‘ಡ್ರಿಂಕ್‌ ಬಿಯರ್‌ ವಿಥೌಟ್‌ ಫಿಯರ್‌’

7
‘ಡ್ರಿಂಕ್ಸ್‌ ಕಿಕ್‌’ನಲ್ಲಿ ತೇಲಾಡಿದ ವಿಧಾನ ಪರಿಷತ್‌!

‘ಡ್ರಿಂಕ್‌ ಬಿಯರ್‌ ವಿಥೌಟ್‌ ಫಿಯರ್‌’

Published:
Updated:
‘ಡ್ರಿಂಕ್‌ ಬಿಯರ್‌ ವಿಥೌಟ್‌ ಫಿಯರ್‌’

ಬೆಂಗಳೂರು: ಹೆದ್ದಾರಿ ಪಕ್ಕದ ಮದ್ಯದಂಗಡಿಗಳ ಸ್ಥಳಾಂತರ ವಿಚಾರವು ಯಾರು ಯಾರು ಎಣ್ಣೆ ಹಾಕುತ್ತಾರೆ ಎಂಬ ಕಡೆ ಹೊರಳಿ ವಿಧಾನ ಪರಿಷತ್ತಿನಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.

‘ಸರ್ಕಾರ ಕುಡಿಯುವವರ ಪರ ಇಲ್ಲ, ಕುಡಿಯಿರಿ ಎಂದು ಹೇಳುವುದೂ ಇಲ್ಲ. ಆದರೆ, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಕೆಲವು ನಿರ್ಧಾರ ಕೈಗೊಂಡಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸುತ್ತಿದ್ದರು.

‘ಸಾರಾಯಿ ಬಂದ್ ಆದ ಮೇಲೆ ದುಬಾರಿ ಬೆಲೆಗೆ ಬ್ರ್ಯಾಂಡಿ ಕುಡಿಯುವಂತಾಗಿದೆ’ ಎಂದು ಜೆಡಿಎಸ್‌ ಸದಸ್ಯ ಪುಟ್ಟಣ್ಣ  ಚರ್ಚೆಗೆ ‘ಕಿಕ್‌’ ಕೊಟ್ಟರು.

‘ಪುಟ್ಟಣ್ಣಗೆ ವಾಸ್ತವ ಗೊತ್ತಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸಾರಾಯಿ ನಿಷೇಧ ಮಾಡಿದರು. ಆದರೆ, ಜನ ಕುಡಿಯುವುನ್ನು ಬಿಡಲಿಲ್ಲ. ₹ 12ಕ್ಕೆ ಸಿಗುತ್ತಿದ್ದ ಮದ್ಯಕ್ಕೆ ಈಗ ₹100 ಖರ್ಚು ಮಾಡಬೇಕಾಗಿದೆ’ ಎಂದು ಸಿದ್ದರಾಮಯ್ಯ ದನಿಗೂಡಿಸಿದರು.

‘ಒನ್‌ ಗ್ಲಾಸ್‌ ಆಫ್‌ ಬಿಯರ್ ಇಸ್‌ ಗುಡ್‌ ಟು ಹೆಲ್ತ್‌’ ಎಂದು ವೈದ್ಯರೇ ಹೇಳುತ್ತಾರೆ ಎಂದು ಜೆಡಿಎಸ್‌ನ ಶ್ರೀಕಂಠೇಗೌಡ ಮಸಾಲೆ ಬೆರೆಸಿದರು.

‘ಶಿಕ್ಷಕರ ಕ್ಷೇತ್ರ, ಪದವೀಧರರ ಕ್ಷೇತ್ರದಿಂದ ಬಂದ ನೀವೇ ಹೀಗೆ ಹೇಳಿದರೆ ಹೇಗೆ. ವಿದ್ಯಾರ್ಥಿಗಳಿಗೂ ಇದನ್ನೇ ಹೇಳ್ತೀರಾ’ ಎಂದು  ಪುಟ್ಟಣ್ಣ ಹಾಗೂ ಶ್ರೀಕಂಠೇಗೌಡ ಅವರನ್ನು ಸಿದ್ದರಾಮಯ್ಯ ಛೇಡಿಸಿದರು.

‘ಇವರಿಗಾಗಿಯೇ ಟೀಚರ್ಸ್‌ ವಿಸ್ಕಿ ಎಂಬ ಬ್ರ್ಯಾಂಡ್‌ ಇದೆ’ ಎಂದು ಡಿ.ಎಸ್. ವೀರಯ್ಯ ಚಟಾಕಿ ಹಾರಿಸಿದರು. ‘ಡ್ರಿಂಕ್‌ ಬಿಯರ್ ವಿತೌಟ್‌ ಫಿಯರ್. ಬಟ್ ಬಿಯರ್ ಆಫ್ಟರ್ ವಿಸ್ಕಿ ಈಸ್ ರಿಸ್ಕಿ’ ಎಂದು ವಿದ್ಯಾಸಾಗರ್ ಹೇಳುತ್ತಿದ್ದರು ಎಂದು ಬಿಜೆಪಿಯ ರಾಮಚಂದ್ರಗೌಡ ನೆನಪಿಸಿಕೊಂಡರು.

‘ವಿದ್ಯಾಸಾಗರ್ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಅವರ ಜೊತೆಗಿದ್ದರೂ  ರಾಮಚಂದ್ರಗೌಡರು  ಕುಡಿಯುವುದನ್ನು ಕಲಿಯಲಿಲ್ಲ’ ಎಂದು ಸಿದ್ದರಾಮಯ್ಯ ಕೆಣಕಿದರು.

‘ನನಗೂ ಕುಡಿತದ ಅನುಭವ ಇದೆ. ಆದರೆ, ನಿಮ್ಮಷ್ಟು ಇಲ್ಲ. ಯಾರೂ ಕುಡಿಯಬಾರದು, ಆರೋಗ್ಯ ಹಾಳು ಮಾಡಿಕೊಳ್ಳಬಾರದು ಎಂಬುದು ನನ್ನ ಸಲಹೆ’  ಎಂದು ಸಿದ್ದರಾಮಯ್ಯ ಎಲ್ಲ ಸದಸ್ಯರನ್ನು ಉದ್ದೇಶಿಸಿ ಹೇಳಿದರು.

‘ಡ್ರಿಂಕ್ಸ್‌ ಮೇಕ್ಸ್‌ ಮೆನಿ ಲಿಂಕ್ಸ್‌’ ಎಂಬ ಗಾದೆ ಇದೆ ಎಂದು ಶರವಣ ಹೇಳಿದಾಗ, ‘ನಿನ್ಗೆ ಡ್ರಿಂಕ್ಸ್‌ ವಿಚಾರ ಗೊತ್ತಿಲ್ಲ. ಬರೀ ಗೋಲ್ಡ್‌ ಬಗ್ಗೆ ಗೊತ್ತು. ಕೂತ್ಕೊಳ್ಳಪ್ಪ’ ಎಂದು ಸಿದ್ದರಾಮಯ್ಯ ಬಾಯಿ ಮುಚ್ಚಿಸಿದರು. ‘ಗಂಭೀರ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕಾದ ಸದನ ಕುಡುಕರ ಸಂತೆಯಾಗುತ್ತಿದೆ’ ಎಂದು ವಿರೋಧಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಗರಂ ಆದರು. ಬಳಿಕ ಸಭಾಪತಿ ಡಿ.ಎಚ್. ಶಂಕರಮೂರ್ತಿ ಚರ್ಚೆಗೆ ತೆರೆ ಎಳೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry