ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಂಕಷ್ಟ ಪರಿಹಾರಕ್ಕೆ ಯೋಜನೆ ರೂಪಿಸಿ

Last Updated 8 ಜೂನ್ 2017, 19:48 IST
ಅಕ್ಷರ ಗಾತ್ರ

ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ  ಎಂಬಂತಹ ಭಾವನೆ ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ಹಿಂಸೆಗೆ ಕಾರಣವಾಗಿದೆ. ಈ ಹಿಂಸಾತ್ಮಕ ಗಲಭೆಗಳಲ್ಲಿ ಐವರು ರೈತರು ಸತ್ತಿದ್ದಾರೆ. ಸಾಲ ಮನ್ನಾ ಹಾಗೂ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗಾಗಿ ಆಗ್ರಹಿಸಿ ರೈತರು ಜೂನ್ 1ರಿಂದಲೇ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಮಧ್ಯಪ್ರದೇಶದಲ್ಲಿ 2016ರಲ್ಲಿ 1,600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕೃತ ಅಂಕಿ ಅಂಶಗಳೇ ದೃಢಪಡಿಸಿವೆ.  ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ ಪ್ರಕಾರ, 2011ರಿಂದ 2015ರವರೆಗೆ ಒಟ್ಟು 6,076 ರೈತರು ಮಧ್ಯಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೆರೆಯ ಮಹಾರಾಷ್ಟ್ರ ರಾಜ್ಯದಲ್ಲೂ ರೈತರು ಇದೇ ರೀತಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ನಗರ ಪ್ರದೇಶಗಳಿಗೆ ಕೃಷಿ ಉತ್ಪನ್ನಗಳ ಸರಬರಾಜನ್ನೂ ನಿಲ್ಲಿಸಿದ್ದಾರೆ. ಎರಡೂ ರಾಜ್ಯಗಳ ಸರ್ಕಾರಗಳು ನಿಜವಾದ ರೈತಪರವಾದ ಕಾಳಜಿಯನ್ನು ವ್ಯಕ್ತಪಡಿಸುವಂತಹ ಸಂದೇಶ ನೀಡುವಲ್ಲಿ ವಿಫಲವಾಗಿವೆ. ಇದು ರೈತರ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿದೆ.

ಕೃಷಿ, ರಾಜ್ಯಕ್ಕೆ ಸಂಬಂಧಪಟ್ಟ ವಿಚಾರ. ಆದರೆ  ರೈತರ ಸಾಲ ಮನ್ನಾ ಹಾಗೂ ಬೆಳೆಯ ಉತ್ಪಾದನಾ ವೆಚ್ಚದ ಮೇಲೆ ಶೇ 50ರಷ್ಟು ಲಾಭ ನೀಡುವಂತಹ ಬೆಂಬಲ ಬೆಲೆ ನಿಗದಿಪಡಿಸುವ ಬಗ್ಗೆ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ವಾಗ್ದಾನ ನೀಡಿತ್ತು. ಹೀಗಾಗಿ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಹೆಚ್ಚಿನ ನಿರೀಕ್ಷೆಗಳು ಗರಿಗೆದರಿದ್ದವು. ಆದರೆ ಈಗ ‘ಸಾಲ ಮನ್ನಾ ಸಾಧ್ಯವಿಲ್ಲ’ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ.

ಹಾಗೆಯೇ ಬೆಳೆಗಳಿಗೆ ಶೇ 50ರಷ್ಟು ಲಾಭ ದೊರೆಯುವಂತೆ ಬೆಂಬಲ ಬೆಲೆ ಒದಗಿಸುವುದೂ ಅಸಾಧ್ಯ ಎಂದಾಗಿದೆ.  ಇಂತಹ ಸಂದರ್ಭದಲ್ಲೇ  ಉತ್ತರಪ್ರದೇಶದ ಆದಿತ್ಯನಾಥ ನೇತೃತ್ವದ ಸರ್ಕಾರ ಸಣ್ಣ ಮತ್ತು ಅತಿಸಣ್ಣ ರೈತರ ತಲಾ ₹ 1 ಲಕ್ಷದಷ್ಟು ಬೆಳೆ ಸಾಲ ಮನ್ನಾ ಮಾಡಿತು. ಆ ನಂತರ ವಿವಿಧ ರಾಜ್ಯಗಳಲ್ಲಿ ಸಾಲ ಮನ್ನಾಕ್ಕಾಗಿ ರೈತರ ಬೇಡಿಕೆ ತೀವ್ರತೆ ಪಡೆದುಕೊಂಡಿತು. ಪ್ರತಿಭಟನೆಗಳೂ ಶುರುವಾದವು.

ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡಣವಿಸ್ ನೇತೃತ್ವದ ಸರ್ಕಾರ ಭಾಗಶಃ ಕೃಷಿ ಸಾಲ ಮನ್ನಾ ಪ್ರಕಟಿಸಿದೆ. ಬರದಿಂದ ಕಂಗೆಟ್ಟ ತಮಿಳುನಾಡು ರೈತರು ದೆಹಲಿಯಲ್ಲಿ ಒಂದೂವರೆ ತಿಂಗಳು ಚಳವಳಿ ನಡೆಸಿದ್ದಾರೆ. ಕನಿಷ್ಠ ಬೆಂಬಲ ಬೆಲೆಯ ಲಾಭವನ್ನು ಹೆಚ್ಚಿನ ಬೆಳೆಗಳಿಗೆ ಒದಗಿಸುವ ಭರವಸೆಯನ್ನು ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರ ನೀಡುತ್ತಿದೆ. ಆದರೆ ಇದು ರೈತರ ಕೋಪ ತಣಿಸಲು ಸಾಧ್ಯವಾಗಿಲ್ಲ.

ಹೆಚ್ಚಾಗುತ್ತಿರುವ ಅತೃಪ್ತಿಯನ್ನು ಬಂಡವಾಳ ಮಾಡಿಕೊಳ್ಳಲು ಪ್ರತಿಪಕ್ಷಗಳಿಗೂ ಈಗ ಅವಕಾಶ ಸಿಕ್ಕಿದೆ. ಆದರೆ ವಿಷಯವನ್ನು ರಾಜಕೀಯಗೊಳಿಸುವುದು ಬೇಡ ಎಂಬಂತಹ ಹೇಳಿಕೆ, ಪ್ರತಿಹೇಳಿಕೆಗಳ ಚಕಮಕಿಗೆ ಇದು ಕಾಲವಲ್ಲ. ರೈತರ ಆಕ್ರೋಶ ಶಮನಗೊಳಿಸಲು  ರಾಜ್ಯಗಳು ತಮ್ಮದೇ ಯೋಜನೆಗಳನ್ನು ರೂಪಿಸುವ ಅಗತ್ಯ ಇದೆ.

ಈ ಮಧ್ಯೆಯೇ, ಕೃಷಿ ಆದಾಯವನ್ನು 2022ರೊಳಗೆ ದ್ವಿಗುಣಗೊಳಿಸುವ ದೊಡ್ಡ ಭರವಸೆಯನ್ನೂ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಆದರೆ ಇದಕ್ಕಾಗಿ ಏನು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಿಲ್ಲ. ಸಾಲ ಮನ್ನಾ ಹಾಗೂ ಸಬ್ಸಿಡಿಗಳ ಬದಲಿಗೆ, ಕೃಷಿ ಉತ್ಪಾದನಾ ವೆಚ್ಚದ ಮೇಲೆ  ಶೇ 50ರಷ್ಟು ಲಾಭ ರೈತರಿಗೆ ಸಿಗುವಂತೆ ಮಾಡಲು  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸುವುದು ಸದ್ಯದ ಅಗತ್ಯ.

ಈ ಕುರಿತಂತೆ ಡಾ. ಸ್ವಾಮಿನಾಥನ್ ವರದಿಯ ಶಿಫಾರಸುಗಳನ್ನು ಜಾರಿ ಮಾಡುವ ಕುರಿತು  ಸರ್ಕಾರ ಪರಿಶೀಲಿಸಬೇಕು. ಏಕೆಂದರೆ ಸಾಲ ಮನ್ನಾ ಎಂಬುದು ತಾತ್ಕಾಲಿಕ ಪರಿಹಾರ. ವರ್ಷಗಳು ಉರುಳಿದಂತೆ ಇದೇ ಬೇಡಿಕೆ ಮತ್ತೆ ಮುನ್ನೆಲೆಗೆ ಬರುತ್ತದೆ. ಹೀಗಾಗಿ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಕ್ಕಿದರೆ ಮಾತ್ರ ರೈತರ ಸಂಕಷ್ಟ ಕಡಿಮೆ ಆಗುತ್ತದೆ. ಇದಕ್ಕೆ ಕೇಂದ್ರ ಮನಸ್ಸು ಮಾಡಬೇಕು. ತಾನೇ ಮುಂದಾಳತ್ವ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT