣ್ಮೆಯಿಂದ ಪ್ರತಿಕ್ರಿಯಿಸಿ ಟ್ವಿಟರಿಗರ ಮೆಚ್ಚುಗೆಗೆ ಪಾತ್ರರಾದರು.

ಕರಣ್‌ ಸೈನಿ ಎಂಬುವವರು ಸುಷ್ಮಾ ಅವರನ್ನು ಉದ್ದೇಶಿಸಿ, ‘ಸುಷ್ಮಾ ಸ್ವರಾಜ್‌ ಅವರೇ, ನಾನು ಮಂಗಳ ಗ್ರಹದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಮಂಗಳಯಾನದ (987 ದಿನಗಳ ಹಿಂದೆ) ಮೂಲಕ ಕಳುಹಿಸಿದ ಆಹಾರ ಖಾಲಿಯಾಗಿದೆ. ಮಂಗಳಯಾನ–2 ಅನ್ನು ಯಾವಾಗ ಕಳುಹಿಸುತ್ತೀರಿ?’ ಎಂದು ಗುರುವಾರ ಟ್ವೀಟ್‌ ಮಾಡಿದ್ದರು. ಈ ಸಂದೇಶಕ್ಕೆ ಇಸ್ರೊದ ಹೆಸರನ್ನೂ ಜೋಡಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವೆ, ‘ನೀವು ಮಂಗಳಗ್ರಹದಲ್ಲಿ ತೊಂದರೆಗೆ ಸಿಲುಕಿದರೂ, ನಿಮಗೆ ನೆರವಾಗುವುದಕ್ಕೆ ಭಾರತೀಯ ರಾಯಭಾರ ಕಚೇರಿ ಅಲ್ಲಿ ಇದೆ’ ಎಂದು ಟ್ವೀಟ್‌ ಮಾಡಿದ್ದರು.

ಸೈನಿ ಟ್ವೀಟ್‌ಗೆ ಇತರ ಬಳಕೆದಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಳಿಕ, ಅವರು ಕ್ಷಮೆ ಕೋರಿದರು.

‘ಸುಷ್ಮಾ ಸ್ವರಾಜ್‌ ಮತ್ತು ಅವರ ತಂಡದ ಬಗ್ಗೆ ನಮಗೆಲ್ಲರಿಗೂ ಗೌರವವಿದೆ. ನಾನು ತಮಾಷೆ ಮಾಡಲು ಯತ್ನಿಸಿದ್ದೆ’ ಎಂದು ಅವರು ನಂತರ ಸ್ಪಷ್ಟನೆ ನೀಡಿದರು.

ಸುಷ್ಮಾ ಸ್ವರಾಜ್‌ ಅವರು ಮಾಡುತ್ತಿರುವ ಕೆಲಸವನ್ನು ಶ್ಲಾಘಿಸಿರುವ ಟ್ವಿಟರಿಗರು, ಕರಣ್‌ ಸೈನಿ ಅವರಿಗೆ ನೀಡಿರುವ ಪ್ರತಿಕ್ರಿಯೆಯ ಬಗ್ಗೆ ಮೆಚ್ಚುಗೆ ಸೂಚಿಸಿದರು.

@SushmaSwaraj I am stuck on mars, food sent via Mangalyaan (987 days ago), is running out, when is Mangalyaan-II being sent ? @isro

ಸುಷ್ಮಾ ಸ್ವರಾಜ್ ಅವರ ಪ್ರತಿಕ್ರಿಯೆ ಇದೀಗ ವೈರಲ್ ಆಗಿದ್ದು, 2,200 ಬಾರಿ ರಿಟ್ವೀಟ್ ಆಗಿದೆ. ಪೋಸ್ಟ್‌ ಮಾಡಿದ ಒಂದು ಗಂಟೆಯ ಒಳಗೆ 4,500 ಜನ ಲೈಕ್ ಮಾಡಿದ್ದಾರೆ. ವಿದೇಶಾಂಗ ಸಚಿವೆಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸುಷ್ಮಾ ಸ್ವರಾಜ್ ಅವರನ್ನು ಅಣಕಿಸಿದ್ದಕ್ಕೆ ಬಹಳಷ್ಟು ಜನ ಸೈನಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry