ಯುದ್ಧಕ್ಕೆ ಸೇನೆ ಸಿದ್ಧ: ಸೇನಾ ಮುಖ್ಯಸ್ಥ ರಾವತ್‌

7

ಯುದ್ಧಕ್ಕೆ ಸೇನೆ ಸಿದ್ಧ: ಸೇನಾ ಮುಖ್ಯಸ್ಥ ರಾವತ್‌

Published:
Updated:
ಯುದ್ಧಕ್ಕೆ ಸೇನೆ ಸಿದ್ಧ: ಸೇನಾ ಮುಖ್ಯಸ್ಥ ರಾವತ್‌

ನವದೆಹಲಿ: ನೆರೆಯ ರಾಷ್ಟ್ರಗಳಾದ ಚೀನಾ, ಪಾಕಿಸ್ತಾನ ಮತ್ತು ಆಂತರಿಕ ಭದ್ರತೆಗೆ ಸವಾಲೊಡ್ಡುತ್ತಿರುವವರ ವಿರುದ್ಧ ಯುದ್ಧ ನಡೆಸಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದು ಸೇನಾ ಮುಖ್ಯಸ್ಥ  ಜನರಲ್‌ ಬಿಪಿನ್‌ ರಾವತ್‌ ಗುರುವಾರ ಹೇಳಿದ್ದಾರೆ.

‘ಎರಡೂವರೆ ದಿಕ್ಕುಗಳಲ್ಲಿ ಯುದ್ಧ ನಡೆಸಲು ಸೇನೆ ಸಿದ್ಧವಾಗಿದೆ’ ಎಂದು ಎಎನ್‌ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

‘ಎರಡೂವರೆ ದಿಕ್ಕು’ ಎಂಬ ಉಲ್ಲೇಖ ವಿವರಿಸಿರುವ ಅವರು, ಚೀನಾ, ಪಾಕಿಸ್ತಾನಗಳನ್ನು ಯಶಸ್ವಿಯಾಗಿ ಎದುರಿಸಲು ಮತ್ತು ಜಮ್ಮು–ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಆಂತರಿಕ ಭದ್ರತೆ ಕಾಪಾಡುವ ಸಾಮರ್ಥ್ಯ ಸೇನೆಗೆ ಇದೆ ಎಂದು ತಿಳಿಸಿದ್ದಾರೆ.

‘40 ವರ್ಷಗಳ ಅವಧಿಯಲ್ಲಿ ಭಾರತ–ಚೀನಾ ಗಡಿಯಲ್ಲಿ ಒಂದು ಗುಂಡು ಕೂಡ ಹಾರಿಲ್ಲ’ ಎಂದು ಪ್ರಧಾನಿ ಹೇಳಿದ್ದನ್ನು ರಾವತ್‌ ಉಲ್ಲೇಖಿಸಿದ್ದಾರೆ.
ಪಾಕ್‌ ಕಾರಣ: ಕಾಶ್ಮೀರದ ಯುವ ಜನತೆಯ ದಾರಿ ತಪ್ಪಿಸುವುದಕ್ಕಾಗಿ ಪಾಕಿಸ್ತಾನ, ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿಗಳನ್ನು ಹರಡುತ್ತಿದೆ ಎಂದು ಆರೋಪಿಸಿರುವ ಅವರು, ಶೀಘ್ರದಲ್ಲಿ ಅಲ್ಲಿನ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೇನೆಯ ಆಧುನೀಕರಣ ಬಗ್ಗೆ ಕೇಳಿದ ಪ್ರಶ್ನೆಗೆ, ‘ಭಾರತದಲ್ಲೇ ತಯಾರಿಸಿ ಯೋಜನೆಯ ಅಡಿಯಲ್ಲಿ ಕೈಗೊಂಡ ಕ್ರಮಗಳ ಫಲಿತಾಂಶ ತಿಳಿಯಲು ಎರಡರಿಂದ ಮೂರು ವರ್ಷಗಳು ಬೇಕು’ ಎಂದು ಉತ್ತರಿಸಿದ್ದಾರೆ.

30:40:30 ಅನುಪಾತ: ಜಗತ್ತಿನಾದ್ಯಂತ ಇರುವ ಸೇನೆಗಳು  30:40:30 ಅನುಪಾತವನ್ನು ಅನುಸರಿಸುತ್ತವೆ. ಅಂದರೆ, ಶೇ 30ರಷ್ಟು ಸಲಕರಣೆಗಳು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದರೆ ಶೇ 40ರಷ್ಟು ಸಲಕರಣೆಗಳು ಸದಾ ಆಧುನೀಕರಣಗೊಳ್ಳುತ್ತಿರುತ್ತವೆ. ಶೇ 30 ರಷ್ಟು ಸಲಕರಣೆಗಳು ಹಳತಾಗಿರುತ್ತವೆ.  ಭಾರತವೂ ಇದೇ ಮಾದರಿಯನ್ನು ಅನುಸರಿಸುತ್ತಿದೆ ಎಂದು ಜ. ರಾವತ್‌ ತಿಳಿಸಿದ್ದಾರೆ.

‘ಡಯರ್‌ಗೆ ಹೋಲಿಕೆಯಿಂದ  ಬೇಸರವಾಗಿಲ್ಲ’

1919ರಲ್ಲಿ ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡಕ್ಕೆ ಕಾರಣವಾದ ಕುಖ್ಯಾತ ಬ್ರಿಟಿಷ್‌ ಸೇನಾಧಿಕಾರಿ ಜನರಲ್‌ ರಿಜಿನಾಲ್ಡ್‌ ಡಯರ್‌ ಅವರಿಗೆ ತಮ್ಮನ್ನು ಹೋಲಿಕೆ ಮಾಡಿದ್ದರಿಂದ ಬೇಸರವಾಗಿಲ್ಲ ಎಂದು ಬಿಪಿನ್‌ ರಾವತ್‌ ಹೇಳಿದ್ದಾರೆ.

‘ನಾನೊಬ್ಬ ಸೇನಾಧಿಕಾರಿ. ಯಾವುದು ಕೂಡ ನನ್ನ ಮೇಲೆ ಪರಿಣಾಮ ಬೀರದು. ಅಂತಹ ಪ್ರತಿಕ್ರಿಯೆ ಎದುರಿಸಲು ಸಿದ್ಧರಾಗಿರಬೇಕು.  ನನ್ನ ಹೇಳಿಕೆಗಳನ್ನು ಜನರು ತಪ್ಪಾಗಿ ವ್ಯಾಖ್ಯಾನಿಸಬಹುದು’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry