ಆಳ್ವಾಸ್‌ ಸಂಸ್ಥೆಗೆ ಮೊದಲ ತಿಂಗಳ ವೇತನ: ನಂದಿನಿ

7

ಆಳ್ವಾಸ್‌ ಸಂಸ್ಥೆಗೆ ಮೊದಲ ತಿಂಗಳ ವೇತನ: ನಂದಿನಿ

Published:
Updated:
ಆಳ್ವಾಸ್‌ ಸಂಸ್ಥೆಗೆ ಮೊದಲ ತಿಂಗಳ ವೇತನ: ನಂದಿನಿ

ಮೂಡುಬಿದಿರೆ: ‘ಅನೇಕ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಆಗಬೇಕೆಂದು ಕನಸು ಕಾಣುತ್ತಾರೆ. ಅವರ ಕನಸು ಚಿಗುರಿಸುವ ಕೆಲಸ ಶಿಕ್ಷಣ ಸಂಸ್ಥೆಗಳು ಮಾಡಬೇಕು. ಶಾಲಾ, ಕಾಲೇಜುಗಳಲ್ಲಿ ಸೂಕ್ತ ಮಾಹಿತಿ ನೀಡುವ ಕೆಲಸ ನಡೆದರೆ ಖಂಡಿತ ಫಲ ಸಿಗುತ್ತದೆ’ ಎಂದು ಈ ಬಾರಿಯ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್‌ ಗಳಿಸಿದ ನಂದಿನಿ ಕೆ.ಆರ್‌.ಹೇಳಿದರು.

ತಾವು ಕಲಿತ ಆಳ್ವಾಸ್‌ ಕಾಲೇಜಿಗೆ ಗುರುವಾರ ಭೇಟಿ ನೀಡಿದ ಅವರು ಪತ್ರಕರ್ತರೊಂದಿಗೆ ಮಾತನಾಡಿ, ‘ಆಳ್ವಾಸ್ ಕಾಲೇಜಿನ ಉಚಿತ ಶಿಕ್ಷಣ ಯೋಜನೆಯಡಿ ಕಲಿತ ವಿದ್ಯಾರ್ಥಿನಿ ನಾನು. ಪ್ರತಿ ವರ್ಷ ನನ್ನಂತೆ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಈ ಸಂಸ್ಥೆ ಕಲಿಕೆಗೆ ಆಸರೆಯಾಗಿ ಅವರನ್ನು ಒಳ್ಳೆಯ ನಾಗರಿಕರನ್ನಾಗಿಸಿ ಸಮಾಜಕ್ಕೆ ನೀಡಿದೆ. ಈ ಸಂಸ್ಥೆಯಲ್ಲಿ ಕಲಿತ ನಾನು ಈಗ ಐಎಎಸ್ ಅಧಿಕಾರಿ ಆಗಿದ್ದೇನೆ. ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ಹಿಂತಿರುಗಿಸುತ್ತೇನೆ. ಅದಕ್ಕಾಗಿ ನನ್ನ ಉದ್ಯೋಗದ ಮೊದಲ ತಿಂಗಳ ವೇತನ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಆಳ್ವಾಸ್ ಸಂಸ್ಥೆಗೆ ನೀಡುತ್ತೇನೆ’ ಎಂದರು.

ನೀರಿರುವ ಜಾಗ ತೋರಿಸಿದೆ: ‘ಕುದುರೆಗೆ ನೀರಿರುವ ಜಾಗ ತೋರಿಸಿದರೆ ನೀರು ಹುಡುಕಿ ಕುಡಿಯೋ ಕೆಲಸ ಮಾಡುತ್ತದೆ. ನನ್ನ ಮಗಳು ನಂದಿತಾಳನ್ನು ಸುಂದರವಾದ ಶೈಕ್ಷಣಿಕ ವಾತಾವರಣವಿರುವ ಆಳ್ವಾಸ್ ಕಾಲೇಜಿಗೆ ಸೇರಿಸಿದ್ದೆ. ಮಗಳು ಚೆನ್ನಾಗಿ ಓದಿ ಗುರಿ ಸಾಧಿಸಿದ್ದಾಳೆ’ ಎಂದು ನಂದಿನಿ ಅವರ ತಾಯಿ ಕೆ.ವಿ ವಿಮಲಮ್ಮ ಹೇಳಿದರು.

ಕನಸು ನನಸು: ‘ಐಎಎಸ್, ಐಪಿಎಸ್‌ನಂತಹ ಉನ್ನತ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರುವ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಿಂದ ಮೂಡಿಬರಬೇಕೆಂಬ ನನ್ನ ಕನಸನ್ನು ನಂದಿನಿ ಸಾಕಾರಗೊಳಿಸಿದ್ದಾಳೆ. ಸರಿಯಾದ ಕನಸು, ಹೋರಾಟದ ಮನೋಭಾವ, ಬದ್ಧತೆ ಆಕೆಯ ಯಶಸ್ಸಿಗೆ ಕಾರಣವಾಯಿತು’ ಎಂದು ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry