ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ವರವಾದ ಆನ್‌ಲೈನ್‌ ವ್ಯಾಪಾರ

Last Updated 8 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಆನ್‌ಲೈನ್‌ ವ್ಯಾಪಾರ ತಾಣವಾಗಿರುವ ಏಕೀಕೃತ ಮಾರುಕಟ್ಟೆ ವೇದಿಕೆ (ಯುಎಂಪಿ) ಮೂಲಕ ಸರಕುಗಳನ್ನು ಮಾರಾಟ ಮಾಡಿದ ಕರ್ನಾಟಕದ ರೈತರು ಶೇ 38ರಷ್ಟು ಹೆಚ್ಚು ಲಾಭ ಬಾಚಿಕೊಂಡಿದ್ದಾರೆ ಎಂದು ನೀತಿ ಆಯೋಗದ ವರದಿಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರ ಮತ್ತು ರಾಷ್ಟ್ರೀಯ ಇ–ಮಾರುಕಟ್ಟೆ ಸೇವೆ (ಆರ್‌ಇಎಂಎಸ್‌) ಸಹಯೋಗದಲ್ಲಿ ‘ಯುಎಂಪಿ’ಯನ್ನು 2013–14ರಲ್ಲಿಯೇ ಆರಂಭಿಸಲಾಗಿತ್ತು. ಆನಂತರ ಕೇಂದ್ರ ಸರ್ಕಾರವು ಇದನ್ನೇ ಆಧರಿಸಿ ಇಡೀ ದೇಶಕ್ಕೆ ‘ಇಎನ್‌ಎಎಂ’ ಸೇವೆ ವಿಸ್ತರಿಸಿತ್ತು.

ದೇಶದಾದ್ಯಂತ ‘ಯುಎಂಪಿ’ಯು ಇದುವರೆಗೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಇದು ಪರಿಪೂರ್ಣವಾಗಿ ಕಾರ್ಯರೂಪಕ್ಕೆ ಬಂದಾಗ ರೈತರ ವರಮಾನದ ಮೇಲೆ ಗಮನಾರ್ಹ ಪ್ರಭಾವ ಬೀರಲಿದೆ ಎಂದು ನೀತಿ ಆಯೋಗದ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

‘ಯುಎಂಪಿ ಕಾರ್ಯರೂಪಕ್ಕೆ ಬರುವುದಕ್ಕೂ ಮುಂಚಿನ 2013–14ರ ಅವಧಿಯಲ್ಲಿ ಮತ್ತು ಈ ವ್ಯವಸ್ಥೆ ಕಾರ್ಯಾರಂಭ ಮಾಡಿದ ನಂತರದ ಒಂದು ವರ್ಷದ ಅವಧಿಯಲ್ಲಿ (2015–16)  ರೈತರು ತಮ್ಮ ಉತ್ಪನ್ನಗಳಿಗೆ ಪಡೆದ ಬೆಲೆಗಳನ್ನು ಹೋಲಿಕೆ ಮಾಡಲಾಗಿದೆ.

ಕರ್ನಾಟಕದ ಆನ್‌ಲೈನ್‌ ತಾಣದಲ್ಲಿ ಮಾರಾಟ ಮಾಡಿದ ಸರಕುಗಳ ಬೆಲೆಗಳು ಗಮನಾರ್ಹವಾಗಿ ಏರಿಕೆ ದಾಖಲಿಸಿದೆ. ದೇಶದಾದ್ಯಂತ ಇದ್ದ ಸಗಟು ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿದೆ. ರೈತರು ಹೆಚ್ಚು ಪ್ರಯೋಜನ ಪಡೆದಿರುವುದನ್ನು ಅಂಕಿಅಂಶಗಳು ದೃಢಪಡಿಸಿವೆ.

ಬೆಲೆಗಳು ಸರಾಸರಿ ಶೇ 38 ಮತ್ತು ಸಾಮಾನ್ಯ ಮಟ್ಟದಲ್ಲಿ ಶೇ 13ರಷ್ಟು ಏರಿಕೆ ಕಂಡಿವೆ. ತೊಗರಿ, ಕೊಬ್ಬರಿ, ಕಡಲೆಬೇಳೆಗೆ ಹೆಚ್ಚಿನ ಬೆಲೆ ದೊರೆತಿದೆ.

ಸದ್ಯಕ್ಕೆ ಕರ್ನಾಟಕದಲ್ಲಿ 157  ಕೃಷಿ ಮಾರುಕಟ್ಟೆಗಳು ವ್ಯಾಪಾರ, ಹಣ ಪಾವತಿ, ಪರ್ಮಿಟ್ಸ್‌ ಮತ್ತು ದರ್ಜೆಗೆ ಅನುಗುಣವಾಗಿ ವಿಂಗಡಣೆಗೆ ಆನ್‌ಲೈನ್‌ ವ್ಯವಸ್ಥೆಯನ್ನೇ ನೆಚ್ಚಿಕೊಂಡಿವೆ.

‘ಆರ್‌ಇಎಂಎಸ್‌’, ಆಂಧ್ರಪ್ರದೇಶದಲ್ಲಿ  ರಾಜ್ಯ ಸರ್ಕಾರದ ಸಹಯೋಗದಲ್ಲಿ ಗುಂಟೂರು ಸೇರಿದಂತೆ 10 ಅತಿದೊಡ್ಡ ಎಪಿಎಂಸಿಗಳನ್ನು ಆನ್‌ಲೈನ್‌ ವ್ಯಾಪಾರ ವ್ಯಾಪ್ತಿಗೆ ತಂದಿದೆ.

ಇ–ಮಾರುಕಟ್ಟೆ
ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ತಂದುಕೊಡುವ ಹಾಗೂ ಮಧ್ಯವರ್ತಿಗಳ ಹಾವಳಿ ಇಲ್ಲದೆ ಫಸಲು ಮಾರಾಟ ಮಾಡಲು ರಾಜ್ಯ ಸರ್ಕಾರ  ಆರಂಭಿಸಿರುವ ‘ಏಕೀಕೃತ ಮಾರುಕಟ್ಟೆ ವೇದಿಕೆ’ (ಇ-ಮಾರುಕಟ್ಟೆ) ನೆರವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT