ರಾಮನಗರದಲ್ಲಿ ಪ್ಲಾಸ್ಟಿಕ್ ಅಕ್ಕಿ ಮೂಡಿಸಿದ ಭೀತಿ

7
‘ಅನ್ನಭಾಗ್ಯ’ ಅಕ್ಕಿಯಲ್ಲೂ ಪ್ಲಾಸ್ಟಿಕ್ ಅಂಶ ಸೇರಿರುವ ಶಂಕೆ

ರಾಮನಗರದಲ್ಲಿ ಪ್ಲಾಸ್ಟಿಕ್ ಅಕ್ಕಿ ಮೂಡಿಸಿದ ಭೀತಿ

Published:
Updated:
ರಾಮನಗರದಲ್ಲಿ ಪ್ಲಾಸ್ಟಿಕ್ ಅಕ್ಕಿ ಮೂಡಿಸಿದ ಭೀತಿ

ರಾಮನಗರ: ಜಿಲ್ಲೆಯ ವಿವಿಧೆಡೆ ಪ್ಲಾಸ್ಟಿಕ್‌ ಅಕ್ಕಿ ಪತ್ತೆ ಪ್ರಕರಣಗಳು ವರದಿಯಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿವೆ. ಸರ್ಕಾರದ ‘ಅನ್ನಭಾಗ್ಯ’ ಯೋಜನೆಯಡಿ ನೀಡಲಾಗುವ ಪಡಿತರದಲ್ಲೂ ಈ ವಿಷಕಾರಿ ಅಂಶಗಳು ಇರುವುದಾಗಿ ವದಂತಿ ಹಬ್ಬಿದೆ.

ಗುರುವಾರವೂ ಇಂತಹ ಎರಡು ಪ್ರಕರಣಗಳು ಕಂಡುಬಂದಿದ್ದು, ಕೊಂಡುತಂದ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ಅಂಶ ಇರುವ ಶಂಕೆ ವ್ಯಕ್ತವಾಯಿತು. ರಾಮನಗರ ತಾಲ್ಲೂಕಿನ ವಿಜಯಪುರದಲ್ಲಿರುವ ಪಾರ್ವತಮ್ಮ ಎಂಬುವರು ಎರಡು ದಿನದ ಹಿಂದೆ ಅಂಗಡಿಯೊಂದರಲ್ಲಿ 25 ಕೆ.ಜಿ. ತೂಕದ ಅಕ್ಕಿಬ್ಯಾಗ್‌ ಖರೀದಿಸಿ ತಂದಿದ್ದರು. ಬುಧವಾರ ಹಾಗೂ ಗುರುವಾರ ಬೆಳಿಗ್ಗೆ ಇದೇ ಅಕ್ಕಿಯಲ್ಲಿ ಅನ್ನ ಮಾಡಿದ್ದರು. ಆದರೆ ಅನ್ನ ಎಂದಿನಂತೆ ಮೃದುವಾಗಿರದೇ ರಬ್ಬರ್‌ನಂತೆ ಇದ್ದು, ಅನುಮಾನಗೊಂಡ ಕುಟುಂಬದ ಸದಸ್ಯರು ಅನ್ನವನ್ನು ಚೆಂಡಿನಂತೆ ಉಂಡೆ ಕಟ್ಟಿ ನೆಲಕ್ಕೆ, ಗೋಡೆಗೆ ಒಗೆದಾಗ ಅದು ಒಡೆಯದೇ ಪುಟಿಯುತ್ತಿರುವುದು ಕಂಡು ಬಂದಿತು.

ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ವಿಜಯಪುರಕ್ಕೆ ಭೇಟಿ ನೀಡಿದ್ದು, ಅಕ್ಕಿಯ ಸ್ಯಾಂಪಲ್‌ ಪಡೆದು ಹಿಂತಿರುಗಿದರು. ಕನಕಪುರದಲ್ಲೂ ಇದೇ ಮಾದರಿಯ ಪ್ರಕರಣವೊಂದು ಗುರುವಾರ ವರದಿಯಾಗಿದ್ದು, ಈ ಕುರಿತ ವಿಡಿಯೋ ದೃಶ್ಯಗಳು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿವೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಇದೇ ಮೊದಲಲ್ಲ:  ಮಾಗಡಿ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಂಶ ಇರುವುದಾಗಿ ಕೆಲವು ದಿನಗಳಿಂದಲೂ ದೂರುಗಳು ಕೇಳಿಬಂದಿವೆ. ಅದರಲ್ಲೂ ‘ಅನ್ನ ಭಾಗ್ಯ’ ಯೋಜನೆ ಅಡಿ ನೀಡಲಾದ ಅಕ್ಕಿಯಲ್ಲಿ ಈ ಅಂಶಗಳು ಇವೆ ಎಂದು ವದಂತಿ ಹಬ್ಬಿದೆ.  ತಾಲ್ಲೂಕಿನ ಪರಂಗಿಚಿಕ್ಕನ ಪಾಳ್ಯದಲ್ಲಿ ಕುಟುಂಬವೊಂದರ ಸದಸ್ಯರು ಈಚೆಗೆ ‘ಅನ್ನಭಾಗ್ಯ’ ಅಕ್ಕಿ ಸೇವಿಸಿದ್ದು, ಹೊಟ್ಟೆನೋವಿನಿಂದ ಬಳಲಿದ್ದರು. ಸೋಮೇಶ್ವರ ಪಾಳ್ಯದ ಮನೆಯೊಂದರಲ್ಲಿಯೂ ಅಕ್ಕಿಯಲ್ಲಿ ಪ್ಲಾಸ್ಟಿಕ್ ಇದೆ ಎನ್ನುವ ಸಂಗತಿ ವರದಿಯಾಗಿತ್ತು. ಹಾರೋಹಳ್ಳಿ ಭಾಗದಲ್ಲಿಯೂ ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ.

‘ಪರಂಗಿಚಿಕ್ಕನ ಪಾಳ್ಯದಲ್ಲಿ ಪ್ಲಾಸ್ಟಿಕ್ ಅಕ್ಕಿ ಇದೆ ಎಂಬ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. ಅಲ್ಲಿನ ಮಾದರಿ ಪಡೆದು ಬೆಂಗಳೂರಿನ ‘ಪಬ್ಲಿಕ್ ಹೆಲ್ತ್‌ ಇನ್‌ಸ್ಟಿಟ್ಯೂಟ್‌’ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ಉಳಿದ ಕಡೆಯೂ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ’ ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಅಧಿಕಾರಿ ಡಿ. ಅನಸೂಯ ‘ಪ್ರಜಾವಾಣಿ’ಗೆ ತಿಳಿಸಿದರು.

ವರದಿಗೆ ಸೂಚನೆ: ಮಾಗಡಿ ಪಟ್ಟಣದ ಕಲ್ಯಾ ಗೇಟ್ ಬಡಾವಣೆಯ ನಿವಾಸಿ ಲಕ್ಷ್ಮಿ ಎಂಬುವರ ಮನೆಯಲ್ಲಿ ಬುಧವಾರ ಪ್ಲಾಸ್ಟಿಕ್‌ ಮೊಟ್ಟೆ ಪತ್ತೆಯಾದ ಕುರಿತು ಪತ್ರಿಕೆಗಳಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ, ಈ ಕುರಿತು ಸಮಗ್ರ ವರದಿ ನೀಡುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಂಟಿ ನಿರ್ದೇಶಕರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

‘ಪ್ಲಾಸ್ಟಿಕ್ ಎನ್ನಲಾದ ಮೊಟ್ಟೆಯನ್ನು ಪಡೆಯಲಾಗಿದ್ದು, ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ’ ಎಂದು ಅನಸೂಯ ಹೇಳಿದರು.

* ಪ್ಲಾಸ್ಟಿಕ್‌ ಅಕ್ಕಿ ಬಗ್ಗೆ ಕೆಲವರು ದೂರಿದ್ದು, ಅಂತಹ ಪದಾರ್ಥಗಳ  ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು

-ಡಿ. ಅನಸೂಯ ಜಿಲ್ಲಾ ಅಧಿಕಾರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ

* ‘ಅನ್ನ ಭಾಗ್ಯ’ ಯೋಜನೆ ಅಡಿ ವಿತರಿಸಿರುವ ಅಕ್ಕಿಯಲ್ಲಿ ಎಲ್ಲಿಯೂ ಪ್ಲಾಸ್ಟಿಕ್‌ ಅಂಶ ಇರುವುದು ಪತ್ತೆಯಾಗಿಲ್ಲ. ಇದೆಲ್ಲ ವದಂತಿ ಅಷ್ಟೇ

-ವಿಜಯಕುಮಾರ್‌ ಉಪನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

ಆನೇಕಲ್‌ನಲ್ಲೂ ಪತ್ತೆ!

ಆನೇಕಲ್‌ :
  ಆನೇಕಲ್‌ ತಾಲ್ಲೂಕಿನ ಚಿಕ್ಕಹೊಸಹಳ್ಳಿಯ ಪಡಿತರ ಅಂಗಡಿಯಲ್ಲಿ ಪಡೆದ ಅಕ್ಕಿಯು ಪ್ಲಾಸ್ಟಿಕ್ ಅಕ್ಕಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಕ್ಕಿಯನ್ನು ಅನ್ನ ಮಾಡಿ ಉಂಡೆ ಮಾಡಿ ಎಸೆದರೆ ಪ್ಲಾಸ್ಟಿಕ್ ಚೆಂಡಿನಂತೆ ಪುಟಿಯುತ್ತಿದೆ. ಹಾಗಾಗಿ ಈ ಅಕ್ಕಿ ಸಹ ಪ್ಲಾಸ್ಟಿಕ್ ಅಕ್ಕಿಯಾಗಿರಬಹುದು ಎಂದು ಶಂಕಿಸಿದ್ದಾರೆ. ಈ ಬಗ್ಗೆ ಆನೇಕಲ್ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲು ತೆರಳಿದಾಗ ಕಚೇರಿಯಲ್ಲಿ ಯಾರು ಲಭ್ಯವಿರಲಿಲ್ಲ ಎಂದು ಜಯಣ್ಣ  ತಿಳಿಸಿದ್ದಾರೆ.

ಆನೇಕಲ್‌ನ ಅಯೋಧ್ಯನಗರದಲ್ಲಿ ಪ್ಲಾಸ್ಟಿಕ್ ಮೊಟ್ಟೆಗಳು ಲಭ್ಯವಾಗಿವೆ. ಮೊಟ್ಟೆಯನ್ನು ಬೇಯಿಸಿದರೆ ಪ್ಲಾಸ್ಟಿಕ್‌ನಂತೆ ಪೊರೆ ಪೊರೆಯಾಗಿ ಬರುತ್ತಿದೆ. ಈ ಬಗ್ಗೆ ಅಂಗಡಿಯ ಮಾಲೀಕನನ್ನು ಪ್ರಶ್ನಿಸಿದರೆ, ‘ನಮಗೆ ಇದಕ್ಕೆ ಸಂಬಂಧವಿಲ್ಲ. ಸಗಟು ಮಾರಾಟಗಾರರು ಪೂರೈಕೆ ಮಾಡಿದ್ದಾರೆ ’ಎಂದು ಹೇಳುತ್ತಾರೆ ಶ್ರೀನಿವಾಸ್ ಎಂಬ ಗ್ರಾಹಕರು ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry