ಪಿಎಚ್.ಡಿ: ಸ್ವಂತಿಕೆ ಎಷ್ಟು?

7

ಪಿಎಚ್.ಡಿ: ಸ್ವಂತಿಕೆ ಎಷ್ಟು?

Published:
Updated:
ಪಿಎಚ್.ಡಿ: ಸ್ವಂತಿಕೆ ಎಷ್ಟು?

‘ಸಾರ್... ಸಾರ್, ಇದನ್ನು ಸ್ವಲ್ಪ ನೋಡಿಕೊಡಕ್ಕೆ ಆಗುತ್ತಾ ಸಾರ್?’ ಅಂತ ನನ್ನ ಸಹ ಅಧ್ಯಾಪಕರೊಬ್ಬರು ನನ್ನ ಬಳಿ ಓಡಿಬಂದರು, ಕೆಲವು ವರ್ಷಗಳ ಹಿಂದೆ. ನನ್ನ ಸಹಾಯ ಬೇಕಾಗಿದ್ದುದು ಅವರು ಆಗತಾನೆ ಮುಗಿಸಿದ್ದ ತಮ್ಮ ಡಾಕ್ಟರೇಟ್‌ಗಾಗಿ ಸಿದ್ಧಪಡಿಸಿದ ಸಂಶೋಧನಾ ಪ್ರಬಂಧಕ್ಕೆ ತಾವೇ ಸ್ವತಃ ಬರೆದಿದ್ದ ಮುನ್ನುಡಿ ಸರಿಯಾಗಿದೆಯೇ ಎಂದು  ನೋಡಿಕೊಡಲು. ಅದು ನನ್ನದಲ್ಲದ ಬೇರೆ ವಿಷಯದ ಸಂಪ್ರಬಂಧವಾಗಿದ್ದರೂ, ಮುನ್ನುಡಿಗಾಗಿ ಮಾತ್ರ ನನ್ನ ಸಹಾಯ ಬೇಕಾಗಿತ್ತು.

ಆದರೆ, ಆ ಮುನ್ನುಡಿಯ ಭಾಷೆ ಹಾಗೂ ವಸ್ತು ಎರಡರಲ್ಲೂ ಎಷ್ಟೊಂದು ತಪ್ಪುಗಳು ಇದ್ದವೆಂದರೆ ಅದನ್ನು ಸರಿಪಡಿಸಲು ಸಾಧ್ಯವಾಗದೇ ಮೊದಲಿನಿಂದ ಬೇರೆ ಬರೆಯುವಂತೆ ಸೂಚಿಸಬೇಕಾಯಿತು. ಸಂಪ್ರಬಂಧವನ್ನು ಅವರು ಹೇಗೆ ರಚಿಸಿದ್ದರೋ ಗೊತ್ತಿಲ್ಲ. ಆದರೆ ಸ್ವಂತವಾಗಿ ಮುನ್ನುಡಿಗಾಗಿ ಬರೆದ ಸಾಲುಗಳು ಮಾತ್ರ ಕಳಪೆಯಾಗಿದ್ದವು. ಮುನ್ನುಡಿ ಬರೆಯಲು ಬೇಕಾಗಿದ್ದ ಸ್ವಂತಿಕೆ ಅವರಲ್ಲಿ ಇರಲಿಲ್ಲ ಎಂಬುದು ಸ್ವಷ್ಟವಾಗಿತ್ತು.

ಯು.ಜಿ.ಸಿ. ನಿಯಮಾವಳಿ ಪ್ರಕಾರ ತಮ್ಮ ಸೇವಾವಧಿಯಲ್ಲಿ ಪಿಎಚ್.ಡಿ ಪಡೆಯುವ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಎಲ್ಲಾ  ಅಧ್ಯಾಪಕರಿಗೆ ಉತ್ತೇಜನಕ್ಕಾಗಿ ಎರಡು ವೇತನ ಬಡ್ತಿಯನ್ನು ನೀಡಲಾಗುವುದೆಂಬ ಆದೇಶ ಬಂದಾಗಿನಿಂದ ಪಿಎಚ್.ಡಿಗಾಗಿ ನೋಂದಣಿ ಮಾಡಿಕೊಳ್ಳುವ ಅಧ್ಯಾಪಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ತಮ್ಮ ತಮ್ಮ ಬೋಧನಾ ವಿಷಯಗಳಲ್ಲಿ ಆಳವಾದ ಅಧ್ಯಯನದ ಮೂಲಕ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಸೂಕ್ತ ಉತ್ತೇಜನ ನೀಡುವುದು ಶೈಕ್ಷಣಿಕ ದೃಷ್ಟಿಯಿಂದ ಅಪೇಕ್ಷಣೀಯವೇ. ಸಂಶೋಧನೆಯ ಫಲ ವಿದ್ಯಾರ್ಥಿಗಳಿಗೂ ಲಭ್ಯವಾಗುವುದಾದರೆ, ಅದರಿಂದ ಉಂಟಾಗುವ ಪ್ರಯೋಜನಗಳು ಹಲವು. ಈ ಆಶಯದಿಂದಲೇ ಅಧ್ಯಾಪಕರ ಶೈಕ್ಷಣಿಕ ಉನ್ನತಿಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಕೈಗೊಳ್ಳಲಾಗಿದೆ.

ಆದರೆ, ಈಗ ಆಗುತ್ತಿರುವುದಾದರೂ  ಏನು? ಬಹುಮಟ್ಟಿಗೆ ಸ್ವಂತ ಅಧ್ಯಯನ ಬಲದಿಂದ ಬರೆಯುವ ಬದಲು, ವಿಮರ್ಶಾ ಗ್ರಂಥಗಳಿಂದ ನೇರ ಅಥವಾ ಪರೋಕ್ಷವಾಗಿ ನಕಲು ಮಾಡುವುದು, ಇತರರು ಬರೆದಿರುವುದನ್ನು ಅನಾಮತ್ತಾಗಿ ಎತ್ತಿಕೊಂಡು ತನ್ನದೆಂದು ಬಿಂಬಿಸುವುದು, ಹೇಳಿದ್ದನ್ನೇ ಹೇಳುವುದು, ವಿಷಯವನ್ನು ಕುರಿತ ಚರ್ಚೆ ಅಥವಾ ವಾದವಿಲ್ಲದೆ ಸಾರಾಂಶ ರೂಪದ ಬರವಣಿಗೆಗಳನ್ನು ಕಾಣಬಹುದಾಗಿದೆ.

ಸಾಹಿತ್ಯ ವಿಷಯದ ಸಂಪ್ರಬಂಧದಲ್ಲಿ ಸ್ವಂತ ಅಭಿಪ್ರಾಯಗಳ ಬದಲು ವಿಮರ್ಶಾ ಗ್ರಂಥಗಳಲ್ಲಿ ಇರುವುದನ್ನೇ ಎತ್ತಿಕೊಂಡು ಪುಟ ತುಂಬಿಸುವ ಅಥವಾ ಕೆಲವೊಮ್ಮೆ, ಕೃತಿ ಚೌರ್ಯದಲ್ಲೇ ಧೈರ್ಯವಾಗಿ ತೊಡಗುವ ಅಕ್ರಮವು ರಾಜಾರೋಷವಾಗಿ ನಡೆಯುವುದನ್ನು ಕಾಣಬಹುದಾಗಿದೆ.

ಕೆಲವೊಂದು ಅಪವಾದಗಳನ್ನು ಬಿಟ್ಟು ಹೇಳುವುದಾದರೆ, ಸಂಶೋಧನಾ ಮಟ್ಟ ಕುಸಿಯುತ್ತಿದೆ ಎಂದು ವಿಷಾದದಿಂದಲೇ ಹೇಳಬೇಕಾಗಿದೆ. ಹೇಗಾದರೂ ಮಾಡಿ ಪಿಎಚ್.ಡಿ ಪಡೆಯಬೇಕೆನ್ನುವ ಕೆಟ್ಟ ಆತುರ ಹೆಚ್ಚಾಗುತ್ತಿದೆ.

ಆರ್ಥಿಕ ಹಾಗೂ ಶೈಕ್ಷಣಿಕ ಪದೋನ್ನತಿಯ ಸೌಲಭ್ಯವೇ ಮುಖ್ಯ ಗುರಿಯಾಗಿದೆ. ಅದಕ್ಕೆ ಬೇಕಾದ ಆಳವಾದ ಅಧ್ಯಯನ, ಶ್ರದ್ಧಾಪೂರ್ವಕ ವಿಷಯ ಗ್ರಹಿಕೆ, ಸ್ವೋಪಜ್ಞತೆ... ಇವೆಲ್ಲಾ ಹಿಂದೆ ಸರಿಯುತ್ತಿವೆ.

ಪಿಎಚ್.ಡಿ ಮಾಡಲು ಸಾಮಾನ್ಯವಾಗಿ ಒಬ್ಬ ಮಾರ್ಗದರ್ಶಿಯ ಸೌಲಭ್ಯವನ್ನು ಪಡೆಯಲಾಗುತ್ತದೆ. ಆದರೆ, ಈ ಗೈಡುಗಳು ಹಲವೊಮ್ಮೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದು  ಕಂಡುಬಂದಿದೆ. ಅಷ್ಟೇ ಅಲ್ಲ, ತಮಗೆ ಬೇಕಾದ ವಿದ್ಯಾರ್ಥಿಯೊಬ್ಬನಿಗೆ ತಮ್ಮ ಸಂಶೋಧನಾ ಪ್ರಬಂಧವನ್ನು ನಕಲು ಮಾಡಲು ಅವಕಾಶ ಕೊಟ್ಟು ಪಿಎಚ್.ಡಿಗಾಗಿ ಶಿಫಾರಸು ಮಾಡಿದ ಉದಾಹರಣೆಯೂ ನಮ್ಮಲ್ಲಿ ಇದೆ. ಹೀಗೆ ಸಂಶೋಧನಾ ಪದವಿ ಪಡೆದ ಅಧ್ಯಾಪಕ ಮುಂದೆ ತಾನೇ ಗೈಡ್ ಆದಾಗ ಯಾವ ರೀತಿಯ ಮಾರ್ಗದರ್ಶನ ಮಾಡಬಹು!?

ಬಾಹ್ಯ ಮೌಲ್ಯಮಾಪನಕ್ಕೆ ಅನುಕೂಲವಾಗಲೆಂದು ಮಾನವಿಕ ವಿಷಯಗಳ ಸಂಪ್ರಬಂಧವನ್ನು ಇಂಗ್ಲಿಷ್‌ನಲ್ಲೇ ಬರೆಯಬೇಕೆಂಬ ನಿಯಮ ಕೆಲವು ವಿಶ್ವವಿದ್ಯಾಲಯಗಳಲ್ಲಿ ಇದೆ. ನಾನು ಅಂತಹ ಕೆಲವನ್ನು ನೋಡಿಯೂ ಇದ್ದೇನೆ. ಆದರೆ ಅದರಲ್ಲಿರುವ ಇಂಗ್ಲಿಷ್ ಬಳಕೆಯ ಹೀನಾಯ ಸ್ಥಿತಿಯನ್ನು ಕಂಡಿದ್ದೇನೆ. ಅಂತಹ ಸಂಪ್ರಬಂಧಗಳನ್ನು ಅನುಮೋದಿಸಿರುವ ಮಾರ್ಗದರ್ಶಿ, ಬಾಹ್ಯ ಮೌಲ್ಯಮಾಪಕರ ಬಗ್ಗೆಯೂ ಕನಿಕರ ಮೂಡದೆ ಇರದು.

ಹಾಗಾಗಿ, ಸಂಶೋಧನಾ ಮಟ್ಟವನ್ನು ಕಾಯ್ದುಕೊಳ್ಳುವ ಅನಿವಾರ್ಯ ಹೆಚ್ಚಾಗಿದೆ. ಪಿಎಚ್.ಡಿ ನೀಡಿಕೆ ಬಗ್ಗೆ ಕಠಿಣ ಕ್ರಮಗಳನ್ನು ರೂಪಿಸಲು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ ನಿರ್ಧರಿಸಿದೆ ಎಂಬ ಸುದ್ದಿ (ಪ್ರ.ವಾ., ಜೂನ್ 6) ನಿಜಕ್ಕೂ ಸ್ವಾಗತಾರ್ಹವಾದುದು. ಪಿಎಚ್.ಡಿಗಾಗಿ ಪ್ರವೇಶ ಪರೀಕ್ಷೆ ನಡೆಸುವುದು, ನೋಂದಣಿ ಮಾಡಿಕೊಳ್ಳುವವರ ಕಾಲಕಾಲದ ಮೌಲ್ಯಮಾಪನ, ಬಾಹ್ಯ ಮೌಲ್ಯ ಮಾಪಕರಿಂದಲೇ ಪರೀಕ್ಷೆ ನಡೆಸುವುದು ಇತ್ಯಾದಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

ಪಿಎಚ್.ಡಿ ಪದವಿಯ ಪ್ರದಾನಕ್ಕೆ ಮೊದಲು ಸಂಶೋಧನಾ ವಿದ್ಯಾರ್ಥಿಯು ಆಹ್ವಾನಿತರ ಎದುರು ತಮ್ಮ ಸಂಪ್ರಬಂಧದ ಬಗ್ಗೆ ಮಾತನಾಡಬೇಕೆಂಬ ಪದ್ಧತಿಯು ಅನೇಕ ಕಡೆ ಇದೆ. ಆದರೆ, ಇಂತಹ ಕಡೆಗಳಲ್ಲಿ ವಿಷಯ ತಜ್ಞರು ಇರುವುದು ಕಡಿಮೆ. ಹಾಗಾಗಿ ಅವುಗಳ ಮೌಲ್ಯಮಾಪನಕ್ಕೆ ಪ್ರತ್ಯೇಕವಾದ ವಿಧಾನಗಳನ್ನೇ ಅನುಸರಿಸಬೇಕು.

ಉದ್ದೇಶಿತ ಯು.ಜಿ.ಸಿ ಹೊಸ ನಿಯಮಾವಳಿಯಲ್ಲಿ ಕೆಟಗರಿ 3ರ ಅಡಿಯಲ್ಲಿ ಬರುವ ವಿಶ್ವವಿದ್ಯಾಲಯಗಳು ಅಥವಾ ಉನ್ನತ ಶಿಕ್ಷಣ ಸಂಸ್ಥೆಗಳು, ನೆಟ್ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಅಥವಾ ಸ್ಲೆಟ್‌ನಲ್ಲಿ (ರಾಜ್ಯಮಟ್ಟದ ಅರ್ಹತಾ ಪರೀಕ್ಷೆ)  ಉತ್ತೀರ್ಣರಾದವರಿಗೆ ಮಾತ್ರ ಪಿಎಚ್.ಡಿಗೆ ಪ್ರವೇಶ ನೀಡಬೇಕು ಎನ್ನುವುದು ಅತ್ಯಂತ ಸಮಂಜಸವಾಗಿದೆ. ಅನೇಕ ಅಧ್ಯಾಪಕರು ಆ ಪರೀಕ್ಷೆಗಳನ್ನು ಪಾಸು ಮಾಡಿದವರಾಗಿರುವುದಿಲ್ಲ.

ಅಲ್ಲದೇ, ನಿಜವಾದ ಸಂಶೋಧನಾ ಪ್ರವೃತ್ತಿ ಸಹಾ ಆ ಅಧ್ಯಾಪಕ ಅಥವಾ ವಿದ್ಯಾರ್ಥಿಯಲ್ಲಿದೆಯೇ ಎಂಬು ದನ್ನು ಕಂಡುಕೊಳ್ಳಬೇಕಾಗಿದೆ. ನಿಜವಾದ ಅಧ್ಯಾಪಕ ನಿರಂತರ ಅಧ್ಯಯನದಲ್ಲಿ ತೊಡಗುವುದು ಅನಿವಾರ್ಯವಾಗಿರುವಂತೆ, ಸಂಶೋಧಕ ಸಹಾ ಪಿಎಚ್.ಡಿ ಪದವಿ ಪಡೆದ ನಂತರವೂ ತನ್ನ ಪ್ರತಿಭೆ, ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳುವುದು ಅಪೇಕ್ಷಣೀಯಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry