ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊರ್ಕಿ–ಪೋಲಿಗಳ ಮಧ್ಯೆ ಪ್ರೇಮ ಪಾರಿಜಾತ

Last Updated 8 ಜೂನ್ 2017, 19:30 IST
ಅಕ್ಷರ ಗಾತ್ರ

‘ನಾನೇ ನೆಕ್ಸ್ಟ್‌ ಸಿ.ಎಂ’, ‘ಅಜ್ಜನ ತಿಥಿ, ಮೊಮ್ಮಗನ ಪ್ರಸ್ಥ’(ಕಥೆ–ಚಿತ್ರಕಥೆ), ಇನ್ನೂ ಹೆಸರಿಡದ ಎರಡು ಚಿತ್ರ ಹೀಗೆ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ ನಿರ್ದೇಶಕ ಮುಸ್ಸಂಜೆ ಮಹೇಶ್‌.

‘ಕಾಗದ ಮತ್ತು ಲೇಖನಿ ಎರಡೂ ನನ್ನದಾಗಿರುವವರೆಗೂ ಬರೆಯುತ್ತಲೇ ಇರುತ್ತೇನೆ’ ಎನ್ನುವ ಮಹೇಶ್‌ ನಿರ್ದೇಶನದ ‘ಜಿಂದಾ’ ಸಿನಿಮಾ ಈ ವಾರ (ಜೂನ್‌ 9ರಂದು) ತೆರೆಕಾಣುತ್ತಿದೆ. ರೌಡಿಗ್ಯಾಂಗ್‌ ಕಥೆಯೇ ಆದರೂ ಪೂರ್ತಿ ಹೊಸ ರೀತಿಯ ಸಿನಿಮಾ ಇದು ಎನ್ನುವ ಮಹೇಶ್‌ ಜತೆ ‘ಚಂದನವನ’ ನಡೆಸಿದ ಮಾತುಕತೆಯ ಅಕ್ಷರರೂಪ ಇಲ್ಲಿದೆ.


ಮುಸ್ಸಂಜೆ ಮಹೇಶ್‌

* ಒಟ್ಟೊಟ್ಟಿಗೆ ಎಷ್ಟೊಂದು ಸಿನಿಮಾಗಳನ್ನು ಮಾಡುತ್ತಿದ್ದೀರಲ್ಲ...
ಯಾಕೆ ಇಷ್ಟು ಸಿನಿಮಾಗಳನ್ನು ಸತತವಾಗಿ ಮಾಡಲು ಸಾಧ್ಯವಾಗುತ್ತಿದೆ ಎಂದು ಕೇಳಿದರೆ ನನಗೂ ಗೊತ್ತಿಲ್ಲ. ನಿರ್ಮಾಪಕ ದತ್ತಾತ್ರೇಯ ಬಚ್ಚೇಗೌಡ ನಾಲ್ಕು ವರ್ಷಗಳ ಹಿಂದೆ ‘ಪೊರ್ಕಿ’ ಸಿನಿಮಾ ನಿರ್ಮಿಸಿದ್ದರು. ‘ಜಿಂದಾ’ ಕಥೆ ಕೇಳಿದ ತಕ್ಷಣ ಹಣ ಹೂಡಲು ಮರುಮಾತಿಲ್ಲದೇ ಒಪ್ಪಿಕೊಂಡರು. ಸಿನಿಮಾ ನೋಡಿದ ಮೇಲೆ ಅವರಾಗಿಯೇ ನನ್ನ ಜತೆ ಮತ್ತೆರಡು ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ.

* ಹೀಗೆ ಒಮ್ಮೆಲೇ ಹಲವು ಸಿನಿಮಾಗಳ ಕೆಲಸದ ಮೇಲೆ ಗಮನಹರಿಸುವುದು ಕಷ್ಟ ಎನಿಸುವುದಿಲ್ಲವೇ?
ನಿಜ. ಅದೊಂದು ಸವಾಲು. ಆದರೆ ನಾವು ಹೊಟ್ಟೆ ಹಸಿವಿನಿಂದ ಇಲ್ಲಿಗೆ ಬಂದವರು. ಹಸಿವಿನ ಅರ್ಥ–ಅನುಭವ ಎರಡೂ ಚೆನ್ನಾಗಿ ಗೊತ್ತು. ಒಮ್ಮೆ ಹೊಟ್ಟೆ ತುಂಬಿದರೂ ಅದು ಖಾಲಿಯಾಗಿ ಮತ್ತೆ ಹಸಿವಾಗಲು ಎಷ್ಟು ಹೊತ್ತೂ ಬೇಕಾಗಿಲ್ಲ ಎಂಬುದೂ ಚೆನ್ನಾಗಿ ಗೊತ್ತು. ದಿನದ ಇಪ್ಪತ್ನಾಲ್ಕು ಗಂಟೆಗೆ ಇನ್ನಷ್ಟು ಸಮಯ ಸೇರಿದರೆ ಅದನ್ನೂ ಬಳಸಿಕೊಂಡು ಕೆಲಸ ಮಾಡುವುದಕ್ಕೆ ನಾನು ಸಿದ್ಧ.

ಬರವಣಿಗೆ ಎಂದರೆ ನನಗೆ ಪ್ರಾಣ. ರಾತ್ರಿ ಒಂಬತ್ತು ಗಂಟೆಗೆ ಕೂತುಕೊಂಡರೆ ಬೆಳಗಿನ ಜಾವ ಐದು ಗಂಟೆಯವರೆಗೂ ಬರೆಯುತ್ತಿರುತ್ತೇನೆ. ಇದು ನನ್ನ ಹುಚ್ಚು, ಆಸೆ ಎಲ್ಲವೂ. ಆ ಆಸೆಯ ಕಾರಣದಿಂದಲೇ ನನಗೆ ಇಷ್ಟೊಂದು ಅವಕಾಶಗಳು ಬರುತ್ತಿವೆ ಅನಿಸುತ್ತದೆ.

* ‘ಜಿಂದಾ’ ಸಿನಿಮಾದ ಬಗ್ಗೆ ಹೇಳಿ.
ಎಂಬತ್ತರ ದಶಕದ ಮೊದಲಾರ್ಧದಲ್ಲಿ ನಡೆದ ಕಥೆ. ಕೊಳ್ಳೆಗಾಲದಲ್ಲಿ ‘ಜಿಂದಾ’ ಎಂಬ ಒಂದು ಗ್ಯಾಂಗ್‌ ಇತ್ತು. ಆಗ ಪತ್ರಿಕೆ ಮತ್ತು ಟೀವಿ ಮಾಧ್ಯಮ ಇಷ್ಟೊಂದು ಮುಂದುವರಿದಿರಲಿಲ್ಲ. ಆದ್ದರಿಂದಲೇ ಅದಕ್ಕೆ ಅಷ್ಟೊಂದು ಪ್ರಚಾರ ಸಿಕ್ಕಿರಲಿಲ್ಲ.

ಕೊಳ್ಳೆಗಾಲದ ಜನರಿಗೆ ‘ಜಿಂದಾ’ ಗ್ಯಾಂಗಿನ ಬಗ್ಗೆ ಚೆನ್ನಾಗಿ ಗೊತ್ತು. ತುಂಬ ಕ್ರೂರ ಗ್ಯಾಂಗ್‌ ಅದು. ಅದು ಈಗಲೂ ಚಾಲ್ತಿಯಲ್ಲಿದೆ. ಆದರೆ ಹಳಬರಲ್ಲಿ ಕೆಲವರು ಸತ್ತು ಹೋಗಿದ್ದಾರೆ. ಕೆಲವರು ಕೊಲೆಯಾಗಿದ್ದಾರೆ. ಕೆಲವರು ಸಂಬಂಧ ಕಡಿದುಕೊಂಡು ಅವರಷ್ಟಕ್ಕೆ ಅವರು ಬದುಕುತ್ತಿದ್ದಾರೆ. ಆದರೆ ಈಗಲೂ ಹತ್ತರಿಂದ ಹದಿನೈದು ಜನರು ಆ ಗ್ಯಾಂಗ್‌ನಲ್ಲಿ ಇದ್ದಾರಂತೆ. ಅದಕ್ಕೊಬ್ಬ ಅಧ್ಯಕ್ಷನೂ ಇದ್ದಾನೆ. ಕೆಲವರು ಆ ಗ್ಯಾಂಗ್‌ ಈಗ ಯಾವ ಕೆಟ್ಟ ಕೆಲಸವನ್ನೂ ಮಾಡುತ್ತಿಲ್ಲ ಎನ್ನುತ್ತಾರೆ. ಇನ್ನು ಕೆಲವರು ಈಗಲೂ ರೋಲ್‌ ಕಾಲ್‌ ನಡೆಸುತ್ತಿದ್ದಾರೆ ಎನ್ನುತ್ತಾರೆ. ಆ ಗ್ಯಾಂಗ್‌ಅನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ.

* ಈ ಗ್ಯಾಂಗ್ ಕಥೆ ಒಂದು ಸಿನಿಮಾ ಆಗಬಹುದು ಎಂದು ಯಾಕೆ ಅನಿಸಿತು?
ಎಲ್ಲ ಘಟನೆಗಳನ್ನೂ ಸಿನಿಮಾ ಮಾಡಕ್ಕಾಗಲ್ಲ. ಆದರೆ ಈ ಕಥೆಯನ್ನು ಕೇಳಿದಾಗಲೇ ಅದರ ಮಜಾ ಏನು ಅಂತ ನನಗೆ ತಿಳಿದುಬಿಟ್ಟಿತ್ತು.
ಪೊರ್ಕಿ–ಪೋಲಿಗಳ ಮಧ್ಯ ಒಂದು ಪ್ರೀತಿ ಹುಟ್ಟುತ್ತದೆ. ಆ ಪ್ರೀತಿಯಲ್ಲಿ ಒಬ್ಬ ಪೊಲೀಸ್‌ ಪ್ರವೇಶಿಸುತ್ತಾನೆ. ಆ ಪೊಲೀಸ್‌ಗೆ ಪೋಷಕರೂ ಬರುತ್ತಾರೆ. ಹೀಗೆ ಸಿನಿಮಾ ಬೆಳೆಯುತ್ತಾ ಹೋಗುತ್ತದೆ.

ಏನಾದರೂ ಭಿನ್ನವಾದ ಸಿನಿಮಾ ಮಾಡಬೇಕು ಎಂಬುದು ನನ್ನ ಹಂಬಲ. ‘ಜಿಂದಾ’ ಗ್ಯಾಂಗ್‌ನ ಬಗ್ಗೆ ವಿವರಗಳನ್ನು ಹುಡುಕುತ್ತ ಹೊರಟಾಗ ನಾನು ಬಯಸುತ್ತಿದ್ದಂಥ ಕಥೆ ಇದೇ ಎಂದು ಅನಿಸಿಬಿಟ್ಟಿತು.

*‘ಮುಸ್ಸಂಜೆ ಮಾತು’ವಿನಂಥ ಚಿತ್ರ ಕೊಟ್ಟ ನಿಮಗೆ ಇಂತಹ ವಸ್ತುವಿಟ್ಟುಕೊಂಡು ಸಿನಿಮಾ ಮಾಡುವುದು ಕಷ್ಟ ಎನಿಸಲಿಲ್ಲವೇ?
ನಾನು ಕೆಲಸ ಕಲಿತಿದ್ದೇ ಆ್ಯಕ್ಷನ್‌ ನಿರ್ದೇಶಕರ ಬಳಿ. ಕೆ.ವಿ. ರಾಜು, ಓಂಪ್ರಕಾಶ್‌ ರಾವ್‌ ಅವರಂಥ ನಿರ್ದೇಶಕರ ಸಿನಿಮಾಗಳನ್ನು ನೋಡುತ್ತ ಬೆರಗಾಗಿ ನಾನೂ ಇಂಥ ಸಿನಿಮಾಗಳನ್ನು ಮಾಡಬೇಕು ಎಂದು ಅನಿಸುತ್ತಿತ್ತು. ಆದರೆ ಅವುಗಳನ್ನು ಪ್ರೇಮಕತೆಯಲ್ಲಿ ಮಾಡಲಿಕ್ಕಾಗುವುದಿಲ್ಲ. ಆ ವಸ್ತುವೇ ಮೃದುತನವನ್ನು ಬೇಡುತ್ತದೆ.

ಎಲ್ಲ ಪ್ರಕಾರದ ಸಿನಿಮಾಗಳನ್ನೂ ಮಾಡಬೇಕು ಎಂಬ ಆಸೆ ನನ್ನದು. ಈ ಆಸೆಯ ಫಲವಾಗಿಯೇ ‘ಬೆಳ್ಳಿ’ ಸಿನಿಮಾ ಮಾಡಿದೆ. ಈಗ ‘ಜಿಂದಾ’ ಸಿನಿಮಾ ಮಾಡ್ತಿದ್ದೇನೆ. ನಂತರ ಮತ್ತೆ ಪ್ರೇಮಕಥೆಗಳನ್ನೂ ಮಾಡುತ್ತೇನೆ. ಹೀಗೆ ಬೇರೆ ಬೇರೆ ಪ್ರಕಾರದ ಸಿನಿಮಾಗಳನ್ನು ಮಾಡುವುದು ನಿರ್ದೇಶಕನ ಸೃಜನಶೀಲ ಅನಿವಾರ್ಯತೆಯೂ ಹೌದು.

* ಬಹುತೇಕ ಎಲ್ಲರನ್ನೂ ಹೊಸಬರನ್ನು ಹಾಕಿಕೊಂಡು ‘ಜಿಂದಾ’ ಮಾಡುತ್ತಿದ್ದೀರಿ. ರಿಸ್ಕ್ ಅನಿಸಲಿಲ್ಲವೇ?
‘ಬೆಳ್ಳಿ’ ಸಿನಿಮಾ ಥರವೇ ಈಗಲೂ ಮತ್ತೆ ಸೂಪರ್‌ಸ್ಟಾರ್‌ಗಳನ್ನು ಹಾಕಿಕೊಂಡು ಸಿನಿಮಾ ಮಾಡುತ್ತೇನೆ ಎಂದರೂ ನಿರ್ಮಾಪಕರು ಸಿದ್ಧರಿದ್ದರು. ಆದರೆ ಅಂಥ ನಟರನ್ನು ಹಾಕಿಕೊಂಡರೆ ನಿರೀಕ್ಷೆಯೂ ಬೆಳೆಯುತ್ತ ಹೋಗುತ್ತದೆ. ನಿರೀಕ್ಷೆ ಇಲ್ಲದೆಯೇ ನೋಡಬೇಕಾದ ಸಿನಿಮಾ ಇದು.

ಅಲ್ಲದೇ ನಮ್ಮಲ್ಲಿ ನಾಯಕ ಎಂದರೆ ಹೀಗೆಯೇ ಇರಬೇಕು ಎಂಬ ಕೆಲವು ಲಕ್ಷಣಗಳ ಪಟ್ಟಿ ಇದೆ. ಆದರೆ ಈ ಸಿನಿಮಾಗೆ ಕಥೆಯಷ್ಟೇ ರಾ ಲುಕ್‌ ಇರುವ ನಟರು ಬೇಕಾಗಿತ್ತು. ಯಾರೂ ತಲೆಗೆ ಎಣ್ಣೆ ಹಾಕಬಾರದು, ಯಾರೂ ತಲೆಸ್ನಾನ ಮಾಡಬಾರದು. ಇಂಥ ಪಾತ್ರಗಳನ್ನೇ ಹುಡುಕುತ್ತ ಹೋದೆ. ಆಗಲೇ ಇವರೆಲ್ಲ ಸಿಗುತ್ತ ಹೋದರು. ಈಗ ಪರದೆಯ ಮೇಲೆ ನೋಡಿದಾಗ ನನ್ನ ನಿರ್ಧಾರ ಸರಿ ಅನಿಸುತ್ತಿದೆ.

* ಈ ಚಿತ್ರದಲ್ಲಿ ಮೇಘನಾರಾಜ್‌ ನಿರ್ವಹಿಸಿರುವ ಪಾತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಆ ಪಾತ್ರದ ಬಗ್ಗೆ ಹೇಳಿ.
ಇಡೀ ಸಿನಿಮಾವನ್ನು ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ ‘ಲವ್‌’. ಇಡೀ ಊರು ಅಲ್ಲೋಲ ಕಲ್ಲೋಲ ಆಗುವುದಕ್ಕೆ ಕಾರಣವೇ ಈ ಹುಡುಗಿ. ‘ಜಿಂದಾ’ ಗ್ಯಾಂಗ್‌ ಹುಟ್ಟಿದ್ದು ಬೇರೆ ಕಾರಣಕ್ಕೆ. ಆದರೆ ನಾಶವಾಗಿದ್ದು ಮಾತ್ರ ಹುಡುಗಿಯ ಕಾರಣದಿಂದ.

‘ಗಂಡು ಅನ್ನೋ ಒಬ್ಬ ಕಚಡಾ ನನ್ಮಗನೂ ಪ್ರೀತಿ ಮಾಡುವಾಗ ಸತ್ಯ ಹೇಳಲ್ಲ’. ನನ್ನನ್ನೂ ಸೇರಿಸಿ ಇದು ಸತ್ಯ. ನನ್ನ ಪ್ರೀತಿಸುವ ಹುಡುಗಿಗೆ ಹಳೆ ಪ್ರೇಮದ ಬಗ್ಗೆ ಹೇಳಕ್ಕಾಗತ್ತಾ? ನಾನು ಸಿಗರೇಟ್‌ ಸೇದುತ್ತೇನೆ ಎಂದು ಹೇಳಕ್ಕಾಗತ್ತಾ? ಕುಡಿಯುತ್ತೇನೆ ಅಂತ ಹೇಳಕ್ಕಾಗತ್ತಾ? ಬೇರೆ ಹುಡುಗಿಯರ ಜತೆ ಫ್ಲರ್ಟ್‌ ಮಾಡಿದ್ದೆ ಅಂತ ಹೇಳಕ್ಕಾಗತ್ತಾ?

ಹಾಗೆಯೇ ಮದುವೆಯಾದಂಥ ಹೆಂಡತಿ ಜತೆ ಸುಳ್ಳನ್ನು ಹೇಳದೇ ಇದ್ದರೆ ಸಂಸಾರ ಸುಗಮವಾಗಿ ಸಾಗಲ್ಲ. ಸತ್ಯ ಹೇಳಿದರೆ ಸಂಸಾರದಲ್ಲಿ ಬಿರುಕು ಮೂಡುತ್ತದೆ. ಇದನ್ನೇ ಮೇಘನಾ ಪಾತ್ರದ ಮೂಲಕ ಹೇಳಿಸಿದ್ದೇನೆ. ಇದನ್ನು ಸಹಿಸದ ಕೆಲವರು ಪ್ರತಿಭಟನೆ ಮಾಡ್ತಿದ್ದಾರೆ. ಸಿನಿಮಾ ಬಿಡುಗಡೆ ಮಾಡಲು ಬಿಡುವುದಿಲ್ಲ ಅಂತಿದ್ದಾರೆ.

* ಈ ಸಿನಿಮಾದ ವಿಶೇಷಗಳೇನು?
ಈ ಸಿನಿಮಾ ನೋಡಿ ಚಿತ್ರಮಂದಿರದಿಂದ ಹೊರಬಂದಾಗ ಪ್ರೇಕ್ಷಕನ ಮನಸ್ಸಿನ ಭಾವನೆ ಕಣ್ಣೀರಿನ ರೂಪದಲ್ಲಿ ಕಣ್ಣು ತುಂಬಿರುತ್ತದೆ. ‘ಮುಸ್ಸಂಜೆ ಮಾತು’ ಸಿನಿಮಾವನ್ನು ಎಷ್ಟು ಮೆಚ್ಚಿಕೊಂಡು ನೋಡಿದರೋ ಅಷ್ಟೇ ಈ ಸಿನಿಮಾವನ್ನೂ ಮೆಚ್ಚಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT