ಕಲಾಪಕ್ಕೆ ಅಧಿಕಾರಿಗಳ ಗೈರು ಶಾಸಕರ ಆಕ್ರೋಶ

7

ಕಲಾಪಕ್ಕೆ ಅಧಿಕಾರಿಗಳ ಗೈರು ಶಾಸಕರ ಆಕ್ರೋಶ

Published:
Updated:
ಕಲಾಪಕ್ಕೆ ಅಧಿಕಾರಿಗಳ ಗೈರು ಶಾಸಕರ ಆಕ್ರೋಶ

ಬೆಂಗಳೂರು: ವಿಧಾನಸಭೆಯಲ್ಲಿ  ಇಲಾಖಾವಾರು ಬೇಡಿಕೆಗಳ ಮೇಲಿನ ಚರ್ಚೆಯ ಸಂದರ್ಭದಲ್ಲಿ ಅಧಿಕಾರಿಗಳ ಗ್ಯಾಲರಿ ಸಂಪೂರ್ಣ ಖಾಲಿ ಇದ್ದ  ಬಗ್ಗೆ ವಿರೋಧ ಪಕ್ಷಗಳ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಸದನದ ಕಲಾಪಕ್ಕೆ ಸಚಿವರು ಮತ್ತು ಅಧಿಕಾರಿಗಳು ಗೈರು ಹಾಜರಾಗುವ ಪರಂಪರೆ ಮುಂದುವರಿಸಿರುವುದನ್ನು ಪ್ರಸ್ತಾಪಿಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಬಿಜೆಪಿಯ ಸಿ.ಟಿ.ರವಿ ಇಲಾಖಾ ಬೇಡಿಕೆಗಳ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುವಾಗ, ‘ಕೇಂದ್ರ ಸರ್ಕಾರ ಅನುದಾನ ನೀಡದೇ ಇದ್ದರೆ ರಾಜ್ಯ ಸರ್ಕಾರ ಆರ್ಥಿಕವಾಗಿ ಸಂಕಷ್ಟಕ್ಕೆ ತುತ್ತಾಗುತ್ತಿತ್ತು. ಕೇಂದ್ರದ ಅನುದಾನದಿಂದಲೇ ಸರ್ಕಾರ ನಡೆಯುತ್ತಿದೆ.  ಬೇಕಿದ್ದರೆ ಆರ್ಥಿಕ ಇಲಾಖೆ ಅಧಿಕಾರಿಗಳನ್ನೇ ಕೇಳಬಹುದು’ ಎಂದರು.

ಆ ವೇಳೆಯಲ್ಲಿ ಅಧಿಕಾರಿಗಳ ಗ್ಯಾಲರಿ  ಖಾಲಿ ಇದ್ದುದನ್ನು ಗಮನಿಸಿದ ಗೋವಿಂದ ಕಾರಜೋಳ, ‘ಸದನದಲ್ಲಿ ಸಂಬಂಧಪಟ್ಟ ಮಂತ್ರಿಗಳೂ ಇಲ್ಲ, ಅಧಿಕಾರಿಗಳೂ ಇಲ್ಲ. ನಾವು ಶಂಖ ಊದುತ್ತಲೇ ಇರುತ್ತೇವೆ ಮಂತ್ರಿಗಳು ಮತ್ತು ಅಧಿಕಾರಿಗಳು ಹಳೇ ಚಾಳಿಯನ್ನೇ ಮುಂದುವರಿಸಿದ್ದಾರೆ. ಈ ರೀತಿ ಸದನವನ್ನು ನಡೆಸುವುದಕ್ಕಿಂತ ವಿಧಾನಸಭೆ ವಿಸರ್ಜಿಸಿ’ ಎಂದು ಕಿಡಿಕಾರಿದರು.

ಕಾರಜೋಳ ಅವರ ಮಾತಿಗೆ ಧ್ವನಿಗೂಡಿಸಿದ ಬಿಜೆಪಿಯ ಲಕ್ಷ್ಮಣ ಸವದಿ, ‘ಕಲಾಪದ ವೇಳೆಯಲ್ಲಿ ಯಾವ, ಯಾವ ಮಂತ್ರಿಗಳು ಮತ್ತು ಅಧಿಕಾರಿಗಳು ಹಾಜರಿರಬೇಕು ಎಂಬ ಪಟ್ಟಿ ಮಾಡುತ್ತೇವೆ ಎಂದು ಸಭಾಧ್ಯಕ್ಷರು ಹೇಳಿದ್ದರು. ಆ ರೀತಿ ಪಟ್ಟಿ ಮಾಡಲಾಗುತ್ತಿದೆಯೇ, ಮಾಡಿದ್ದರೆ ಅಧಿಕಾರಿಗಳು ಏಕೆ ಹಾಜರಾಗುತ್ತಿಲ್ಲ. ಅಧಿಕಾರಿಗಳಲ್ಲಿ ಬಹಳಷ್ಟು ಮಂದಿ ಬೌರಿಂಗ್‌ ಕ್ಲಬ್‌ಗೆ ಹೋಗುತ್ತಾರೆ. ಸದನಕ್ಕೆ ಬರುವುದಿಲ್ಲ’ ಎಂದು ದೂರಿದರು.

ಆಗ ಮಧ್ಯಪ್ರವೇಶಿಸಿಸ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ, ‘ನೀವು ಮಾತನಾಡುತ್ತಿರುವುದನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದೇವೆ’ ಎಂದರು. ‘ನೀವು ಅಧಿಕಾರಿಗಳನ್ನು ಸಮರ್ಥಿಸಿಕೊಳ್ಳುವುದು ಬೇಡ’ ಎಂದು ಸವದಿ ತಿರುಗೇಟು ನೀಡಿದರು.

‘ಹಣಕಾಸಿನ ವಿಷಯದ ಬಗ್ಗೆ ಚರ್ಚೆ ನಡೆಸುವಾಗ ಆ ಇಲಾಖೆಯ ಅಧಿಕಾರಿಗಳು ಹಾಜರು ಇರಬೇಕಿತ್ತು. ಹಣಕಾಸು ಮಾತ್ರವಲ್ಲ  ಯಾವುದೇ ಇಲಾಖೆಯ ಅಧಿಕಾರಿಗಳೂ ಕಾಣುತ್ತಿಲ್ಲ’ ಎಂದು ಕಾರಜೋಳ ಟೀಕಿಸಿದರು.

‘ಎಲ್ಲ ಅಧಿಕಾರಿಗಳೂ ಕ್ಲಬ್‌ಗೆ ಹೋಗುತ್ತಾರೆ ಎನ್ನುವುದು ಸರಿಯಲ್ಲ. ಜವಾಬ್ದಾರಿಯಿಂದ ಕೆಲಸ ಮಾಡುವವರೂ ಇದ್ದಾರೆ. ಚರ್ಚೆಯ ಸಂದರ್ಭದಲ್ಲಿ 28 ಇಲಾಖೆಗಳ ಅಧಿಕಾರಿಗಳು ಹಾಜರಿದ್ದರೆ, ಲೋಪ–ದೋಷಗಳನ್ನು ಅವರ ಗಮನಕ್ಕೆ ತರಲು ಸಾಧ್ಯ’ ಎಂದು ಜೆಡಿಎಸ್‌ನ ಶಿವಲಿಂಗೇಗೌಡ ಹೇಳಿದರು.

‘ಅಧಿಕಾರಿಗಳಿಲ್ಲದೇ ಚರ್ಚೆ ಮುಂದುವರಿಸುವುದು ಸರಿಯಲ್ಲ. ಕಲಾಪ ಮುಂದೂಡಬೇಕು’ ಎಂದು ಲಕ್ಷ್ಮಣ ಸವದಿ ಒತ್ತಾಯಿಸಿದಾಗ, ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಎನ್‌.ಎಚ್‌.ಶಿವಶಂಕರರೆಡ್ಡಿ ಕಲಾಪ ಮುಂದೂಡಿದರು.

‘ಸುಳ್ಳು ಹೇಳುತ್ತಿರುವ ಮುಖ್ಯಮಂತ್ರಿ’

‘ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಡ ಕಂಡಲ್ಲಿ ಸುಳ್ಳು ಹೇಳುತ್ತಿದ್ದಾರೆ’ ಎಂದು ಬಿಜೆಪಿಯ ಸಿ.ಟಿ.ರವಿ ದೂರಿದರು.

‘ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ಅನುದಾನವನ್ನು  ಶೇ 63 ರಷ್ಟು ಹೆಚ್ಚಿಸಿದೆ.  ಸಾಲದ ಸುಳಿಗೆ ಸಿಲುಕಿ ಪರದಾಡುತ್ತಿರುವ ರಾಜ್ಯ ಸರ್ಕಾರ ಕೊಂಚ ಉಸಿರಾಡಲು ಸಾಧ್ಯವಾಗಿರುವುದೇ ಕೇಂದ್ರ ನೀಡುತ್ತಿರುವ  ಅನುದಾನದಿಂದ.  ಆದರೆ, ಮುಖ್ಯಮಂತ್ರಿಯವರು ಅಜ್ಞಾನ ಪ್ರದರ್ಶಿಸುತ್ತಿದ್ದಾರೆ’ ಎಂದು ಟೀಕಿಸಿದರು.

ಈ ಸಾಲಿನಲ್ಲಿ ಕೇಂದ್ರ ಸರ್ಕಾರ ನಿರೀಕ್ಷೆಗಿಂತ ₹ 2,084 ಕೋಟಿ ಅಧಿಕ ಅನುದಾನ ನೀಡಿದೆ. ಇಲ್ಲದಿದ್ದರೆ ರಾಜಸ್ವ ಕೊರತೆ ₹ 1,084 ಕೋಟಿ ಆಗುತ್ತಿತ್ತು ಎಂದು ರವಿ ಹೇಳಿದರು.

ರಾಜ್ಯ ಸರ್ಕಾರ ಮಾಡಿರುವ ಸಾಲದ ಪ್ರಮಾಣದ ₹ 2,42,420 ಕೋಟಿ ತಲುಪಿದೆ. ಇದರಿಂದ  ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ತಲಾ ₹ 40 ಸಾವಿರ ಸಾಲದ ಹೊರೆ ಬಿದ್ದಿದೆ ಎಂದು ತಿಳಿಸಿದರು.

* ಇತಿಹಾಸದಲ್ಲಿ ಅತಿ ಹೆಚ್ಚು ಬಜೆಟ್‌ ಮಂಡಿಸಿದ ಕೀರ್ತಿಯ ಜತೆಗೆ ಅತಿ ಹೆಚ್ಚು ಸಾಲ ಮಾಡಿದ ದಾಖಲೆಯೂ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ

– ಸಿ.ಟಿ.ರವಿ, ಶಾಸಕ

* ಅಧಿಕಾರಿಗಳು ಕಚೇರಿಗಳಲ್ಲಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಧಿಮಾಕಿನಲ್ಲಿ ಕೂರುತ್ತಾರೆ. ಶಾಸಕರು ಹೇಳುವ ಕೆಲಸಗಳನ್ನು ಮಾಡುವುದಿಲ್ಲ

–ಲಕ್ಷ್ಮಣ ಸವದಿ, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry