12 ವರ್ಷದ ನಂತರ ಪೋಷಕರ ಸೇರಿದ ಯುವಕ

7
ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಗ್ರಾಮದ ಮನೆಯಲ್ಲಿ ಹಬ್ಬದ ಸಂಭ್ರಮ

12 ವರ್ಷದ ನಂತರ ಪೋಷಕರ ಸೇರಿದ ಯುವಕ

Published:
Updated:
12 ವರ್ಷದ ನಂತರ ಪೋಷಕರ ಸೇರಿದ ಯುವಕ

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಗ್ರಾಮದಲ್ಲಿನ ಜಿಂಜೀಗೌಡ ಹಾಗೂ ನಿಂಗಮ್ಮ ದಂಪತಿಯ ಮನೆಯಲ್ಲಿ ಬುಧವಾರ ಸಂಭ್ರಮ ತುಂಬಿತ್ತು. 12 ವರ್ಷಗಳ ಬಳಿಕ ಮಗನನ್ನು ಮನೆಗೆ ಕರೆತಂದ ಖುಷಿ ಅವರ ಕಣ್ಣಲ್ಲಿ ಕಾಣುತಿತ್ತು.

ದಶಕದ ಹಿಂದೆ ನಾಪತ್ತೆಯಾಗಿದ್ದ ಜವರೇಗೌಡ (26) ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಪತ್ತೆಯಾದ. ಮಾಧ್ಯಮಗಳ ಮೂಲಕ ಈ ವಿಷಯ ತಿಳಿದ ದಂಪತಿ ಮಂಗಳವಾರವೇ ಅಲ್ಲಿಗೆ ತೆರಳಿ ತಮ್ಮ ಮಗನನ್ನು ಮರಳಿ ಊರಿಗೆ ಕರೆ ತಂದಿದ್ದರು.

ಬುಧವಾರ ಬೆಳಿಗ್ಗೆಯಿಂದಲೇ ನೂರಾರು ಗ್ರಾಮಸ್ಥರು ಇವರ ಮನೆಗೆ ಭೇಟಿ ಕೊಟ್ಟು ಹುಡುಗನನ್ನು ಮಾತನಾಡಿಸಿ ಸಂಭ್ರಮಿಸಿದರು. ಹುಡುಗನನ್ನು ಮಾತಿನಲ್ಲಿ ಕಿಚಾಯಿಸುತ್ತಾ ಕೇಕೆ ಹಾಕಿದರು.

ಹಿನ್ನೆಲೆ: ಸುಮಾರು 12 ವರ್ಷದ ಹಿಂದೆ ಜಿಂಜೇಗೌಡ ಅವರು ನೆಲಮಂಗಲ ತಾಲೂಕಿನ ಗ್ರಾಮವೊಂದರ ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಿರಿಯ ಪುತ್ರ ಜವರೇಗೌಡ ಕಾಣೆಯಾಗಿದ್ದ. ಆಗ ಆತನಿಗೆ 14 ವರ್ಷವಾಗಿದ್ದು, ಬುದ್ಧಿಮಾಂದ್ಯನಾಗಿದ್ದ. ಈ ಕುರಿತು ನೆಲಮಂಗಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದ ಪೋಷಕರು, ವರ್ಷಗಳ ಕಾಲ ಹುಡುಕಿ ಸುಮ್ಮನಾಗಿದ್ದರು. ಎಂಟು ವರ್ಷದ ಹಿಂದೆ ಅವರ ಕುಟುಂಬ ಸ್ವಗ್ರಾಮವಾದ ಮಾಕಳಿಗೆ ಬಂದು ನೆಲೆಸಿತ್ತು.

ನೆಲಮಂಗಲದಿಂದ ನಾಪತ್ತೆ ಆಗಿದ್ದ ಜವರೇಗೌಡ ಅಪಘಾತವೊಂದರಲ್ಲಿ ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಆಸ್ಪತ್ರೆಯ ಸಿಬ್ಬಂದಿಯೇ ಆಶ್ರಯ ನೀಡಿ ಆತನನ್ನು ಪೋಷಿಸುತ್ತಿದ್ದರು.

ಭಾನುವಾರ ಟಿ.ವಿ. ವಾಹಿನಿಗಳಲ್ಲಿ ಹುಡುಗನ ವಿಷಯ ಪ್ರಸಾರವಾಗಿದ್ದು, ಇದನ್ನು ಗಮನಿಸಿದ ಪೋಷಕರು ಸಂಭ್ರಮಿಸಿದ್ದರು. ಸೋಮವಾರ ರಾತ್ರಿಯೇ ಶಿವಮೊಗ್ಗಗೆ ತೆರಳಿ ಆಸ್ಪತ್ರೆ ಸಿಬ್ಬಂದಿಸಂಪರ್ಕಿಸಿ ಹುಡುಗನನ್ನು ಬುಧವಾರ ವಾಪಸ್‌ ಊರಿಗೆ ಕರೆತಂದರು.

**

ಆರತಿ ಎತ್ತಿ ಸ್ವಾಗತ

ಆರತಿ ಎತ್ತಿ, ಸಿಹಿ ತಿನ್ನಿಸಿ ಸ್ವಾಗತಿಸಲಾಯಿತು.

‘ನಮ್ಮ ಹುಡುಗ ಇದೀಗ ಯುವಕನಾಗಿದ್ದು, ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಚಡಪಡಿಸತೊಡಗಿದ್ದಾನೆ, ಮುಂದೆ ಒಂದೆರಡು ದಿನ ನೋಡುತ್ತೇವೆ. ಆತ ಇಲ್ಲಿಗೆ ಒಗ್ಗಿಕೊಳ್ಳದಿದ್ದರೆ ಮತ್ತೆ ಆಸ್ಪತ್ರೆಗೆ ಕಳುಹಿಸುತ್ತೇವೆ. ನಾವು ಆಗಾಗ್ಗೆ ಹೋಗಿ ನೋಡಿಕೊಂಡು ಬರುತ್ತೇವೆ. ನಮ್ಮ ಹುಡುಗನಿಗೆ ಅಲ್ಲಿಯೇ ಉದ್ಯೋಗ ಕೊಡಿಸುವುದಾಗಿ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ’ ಎಂದು ಯುವಕನ ತಾಯಿ ನಿಂಗಮ್ಮ ಹೇಳಿದರು.

**

ಹುಡುಗ ಇಲ್ಲಿಯೇ ಹೊಂದಿಕೊಳ್ಳದೇ ಇದ್ದರೆ ಮತ್ತೆ ಆತನನ್ನು ಶಿವಮೊಗ್ಗಕ್ಕೆ ಕಳುಹಿಸುತ್ತೇವೆ, ನಾವೇ ಆಗಾಗ್ಗೆ ಹೋಗಿ ನೋಡಿಕೊಂಡು ಬರುತ್ತೇವೆ

–ನಿಂಗಮ್ಮ , ಯುವಕನ ತಾಯಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry