ಜಿಎಸ್‌ಟಿ ಮಾಹಿತಿ: 41 ಶಾಸಕರು ಮಾತ್ರ ಹಾಜರು

7
ವಿಧಾನಮಂಡಲ ತರಬೇತಿ ಸಂಸ್ಥೆ ಏರ್ಪಡಿಸಿದ್ದ ಶಿಬಿರ

ಜಿಎಸ್‌ಟಿ ಮಾಹಿತಿ: 41 ಶಾಸಕರು ಮಾತ್ರ ಹಾಜರು

Published:
Updated:
ಜಿಎಸ್‌ಟಿ ಮಾಹಿತಿ: 41 ಶಾಸಕರು ಮಾತ್ರ ಹಾಜರು

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕುರಿತು ಮಾಹಿತಿ ನೀಡಲು ಶಾಸಕರಿಗಾಗಿ ಏರ್ಪಡಿಸಿದ್ದ ಉಪನ್ಯಾಸ ಶಿಬಿರದಲ್ಲಿ 41 ಶಾಸಕರು ಮಾತ್ರ ಭಾಗವಹಿಸಿದ್ದರು.

ವಿಧಾನ ಮಂಡಲ ತರಬೇತಿ ಸಂಸ್ಥೆಯಿಂದ ಶಾಸಕರ ಭವನದಲ್ಲಿ  ಬೆಳಿಗ್ಗೆ 9ರಿಂದ 10.30ರವರೆಗೆ ಶಿಬಿರ ನಿಗದಿಯಾಗಿತ್ತು.  ಶಿಬಿರ  ಆರಂಭವಾದಾಗ ಬೆರಳೆಣಿಕೆಯಷ್ಟು ಶಾಸಕರಿದ್ದರು. 10 ಗಂಟೆ ವೇಳೆಗೆ ಶಾಸಕರ ಸಂಖ್ಯೆ 31ಕ್ಕೆ ಏರಿತು. 11 ಗಂಟೆ ಹೊತ್ತಿಗೆ 41 ಶಾಸಕರು ಶಿಬಿರಕ್ಕೆ ಹಾಜರಾದರು.

‘ವಿಧಾನಸಭೆಯಲ್ಲಿ ಜಿಎಸ್‌ಟಿ ಮಸೂದೆ ಮಂಡಿಸಿದಾಗ ಈ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ಹೇಗೆ ಚರ್ಚೆ ಮಾಡುವುದು ಎಂದು ಶಾಸಕರು ಹೇಳಿದ್ದ ಕಾರಣಕ್ಕೆ ಶಿಬಿರ ಏರ್ಪಡಿಸಲಾಗಿದೆ’ ಎಂದು ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದರು.

ಅಕ್ಕಿ, ಅಡಿಕೆ ಬಗ್ಗೆ ಹೆಚ್ಚು ಚರ್ಚೆ: ಅಕ್ಕಿ ಮತ್ತು ಅಡಿಕೆ ಮೇಲೆ ತೆರಿಗೆ ವಿಧಿಸಿರುವ ಬಗ್ಗೆ  ಶಿಬಿರದಲ್ಲಿ ಹೆಚ್ಚು ಚರ್ಚೆ ನಡೆಯಿತು. ‘ಅಡಿಕೆ ಉತ್ಪನ್ನಗಳಿಗೆ ಶೇ 2ರಷ್ಟಿದ್ದ ತೆರಿಗೆಯನ್ನು ಶೇ 28ಕ್ಕೆ ಹೆಚ್ಚಿಸಲಾಗಿದೆ. ಇದು ಬೆಳೆಗಾರರ ಆದಾಯದ ಮೇಲೆ ಪರಿಣಾಮ ಬೀರಲಿದೆ’ ಎಂದು ಅಡಿಕೆ ವ್ಯಾಪಾರಿಯೂ ಆಗಿರುವ ಚನ್ನಗಿರಿ ಶಾಸಕ ವಡ್ನಾಳ ರಾಜಣ್ಣ ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಕೃಷ್ಣ ಬೈರೇಗೌಡ, ‘ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು (ಎಪಿಎಂಸಿ) ಜಿಎಸ್‌ಟಿಯಿಂದ ಹೊರಗಿಡಲಾಗಿದೆ. ಬ್ರ್ಯಾಂಡೆಡ್‌ ಅಡಿಕೆ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಲಾಗುತ್ತದೆ.  ಈ ಹಿಂದೆ ಕಣ್ಣಿಗೆ ಕಾಣಿಸುವಂತೆ ಶೇ 2ರಷ್ಟು ಮಾತ್ರ ತೆರಿಗೆ ಇದ್ದರೆ, ಪರೋಕ್ಷವಾಗಿ ಶೇ 30ರಿಂದ 32ರಷ್ಟು ತೆರಿಗೆ ಇತ್ತು. ಜಿಎಸ್‌ಟಿ ಜಾರಿಯಾದರೆ ಪರೋಕ್ಷ ತೆರಿಗೆ ಇರುವುದಿಲ್ಲ’ ಎಂದರು.

ಇದಕ್ಕೆ ತೃಪ್ತರಾಗದ ವಡ್ನಾಳ ರಾಜಣ್ಣ, ‘ನಾನೂ ಅಡಿಕೆ ವ್ಯಾಪಾರಿ. ಈ ವ್ಯಾಪಾರದಲ್ಲಿ ಹಲವು ಆಯಾಮಗಳಿವೆ. ಎಲ್ಲವನ್ನು ಬಿಡಿಸಿ ಹೇಳಲು ಆಗುವುದಿಲ್ಲ. ಜಿಎಸ್‌ಟಿ ಜಾರಿಗೆ ಬಂದ ಬಳಿಕ ಅದರ ಪರಿಣಾಮ ಗೊತ್ತಾಗುತ್ತದೆ ಬಿಡಿ’ ಎಂದು ಅಸಮಾಧಾನ ಹೊರ ಹಾಕಿದರು.

ಬ್ರ್ಯಾಂಡೆಡ್‌ ಅಕ್ಕಿ ಮೇಲೆ ಶೇ 5ರಷ್ಟು ತೆರಿಗೆ ವಿಧಿಸಿರುವ ಬಗ್ಗೆ ರಾಜ್ಯ ಅಕ್ಕಿ ಗಿರಣಿದಾರರ ಸಂಘದ ಅಧ್ಯಕ್ಷರೂ ಆಗಿರುವ ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ‘ಅಗತ್ಯ ವಸ್ತುಗಳ ಮೇಲೆ ತೆರಿಗೆ ಇಲ್ಲ ಎಂದು ಹೇಳಿದರೂ ಬ್ರ್ಯಾಂಡೆಡ್‌ ಅಕ್ಕಿ ಮೇಲೆ ಶೇ 5ರಷ್ಟು ತೆರಿಗೆ ವಿಧಿಸಲಾಗಿದೆ. ಇದರಿಂದ  ಅಕ್ಕಿ ಮತ್ತು ಅದರ ಉತ್ಪನ್ನ ಇನ್ನಷ್ಟು ದುಬಾರಿಯಾಗಲಿದೆ’ ಎಂದರು.

ಇದಕ್ಕೆ ಉತ್ತರಿಸಿದ ಕೃಷ್ಣ ಬೈರೇಗೌಡ, ‘ಅಕ್ಕಿ ಮೇಲೆ ತೆರಿಗೆ ಬೇಡ ಎಂದು ಜಿಎಸ್‌ಟಿ ಪರಿಷತ್‌ ಸಭೆಯಲ್ಲಿ ಕರ್ನಾಟಕದ ಪರವಾಗಿ ಕೇಳಿಕೊಂಡೆವು. ಆದರೂ, ಶೇ 5ರಷ್ಟು ತೆರಿಗೆ ಹಾಕಲಾಗಿದೆ. ಬ್ರ್ಯಾಂಡೆಡ್‌ ಅಕ್ಕಿಯನ್ನು ಮಧ್ಯಮ, ಮೇಲ್ವರ್ಗದ ಜನ ಖರೀದಿಸುವುದರಿಂದ ಅಷ್ಟೇನು ತೊಂದರೆ ಆಗುವುದಿಲ್ಲ’ ಎಂದು ಸಮಜಾಯಿಷಿ ನೀಡಿದರು.

‘ಜಿಎಸ್‌ಟಿ ಜಾರಿಗೆ ಬಂದ ನಂತರ ದೇಶದಲ್ಲೆಡೆ ಏಕರೂಪ ತೆರಿಗೆ ಇರಲಿದೆ. ಗುಣಮಟ್ಟ ಇರುವ ಉತ್ಪನ್ನವನ್ನು ದೇಶದೆಲ್ಲೆಡೆ ಮಾರಾಟ ಮಾಡಲು ಅನುಕೂಲ ಆಗಲಿದೆ. ಆದರೆ, ತೆರಿಗೆ ವಂಚಿಸಲು ಅವಕಾಶ ಇರುವುದಿಲ್ಲ. ಹೊರ ರಾಜ್ಯಗಳಿಂದ ಕಚ್ಚಾ ವಸ್ತುಗಳನ್ನು ಖರೀದಿಸಿದಾಗ ಪಾವತಿಸಿದ ತೆರಿಗೆಯನ್ನು ಮರುಪಾವತಿ ಮಾಡಿಕೊಳ್ಳಲು ಇದರಲ್ಲಿ ಅವಕಾಶ ಇದೆ’ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry