ರಂಜಕ, ಅಲ್ಯುಮಿನಿಯಂ ರಾಸಾಯನಿಕ ಪತ್ತೆ

7
ಶಾದನಹಳ್ಳಿ: ಬಾಲಕನ ಬಲಿ ಪಡೆದಿದ್ದು ಕೈಗಾರಿಕಾ ತ್ಯಾಜ್ಯದ ಬೆಂಕಿ; ವೈಜ್ಞಾನಿಕ ವಿಲೇವಾರಿಗೆ ಸಿದ್ಧತೆ

ರಂಜಕ, ಅಲ್ಯುಮಿನಿಯಂ ರಾಸಾಯನಿಕ ಪತ್ತೆ

Published:
Updated:
ರಂಜಕ, ಅಲ್ಯುಮಿನಿಯಂ ರಾಸಾಯನಿಕ ಪತ್ತೆ

ಮೈಸೂರು: ತಾಲ್ಲೂಕಿನ ಶಾದನಹಳ್ಳಿಯ ಜಮೀನಿನಲ್ಲಿ ಹರ್ಷಿಲ್‌ ಎಂಬ ಬಾಲಕ ನನ್ನು ಬಲಿಪಡೆದ ಬೆಂಕಿಗೆ ಕೈಗಾರಿಕೆಗಳ  ಅಪಾಯಕಾರಿ ತ್ಯಾಜ್ಯದ ಅಸುರಕ್ಷಿತ ವಿಲೇವಾರಿಯೇ ಕಾರಣ ಎಂಬುದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನೇಮಿಸಿದ ಬಿ.ಎಸ್‌.ಜೈಪ್ರಕಾಶ್ ನೇತೃತ್ವದ ಹತ್ತು ಸದಸ್ಯರ ಸಮಿತಿಯ ತನಿಖೆಯಿಂದ ಬೆಳಕಿಗೆ ಬಂದಿದೆ.

ಸ್ಥಳದಲ್ಲಿ ಪತ್ತೆಯಾದ ಬೂದಿಯಂಥ ತ್ಯಾಜ್ಯದಲ್ಲಿ ಅಲ್ಯುಮಿನಿಯಂ ಹಾಗೂ ರಂಜಕ (ಪಾಸ್ಪರೆಸ್‌) ರಾಸಾಯನಿಕಗಳು ಹೆಚ್ಚಾಗಿ ಕಂಡುಬಂದಿವೆ. ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಸಿದ್ಧತೆಗಳು ನಡೆಯುತ್ತಿದ್ದು, ಮಂಡಳಿಯ ಸಭೆಯಲ್ಲಿ ನಿರ್ಧಾರವಾಗುವುದು ಬಾಕಿ ಇದೆ.

ಶಾದನಹಳ್ಳಿಯ ಬೋರೇಗೌಡ ಎಂಬುವರ 4 ಎಕರೆ 15 ಗುಂಟೆ ಜಮೀನಿನ ಬೀಳು ಬಿದ್ದ ಭಾಗದಲ್ಲಿ ಕಾಣಿಸಿಕೊಂಡ ಬೆಂಕಿಗೆ ಏ. 16ರಂದು ಹರ್ಷಿಲ್‌ ಬಿದ್ದು ಮೃತಪಟ್ಟಿದ್ದ. ಭೂಮಿ ಯಿಂದ ಬೆಂಕಿ ಹೊರಹೊಮ್ಮಿದ್ದು ವಿಸ್ಮಯಕ್ಕೆ ಎಡೆಮಾಡಿಕೊಟ್ಟಿತ್ತು. ಇದರ ಮೂಲ ಪತ್ತೆಹಚ್ಚಲು ಕೆಎಸ್‌ಪಿಸಿಬಿ ಸಮಿತಿ ರಚಿಸಿತ್ತು.

ಬಾಲಕ ಬಲಿಯಾದ ಸ್ಥಳಕ್ಕೆ ಎರಡು ಬಾರಿ ಭೇಟಿ ನೀಡಿದ ಸಮಿತಿಯು ಮರಳು, ಮಣ್ಣು ಮತ್ತು ಬೂದಿಯ ಮಾದರಿ ಸಂಗ್ರಹಿಸಿತ್ತು. ಅವುಗಳನ್ನು ಪ್ರಯೋಗಾಲಯಕ್ಕೆ ರವಾನಿಸಿತ್ತು.

‘ಜಮೀನಿನ 40X30 ಅಡಿ ವಿಸ್ತೀರ್ಣದ ಸ್ಥಳದಲ್ಲಿ ಮಾತ್ರ ಈ ತ್ಯಾಜ್ಯ ವಿದೆ. ಭೂಮಿಯ ಎರಡೂವರೆಯಿಂದ ನಾಲ್ಕು ಅಡಿ ಆಳದವರೆಗೆ ಇದು ಕಂಡು ಬಂದಿದೆ. ಅನೇಕ ಕಾರ್ಖಾನೆಗಳು ಹಲವು ವರ್ಷಗಳಿಂದ ಇಲ್ಲಿ ಅಪಾಯ ಕಾರಿ ತ್ಯಾಜ್ಯ ವಿಲೇವಾರಿ ಮಾಡಿದ್ದು ಮೇಲ್ನೋಟಕ್ಕೆ ಗೊತ್ತಾಗಿದೆ. ಯಾವ ಕಾರ್ಖಾನೆಗಳು ಹೀಗೆ ಬಿಸಾಡಿವೆ ಎಂಬುದು ಪತ್ತೆಯಾಗಬೇಕಿದೆ’ ಎಂದು ಕೆಎಸ್‌ಪಿಸಿಬಿ ಮೂಲಗಳು ಮಾಹಿತಿ ನೀಡಿವೆ.

ಸಹಜ ತಾಪಮಾನ: ಈಗ ಸ್ಥಳದ ತಾಪಮಾನ 140 ಡಿಗ್ರಿಯಿಂದ 34ಕ್ಕೆ ಇಳಿದಿದೆ. ಸುತ್ತಲಿನ ಭೂಮಿಯಲ್ಲಿ 32 ಡಿಗ್ರಿ ಉಷ್ಣಾಂಶವಿದೆ. ಪರಿಸರ ಅಧಿಕಾರಿಗಳು ನಿತ್ಯವೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಮೂರು ಭಾಗದಲ್ಲಿ ಮಾಪನ ಇಟ್ಟು ತಾಪಮಾನ ದಾಖಲು ಮಾಡಿಕೊಳ್ಳುತ್ತಿದ್ದಾರೆ.

‘ಮೇ 10ರಂದು 72, 62 ಹಾಗೂ 54 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಕಂಡು ಬಂದಿತ್ತು. ಮೇ ಅಂತ್ಯದ ವೇಳೆಗೆ ಇದು ಇಳಿಮುಖವಾಗಿತ್ತು. ಜೂನ್‌ 6ರಂದು 34 ಡಿಗ್ರಿ ದಾಖಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಹಸಿರು ಹೊದಿಕೆ: ಬೆಂಕಿ ಕಾಣಿಸಿಕೊಂಡ ಸ್ಥಳದ ಸುತ್ತ ಜಾಲಿ, ಬೇವು ಸೇರಿದಂತೆ ಕುರುಚಲು ಗಿಡಗಳು ಭಸ್ಮವಾಗಿದ್ದವು. ಹುದುಲು ಮರಳಿನಂತೆ ಕಾಣುತ್ತಿದ್ದ ಭೂಮಿ ಮೇಲೆ ಕಾಲಿಟ್ಟರೆ ಹೂತು ಹೋಗುತ್ತಿದ್ದವು. ಮಣ್ಣು ಕೆದರಿದರೆ ಬೆಂಕಿ ಹೊರಹೊಮ್ಮಿ, ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ.

ಸತತವಾಗಿ ಸುರಿದ ಮಳೆಯಿಂದಾಗಿ ಸುಟ್ಟು ಕರಕಲಾಗಿದ್ದ ಜಮೀನು ಹಸಿರಿ ನಿಂದ ಕಂಗೊಳಿಸುತ್ತಿದೆ. ಕುರುಚಲು ಗಿಡಗಳು ಚಿಗುರಿವೆ. ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಪಕ್ಕದ ವರುಣಾ ನಾಲೆಯ ಏರಿಯ ಮೇಲೆ ಜನಸಂಚಾರ ಸಹಜವಾಗಿದೆ.

**

ಶ್ವಾಸಕೋಶದಲ್ಲಿ ರಕ್ತಸ್ರಾವ

ಮೈಸೂರು:
ಹರ್ಷಿಲ್‌ ಶ್ವಾಸಕೋಶದಲ್ಲಿ ರಕ್ತಸ್ರಾವವಾಗಿದ್ದು ಸಾವಿಗೆ ಕಾರಣ ಎಂಬುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿದೆ. ಶೇ 70ರಷ್ಟು ಸುಟ್ಟು ಗಾಯಗೊಂಡಿದ್ದ ಬಾಲಕ ಕೆ.ಆರ್‌.ಆಸ್ಪತ್ರೆಯಲ್ಲಿ ಎರಡು ದಿನ ಚಿಕಿತ್ಸೆ ಪಡೆದ ಬಳಿಕ ಮೃತಪಟ್ಟಿದ್ದ. ರಕ್ತಸ್ರಾವವಾಗಿದ್ದು ಯಾವ ಕಾರಣಕ್ಕೆ ಎಂಬುದು ಇನ್ನೂ ಖಚಿತವಾಗಿಲ್ಲ. ಹೀಗಾಗಿ, ಮೃತದೇಹದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎನ್ನುತ್ತಾರೆ ಪೊಲೀಸರು.

**

ತಜ್ಞರ ಸಮಿತಿ ವರದಿ ಸಲ್ಲಿಸಿದೆ. ಆದರೆ, ಬಾಲಕನ ಸಾವಿನ ಕಾರಣವೆ ಗೊತ್ತಾಗಿಲ್ಲ. ಮರಣೋತ್ತರ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಕೈಸೇರಿದ ಬಳಿಕ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯ.

-ಲಕ್ಷ್ಮಣ್‌

ಅಧ್ಯಕ್ಷ, ರಾಜ್ಯ  ಮಾಲಿನ್ಯ ನಿಯಂತ್ರಣ ಮಂಡಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry