ಮಳೆ: ಹೂಳು ತೆರವು ತಾತ್ಕಾಲಿಕ ಸ್ಥಗಿತ

7
ಬೃಹತ್‌ ಸಾಮರ್ಥ್ಯದ ಯಂತ್ರ ನೆರವಿಗೆ ಕ್ರಿಯಾ ಸಮಿತಿ ಕೋರಿಕೆ

ಮಳೆ: ಹೂಳು ತೆರವು ತಾತ್ಕಾಲಿಕ ಸ್ಥಗಿತ

Published:
Updated:
ಮಳೆ: ಹೂಳು ತೆರವು ತಾತ್ಕಾಲಿಕ ಸ್ಥಗಿತ

ಕೊಪ್ಪಳ: ಜಿಲ್ಲೆಯಲ್ಲಿ ಮಂಗಳವಾರ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಯ ಹೂಳು ತೆಗೆಯುವ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಹಿನ್ನೀರು ಪ್ರದೇಶಕ್ಕೆ ಹೋಗುವ ದಾರಿ ಸಂಪೂರ್ಣ ಕೆಸರು ಮಯವಾಗಿದ್ದು, ವಾಹನಗಳು ಸಂಚರಿಸ ಲಾಗದ ಕಾರಣ ತಾತ್ಕಾಲಿಕವಾಗಿ ತೆರವು ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂದು ತುಂಗಭದ್ರಾ ಅಣೆಕಟ್ಟೆ ಹೂಳೆತ್ತುವ ರೈತರ ಕ್ರಿಯಾ ಸಮಿತಿ ಸಂಚಾಲಕ ಜನಾರ್ದನ ಹುಲಿಗಿ ಹೇಳಿದರು.

ಎರಡು ದಿನಗಳ ಮಟ್ಟಿಗೆ ಹೂಳು ತೆಗೆಯುವ ಕಾರ್ಯ ಸ್ಥಗಿತಗೊಳಿ ಸಲಾಗಿದೆ. ಎರಡು ದಿನ ಭೂಮಿ ಒಣಗಿದರೆ ಮತ್ತೆ ಮುಂದುವರಿಸುತ್ತೇವೆ. ಕಾಸನಕಂಡಿ ಪ್ರದೇಶ ಬಿಟ್ಟು ಬೇರೆ ಭಾಗದಲ್ಲಿ ಹೂಳೆತ್ತುವ ಕಾರ್ಯ ಮುಂದುವರಿಯಲಿದೆ ಎಂದು ಅವರು ಮಾಹಿತಿ ನೀಡಿದರು.

ಇದುವರೆಗೆ 25 ಸಾವಿರ ಕ್ಯೂಬಿಕ್‌ ಮೀಟರ್‌ ಹೂಳೆತ್ತಲಾಗಿದೆ. ಸರ್ಕಾರದ ಲೆಕ್ಕಾಚಾರದ ಪ್ರಕಾರ ಒಂದು ಕ್ಯೂಬಿಕ್‌ ಮೀಟರ್‌ ಹೂಳೆತ್ತಲು ₹ 400 ವೆಚ್ಚವಾಗುತ್ತದೆ. ಆ ಪ್ರಕಾರ ₹ 1 ಕೋಟಿ ವೆಚ್ಚವಾಗಬೇಕಿತ್ತು. ಆದರೆ, ರೈತರೇ ಕೈಜೋಡಿಸಿದ ಪರಿಣಾಮ ಕೇವಲ ₹ 7ರಿಂದ 8 ಲಕ್ಷ ವೆಚ್ಚದಲ್ಲಿ ನಡೆದಿದೆ. ಈ ಕಾರ್ಯ ನಿರಂತರವಾಗಿ ಮುಂದುವರಿದರೆ ಪ್ರತಿ ವರ್ಷ ಒಂದೊಂದು ಟಿಎಂಸಿ ಹೂಳು ಮೇಲೆತ್ತುವ ನಿರೀಕ್ಷೆ ಇದೆ ಎಂದು ಹುಲಿಗಿ ಹೇಳಿದರು.

ಬೃಹತ್‌ ಯಂತ್ರಗಳಿಗೆ ಬೇಡಿಕೆ: ‘ಸದ್ಯ ಸ್ಥಳೀಯವಾಗಿ ಲಭ್ಯವಿರುವ ಮಣ್ಣೆತ್ತುವ ಯಂತ್ರಗಳನ್ನು ಬಳಸಿದ್ದೇವೆ. ಇನ್ನಾದರೂ ಸರ್ಕಾರ ಕಣ್ಣು ತೆರೆದು ಅತ್ಯಧಿಕ ಸಾಮರ್ಥ್ಯದ ಮಣ್ಣು ಎತ್ತುವ ಯಂತ್ರ ಪೂರೈಸಬೇಕು. ವಿದೇಶದಲ್ಲಿ ಇಂಥ ಯಂತ್ರವನ್ನು ನೋಡಿದ್ದೇವೆ. ಆ ಯಂತ್ರ ತರಿಸಿಕೊಟ್ಟರೆ ಶ್ರಮ, ಸಮಯ, ಹಣ ಮತ್ತು ಇಂಧನ ಪ್ರಮಾಣ ಗಣನೀಯವಾಗಿ ಉಳಿತಾಯವಾಗಲಿದೆ. ಈಗಾಗಲೇ ಅದರ ಮಾದರಿ ನೋಡಿ ಆ ಕಂಪೆನಿಯ ವಿಳಾಸ ಹುಡುಕಿದ್ದೇವೆ. ಯಂತ್ರ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತೇವೆ. ಇನ್ನಾದರೂ ಅಣೆಕಟ್ಟೆ ಆಡಳಿತದವರು ಎಂಜಿನಿಯರ್‌ಗಳ ಮೂಲಕ ತಾಂತ್ರಿಕ ನೆರವು ಒದಗಿಸಿ ವೈಜ್ಞಾನಿಕ ವಿನ್ಯಾಸ ರೂಪಿಸಬೇಕು. ತೆರವು ಕಾರ್ಯವನ್ನು ನಾವು ಮುಂದುವರಿಸುತ್ತೇವೆ. ಮುಂದಿನ ವರ್ಷ ಹೂಳನ್ನು ಗುಡ್ಡಗಳ ಸಮೀಪ ದಿಬ್ಬದ ರೂಪದಲ್ಲಿ ಹಾಕಿ ಅದರ ಮೇಲೆ ಹುಲ್ಲು ಹಾಸು ಹೊದೆಸುತ್ತೇವೆ. ಇದರಿಂದ ಸುಂದರ ಪರಿಸರವೂ ನಿರ್ಮಾಣವಾದಂತಾಗುತ್ತದೆ’ ಎಂದು ಹುಲಿಗಿ ಹೇಳಿದರು.

ಅಣೆಕಟ್ಟೆ ಆಡಳಿತ ಸ್ಪಷ್ಟನೆ: ಹೂಳು ತೆಗೆಯುವ ರೈತರಿಗೆ ತಾಂತ್ರಿಕ ನೆರವು ಕೊಡುವ ಅವಕಾಶ ನಮ್ಮಲ್ಲಿಲ್ಲ. ಅದೇನಿದ್ದರೂ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆದು ನಮಗೆ ಆದೇಶ ಬರಬೇಕು. ಯಂತ್ರಗಳಿಂದ ಹೂಳು ತೆಗೆದರೆ ಅಂಥ ಪ್ರಯೋಜನವೂ ಆಗದು ಎಂದು ಅಣೆಕಟ್ಟೆಯ ಮುಖ್ಯ ಎಂಜಿನಿಯರ್‌ ಭೋಜಾ ನಾಯ್ಕ ತಿಳಿಸಿದರು.

**

ಹೂಳು ತೆಗೆಯುವುದರಿಂದ ಏನೂ ಪ್ರಯೋಜನ ಇಲ್ಲ. ಅದಕ್ಕಾಗಿ ಸರ್ಕಾರ ನವಲಿ ಬಳಿ ಸಮತೋಲನ ಜಲಾಶಯ ಯೋಜನೆ ರೂಪಿಸಿದೆ

-ಭೋಜಾ ನಾಯ್ಕ,

ಮುಖ್ಯ ಎಂಜಿನಿಯರ್‌ ತುಂಗಭದ್ರಾ ಅಣೆಕಟ್ಟೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry