ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಸಿಬ್ಬಂದಿ ನೇಮಕ: ಜಂಟಿ ನಿರ್ದೇಶಕರ ಅಕ್ರಮ

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಹಾಸ್ಟೆಲ್ ನಿರ್ವಹಣೆ ಉಪಸಮಿತಿ ಸದಸ್ಯ ಮಹೇಶ್ ಆರೋಪ
Last Updated 8 ಜೂನ್ 2017, 7:09 IST
ಅಕ್ಷರ ಗಾತ್ರ

ಕೋಲಾರ: ‘ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ (ಡಿಎಸ್‌ಡಬ್ಲ್ಯೂ) ಜಯಣ್ಣ ಅವರು ಹೈಕೋರ್ಟ್ ಆದೇಶ ಉಲ್ಲಂಘಿಸಿ ಬಂಗಾರಪೇಟೆ ತಾಲ್ಲೂಕು ಒಂದರಲ್ಲೇ 10 ಮಂದಿ ಅಡುಗೆ ಸಿಬ್ಬಂದಿಯನ್ನು ಎಂಆರ್‍ಇ (ತಿಂಗಳ ಪಾವತಿ ಕಾರ್ಮಿಕರು) ನೌಕರರೆಂದು ಪರಿಗಣಿಸಿ ಹೆಚ್ಚುವರಿ ಭತ್ಯೆ ನೀಡಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಹಾಸ್ಟೆಲ್ ನಿರ್ವಹಣೆ ಉಪಸಮಿತಿ ಸದಸ್ಯ ಬಿ.ವಿ.ಮಹೇಶ್ ಆರೋಪಿಸಿದರು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಗರದಲ್ಲಿ ಬುಧವಾರ ನಡೆದ ಉಪಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಜಯಣ್ಣ ಅವರು ಅಡುಗೆ ಸಿಬ್ಬಂದಿಗೆ ತಿಂಗಳಿಗೆ ₹ 3,050ಕ್ಕೂ ಹೆಚ್ಚು ಭತ್ಯೆ ನೀಡಿದ್ದಾರೆ’ ಎಂದು ಆರೋಪಿಸಿ ದಾಖಲೆಪತ್ರ ಬಹಿರಂಗಪಡಿಸಿದರು.

‘ಜಂಟಿ ನಿರ್ದೇಶಕರೇ ಹೇಳುವಂತೆ 15 ವರ್ಷಕ್ಕಿಂತ ಹೆಚ್ಚು ಕಾಲ ಕೆಲಸ ಮಾಡಿದ ದಿನಗೂಲಿ ನೌಕರರನ್ನು  ಎಂಆರ್‍ಇ ನೌಕರರೆಂದು ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಆ ನೌಕರರಿಗೆ ತಿಂಗಳಿಗೆ ₹ 9,060 ವೇತನದ ಜತೆಗೆ ಕಾರ್ಮಿಕ ಕಾಯ್ದೆ ಪ್ರಕಾರ ₹ 3,050 ಸೇರಿ ₹ 14,050 ನೀಡಬಹುದು’ ಎಂದು ತಿಳಿಸಿದರು.

‘ಬಂಗಾರಪೇಟೆ ತಾಲ್ಲೂಕಿನಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಸವರ್ಣಿಯರಿಂದ ದೌರ್ಜನ್ಯಕ್ಕೆ ಒಳಗಾದ ಕುಟುಂಬದ ಸದಸ್ಯರೊಬ್ಬರಿಗೆ ಅನು ಕಂಪದ ಆಧಾರದಲ್ಲಿ ಕೆಲಸ ನೀಡಲಾಗಿತ್ತು. ಪುನಃ ಅದೇ ಕುಟುಂಬದ ಧನ ಲಕ್ಷ್ಮಿ ಎಂಬುವರನ್ನು ಎಂಆರ್‍ಇ ನೌಕರ ರೆಂದು ಪರಿಗಣಿಸಿ ನೇಮಕಾತಿ ಆದೇಶ ನೀಡಲಾಗಿದೆ’ ಎಂದು ದೂರಿದರು.

ಕಾನೂನಿನಲ್ಲಿ ಅವಕಾಶವಿಲ್ಲ: ‘ಒಂದೇ ಕುಟುಂಬದ ಇಬ್ಬರಿಗೆ ಅನುಕಂಪದ ಆಧಾರದಲ್ಲಿ ಕೆಲಸ ನೀಡಲು ಕಾನೂನಿ ನಲ್ಲಿ ಅವಕಾಶವಿಲ್ಲ. ಇದಕ್ಕೂ ಮುನ್ನ ಧನಲಕ್ಷ್ಮಿಯ ಅರ್ಜಿಯನ್ನು ಜಿಲ್ಲಾಧಿ ಕಾರಿಯೇ ತಿರಸ್ಕರಿಸಿದ್ದರು. ಆದರೂ ಆಕೆ ಅರ್ಜಿ ಸಲ್ಲಿಸಿದ ಕಾರಣಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿಯ ಗಮನಕ್ಕೂ ತಾರದೆ ನೇಮಕಾತಿ ಆದೇಶ ನೀಡಲು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಿಗೆ ಅಧಿಕಾರ ಕೊಟ್ಟ ವರು ಯಾರು’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಯಣ್ಣ, ‘ಕಾರ್ಮಿಕ ಕಾಯಿದೆಯಡಿ ಧನಲಕ್ಷ್ಮಿ ಅವ ರಿಗೆ ನೇಮಕಾತಿ ಆದೇಶ ನೀಡಲಾಗಿದೆ’ ಎಂದು ತಮ್ಮ ಕ್ರಮ ಸಮರ್ಥಿಸಿಕೊಳ್ಳಲು ಯತ್ನಿಸಿದರಾದರೂ ಸಾಧ್ಯವಾಗದೆ ತಪ್ಪೊಪ್ಪಿಕೊಂಡರು. ಆಗ ಸಮಿತಿ ಅಧ್ಯಕ್ಷ ವೆಂಕಟೇಶ್, ‘ಪ್ರಕರಣ ಸಂಬಂಧ ಮರು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತದೆ’ ಎಂದು ಹೇಳಿದರು.

ಕಾಳಜಿ ಇಲ್ಲ: ‘ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದಲಿತರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ನಾನೂ ದಲಿತನೆ. ಅಧಿಕಾರಿ ಗಳು ಜಿಲ್ಲಾ ಪಂಚಾಯಿತಿ ಸದಸ್ಯನಾದ ನನ್ನನ್ನೇ ಮನೆಯ ಪಕ್ಕದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ ಉದ್ಘಾಟನೆಗೆ ಆಹ್ವಾನಿಸಿಲ್ಲ. ಇನ್ನು ವಿದ್ಯಾರ್ಥಿಗಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ’ ಎಂದು ಜಯಣ್ಣ ಮತ್ತು ಬಂಗಾರಪೇಟೆ ಸಹಾ ಯಕ ನಿರ್ದೇಶಕಿ ಶಶಿಕಲಾ ಅವರನ್ನು ಮಹೇಶ್‌ ತರಾಟೆಗೆ ತೆಗೆದುಕೊಂಡರು.

‘ಹಾಸ್ಟೆಲ್‌ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಬಿ.ವಿ. ಮಹೇಶ್, ಸಾಮಾಜಿಕ ಸ್ಥಾಯಿ ಸಮಿತಿ ಸದಸ್ಯರು ಎಂದು ಹಾಕಲಾಗಿದೆ. ತಾಲ್ಲೂಕು ಪಂಚಾಯಿತಿ ಸದಸ್ಯರ ಹೆಸರನ್ನು ಹಾಕಲಾಗಿದೆ. ಆದರೆ, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರ ಹೆಸರನ್ನು ಕೈಬಿಡಲಾಗಿದೆ. ಅಧಿಕಾರಿಗಳಿಗೆ ಶಿಷ್ಟಾ ಚಾರ ಗೊತ್ತಿಲ್ಲವೇ’ ಎಂದು ಕಿಡಿಕಾರಿದರು.

‘ಜೂನ್‌ 17ರಂದು ಜಿಲ್ಲಾ ಪಂಚಾಯಿತಿ ಸಭೆ ಇದೆ. ಅಷ್ಟರೊಳಗೆ ಹಾಸ್ಟೆಲ್‌ ಕಟ್ಟಡದ ಶಿಲಾನ್ಯಾಸದ ಕಲ್ಲು ಬದಲಿಸಬೇಕು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ನನ್ನ ಸ್ಥಾನವನ್ನು ಸರಿಯಾಗಿ ನಮೂದಿಸಬೇಕು. ಇಲ್ಲದಿ ದ್ದರೆ ನಾನೇ ಶಿಲಾನ್ಯಾಸದ ಕಲ್ಲು ತಂದು ಹಾಕಿ ಪೂಜೆ ಮಾಡುತ್ತೇನೆ’ ಎಂದರು.

ಅಧ್ಯಕ್ಷ ವೆಂಕಟೇಶ್ ಮಾತನಾಡಿ, ‘ಇಲಾಖೆಯ ಯಾವುದೇ ಕಾರ್ಯಕ್ರಮ ನಡೆದಾಗ ಸ್ಥಳೀಯ ಜನಪ್ರತಿನಿಧಿಗಳಿಗೆ ಆಹ್ವಾನ ನೀಡುವುದನ್ನು ಮೊದಲು ಕಲಿತುಕೊಳ್ಳಿ. ಮುಂದೆ ಇಂತಹ ಅಚಾತುರ್ಯ ನಡೆಯಬಾರದು’ ಎಂದು ಎಚ್ಚರಿಕೆ ನೀಡಿದರು.

ತಪ್ಪೇನಿದೆ: ‘ಬಂಗಾರಪೇಟೆ ಯಲ್ಲಿರುವ ಇಲಾಖೆ ವ್ಯಾಪ್ತಿಯ ಬಾಲಕಿಯರ ಹಾಸ್ಟೆಲ್‌ಗಳಲ್ಲಿ ಮೂಲಸೌಕರ್ಯಗಳಿಲ್ಲ. ಸಿ.ಸಿ ಟಿವಿ ಕ್ಯಾಮೆರಾಗಳಿಲ್ಲ. ಆದರೆ, ಸಹಾಯಕ ನಿರ್ದೇಶಕಿ ಶಶಿಕಲಾ ತಮ್ಮ ಕಚೇರಿಗೆ ಸಿ.ಸಿ ಕ್ಯಾಮೆರಾ ಹಾಕಿಸಿಕೊಂಡಿ ದ್ದಾರೆ. ಇದರ ಔಚಿತ್ಯವೇನಿತ್ತು’ ಎಂದು  ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಶಿಕಲಾ, ‘ಕಚೇರಿಗೆ ಸಿ.ಸಿ ಟಿವಿ ಕ್ಯಾಮೆರಾ ಅಗತ್ಯ ವಿತ್ತು, ಹಾಕಿಸಿಕೊಂಡಿದ್ದೇವೆ. ಇದರಲ್ಲಿ ತಪ್ಪೇನಿದೆ. ಹಾಸ್ಟೆಲ್‌ಗಳಿಗೆ ಅಗತ್ಯವಿರುವ ಸಿ.ಸಿ ಕ್ಯಾಮೆರಾಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶ್‌ ರಾಮಚಂದ್ರ ಮಾತನಾಡಿ, ‘ನಾನು ಬಾಲಕಿಯರ ಹಾಸ್ಟೆಲ್‌ಗಳಿಗೆ ಭೇಟಿ ನೀಡಿದಾಗ ಸಿಬ್ಬಂದಿಯೇ ಇರಲಿಲ್ಲ. ಆದರೆ, ಹಾಜರಾತಿ ಪುಸ್ತಕದಲ್ಲಿ ಸಿಬ್ಬಂದಿ ಸಹಿ ಮಾಡಿದ್ದರು. ಹಾಸ್ಟೆಲ್‌ನಲ್ಲಿ ಏನಾದರೂ ಸಮಸ್ಯೆಯಾದರೆ ಯಾರು ಹೊಣೆ. ಇಂತಹ ಬೇಜವಾಬ್ದಾರಿ ಸಿಬ್ಬಂದಿ ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

**

ಹೈಕೋರ್ಟ್ ಆದೇಶ ಉಲ್ಲಂಘನೆ
ಅಡುಗೆ ಸಿಬ್ಬಂದಿಯನ್ನು ಎಂಆರ್‍ಇ ನೌಕರರೆಂದು ಪರಿಗಣಿಸುವ ಸಂಬಂಧ 2014ರಲ್ಲಿ ಆದೇಶ ನೀಡಿದ್ದ ಹೈಕೋರ್ಟ್ ಯಾರನ್ನು ಪರಿಗಣಿಸಬೇಕೆಂದು ಪಟ್ಟಿ ನೀಡಿತ್ತು. ಜಯಣ್ಣ ಅವರು ಅದನ್ನು ಉಲ್ಲಂಘಿಸಿ ಬಂಗಾರಪೇಟೆಯಲ್ಲಿ 10 ಮಂದಿಗೆ ನೇಮಕಾತಿ ಆದೇಶ ನೀಡಿದ್ದಾರೆ’ ಎಂದು ಬಿ.ವಿ.ಮಹೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT