ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಮಳೆಗೆ ನಲುಗಿದ ರಸ್ತೆಗಳು!

ಜಿಲ್ಲಾಡಳಿತ ಅಭಿವೃದ್ಧಿಗೆ ನಗರದ ರಸ್ತೆಗಳ ಅವ್ಯವಸ್ಥೆಯೇ ಕನ್ನಡಿ; ಚರಂಡಿಯಲ್ಲಿ ಹೂಳು ತುಂಬಿ ರಸ್ತೆ ಮೇಲೆ ನೀರು
Last Updated 8 ಜೂನ್ 2017, 6:28 IST
ಅಕ್ಷರ ಗಾತ್ರ

ಯಾದಗಿರಿ: ಸಾಮಾನ್ಯ ಮಳೆಗೆ ನಗರದ ರಸ್ತೆಗಳಲ್ಲಿನ ತಗ್ಗು–ಗುಂಡಿಗಳು ತುಂಬಿದ್ದು, ಜನರ ಸುಗಮ ಸಂಚಾರ ಇಲ್ಲದಂತಾಗಿದೆ. ರಸ್ತೆಗಳ ಅವ್ಯವಸ್ಥೆ ಜಿಲ್ಲಾಡಳಿತದ ಅಭಿವೃದ್ಧಿಗೆ ಕನ್ನಡಿ ಹಿಡಿದಿವೆ.

ಮಂಗಳವಾರ ರಾತ್ರಿ ಸುರಿದ ಸಾಮಾನ್ಯ ಮಳೆಗೆ ಬೀದಿ ರಸ್ತೆಗಳಷ್ಟೇ ಅಲ್ಲ, ನಗರದ ಪ್ರಮುಖ ರಸ್ತೆಗಳೂ ನೀರಿನಿಂದ ಆವೃತ್ತಗೊಂಡು ಸಂಚಾರಕ್ಕೆ ಅವಕಾಶ ಇಲ್ಲದಂತಾಗಿದೆ. ಯಾದಗಿರಿ–ಹೈದರಾಬಾದ್ ಸಂಪರ್ಕ ರಾಜ್ಯ ಹೆದ್ದಾರಿ ಹೊರತುಪಡಿಸಿದರೆ ನಗರದ ಯಾವೊಂದು ರಸ್ತೆಗಳು ಜನ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂಬುದು ಪ್ರತಿ ಮಳೆಗಾಲದಲ್ಲಿ ನಗರ ನಿವಾಸಿಗಳ ಸಾಮಾನ್ಯ ಗೋಳಾಗಿದೆ.

‘ಮಳೆಗಾಲ ಆರಂಭಕ್ಕೆ ನಗರದಲ್ಲಿ ಅವ್ಯವಸ್ಥೆ ಉಂಟಾದಾಗ ಸರಿಪಡಿಸಲು ಪ್ರಯತ್ನಿಸಲಾಗುವುದು ಎಂಬುದಾಗಿ ಭರವಸೆ ನೀಡುವ ವಾರ್ಡ್‌ ಪ್ರತಿನಿಧಿಗಳು, ಅಧಿಕಾರಿಗಳು ಈಗ ಆರಂಭಗೊಂಡಿರುವ ಮಳೆಗಾಲಕ್ಕೆ ಮತ್ತದೇ ಸಬೂಬು ಹೇಳಲು ಸಿದ್ಧತೆ ನಡೆಸಿದ್ದಾರೆ’ ಎಂಬುದಾಗಿ ಕೋಲಿವಾಡ ಶಿವಪ್ಪ ಆರೋಪಿಸುತ್ತಾರೆ.

‘ಮಂಗಳವಾರ ರಾತ್ರಿ ತಾಲ್ಲೂಕಿನಲ್ಲಿ ಬರೀ 21 ಮಿ.ಮೀ. ಮಳೆಯಾಗಿದೆ. ಇಷ್ಟು ಮಳೆಗೆ ನಗರದಲ್ಲಿನ ರಸ್ತೆಗಳು ಅಧ್ವಾನ ಸ್ಥಿತಿ ತಲುಪಿವೆ. ಹಳೇ ನಗರದ ಗಾಂಧಿಚೌಕ್‌ ಬಳಿ ಸಂಪೂರ್ಣ ಬೀದಿರಸ್ತೆಗಳು ತುಂತುರು ಮಳೆಗೆ ಹೊಂಡಗಳಾಗಿ ನಿರ್ಮಾಣಗೊಳ್ಳುತ್ತವೆ. ರಸ್ತೆಯಲ್ಲಿನ ಗುಂಡಿಗಳಲ್ಲಿ ಮಕ್ಕಳು ಬಿದ್ದು ಅಸುನೀಗಿರುವ ಉದಾಹರಣೆಗಳು ಸಾಕಷ್ಟು ಇದ್ದರೂ ನಗರಸಭೆ, ಜಿಲ್ಲಾಡಳಿತ ಮಾತ್ರ ತಮಗೆ ಸಂಬಂಧ ಇಲ್ಲ ಎಂಬಂತೆ ನಿರ್ಲಿಪ್ತ ಧೋರಣೆ ಅನುಸರಿಸುತ್ತಿವೆ’ ಎಂದು ಪ್ರಗತಿಪರ ವೇದಿಕೆಯ ಕಾರ್ಯಕರ್ತರಾದ ಭೀಮರಾಯ ಲಿಂಗೇರಿ, ಎಸ್.ಎಸ್.ನಾಯಕ ದೂರುತ್ತಾರೆ.

ತುಂಬಿ ಹರಿಯುತ್ತಿರುವ ಚರಂಡಿಗಳು: ‘ನಗರದ ಗಾಂಧಿನಗರ, ವಿವೇಕಾನಂದ ಬಡಾವಣೆ, ಬಸವೇಶ್ವರ ನಗರ, ಲಕ್ಷ್ಮೀ ದೇಗುಲ ಬಡಾವಣೆ, ದಲಿತರ ಕಾಲೊನಿ, ಕನಕ ನಗರ, ಕೋಲಿವಾಡ ಬಡಾವಣೆಗಳಲ್ಲಿನ ಚರಂಡಿಗಳಲ್ಲಿರುವ ಹೂಳು ತೆಗೆಯದೇ ಇರುವುದರಿಂದ ಮಳೆ ನೀರು ಚರಂಡಿಗಳಲ್ಲಿ ಸಂಗ್ರಹಗೊಂಡು ಜನರ ಮನೆ, ಅಂಗಳಗಳಲ್ಲಿ ಹರಿದು ನಾನಾ ರೋಗರುಜಿನುಗಳಿಗೆ ದಾರಿಮಾಡಿಕೊಟ್ಟಿದೆ. ಚರಂಡಿ ನಿರ್ಮಾಣ ಮತ್ತು ಸ್ವಚ್ಛತೆ ಕುರಿತಂತೆ ಜಿಲ್ಲಾಡಳಿತ–ನಗರಸಭೆಯ ನಿರ್ಲಕ್ಷ್ಯದಿಂದ ಪ್ರತಿ ಮಳೆಗಾಲದಲ್ಲಿ ಜನರು ಹಿಂಸೆ ಅನುಭವಿಸುವುದು ತಪ್ಪಿಲ್ಲ’ ಎನ್ನುತ್ತಾರೆ ಹಿರಿಯ ನಾಗರಿಕರಾದ ಸಿ.ಎಂ.ಪಟ್ಟೇದಾರ, ಅಯ್ಯಣ್ಣ ಹುಂಡೇಕರ್.

ರಸ್ತೆ ವಿಸ್ತರಣೆಗೆ ₹16.90 ಲಕ್ಷ ವೆಚ್ಚ: ನಗರಸಭೆಯಿಂದ ಗಾಂಧಿಚೌಕ್‌–ಚಕ್ರಕಟ್ಟ ಸಂಪರ್ಕದ ನಗರ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ನಗರಸಭೆ 2015ನೇ ಸಾಲಿನಲ್ಲಿ ಒಟ್ಟು ₹ 17.90 ಲಕ್ಷ ವೆಚ್ಚ ಮಾಡಿದೆ. ಆದರೆ, ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಇಲ್ಲದ ತಗ್ಗು–ಗುಂಡಿಗಳು ಬಿದ್ದಿವೆ. ಈ ಕುರಿತು ನಗರಸಭೆ ಸದಸ್ಯರಿಂದ ಆಕ್ಷೇಪ ಕೂಡ ಕೇಳಿ ಬಂದಿತ್ತು ಎನ್ನುತ್ತಾರೆ ನಗರಸಭೆ ಸದಸ್ಯರು.

ಜಿಲ್ಲಾಡಳಿತ ನಿರ್ಲಕ್ಷ್ಯ: ನಗರ ರಸ್ತೆ ಅಭಿವೃದ್ಧಿ ಹಾಗೂ ಚರಂಡಿ ನಿರ್ಮಾಣ ಜಿಲ್ಲಾಡಳಿತವೇ ಮಾಡುತ್ತದೆ. ನಮಗೆ ಬರುವ ಅಲ್ಪ ಅನುದಾನದಲ್ಲಿ ನಗರ ಸ್ವಚ್ಛತೆ ಮಾತ್ರ ಸಾಧ್ಯವಾಗಲಿದೆ. ನಗರ ರಸ್ತೆ, ಬೃಹತ್ ಚರಂಡಿಗಳನ್ನು ಜಿಲ್ಲಾಡಳಿತ ನಿರ್ಮಿತಿ ಕೇಂದ್ರ, ಲೋಕೋಪಯೋಗಿ, ಭೂ ನಿಗಮಕ್ಕೆ ಟೆಂಡರ್‌ ನೀಡುತ್ತದೆ. ಇದುವರೆಗೂ ಸುಸಜ್ಜಿತ ರಸ್ತೆಗಳಿಲ್ಲ ಎಂಬ ಕೊರಗೂ ಇನ್ನೂ ಇದೆ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

**

ಜಿಲ್ಲೆಯಲ್ಲಿ 14 .1 ಮಿ.ಮೀ. ಮಳೆ

ಯಾದಗಿರಿ: ಮಂಗಳವಾರ ತಡರಾತ್ರಿ ಜಿಲ್ಲೆಯಲ್ಲಿ ಸರಾಸರಿ 14.1ಮಿಲಿ ಮೀಟರ್ ಮಳೆಯಾದ ವರದಿಯಾಗಿದೆ. ಶಹಾಪುರ ತಾಲ್ಲೂಕಿನಲ್ಲಿ 6.9 ಮಿ.ಮೀ., ಸುರಪುರ ತಾಲ್ಲೂಕಿನಲ್ಲಿ 8.4 ಮಿ.ಮೀ ಹಾಗೂ ಯಾದಗಿರಿ ತಾಲ್ಲೂಕಿನಲ್ಲಿ 21 ಮಿ.ಮೀ. ಮಳೆಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಸೈದಾಪುರದಲ್ಲಿ 32 ಮಿ.ಮೀ., ಸೈದಾಪುರ ಹೋಬಳಿ ವ್ಯಾಪ್ತಿಯ ಕೊಂಕಲ್‌ ಗ್ರಾಮದಲ್ಲಿ 29.7 ಮಿ.ಮೀ. ಹಾಗೂ ಬಳಿಚಕ್ರದಲ್ಲಿ 29 ಮಿ.ಮೀ. ನಷ್ಟು ಹೆಚ್ಚು ಮಳೆಯಾಗಿರುವ ವರದಿಯಾಗಿದೆ. ಶಹಾಪುರ ನಗರದಲ್ಲಿ 1.3 ಮಿ.ಮೀ., ಗೋಗಿಯಲ್ಲಿ 1.6 ಮಿ.ಮೀ ಹಾಗೂ ಸುರಪುರ ನಗರದಲ್ಲಿ 1.7 ಮಿ.ಮೀ ನಷ್ಟು ಕಡಿಮೆ ಮಳೆಯಾಗಿದೆ.

ಅನಾಹುತ ಇಲ್ಲ: ‘ಮಂಗಳವಾರ ತಡರಾತ್ರಿ ಭಾರೀ ಮಳೆಗಾಳಿಗೆ ಯಾವುದೇ ಅನಾಹುತ ಸಂಭವಿಸಿಲ್ಲ’ ಎಂದು ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ತಿಳಿಸಿದ್ದಾರೆ.

**

ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನಗರಸಭೆಗೆ ಸ್ಪಂದಿಸುತ್ತಿದ್ದಾರೆ. ಆದರೆ, ಅಧೀನ ಅಧಿಕಾರಿಗಳು ನಗರಸಭೆ ಕಡತಗಳನ್ನು ವಿಲೇವಾರಿ ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.
-ಲಲಿತಾ ಅನಪೂರ, ಅಧ್ಯಕ್ಷೆ, ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT