ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಸಿಒಗೆ ಭಾರತ ಸೇರ್ಪಡೆ ಸನ್ನಿಹಿತ

ಇಂದು ಜಿನ್‌ಪಿಂಗ್‌ ಜೊತೆ ಮಾತುಕತೆ
Last Updated 8 ಜೂನ್ 2017, 19:30 IST
ಅಕ್ಷರ ಗಾತ್ರ

ಆಸ್ತಾನ: ಎರಡು ದಿನಗಳ ಭೇಟಿಗಾಗಿ ಕಜಕಸ್ತಾನದ ಆಸ್ತಾನಕ್ಕೆ ಗುರುವಾರ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ಸಂಘಟನೆಯ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆಯಲು ವೇದಿಕೆ ಸಜ್ಜಾಗಿದೆ. ಎಸ್‌ಸಿಒ ಆರಂಭವಾದ ಬಳಿಕ ಸಂಘಟನೆ  ಇದೇ ಮೊದಲ ಬಾರಿಗೆ ವಿಸ್ತರಣೆಯಾಗುತ್ತಿದೆ.

ಮೋದಿ ಅವರು ಶೃಂಗಸಭೆ ಉದ್ದೇಶಿಸಿ ಶುಕ್ರವಾರ ಮಾತನಾಡುವ ಸಾಧ್ಯತೆಯಿದೆ. ಜೊತೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಜತೆ ಮಾತುಕತೆ ನಡೆಸಲಿದ್ದಾರೆ.

ವಿವಾದಿತ ಪಾಕ್‌–ಚೀನಾ ಆರ್ಥಿಕ ಕಾರಿಡಾರ್ ಹಾಗೂ ಭಾರತದ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಚೀನಾ ಅಡ್ಡಿಪಡಿಸುತ್ತಿರುವ ಮಧ್ಯೆಯೇ ಉಭಯ ನಾಯಕರ ಭೇಟಿ ಮಹತ್ವ ಪಡೆದಿದೆ.

ಭಾರತ ಹಾಗೂ ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹಸಿರಾಗಿರುವಂತೆಯೇ ನವಾಜ್ ಷರೀಫ್ ಅವರನ್ನು ನರೇಂದ್ರ ಮೋದಿ ಅವರು ಇಲ್ಲಿ ಭೇಟಿ ಮಾಡುವ ಸಾಧ್ಯತೆಯೂ ಇದೆ.

ಕಜಕಸ್ತಾನ ಅಧ್ಯಕ್ಷ ನುರ್ಸುಲ್ತಾನ್ ನಝರ್‌ಬಯೆವ್ ಸೇರಿದಂತೆ ಮೋದಿ ಅವರು ವಿಶ್ವದ ಹಲವು ನಾಯಕರನ್ನು ಭೇಟಿಯಾಗಲಿದ್ದಾರೆ.

ರಷ್ಯಾ, ಚೀನಾ, ಕಜಕಸ್ತಾನ, ಕಿರ್ಗಿಸ್ತಾನ, ತಜಕಿಸ್ತಾನ, ಉಜ್ಬೇಕಿಸ್ತಾನದ ಅಧ್ಯಕ್ಷರು 2001ರಲ್ಲಿ ಸಂಘಟನೆ ಹುಟ್ಟುಹಾಕಿದ್ದರು. 2005ರಲ್ಲಿ ಭಾರತ ಹಾಗೂ ಪಾಕಿಸ್ತಾನ ವೀಕ್ಷಕರಾಗಿ ಸೇರ್ಪಡೆಯಾಗಿದ್ದವು. ಯುರೇಷಿಯಾ ಭಾಗದ ಆರ್ಥಿಕತೆ ಹಾಗೂ ಭದ್ರತಾ ಸಂಬಂಧಿ ಮುಖ್ಯವಾಹಿನಿ ಚರ್ಚೆಗಳಲ್ಲಿ ಭಾರತವು ಭಾಗವಹಿಸುತ್ತಾ ಬಂದಿದೆ.

ಭಾರತಕ್ಕೇನು ಲಾಭ? : ಒಂದೊಮ್ಮೆ ಭಾರತವು ಸಂಘಟನೆಯ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆದರೆ, ಭಯೋತ್ಪಾದನೆ ನಿಗ್ರಹ ಹಾಗೂ ಭದ್ರತೆಗೆ ಸಂಬಂಧಿಸಿದ ವಿಚಾರಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲು ಸಾಧ್ಯವಾಗಲಿದೆ. ಇದು ನ್ಯಾಟೊಗೆ ಪರ್ಯಾಯವೆಂದೂ ಭಾವಿಸಲಾಗಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತವು ಮುಖ್ಯ ಪಾತ್ರ ನಿರ್ವಹಿಸಲಿದೆ.

ಮಧ್ಯ ಏಷ್ಯಾದಲ್ಲಿರುವ ಅಪಾರ ಪ್ರಮಾಣದ ತೈಲ ಹಾಗೂ ಅನಿಲ ನಿಕ್ಷೇಪವನ್ನು ಸುಲಭವಾಗಿ ಪಡೆಯಲು ಭಾರತಕ್ಕೆ ಈ ಸದಸ್ಯತ್ವದಿಂದ ಸಾಧ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT