ಕೃಷಿ ಹೊಂಡ ನಿರ್ಮಾಣ: ಲಾಭ ಹಲವು

7
ಹೊಲದಲ್ಲಿ ಮಳೆ ನೀರು ಹಿಡಿದಿಡಲು ಬೇಕಿದೆ ರೈತರ ಸಂಕಲ್ಪ l ಅಂತರ್ಜಲ ಹೆಚ್ಚಳಕ್ಕೆ ಪೂರಕ

ಕೃಷಿ ಹೊಂಡ ನಿರ್ಮಾಣ: ಲಾಭ ಹಲವು

Published:
Updated:
ಕೃಷಿ ಹೊಂಡ ನಿರ್ಮಾಣ: ಲಾಭ ಹಲವು

ರಾಮನಗರ: ಮುಂಗಾರು ಮಳೆ ಈಗಷ್ಟೇ ಕಾಲಿಡುತ್ತಿದ್ದು, ಹೊಲಗಳಲ್ಲಿ ಮಳೆ ನೀರು ಹಿಡಿದಿಡಲು ಕೃಷಿ ಹೊಂಡಗಳ ನಿರ್ಮಾಣ ಕಾರ್ಯಕ್ಕೆ ಕೃಷಿ ಇಲಾಖೆಯು ಹೆಚ್ಚಿನ ನೆರವು ಘೋಷಿಸಿದೆ. ಈ ಬಾರಿ ಹೊಂಡಕ್ಕೆ ಪಾಲಿಥಿನ್ ಹೊದಿಕೆಗೆ ಸಹಾಯದ ಜೊತೆಗೆ ಸಂಗ್ರಹಿಸಿದ ನೀರನ್ನು ಜಮೀನಿಗೆ ಹಾಯಿಸಲು ಡೀಸೆಲ್ ಮತ್ತು ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಳ್ಳಲು ಇಲಾಖೆಯು ನೆರವು ನೀಡಲಿದೆ.

ಲಘು ನೀರಾವರಿ ಘಟಕಗಳಾದ ಹನಿ ಮತ್ತು ತುಂತುರು ನೀರಾವರಿ ಘಟಕಗಳನ್ನೂ ರೈತರು ಈ ಯೋಜನೆ ಅಡಿ ಅಳವಡಿಸಿಕೊಳ್ಳಬಹುದು. ಕೃಷಿ ಹೊಂಡದ ಸುತ್ತ ನೆರಳು ಪರದೆ ರಚಿಸಲು ಹಾಗೂ ಹೊಂಡದ ಸುತ್ತ ಬದು ನಿರ್ಮಾಣ ಮಾಡಲು ಸಹ ಅವಕಾಶ ಇದೆ.

ಎಷ್ಟೆಷ್ಟು ಸಹಾಯಧನ:  ಹೊಂಡ ನಿರ್ಮಾಣ ಮತ್ತು ಪಾಲಿಥಿನ್ ಹೊದಿಕೆ ಅಳವಡಿಕೆಗೆ ಸಾಮಾನ್ಯ ವರ್ಗದ ರೈತರಿಗೆ ಶೇ 80 ರಷ್ಟು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ 90ರಷ್ಟು ಸಹಾಯಧನ ನೀಡಲಾಗುತ್ತದೆ. ಡೀಸೆಲ್ ಪಂಪ್‌ಸೆಟ್ ಕೊಳ್ಳುವ ಸಾಮಾನ್ಯ ವರ್ಗದವರಿಗೆ ಶೇ50ರಷ್ಟು ಮತ್ತು ಪರಿಶಿಷ್ಟ ಜಾತಿ– ಪಂಗಡದವರಿಗೆ ಶೇ 90ರಷ್ಟು ಸಹಾಯಧನ ದೊರೆಯಲಿದೆ. ನೀರಾವರಿ ಘಟಕ ಅಳವಡಿಕೆಗೆ ಎಲ್ಲರಿಗೂ ಶೇ 90 ಮತ್ತು ನೆರಳು ಪರದೆ ಅಳವಡಿಸಲು ಶೇ 50 ರಷ್ಟು ಸಹಾಯಧನವನ್ನು ಇಲಾಖೆ ನೀಡಲಿದೆ.

ಏನಿದರ ಉದ್ದೇಶ: ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿ ಯನ್ನಾಗಿ ರೂಪಾಂತರಗೊಳಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ವಿವಿಧ ಗಾತ್ರದ ಕೃಷಿ ಹೊಂಡವನ್ನು ನಿರ್ಮಿಸಿಕೊಳ್ಳಬಹುದು.

ಕೃಷಿ ಹೊಂಡಗಳ ರಚನೆಯಿಂದ ನೀರಿನ ಸಂಗ್ರಹವಾಗಲಿದ್ದು, ಅದನ್ನು ಬಳಸಿಕೊಳ್ಳುವ ಮೂಲಕ ಉತ್ತಮ ಬೆಳೆ ತೆಗೆಯಬಹುದು. ಕಡಿಮೆ ನೀರು ಲಭ್ಯವಿದ್ದರೂ ತುಂತುರು ಮತ್ತು ಹನಿ ನೀರಾವರಿ ಪದ್ಧತಿ ಮೂಲಕ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲು ಅವಕಾಶ ಇದೆ’ ಎನ್ನುತ್ತಾರೆ ಜಂಟಿ ನಿರ್ದೇಶಕರ ಕಚೇರಿಯ ಸಹಾಯಕ ನಿರ್ದೇಶಕ ಎಲ್‌.ಜಿ. ಕರಿಬಸವಯ್ಯ.

‘ಬೆಳೆಗಾಗಿ ಮಳೆಯನ್ನೇ ಆಶ್ರಯಿಸದೆ ಹೊಂಡದಲ್ಲಿ ಸಂಗ್ರಹವಾದ ನೀರನ್ನು ಬಳಸಿ ಕೃಷಿ ಮಾಡಲು ಅವಕಾಶ ಸಿಗುವುದರಿಂದ ಒಟ್ಟಾರೆ ಉತ್ಪಾದಕತೆ ಹೆಚ್ಚಾಗಲಿದೆ. ಎಲ್ಲ ರೈತರು ಈ ಯೋಜನೆ ಪ್ರಯೋಜನವನ್ನು ಪಡೆದುಕೊಳ್ಳಬೇಕು’ ಎಂದು ಅವರು ಹೇಳುತ್ತಾರೆ.

‘ಕೃಷಿ ಭಾಗ್ಯ’ ಯೋಜನೆಯಡಿ ಜಿಲ್ಲೆಯ ಮಳೆಯಾಶ್ರಿತ ಜಮೀನಿನ ರೈತರಿಂದ ಕೃಷಿ ಹೊಂಡ ನಿರ್ಮಾಣಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಕೃಷಿ ಹೊಂಡ ನಿರ್ಮಿಸಿ ಮಳೆ ಕೈ ಕೊಟ್ಟಾಗ ಸಕಾಲಿಕವಾಗಿ ಬೆಳೆ ರಕ್ಷಿಸಿಕೊಳ್ಳಲು ಸಹಾಯಕ ಎಂಬುದನ್ನು ರೈತರು ಮನದಟ್ಟು ಮಾಡಿಕೊಂಡಿದ್ದಾರೆ. ಅಲ್ಲದೆ ಭೂಮಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವುದು, ಸುತ್ತಲಿನ ವಾತಾವರಣ ತಂಪಾಗಿಡಲು ಇದು ಸಹಾಯಕ’ ಎಂದು ಅವರು ತಿಳಿಸಿದರು.

ಹಲವು ಲಾಭಗಳು: ‘ಮಳೆಯಾಶ್ರಿತ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿದರೆ ಹಲವು ಲಾಭಗಳಿವೆ. ಹೊಂಡದಲ್ಲಿ ಮಳೆ ನೀರು ಸಂಗ್ರಹ ಆಗುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಮಣ್ಣಿನ ತೇವಾಂಶ ಕಾಯ್ದುಕೊಂಡು, ಬೆಳೆಗಳ ಸಮೃದ್ಧ ಇಳುವರಿಗೆ ಅನುಕೂಲವಾಗುವುದು. ಸಂಕಷ್ಟದ ಸಂದರ್ಭದಲ್ಲಿ ಕೃಷಿ ಹೊಂಡ ರೈತರ ಕೈಡಿಯುತ್ತದೆ’ ಎಂದು ಪ್ರಗತಿಪರ ರೈತ ಎಸ್.ಟಿ. ಕಾಂತರಾಜ್‌ ಪಟೇಲ್‌ ತಿಳಿಸಿದರು.

‘ಹೊಲಗಳಲ್ಲಿ ಕೃಷಿ ಹೊಂಡವನ್ನು ನಿರ್ಮಿಸಿಕೊಳ್ಳುವುದರಿಂದ ತೇವಾಂಶ ಹೆಚ್ಚಾಗಿ ಬೆಳೆಗಳಿಗೂ ಅನುಕೂಲವಾಗುತ್ತದೆ. ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ. ಬರದ ಸನ್ನಿವೇಶದಲ್ಲಿ ಕೃಷಿ ಹೊಂಡಗಳು ರೈತರಿಗೆ ಆಪತ್ಬಾಂಧವನಂತಾಗಿವೆ’ ಎಂದರು.

**

ಬೇಲಿ ನಿರ್ಮಾಣ ಕಡ್ಡಾಯ

ಈಚಿನ ದಿನಗಳಲ್ಲಿ ಕೃಷಿ ಹೊಂಡಗಳಿಗೆ ಬಿದ್ದು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಈ ಹೊಂಡಗಳ ಸುತ್ತ ಬೇಲಿ ನಿರ್ಮಾಣವನ್ನು ಕಡ್ಡಾಯಗೊಳಿಸಿ ಕೃಷಿ ಇಲಾಖೆಯು ಆದೇಶ ಹೊರಡಿಸಿದೆ.

ಹೀಗೆ ಬೇಲಿ ಹಾಕಿಕೊಳ್ಳುವವರಿಗೆ ಇಲಾಖೆ ವತಿಯಿಂದ ಶೇ 50ರಷ್ಟು ಸಹಾಯಧನ ಲಭ್ಯವಿದೆ.

**

ಮಣ್ಣು ಮತ್ತು ನೀರಿನ ಸಂರಕ್ಷಣೆಯ ದೃಷ್ಟಿಯಿಂದ ಕೃಷಿ ಹೊಂಡ ರೈತರ ಪಾಲಿಗೆ ವರದಾನವಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೆ 3300 ಹೊಂಡಗಳನ್ನು ನಿರ್ಮಾಣ ಮಾಡಲಾಗಿದ್ದು, ಈ ವರ್ಷ 1500 ಹೊಂಡಗಳ ನಿರ್ಮಾಣದ ಗುರಿ ಇದೆ.

–ಎಸ್.ಎಂ. ದೀಪಜಾ , ಜಂಟಿ ನಿರ್ದೇಶಕಿ, ಕೃಷಿ ಇಲಾಖೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry