ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮದ ಸೌರಭ ಬಯಸಿ ಅನುಕ್ಷಣದ ಹುಡುಕಾಟ

Last Updated 8 ಜೂನ್ 2017, 19:30 IST
ಅಕ್ಷರ ಗಾತ್ರ

‘ಸಜನಿ’ ಸಿನಿಮಾದ ‘ಮುದ್ದು ಮುದ್ದು ಮಳೆ ಹನಿಯೇ’ ಹಾಡಿನಲ್ಲಿನ ಒದ್ದೆ ಸೀರೆಯ ಮಾದಕ ಬೆಡಗಿ, ‘ಕೃಷ್ಣ’ ಸಿನಿಮಾದ ‘ನೀನು ಬಂದ ಮೇಲೆ ತಾನೆ ಇಷ್ಟು ಚಂದ ಈ ಬಾಳು’ ಹಾಡಿನಲ್ಲಿನ ಜರಿಯಂಚಿನ ಲಂಗದ ಸ್ನಿಗ್ಧ ಚೆಲುವೆ, ‘ನವಗ್ರಹ’ ಚಿತ್ರದ ‘ಕಣ್‌ ಕಣ್ಣ ಸಲಿಗೆ’ ಹಾಡಿನ ಮಿಂಚುಗಣ್ಣಿನ ಹುಡುಗಿ... ಹೀಗೆ ಕಳೆದ ಒಂಬತ್ತು ವರ್ಷಗಳಲ್ಲಿ ಹಲವು ಪಾತ್ರಗಳ ಮೂಲಕ ಕನ್ನಡದ ಸಿನಿಪ್ರಿಯರ ಮನಸಲ್ಲಿ ರೂಹು ಮೂಡಿಸುತ್ತಲೂ, ಹರೆಯದ ಹುಡುಗರ ಮೈಮೇಲೆ ಕಚಗುಳಿಯ ರೇಖೆ ಗೀಚುತ್ತಲೂ ಬಂದಿರುವ ನಟಿ ಶರ್ಮಿಳಾ ಮಾಂಡ್ರೆ.

ಪ್ರೇಮ, ಹಾಸ್ಯ, ರೋಮಾನ್ಸ್‌, ಗ್ಲಾಮರಸ್‌– ಹೀಗೆ ಹಲವು ಭಾವಾಭಿವ್ಯಕ್ತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕರೂ ಇರುವುದೆಲ್ಲವ ಬಿಟ್ಟು ಇನ್ನೊಂದಕ್ಕೆ ಹಂಬಲಿಸುವ ಮಹತ್ವಾಕಾಂಕ್ಷೆಯ ನಟಿ ಶರ್ಮಿಳಾ. ಅವರ ಈ ಹಂಬಲಕ್ಕೆ ಇಂಬು ನೀಡುವಂಥ ಪಾತ್ರವೊಂದರಲ್ಲಿ ನಟಿಸಿದ ಖುಷಿಯಲ್ಲಿ ‘ಆಕೆ’ ತೇಲುತ್ತಿದ್ದಾರೆ. ಅಂದಹಾಗೆ ಅವರೊಳಗಿನ ಅಭಿನೇತ್ರಿಯನ್ನು ತೃಪ್ತಿಪಡಿಸಿದ ಸಿನಿಮಾದ ಹೆಸರು ‘ಆಕೆ’.

ತೆಲುಗಿನ ‘ಮಾಯಾ’ ಸಿನಿಮಾದ ಕಥೆಯನ್ನು ಕನ್ನಡದಲ್ಲಿ ‘ಆಕೆ’ಯಾಗಿ ಮರುಸೃಷ್ಟಿಸುತ್ತಿದ್ದಾರೆ ನಿರ್ದೇಶಕ ಕೆ.ಎಂ. ಚೈತನ್ಯ. ಈ ಸಿನಿಮಾ ಹಾರರ್‌ ಚಿತ್ರದಲ್ಲಿ ನಟಿಸಬೇಕು ಎನ್ನುವ ಶರ್ಮಿಳಾ ಅವರ ಬಹುದಿನದ ಆಸೆಯನ್ನು ಪೂರೈಸಿದೆಯಷ್ಟೇ ಅಲ್ಲ, ಅವರೊಳಗಿನ ನಟಿಯನ್ನು ಇನ್ನಷ್ಟು ಪ್ರಬುದ್ಧಗೊಳಿಸಿದೆ ಎನ್ನುವುದು ವಿಶೇಷ. ಈ ಕಾರಣಕ್ಕಾಗಿಯೇ ತಮ್ಮ ವೃತ್ತಿಜೀವನದಲ್ಲಿ ‘ಆಕೆ’ ತುಂಬ ಮಹತ್ವದ ಪಾತ್ರ ವಹಿಸುತ್ತಾಳೆ ಎಂದು ಅವರೇ ಹೇಳಿಕೊಳ್ಳುತ್ತಾರೆ.

‘ನನಗೆ ಹಾರರ್‌ ಸಿನಿಮಾಗಳೆಂದರೆ ತುಂಬ ಇಷ್ಟ. ಪ್ರತಿಸಲ ಹಾರರ್‌ ಸಿನಿಮಾ ನೋಡಿದಾಗಲೂ ರಾತ್ರಿ ಒಬ್ಬಳೇ ಮಲಗಲು ಹೆದರಿಕೆಯಾಗಿ ಅಮ್ಮನ ಪಕ್ಕ ಹೋಗಿ ಮಲಗುತ್ತೇನೆ. ಇನ್ನೊಮ್ಮೆ ಹಾರರ್‌ ಸಿನಿಮಾ ನೋಡಲೇಬಾರದು ಎಂದುಕೊಳ್ಳುತ್ತೇನೆ. ಆದರೆ ಮತ್ತೊಂದೆರಡು ದಿನಗಳಲ್ಲಿ ಮತ್ತೊಂದು ಹಾರರ್‌ ಸಿನಿಮಾ ನೋಡಲು ಮನಸ್ಸು ತವಕಿಸುತ್ತದೆ. ಆ ಪ್ರಕಾರವೇ ಹಾಗೆ, ಭಯ ಹುಟ್ಟಿಸುತ್ತವೆ. ಆದರೆ ನೋಡಲೇಬೇಕು ಎಂಬ ಕುತೂಹಲವನ್ನೂ ಮೂಡಿಸುತ್ತವೆ’ ಎಂದು ತಮ್ಮೊಳಗಿನ ಪ್ರೇತಪ್ರೇಮವನ್ನು ವ್ಯಕ್ತಪಡಿಸುತ್ತಾರೆ.

ಹಾರರ್‌ ಸಿನಿಮಾ ನೋಡಿದಾಗಲೆಲ್ಲ ಅವರಿಗೆ ಭಯದ ಜತೆಗೆ ತಾವೂ ಇಂಥದ್ದೊಂದು ಸಿನಿಮಾದಲ್ಲಿ ನಟಿಸಬೇಕು ಎಂಬ ಬಯಕೆಯೂ ಹುಟ್ಟುತ್ತಿತ್ತು. ಆದರೆ ಎಷ್ಟೊಂದು ವಿಭಿನ್ನ ಪಾತ್ರಗಳು ಅವರನ್ನು ಅರಸಿಕೊಂಡು ಬಂದರೂ ದೆವ್ವದ ಸಿನಿಮಾದಲ್ಲಿ ನಟಿಸುವ ಅವಕಾಶವೊಂದು ಸಿಕ್ಕಿರಲೇ ಇಲ್ಲ. ಬಹುಶಃ ಶರ್ಮಿಳಾ ಅವರ ಮುದ್ದುಮುಖವನ್ನು ಭಯಭೀತಗೊಳಿಸಲು ಯಾರಿಗೂ ಮನಸ್ಸು ಬರಲಿಲ್ಲವೇನೋ!

ಕೆ.ಎಂ. ಚೈತನ್ಯ ಅವರಿಗೆ ಮಾತ್ರ ತಮ್ಮ ‘ಆಕೆ’ ಸಿನಿಮಾ ನಾಯಕಿಯ ಪಾತ್ರಕ್ಕೆ ಶರ್ಮಿಳಾ ಹೊರತು ಇನ್ಯಾರೂ ಒಗ್ಗುವುದಿಲ್ಲ ಎನಿಸಿಬಿಟ್ಟಿತ್ತು. ಅರಸುತ್ತಿದ್ದ ನಕ್ಷತ್ರ, ಅಂಗಳದ ಬಳ್ಳಿಯಲ್ಲಿಯೇ ಅರಳಿದಂತೆ ತಮ್ಮನ್ನು ಹುಡುಕಿಕೊಂಡು ಬಂದ ಈ ಅವಕಾಶವನ್ನು ಶರ್ಮಿಳಾ ಒಲ್ಲೆ ಎನ್ನಲು ಸಾಧ್ಯವೇ ಇರಲಿಲ್ಲ.

ಚಿತ್ರ ಒಪ್ಪಿಕೊಂಡ ಮೇಲೆಯೇ ಅವರಿಗೆ ತಿಳಿದಿದ್ದು ಈ ಪಾತ್ರ ಮಾಮೂಲಿ ಅಲ್ಲ, ತಮ್ಮ ವೃತ್ತಿಜೀವನದಲ್ಲಿಯೇ ಅತ್ಯಂತ ಸವಾಲಿನದು ಎಂದು. ಯಾವುದೇ ಸೃಜನಶೀಲ ಕಲಾವಿದ ಸವಾಲುಗಳನ್ನು ಎದುರು ಹಾಕಿಕೊಂಡೇ ಬೆಳೆಯುವುದಲ್ಲವೇ? ಶರ್ಮಿಳಾ ಅವರಿಗೂ ಈ ಪಾತ್ರ ನಟಿಯಾಗಿ ತಾವು ಇನ್ನೊಂದಿಷ್ಟು ಮೇಲೇರಲು ಅನುವು ಮಾಡಿಕೊಡುವ ಮೆಟ್ಟಿಲಂತೆ ಕಂಡಿತು.

‘ಕ್ಯಾಮೆರಾ ಎದುರು ನಿರ್ದೇಶಕರು ಹೇಳಿದ ಹಾಗೆ ನಟಿಸಿ ಬಂದರಾಯ್ತು’ ಎನ್ನುವವರ ಸಾಲಿಗೆ ಸೇರುವ ನಟಿಯಲ್ಲ ಶರ್ಮಿಳಾ. ನಟನೆ ಎನ್ನುವುದು ಅವರಿಗೆ ಅನುಕ್ಷಣದ ಅನ್ವೇಷಣೆ. ತೆರೆಯ ಮೇಲೆ ಮೂಡುವುದು ಆ ಅನ್ವೇಷಣೆಯ ತಾತ್ಕಾಲಿಕ ಅಭಿವ್ಯಕ್ತಿ ಅಷ್ಟೆ. ಸದಾಕಾಲ ಅವರು ಜನರನ್ನು ಬಹುಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಭಿನ್ನ ಜನರ ಭಿನ್ನ ವರ್ತನೆಗಳನ್ನು ಗ್ರಹಿಸುತ್ತಿರುತ್ತಾರೆ. ಅದನ್ನು ತಮ್ಮೊಳಗಿನ ಕಲಾವಿದೆಗೆ ಕಲಿಸುತ್ತಲೂ ಇರುತ್ತಾರೆ.

‘ಆಕೆ’ ಚಿತ್ರದ ಪಾತ್ರಕ್ಕಾಗಿ ಅವರು ಸಿದ್ಧಗೊಂಡಿದ್ದೂ ಹಾಗೆಯೇ. ಈ ಚಿತ್ರದಲ್ಲಿ ಅವರು ನಿರ್ವಹಿಸುತ್ತಿರುವ ಪಾತ್ರದ ಹೆಸರೂ ಶರ್ಮಿಳಾ ಎಂದೇ. ಆದರೆ ಅವರ ಸ್ವಭಾವಕ್ಕಿಂತ ಪೂರ್ತಿ ಭಿನ್ನವಾದ ಸಂಕೀರ್ಣ ಮನಸ್ಥಿತಿಯ ಹುಡುಗಿಯ ಪಾತ್ರ ಅದು.

‘ಬದುಕಿನಲ್ಲಿ ಸಾಕಷ್ಟು ನೊಂದಿರುವ ಪಾತ್ರ. ಗಂಡ ಬಿಟ್ಟು ಹೋಗಿರುತ್ತಾನೆ. ಚಿಕ್ಕ ಮಗು ಇರುತ್ತದೆ. ಖಿನ್ನ ಮನಸ್ಥಿತಿಯ ಪಾತ್ರ ಇದು’ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಳ್ಳುವ ಅವರಿಗೆ, ಈ ಪಾತ್ರಕ್ಕೆ  ಸಿದ್ಧಗೊಳ್ಳಲು ನಾಲ್ಕೈದು ವರ್ಷಗಳ ಹಿಂದೆ ತಮ್ಮ ನೆರೆಮನೆಯಲ್ಲಿ ವಾಸವಾಗಿದ್ದ  ಹೆಣ್ಣೇ ಸ್ಫೂರ್ತಿಯಾಗಿದ್ದಾರೆ.

ಇಷ್ಟೆಲ್ಲ ಸಿದ್ಧತೆ ನಡೆಸಿದ್ದರಿಂದ ಅವರಿಗೆ ‘ಆಕೆ’ಯನ್ನು ನಿರ್ವಹಿಸುವುದು ಕಷ್ಟವೆನಿಸಲಿಲ್ಲ. ಜತೆಗೆ ಇಡೀ ಚಿತ್ರತಂಡದಲ್ಲಿ ತುಂಬ ಜನ ರಂಗಭೂಮಿ ಕಲಾವಿದರೂ ಇದ್ದಿದ್ದರಿಂದ ಅವರೆಲ್ಲರ ಸಲಹೆ–ಸೂಚನೆಗಳೂ ಅವರನ್ನು ಬೆಳೆಸಿವೆ. ಭಾರತದಲ್ಲಿ ಆರಂಭವಾಗಿ ಇಂಗ್ಲೆಂಡಿಗೂ ಹಬ್ಬಿಕೊಳ್ಳುವ ಈ ಸಿನಿಮಾಕ್ಕಾಗಿ ಹಲವು ಇಂಗ್ಲೆಂಡ್‌ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಅವರಿಂದಲೂ ಶರ್ಮಿಳಾ ಸಾಕಷ್ಟು ನಟನಾಪಾಠಗಳನ್ನು ಕಲಿತುಕೊಂಡಿದ್ದಾರಂತೆ.

‘ಆಕೆ’ ಪೂರ್ತಿಗೊಂಡು ತೆರೆಗೆ ಬರಲು ಸಿದ್ಧವಾಗಿದೆ. ಇದು ತಮ್ಮ ವೃತ್ತಿಬದುಕಿನ ಮಹತ್ವದ ಸಿನಿಮಾ ಆಗುತ್ತದೆ ಎಂಬ ವಿಶ್ವಾಸದಲ್ಲಿ ಶರ್ಮಿಳಾ ಇದ್ದಾರೆ. ಸೋಲು–ಗೆಲುವುಗಳ ಆಚೆಗೂ ಈ ಸಿನಿಮಾದಿಂದ ಸಾಕಷ್ಟು ಕಲಿತುಕೊಂಡಿದ್ದೇನೆ ಎಂಬ ತೃಪ್ತಿಯೂ ಅವರಲ್ಲಿದೆ.

ಹೀಗೊಂದು ಸಿನಿಮಾ ಯಶಸ್ವಿಯಾದರೆ ಮುಂದೆ ಇದೇ ರೀತಿಯ ಹಾರರ್‌ ಪಾತ್ರಗಳೇ ತನ್ನನ್ನು ಹುಡುಕಿಕೊಂಡು ಬರುತ್ತವೆ ಎಂಬುದನ್ನೂ ಅವರು ಚೆನ್ನಾಗಿ ಬಲ್ಲರು. ಬಂದದ್ದನ್ನೆಲ್ಲ ಕಣ್ಮುಚ್ಚಿ ಒಪ್ಪಿಕೊಳ್ಳುವ ಹಪಾಹಪಿ ಅವರಿಗಿಲ್ಲ. ಈ ಚಿತ್ರದ ಮೂಲಕ ನಟನೆಯ ಇನ್ನೊಂದು ಮೆಟ್ಟಿಲನ್ನು ಏರಿದ  ಸಮಾಧಾನ ಅವರದು. ಹಾಗೆಂದು ಇಷ್ಟಕ್ಕೆ ತೃಪ್ತಿಪಟ್ಟುಕೊಂಡು ನಿಂತುಬಿಡುವ ಜಾಯಮಾನ ಅವರದಲ್ಲ.

‘ಮಾಡದೇ ಉಳಿದಿರುವುದು ಇನ್ನೂ ಸಾಕಷ್ಟಿದೆ. ಸದಾ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಲೇ ಇರಬೇಕು’ ಎನ್ನುವ ಅವರ ಹಂಬಲ ಸದಾ ಜಾರಿಯಲ್ಲಿಯೇ ಇರುವಂಥದು. 

****
ವಿದ್ಯುತ್ ಹೋದ ಆ ಇರುಳು...
ಚಿತ್ರೀಕರಣದ ಅವಧಿಯಲ್ಲಿ ಇಂಗ್ಲೆಂಡ್‌ನಲ್ಲಿ ಆದ ವಿಚಿತ್ರ ಅನುಭವದಿಂದ ಶರ್ಮಿಳಾ ಬೆಚ್ಚಿಬಿದ್ದಿದ್ದೂ ಇದೆ. ಪ್ರೇಕ್ಷಕರನ್ನು ಭಯಗೊಳಿಸುವ ಸಿನಿಮಾ ಮಾಡಲು ಹೋಗಿ ತಾವೇ ಭಯಬಿದ್ದ ಅನುಭವವನ್ನು ಹಂಚಿಕೊಳ್ಳುವಾಗ ಅವರ ಕಣ್ಣುಗಳಲ್ಲಿ ಭಯದ ಛಾಯೆ ಎದ್ದು ಕಾಣುತ್ತಿತ್ತು.

‘ಲಂಡನ್‌ನ ಹಾರ್ಸ್ಲಿ ಟವರ್ಸ್‌ ಎಂಬ ಸ್ಥಳದಲ್ಲಿ ಚಿತ್ರೀಕರಣ ಮಾಡುತ್ತಿದ್ದೆವು. ಚಿತ್ರೀಕರಣ ರಾತ್ರಿಯಲ್ಲಿ ನಡೆಯುತ್ತಿದ್ದುದರಿಂದ ಅಲ್ಲಿಯೇ ಉಳಿದುಕೊಳ್ಳಬೇಕಾಗಿತ್ತು. ಅಲ್ಲಿ ಪ್ರತಿದಿನ ರಾತ್ರಿ ಎರಡೂವರೆಯಿಂದ ಮೂರು ಗಂಟೆಯ ಅವಧಿಯಲ್ಲಿ ಕರೆಂಟ್‌ ಹೋಗಿಬಿಡುತ್ತಿತ್ತು. ಜನರೇಟರ್‌ ಕೂಡ ಹಾಗೆಯೇ ಆಫ್‌ ಆಗಿಬಿಡುತ್ತಿತ್ತು. ಮೊದಲ ದಿನ ಹೀಗಾದಾಗ ಎರಡನೇ ದಿನ ಎರಡು ಜನರೇಟರ್‌ ತರಿಸಿಟ್ಟುಕೊಂಡಿದ್ದರು. ಆದರೆ ಮರುದಿನ ಆ ಎರಡೂ ಜನರೇಟರ್‌ ಆಫ್‌ ಆಗಿಹೋದವು. ನನಗೆ ಭಯವಾಯ್ತು. ಇದು ಅಸಹಜ ಅನಿಸಿತು.

ಮರುದಿನ ಚಿತ್ರೀಕರಣ ಮುಗಿಸಿದ ಮೇಲೆ ಯಾರೋ ಹೇಳಿದರು – ಆ ಜಾಗದಲ್ಲಿ ಹಿಂದೆಯೂ ಇಂಥ ಘಟನೆಗಳು ಸಾಕಷ್ಟು ನಡೆದಿವೆಯಂತೆ. ಅಲ್ಲಿ ಅತೀತ ಶಕ್ತಿಗಳು ಇರುವ ಬಗ್ಗೆ ಸಾಕಷ್ಟು ಕಥೆಗಳಿವೆಯಂತೆ. ಅದನ್ನು ಕೇಳಿ ನನಗೆ ಎಷ್ಟು ಭಯವಾಯ್ತು ಎಂದರೆ, ಶೂಟಿಂಗ್‌ ಮುಗಿದ ಮೇಲೆ ವಿಶ್ರಾಂತಿಯನ್ನೂ ತೆಗೆದುಕೊಳ್ಳದೇ ಇಂಗ್ಲೆಂಡ್‌ ನಗರಕ್ಕೆ ಓಡಿ ಬಂದುಬಿಟ್ಟೆ’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT