ಹೊರದೆ, ಹೆರದೆಯೂ ಜಗ ಮೆಚ್ಚಿದ ತಾಯಿಯಾದಳು

7

ಹೊರದೆ, ಹೆರದೆಯೂ ಜಗ ಮೆಚ್ಚಿದ ತಾಯಿಯಾದಳು

Published:
Updated:
ಹೊರದೆ, ಹೆರದೆಯೂ ಜಗ ಮೆಚ್ಚಿದ ತಾಯಿಯಾದಳು

ಮದುವೆಯಾಗದ ಹೆಣ್ಣು ತಾಯ್ತನ ಅನುಭವಿಸುವುದನ್ನು ಇಂದಿಗೂ ಸಮಾಜ ಒಪ್ಪುತ್ತಿಲ್ಲ.

ತಾಯ್ತನದ ಅನುಭೂತಿ ತೋರಲು ಆಕೆಯೇ ಮಗುವನ್ನು ಹೆರಬೇಕಿಲ್ಲ.  ಸಮಾಜದ ಕೊಂಕು ಮಾತಿಗೆ ಬೆಲೆ ಕೊಡದೆ ಯಾರದೋ ಮಗುವಿಗೆ ತಾಯ್ತನದ ಪ್ರೀತಿ ತೋರಲು ಸಾಧ್ಯ.  ಮಾತ್ರವಲ್ಲ ಆ ಮಗುವಿಗೆ ತಾನು ಹೇಗೆ ತಾಯಿಯಾದೆ ಎಂಬ ವಾಸ್ತವವನ್ನು ಬಿಟ್ಟುಕೊಡದೆ ಎಲ್ಲಾ ಕುಹಕದ ಪ್ರಶ್ನೆಗಳನ್ನೂ ಪ್ರಶ್ನೆಗಳಾಗಿಯೇ ಉಳಿಸಿಬಿಡಲೂ ಅವಳಿಂದ ಸಾಧ್ಯ.

ಅಂಥದೊಂದು ವಿಡಿಯೊವೊಂದು ಫೇಸ್‌ಬುಕ್‌ನಲ್ಲಿ  ಈಗ ಟ್ರೆಂಡಿಂಗ್ ಆಗಿದೆ.  ಸತ್ಯ ಕತೆಯೊಂದನ್ನು ಆಧರಿಸಿದ ವಿಡಿಯೊ ಇದು ಎಂಬ ಟ್ಯಾಗ್‌ಲೈನ್‌ ಕೂಡಾ ಇದ್ದು,  ಘಟನೆಗಳನ್ನು ಮರುಸೃಷ್ಟಿ ಮಾಡಲಾಗಿದೆ.

ಜೇನ್ ಎನ್ನುವ ವಿದ್ಯಾರ್ಥಿನಿ, ಕಾಲೇಜಿನಿಂದ ಓಡೋಡುತ್ತಾ ಬರುತ್ತಾಳೆ. ದಾರಿಯಲ್ಲಿ ಜಿಪ್‌ ತೆರೆದುಕೊಂಡಿದ್ದ ಬ್ಯಾಗ್‌ ಅವಳ ಕಣ್ಣಿಗೆ ಬೀಳುತ್ತದೆ. ಹತ್ತಿರ ಹೋಗಿ ನೋಡಿದರೆ ಬ್ಯಾಗ್‌ನಲ್ಲಿ ಒಂದು ಎಳೆಮಗು ಕೈಕಾಲು ಸರಿಸಲಾಗದೆ ಒಂದೇ ಸಮನೆ ಅಳುತ್ತಿರುತ್ತದೆ.

ಜೇನ್‌ ಆ ಹೆಣ್ಣು ಮಗುವನ್ನು ಬ್ಯಾಗ್‌ನಿಂದ ಎತ್ತಿಕೊಂಡು ಮನೆಗೆ ಒಯ್ಯುತ್ತಾಳೆ, ಅಲ್ಲದೆ ಸ್ವತಃ ಹೆತ್ತ ಮಗುವೆಂಬಂತೆ ಜೋಪಾನ ಮಾಡುವ ಕಥೆಯನ್ನು ಈ ವಿಡಿಯೊ ಒಳಗೊಂಡಿದೆ.

ಅನಾಥ ಮಗುವನ್ನು ದತ್ತು ಪಡೆದು ಅದರ ಬೆಳವಣಿಗೆಯ ಪ್ರತಿ ಹಂತದಲ್ಲಿ ಭಾಗಿಯಾಗುವ ಜೇನ್, ಸಮಾಜದ ವ್ಯಂಗ್ಯ ಮತ್ತು ಟೀಕೆಗಳನ್ನು ಎದುರಿಸುತ್ತಲೇ ತಾಯ್ತನದ ಅನುಭೂತಿ ತೋರುತ್ತಾಳೆ. 

ಒಂದು ದಿನ ಮಗಳ ಶಾಲಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಬರುವ ಜೇನ್‌ಗೆ, ಶಾಲಾ ಶಿಕ್ಷಕ, ಮಗಳಿಗೆ ಸತ್ಯ ತಿಳಿಸುವಂತೆ ಹೇಳುತ್ತಾನೆ. ಆದರೆ, ಜೇನ್ ಅದನ್ನು ತಿರಸ್ಕರಿಸುತ್ತಾಳೆ.

ವೇದಿಕೆಯಲ್ಲಿ ಕುರ್ಚಿ ಮೇಲೆ ಕುಳಿತ ಜೇನ್‌ಗೆ ಮಗಳು ಹೂವಿನ ದಂಡೆ ನೀಡಿ, ಕಾಲಿಗೆ ನಮಸ್ಕರಿಸಿ ‘ಐ ಲವ್ ಯೂ ಮಮ್ಮಿ’ ಎನ್ನುತ್ತಾಳೆ. ಮಗುವನ್ನು ಅಷ್ಟೇ ಪ್ರೀತಿಯಿಂದ ಬಿಗಿದಪ್ಪಿಕೊಳ್ಳುವ ಜೇನ್, ಮಗಳು ತನ್ನ ಕೈಸೇರಿದಂದಿನಿಂದ   ಒಂದೊಂದೇ ಘಟನೆಯನ್ನೂ ನೆನೆದು ಆರ್ದ್ರಳಾಗುತ್ತಾಳೆ. ವಿಡಿಯೊ ನೋಡುತ್ತಿರುವವರ ಕಣ್ಣೂ ಮಂಜಾಗುವಂತೆ ಮಾಡುತ್ತಾಳೆ. ‘ಬೀಯಿಂಗ್ ವುಮನ್’ ಪುಟದಲ್ಲಿ ಶೇರ್ ಆಗಿರುವ ಈ ವಿಡಿಯೊವನ್ನು 90 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry