‘ಕ್ರ್ಯಾಕ್‌’ ಟ್ರ್ಯಾಕ್‌ನಲ್ಲಿ ವಿನೋದ್‌ ಪ್ರಭಾಕರ್‌!

7

‘ಕ್ರ್ಯಾಕ್‌’ ಟ್ರ್ಯಾಕ್‌ನಲ್ಲಿ ವಿನೋದ್‌ ಪ್ರಭಾಕರ್‌!

Published:
Updated:
‘ಕ್ರ್ಯಾಕ್‌’ ಟ್ರ್ಯಾಕ್‌ನಲ್ಲಿ ವಿನೋದ್‌ ಪ್ರಭಾಕರ್‌!

‘ನಾನು ಎಂದಿಗೂ ಅಪ್ಪನ ನೆರಳಿನಲ್ಲಿ ಬಿಂಬಿಸಿಕೊಳ್ಳಲು ಇಚ್ಛಿಸುವುದಿಲ್ಲ. ನನ್ನ ಸಿನಿಮಾಗಳಲ್ಲಿ ಅಪ್ಪನ ನೆರಳೂ ಇಲ್ಲ. ‘ಕ್ರ್ಯಾಕ್’ ನನ್ನ ನೈಜ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದಿದೆ. ಕಥೆ ಕೇಳಿದ ತಕ್ಷಣ ನನ್ನಿಂದ ಈ ಸಿನಿಮಾ ಸಾಧ್ಯವೇ ಎನಿಸಿತ್ತು. ನಿರ್ದೇಶಕರು ಇದನ್ನು ಸಾಧ್ಯವಾಗಿದ್ದಾರೆ’ ಎಂದರು ನಟ ವಿನೋದ್‌ ಪ್ರಭಾಕರ್.

“ನಿರ್ದೇಶಕರು ಕಥೆ ಹೇಳಿದ ತಕ್ಷಣ ಒಪ್ಪಿಕೊಂಡೆ. ಈ ಸಿನಿಮಾದಲ್ಲಿ ಉದ್ದನೆಯ ಡೈಲಾಗ್‌ಗಳಿವೆ. ‘ಟೈಸನ್‌’ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಮತ್ತೊಮ್ಮೆ ಇಂಥ ಯಶಸ್ಸಿಗಾಗಿ ಕಾಯುತ್ತಿದ್ದೆ. ಇದು ‘ಕ್ರ್ಯಾಕ್’ನಲ್ಲಿ ಸಿಗಲಿದೆ” ಎಂದ ಅವರ ಮಾತಿನಲ್ಲಿ ಗೆಲ್ಲುವ ವಿಶ್ವಾಸವಿತ್ತು. ವಿನೋದ್‌ ಪ್ರಭಾಕರ್‌ ಅವರೊಂದಿಗೆ ‘ಟೈಸನ್‌’ ಸಿನಿಮಾ ಬಳಿಕ ಎರಡನೇ ಚಿತ್ರ ಮಾಡುತ್ತಿರುವ ಖುಷಿಯಲ್ಲಿದ್ದರು ನಿರ್ದೇಶಕ ಕೆ. ರಾಮ್‌ ನಾರಾಯಣ್‌.

‘ಪ್ರತಿಯೊಬ್ಬನಲ್ಲೂ ಒಬ್ಬ ಮೆಂಟಲ್‌ ವ್ಯಕ್ತಿ ಇರುತ್ತಾನೆ. ಸಣ್ಣ ವಿಷಯಕ್ಕೂ ಕ್ರ್ಯಾಕ್‌ನಂತೆ ವರ್ತಿಸುತ್ತಾನೆ’ ಎಂದು ಕಥೆಯ ಎಳೆಯನ್ನು ವಿವರಿಸುವ ಭರದಲ್ಲಿ ಅವರು ‘ಈ ಚಿತ್ರದಲ್ಲೂ ವಿನೋದ್‌ ಪ್ರಭಾಕರ್‌ ಕ್ರ್ಯಾಕ್‌ ನಂತೆಯೇ ಇದ್ದಾರೆ’ ಎಂದುಬಿಟ್ಟರು. ಈ ಮಾತುಕೇಳಿ ತಕ್ಷಣ ಚಿತ್ರತಂಡ ಗೊಳ್ಳೆಂದು ನಕ್ಕಿತು. ತಕ್ಷಣವೇ ಎಚ್ಚೆತ್ತು ಕೊಂಡ ಅವರು, ‘ಚಿತ್ರದಲ್ಲಿ ವಿನೋದ್‌ ನೈಜವಾಗಿ ಅಭಿನಯಿಸಿದ್ದಾರೆ’ ಎಂದು ತಮ್ಮ ಮಾತನ್ನು ತಿದ್ದಿಕೊಂಡರು.

‘‘ಗಿಂಬಲ್‌’ ಕ್ಯಾಮೆರಾ ಬಳಸಿ ಸಿನಿಮಾ ಚಿತ್ರೀಕರಿಸಲಾಗಿದೆ. ಚಿತ್ರೀಕರಣ ಪೂರ್ಣಗೊಳಿಸಿದ ಬಳಿಕ ನಿಮ್ಮ ಬಳಿಗೆ ಬಂದಿದ್ದೇವೆ. ವಿನೋದ್‌ ಅವರದು ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯ ಪಾತ್ರ. ಅವರು ಅಕ್ಷರಶಃ ಕ್ರ್ಯಾಕ್‌ನಂತೆ ವರ್ತಿಸುತ್ತಾರೆ. ಆದರೆ ಅವರ ಗುರಿ ಸಕಾರಾತ್ಮಕವಾಗಿರುತ್ತದೆ’’ ಎಂದು ಕಥೆಯ ಎಳೆಯನ್ನು ಇನ್ನಷ್ಟು ಬಿಡಿಸಿಟ್ಟರು.

‘ಈ ಚಿತ್ರಕ್ಕೆ ನಾಯಕಿಯೇ ಜೀವಾಳ. ನಟಿ ಆಕಾಂಕ್ಷಾ ಪಾತ್ರಕ್ಕೆ ಜೀವ ತುಂಬಿದ್ದಾರೆ’ ಎಂದು ಪ್ರಮಾಣಪತ್ರವನ್ನೂ ನೀಡಿದರು. ‘ಚಿತ್ರದಲ್ಲಿ ನನಗೆ ಒಳ್ಳೆಯ ಪಾತ್ರ ಸಿಕ್ಕಿದೆ’ ಎಂದು ಖುಷಿ ಹಂಚಿಕೊಂಡರು ಆಕಾಂಕ್ಷಾ.

ಚಿತ್ರಕ್ಕೆ ಬಂಡವಾಳ ಹಾಕಿರುವ ವೈ. ವಿಜಯಕುಮಾರ್‌ ಮತ್ತು ಶಂಕರ್‌ ಇಳಕಲ್‌, ‘ಒಳ್ಳೆಯ ಸಿನಿಮಾ ನಿರ್ಮಿಸಬೇಕು ಎಂಬ ಗುರಿ ಇತ್ತು. ನಮ್ಮ ಅಭಿಲಾಷೆ ಈ ಚಿತ್ರದ ಮೂಲಕ ಈಡೇರಿದೆ’ ಎಂದಷ್ಟೇ ಹೇಳಿ ಮಾತು ಮುಗಿಸಿದರು.

ಇದೇ ಸಂದರ್ಭದಲ್ಲಿ ಚಿತ್ರದ ಟೀಸರ್‌ ಅನ್ನೂ ಬಿಡುಗಡೆ ಮಾಡಲಾಯಿತು. ನಾಲ್ಕು ಹಾಡು, ಐದು ಫೈಟ್‌ಗಳು ಚಿತ್ರದಲ್ಲಿವೆ. ಚಿನ್ನ ಮತ್ತು ಗಾಯಕಿ ಶಮಿತಾ ಮಲ್ನಾಡ್‌ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ತಿರುವಂತನಪುರದಲ್ಲಿ ಒಂದು ಹಾಡಿನ ಚಿತ್ರೀಕರಣ ನಡೆದಿದೆ. ಉಳಿದಂತೆ ಸಂಪೂರ್ಣ ಚಿತ್ರೀಕರಣ ಉದ್ಯಾನ ನಗರಿಯಲ್ಲಿಯೇ ನಡೆದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry