ಮಾವಿನ ತಾಕಿನಲ್ಲಿ ಪ್ರಾತ್ಯಕ್ಷಿಕೆ

7

ಮಾವಿನ ತಾಕಿನಲ್ಲಿ ಪ್ರಾತ್ಯಕ್ಷಿಕೆ

Published:
Updated:
ಮಾವಿನ ತಾಕಿನಲ್ಲಿ ಪ್ರಾತ್ಯಕ್ಷಿಕೆ

ಕೈಲಾಂಚ (ರಾಮನಗರ): ಮಾಗಡಿಯ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಇಲ್ಲಿನ ಗೌಡಯ್ಯನದೊಡ್ಡಿಯ ರೈತ ಶಿವಣ್ಣ ಅವರ ಮಾವಿನ ತೋಟದಲ್ಲಿ ಸೂಕ್ಷ್ಮ ಸಂಗ್ರಹಣಾ ಪ್ರದೇಶವನ್ನು ನಿರ್ಮಾಣ ಮಾಡಿ ಮಣ್ಣು ಮತ್ತು ನೀರು ಸಂರಕ್ಷಣೆ ಮಾಡುವ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಮಾವಿನ ತಾಕುಗಳಲ್ಲಿ ಸೂಕ್ಷ್ಮ ಸಂಗ್ರಹಣಾ ಪದ್ಧತಿಗಳಾದ ವೃತ್ತಾಕಾರ, ಚೌಕಾಕಾರ, ಅರ್ಧವೃತ್ತಾಕಾರ ಹಾಗೂ ‘ವಿ’ ಆಕಾರದ ಸಂಗ್ರಹಣಾ ಪದ್ಧತಿ ಅಳವಡಿಕೆಯ ಅನುಕೂಲಗಳು ಹಾಗೂ ಅವುಗಳನ್ನು ನಿರ್ಮಾಣ ಮಾಡಿ ತಮ್ಮ ತಾಕುಗಳಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ರೈತರಿಗೆ ತಿಳಿಸಿಕೊಡಲಾಯಿತು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಸಯ್ಯದ್‌ ಮಜರ್‌ ಆಲಿ ಮಾತನಾಡಿ, ವಿವಿಧ ಬಗೆಯ ಇಳಿಜಾರಿನ ಪ್ರದೇಶಗಳಲ್ಲಿ ಯಾವ ರೀತಿಯ ಸೂಕ್ಷ್ಮ ಸಂಗ್ರಹಣಾ ಪದ್ಧತಿಗಳನ್ನು ಅಳವಡಿಸಬೇಕು. ಇಳಿಜಾರಿನ ಪ್ರದೇಶಗಳಲ್ಲಿ ನಿರ್ಮಿಸಿದ ಬದುಗಳ ಮಣ್ಣು ಕೊಚ್ಚಿ ಹೋಗದಂತೆ ತಡೆಯಲು ಲಾವಾಂಚ ಹುಲ್ಲನ್ನು ಬದುಗಳ ಮೇಲೆ ಬೆಳೆಸಬೇಕು ಎಂದು ತಿಳಿಸಿದರು

‘ಈ ರೀತಿಯ ಪದ್ಧತಿಗಳನ್ನು ಅನುಸರಿಸಿದರೆ 20 ಮಿ.ಮೀ. ಮಳೆಯಾದಲ್ಲಿ ಸುಮಾರು 200 ಲೀಟರ್‌ನಷ್ಟು ನೀರನ್ನು ಸಂಗ್ರಹಿಸಬಹುದು. ಇದರಿಂದ ಮರಗಳ ಬುಡದಲ್ಲಿ ತೇವಾಂಶವನ್ನು ಸಂರಕ್ಷಿಸಿ ಮಾವಿನ ಇಳುವರಿಯನ್ನು ಹೆಚ್ಚಿಸಬಹುದು’ ಎಂದು ತಿಳಿಸಿದರು.

‘ಜಿಲ್ಲೆಯು ಮಾವಿನ ಬೆಳೆಗೆ ಹೆಸರುವಾಸಿಯಾಗಿದೆ. ಇಲ್ಲಿನ ಬಹುಭಾಗ ಇಳಿಜಾರು ಹಾಗೂ ತಗ್ಗು ಪ್ರದೇಶದಿಂದ ಕೂಡಿದೆ. ಇದರಿಂದ ಮಣ್ಣಿನ ಸವಕಳಿ ಹಾಗೂ ನೀರಿನ ಸಂರಕ್ಷಣೆಯಿಲ್ಲದೆ ಇಳುವರಿಯ ಮೇಲೆ ಪ್ರಭಾವ ಬೀರುತ್ತಿದೆ. ಆದ್ದರಿಂದ ಅಗತ್ಯವಿರುವ ರೈತರು ಸೂಕ್ಷ್ಮ ಸಂಗ್ರಹಣಾ ಪ್ರದೇಶ ನಿರ್ಮಾಣವನ್ನು ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry