ಗರಿ ಬಿಚ್ಚಿಕೊಂಡ ಕೃಷಿ ಚಟುವಟಿಕೆ

7
ಭಾಲ್ಕಿ, ಬಸವಕಲ್ಯಾಣ ತಾಲ್ಲೂಕಿನಲ್ಲಿ ಉತ್ತಮ ಮಳೆ: ರೈತರ ಮೊಗದಲ್ಲಿ ಮಂದಹಾಸ

ಗರಿ ಬಿಚ್ಚಿಕೊಂಡ ಕೃಷಿ ಚಟುವಟಿಕೆ

Published:
Updated:
ಗರಿ ಬಿಚ್ಚಿಕೊಂಡ ಕೃಷಿ ಚಟುವಟಿಕೆ

ಬೀದರ್: ಒಂದು ವಾರದ ಅವಧಿಯಲ್ಲಿ ಬೀದರ್‌ ತಾಲ್ಲೂಕು ಹೊರತುಪಡಿಸಿ ಜಿಲ್ಲೆಯ ಉಳಿದ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆ ಗರಿ ಬಿಚ್ಚಿಕೊಂಡಿದೆ.

ಜೂನ್‌ 1ರಿಂದ 7ರವರೆಗೆ ಹುಮನಾಬಾದ್ ತಾಲ್ಲೂಕಿನಲ್ಲಿ  91 ಮಿ.ಮೀ, ಬಸವಕಲ್ಯಾಣ  76.2 ಮಿ. ಮೀ,  ಭಾಲ್ಕಿ 63 ಮಿ.ಮೀ ಹಾಗೂ ಔರಾದ್‌ ತಾಲ್ಲೂಕಿನಲ್ಲಿ 43.1 ಮಿ.ಮೀ ಮಳೆ ದಾಖಲಾಗಿದೆ. ಬೀದರ್‌ ತಾಲ್ಲೂಕಿನಲ್ಲಿ ಮಾತ್ರ ಅತಿ ಕಡಿಮೆ ಅಂದರೆ 4.8 ಮಿ.ಮೀ ಮಳೆ ಸುರಿದಿದೆ. ಹೆಚ್ಚು ಮಳೆ ಬಿದ್ದಿರುವ ಪ್ರದೇಶದಲ್ಲಿ ಭೂಮಿಯನ್ನು  ಬಿತ್ತನೆಗೆ ಹದಗೊಳಿಸುವ ಕಾರ್ಯ ಬಿರುಸಿನಿಂದ ಸಾಗಿದೆ.

ಜಿಲ್ಲೆಯಲ್ಲಿ ಜಾನುವಾರು ಬಳಸಿ ಉಳುಮೆ ಮಾಡುವುದು ಬಹುತೇಕ ಕಡೆ ನಿಂತು ಹೋಗಿದೆ. ಯಂತ್ರೋಪಕರಣ ಗಳ ಮೂಲಕವೇ ಕೃಷಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಕೃಷಿ ಕಾರ್ಮಿಕರ ಕೊರತೆಯ ಕಾರಣ  ರೈತರು ಹೊಲಗಳಲ್ಲಿ ರೋಟಾವೇಟರ್‌ಗಳನ್ನು ಬಳಸಿ ಉಳುಮೆ ಹಾಗೂ ಬಿತ್ತನೆ ಮಾಡುತ್ತಿದ್ದಾರೆ.

ಭಾಲ್ಕಿ ತಾಲ್ಲೂಕಿನಲ್ಲಿ ಅತಿ ಹೆಚ್ಚು  ಅಂದರೆ  26 ಬೀಜ  ವಿತರಣೆ  ಕೇಂದ್ರ ಗಳನ್ನು ಆರಂಭಿಸಲಾಗಿದೆ. ಔರಾದ್‌ನಲ್ಲಿ 16, ಬೀದರ್‌ನಲ್ಲಿ 14, ಬಸವಕಲ್ಯಾಣ ಹಾಗೂ ಹುಮನಾಬಾದ್ ತಾಲ್ಲೂಕಿನಲ್ಲಿ ತಲಾ 9 ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು 75 ಕೇಂದ್ರಗಳಲ್ಲಿ 30 ರೈತ ಸಂಪರ್ಕ ಕೇಂದ್ರಗಳಿದ್ದರೆ, 39 ಹೆಚ್ಚು ವರಿ ಬೀಜ ವಿತರಣಾ ಕೇಂದ್ರಗಳಿವೆ. 6 ಪ್ರಾಥಮಿಕ ಕೃಷಿ ಹುಟ್ಟುವಳಿ ಸಹಕಾರ ಸಂಘಗಳ ಮೂಲಕ ರೈತರಿಗೆ ಬೀಜ ವಿತರಣೆ ಆರಂಭಿಸಲಾಗಿದೆ. ಗುರುವಾರದಿಂದ ಎಲ್ಲ ರೈತರಿಗೆ ಬೀಜ ಲಭ್ಯವಾಗಲಿದೆ. ಕೆಲ ರೈತರು ಬೀದರ್‌ನ ಗಾಂಧಿಗಂಜ್‌ನಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ ಗೊಬ್ಬರ ಬೆಲೆಗಳ ಚೌಕಾಸಿ ಮಾಡುತ್ತಿದ್ದಾರೆ.

‘ಒಂದೆರಡು ದಿನಗಳಲ್ಲಿ ಮುಂಗಾರು ಆರಂಭವಾಗಲಿದೆ. ಮುಂಗಾರು ಪೂರ್ವ ಮಳೆ ಚೆನ್ನಾಗಿ ಬಂದಿರುವ ಕಾರಣ ಈ ವರ್ಷ  ಸೋಯಾ ಬೀಜಕ್ಕೆ ಹೆಚ್ಚು ಬೇಡಿಕೆ ಇದೆ. 37,000 ಕ್ವಿಂಟಲ್‌ ಸೋಯಾ, 220 ಕ್ವಿಂಟಲ್‌ ತೊಗರಿ, 50  ಕ್ವಿಂಟಲ್‌ ಜೋಳ, 50 ಕ್ವಿಂಟಲ್‌ ಹೆಸರು, 50 ಕ್ವಿಂಟಲ್‌  ಉದ್ದು, 25 ಕ್ವಿಂಟಲ್‌ ಭತ್ತವನ್ನು ದಾಸ್ತಾನು ಮಾಡಲಾಗಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಸಕ್ತ ವರ್ಷದ ಮುಂಗಾರಲ್ಲಿ 1,35,000 ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಅವರೆ ಬಿತ್ತನೆಯ ಗುರಿ ಹೊಂದಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚುವರಿಯಾಗಿ ಸೋಯಾ ಅವರೆ ಕ್ಷೇತ್ರ 10 ಸಾವಿರ ಹೆಕ್ಟೇರ್‌ಗೆ ವಿಸ್ತರಣೆಯಾಗುವ ನಿರೀಕ್ಷೆ ಇದೆ. 26,500 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ನಾಟಿ ಮಾಡಲು ರೈತರು ಸಿದ್ಧತೆ ನಡೆಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿದ್ದ ರೈತರು ಕಬ್ಬು ಬಿಟ್ಟು ಸೋಯಾ ಹಾಗೂ ಇತರೆ ಬೆಳೆ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ.

ಈ ವರ್ಷ ಜಿಲ್ಲೆಯ 70,000 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 23,000 ಹೆಕ್ಟೇರ್ ಪ್ರದೇಶದಲ್ಲಿ ಉದ್ದು, 30,000 ಹೆಕ್ಟೇರ್ ಪ್ರದೇಶದಲ್ಲಿ ಹೆಸರು, 250 ಹೆಕ್ಟೇರ್ ಪ್ರದೇಶದಲ್ಲಿ ಹುರಳಿ, 300 ಹೆಕ್ಟೇರ್ ಪ್ರದೇಶದಲ್ಲಿ ಅಲಸಂದಿ ಹಾಗೂ 800 ಹೆಕ್ಟೇರ್ ಪ್ರದೇಶದಲ್ಲಿ ಅವರೆ ಬಿತ್ತನೆ ಗುರಿ ಹೊಂದಲಾಗಿದೆ. ಜಿಲ್ಲೆಯ ರೈತರಿಗೆ ಅಗತ್ಯವಿರುವಷ್ಟು ಗೊಬ್ಬರ ದಾಸ್ತಾನು ಮಾಡಲಾಗಿದೆ. ರೈತರಿಗೆ ಸಕಾಲದಲ್ಲಿ ಬೀಜ ಹಾಗೂ ಗೊಬ್ಬರ ವಿತರಿಸಲು ಸಿದ್ಧತೆ ಮಾಡಿಕೊ ಳ್ಳಲಾಗಿದೆ ಎಂದು ಜಿಯಾವುಲ್‌ ಹೇಳಿದರು.

**

ಚೆನ್ನಾಗಿ ಮಳೆ ಬಂದು ಭೂಮಿಯಲ್ಲಿ ನೀರು ಇಂಗಿದ ನಂತರವೇ ಬಿತ್ತನೆ ಕಾರ್ಯವನ್ನು ಆರಂಭಿಸುವಂತೆ ಜಿಲ್ಲೆಯ ರೈತರಿಗೆ ಸಲಹೆ ನೀಡಲಾಗಿದೆ.

–ಜಿಯಾವುಲ್ಲಾ, ಜಂಟಿ ನಿರ್ದೇಶಕ, ಕೃಷಿ ಇಲಾಖೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry