ಚೊಚ್ಚಲ ಗ್ರ್ಯಾಂಡ್‌ಸ್ಲಾಮ್‌ಗೆ ಮುತ್ತಿಕ್ಕಿದ ಬೋಪಣ್ಣ

7
ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಸಾಧನೆ

ಚೊಚ್ಚಲ ಗ್ರ್ಯಾಂಡ್‌ಸ್ಲಾಮ್‌ಗೆ ಮುತ್ತಿಕ್ಕಿದ ಬೋಪಣ್ಣ

Published:
Updated:
ಚೊಚ್ಚಲ ಗ್ರ್ಯಾಂಡ್‌ಸ್ಲಾಮ್‌ಗೆ ಮುತ್ತಿಕ್ಕಿದ ಬೋಪಣ್ಣ

ಪ್ಯಾರಿಸ್: ಭಾರತದ ರೋಹನ್ ಬೋಪಣ್ಣ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಗುರುವಾರ ಚೊಚ್ಚಲ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಅವರು ಕೆನಡಾದ ಗ್ಯಾಬ್ರಿಯೆಲಾ ದಾಬ್ರೊವ್‌ಸ್ಕಿ ಅವರೊಂದಿಗೆ ತಮ್ಮ ವೃತ್ತಿಜೀವನದ  ಕನಸು ನನಸು ಮಾಡಿಕೊಂಡಿದ್ದಾರೆ.

ಫೈನಲ್ ಪಂದ್ಯದಲ್ಲಿ ಭಾರತ–ಕೆನಡಾದ ಏಳನೇ ಶ್ರೇಯಾಂಕದ ಜೋಡಿ 2–6, 6–2, 12–10ರಲ್ಲಿ ಜರ್ಮನಿಯ ಅನ್ನಾ–ಲೆನಾ ಗ್ರ್ಯಾನೊಫೆಲ್ಡ್ ಮತ್ತು ಕೊಲಂಬಿಯಾದ ರಾಬರ್ಟ್‌ ಫರಾ ಅವರಿಗೆ ಆಘಾತ ನೀಡಿತು.

ಬೋಪಣ್ಣಗೆ ಇದು ಎರಡನೇ ಗ್ರ್ಯಾಂಡ್‌ಸ್ಲಾಮ್ ಫೈನಲ್ ಪಂದ್ಯ ಎನಿಸಿತ್ತು. ಮೊದಲ ಸೆಟ್‌ನಲ್ಲಿ ತೀವ್ರ ಹಿನ್ನಡೆಯೊಂದಿಗೆ ಸೋಲು ಕಂಡಿದ್ದ ಬೋಪಣ್ಣ ಜೋಡಿ ಬಳಿಕ ಆಕರ್ಷಕ ರೀತಿಯಲ್ಲಿ ತಿರುಗೇಟು ನೀಡಿತು.

ಅನ್ನಾ–ರಾಬರ್ಟ್ ಜೋಡಿ ಸುಲಭದಲ್ಲಿ 3–1ರಲ್ಲಿ ಮುನ್ನಡೆ ಗಿಟ್ಟಿಸಿತು. ಇದೇ ಮುನ್ನಡೆಯನ್ನು ಮುಂದುವರಿಸಿದ ಈ ಜೋಡಿ ಮೊದಲ ಸೆಟ್ ಗೆದ್ದು ಸಂಭ್ರಮಿಸಿತು.

ಎರಡನೇ ಸೆಟ್‌ನಲ್ಲಿ ಬೋಪಣ್ಣ  ಜೋಡಿ ನಿಧಾನವಾಗಿ ಪಾಯಿಂಟ್ಸ್ ಕಲೆಹಾಕಲು ಪ್ರಾರಂಭಿಸಿತು. 4–2ರಲ್ಲಿ ಮುನ್ನಡೆ ಸಾಧಿಸಿದ ಬಳಿಕ ಎದುರಾಳಿಗೆ ಪಾಯಿಂಟ್ಸ್ ಬಿಟ್ಟುಕೊಡದೆ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿತು.

ಮೂರನೇ ಸೆಟ್‌ನಲ್ಲಿ ಆರಂಭದಲ್ಲೇ ಹಿಂದೆ ಉಳಿದಿತ್ತು. ಆದರೆ ಫೋರ್‌ಹ್ಯಾಂಡ್ ಹೊಡೆತ ಹಾಗೂ ದೀರ್ಘವಾದ ಬ್ಯಾಕ್‌ಹ್ಯಾಂಡ್ ಶಾಟ್‌ಗಳ ಮೂಲಕ ಗಮನಸೆಳೆಯಿತು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಸೆಟ್‌ನಲ್ಲಿ ಬೋಪಣ್ಣ ಹಾಗೂ ದಾಬ್ರೊವ್‌ಸ್ಕಿ ಜಾಣ್ಮೆಯ ಆಟದಿಂದ ಗೆಲುವಿನ ಕದ ತಟ್ಟಿದರು.

ಎರಡು ಮ್ಯಾಚ್‌ಪಾಯಿಂಟ್ಸ್‌ಗಳನ್ನು ಉಳಿಸಿಕೊಂಡಿದ್ದು ಬೋಪಣ್ಣ ಜೋಡಿಗೆ ವರವಾಯಿತು. ಅನ್ನಾ–ರಾಬರ್ಟ್  10–11ರಲ್ಲಿ ಹಿನ್ನಡೆ ಹೊಂದಿದ್ದಾಗ ಡಬಲ್ ಫಾಲ್ಟ್ ಎಸಗುವ ಮೂಲಕ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು.

ಬೋಪಣ್ಣ 2010ರ ಅಮೆರಿಕ ಓಪನ್‌ನಲ್ಲಿ ಪಾಕಿಸ್ತಾನದ ಅಸೀಮ್ ಉಲ್‌ ಹಕ್ ಖುರೇಷಿ ಅವರೊಂದಿಗೆ ಪುರುಷರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಸೋಲು ಕಂಡಿದ್ದರು. ಈ ಪಂದ್ಯದಲ್ಲಿ ಬೋಪಣ್ಣ ಜೋಡಿ ಬಾಬ್‌ ಹಾಗೂ ಮೈಕ್ ಸೋಹದರರ ಎದುರು ಸೋಲು ಕಂಡಿತ್ತು. ಇಲ್ಲಿಯವರೆಗೂ ಲಿಯಾಂಡರ್‌ ಪೇಸ್, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ ಮಾತ್ರ ಭಾರತಕ್ಕೆ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ತಂದುಕೊಟ್ಟಿದ್ದರು.

‘ಎರಡನೇ ಸೆಟ್‌ನಲ್ಲಿ ನಿಧಾನವಾಗಿ ಪಾಯಿಂಟ್ಸ್ ಕಲೆಹಾಕಲು ಪ್ರಾರಂಭಿಸಿದೆವು. ಫೈನಲ್ ಪಂದ್ಯವಾಗಿ ದ್ದರಿಂದ ರಿಟರ್ನ್ಸ್ ಹಾಗೂ ಸರ್ವ್ ಮಾಡುವ ವೇಳೆ ಹೆಚ್ಚು ಜಾಗರೂಕತೆ ಯಿಂದ ಆಡಿದೆವು. ಪಂದ್ಯದ ವೇಳೆ ಒಬ್ಬರಿಗೊಬ್ಬರು ಉತ್ತೇಜನ ನೀಡಿದ್ದು ಹೆಚ್ಚು ಸಹಕಾರಿ ಆಯಿತು’ ಎಂದು ಬೋಪಣ್ಣ ಪಂದ್ಯದ ಬಳಿಕ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

‘ಚಿಕ್ಕವಳಿದ್ದಾಗಿನಿಂದ ಕಾಣುತ್ತಿದ್ದ ಕನಸು ಇಂದು ನನಸಾಗಿದೆ. ಸಿಂಗಲ್ಸ್ ಹಾಗೂ ಡಬಲ್ಸ್‌ ವಿಭಾಗಗಳಲ್ಲಿ ಸಿಗದ ಯಶಸ್ಸು ಮಿಶ್ರ ಡಬಲ್ಸ್‌ನಲ್ಲಿ ಸಿಕ್ಕಿದೆ. ಇದಕ್ಕಿಂತ ಸಂತೋಷವಾದ ಸಂದರ್ಭ ಇನ್ನೊಂದಿಲ್ಲ’ ಎಂದು ಕೆನಡಾದ ಆಟಗಾರ್ತಿ ಹೇಳಿದ್ದಾರೆ.

ಫೈನಲ್‌ಗೆ  ಜೆಲೆನಾ

ಲಾಟ್ವಿಯಾದ ಶ್ರೇಯಾಂಕರಹಿತ ಆಟಗಾರ್ತಿ ಜೆಲೆನಾ ಓಸ್ತಪೆಂಕೊ ಗುರುವಾರ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಡುವ ಮೂಲಕ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾಗಿದ್ದಾರೆ. ಜೆಲೆನಾ ಈ ಟೂರ್ನಿಯಲ್ಲಿ ಫೈನಲ್‌ ತಲುಪಿದ್ದು ಎರಡು ಪ್ರಥಮಗಳಿಗೆ ಕಾರಣವಾಗಿದೆ.

ಲಾಟ್ವಿಯಾದ ಸ್ಪರ್ಧಿಯೊಬ್ಬರು ಗ್ರ್ಯಾಂಡ್‌ಸ್ಲಾಮ್ ಟೂರ್ನಿಯೊಂದರ ಫೈನಲ್ ತಲುಪಿದ್ದು ಇದೇ ಮೊದಲ ಬಾರಿಗೆ. ಅಲ್ಲದೇ ಶ್ರೇಯಾಂಕರಹಿತ ಆಟಗಾರ್ತಿ ಫೈನಲ್‌ನಲ್ಲಿ ಆಡುತ್ತಿರುವುದು ಕೂಡ ಇದೇ ಪ್ರಥಮ ಎನಿಸಿದೆ.

ಮಹಿಳೆಯರ ಸಿಂಗಲ್ಸ್‌ ವಿಭಾಗದ ವಿಶ್ವ ರ್‍ಯಾಂಕಿಂಗ್‌ನಲ್ಲಿ 47ನೇ ಸ್ಥಾನದಲ್ಲಿರುವ ಜೆಲೆನಾ ಗುರುವಾರ 20ನೇ ವಸಂತಕ್ಕೆ ಕಾಲಿಟ್ಟರು. ತಮ್ಮ ಹುಟ್ಟುಹಬ್ಬದ ದಿನ ನಡೆದ ಸೆಮಿಫೈನಲ್‌ನಲ್ಲಿ ಅವರು 7–6, 3–6, 6–3ರಲ್ಲಿ ಸ್ವಿಟ್ಜರ್‌ಲೆಂಡ್‌ನ ಟೈಮಿಯಾ ಬ್ಯಾಸಿನ್ಜಿ ಅವರಿಗೆ ಆಘಾತ ನೀಡಿದ್ದಾರೆ.

ಹೋದ ವರ್ಷ ಇದೇ ಟೂರ್ನಿಯಲ್ಲಿ ಜೆಲೆನಾ ಮುಖ್ಯ ಸುತ್ತು ಪ್ರವೇಶಿಸಿದ್ದರು. ಆದರೆ ಮೊದಲ ಸುತ್ತಿನಲ್ಲೇ ಸೋಲು ಕಂಡು ಹೊರಬಿದ್ದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry