ಬಿಗಿ ಭದ್ರತೆ ನಡುವೆ ಬ್ರಿಟನ್‌ ಚುನಾವಣೆ

7

ಬಿಗಿ ಭದ್ರತೆ ನಡುವೆ ಬ್ರಿಟನ್‌ ಚುನಾವಣೆ

Published:
Updated:
ಬಿಗಿ ಭದ್ರತೆ ನಡುವೆ ಬ್ರಿಟನ್‌ ಚುನಾವಣೆ

ಲಂಡನ್: ಭಾರಿ ಬಿಗಿ ಭದ್ರತೆಯಲ್ಲಿ ಬ್ರಿಟನ್‌ನಲ್ಲಿ ಗುರುವಾರ ಸಾರ್ವತ್ರಿಕ ಚುನಾವಣೆ ನಡೆಯಿತು. ಬೆಳಗಿನ ಜಾವ ಮೂರು ಗಂಟೆ ಹೊತ್ತಿಗೆ (ಭಾರತದ ಕಾಲಮಾನ) ಮೊದಲ ಸುತ್ತಿನ ಫಲಿತಾಂಶ ಲಭ್ಯವಾಗಲಿದ್ದು, ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಪೂರ್ಣ ಚಿತ್ರಣ ಸಿಗಲಿದೆ.

ಸಂಪ್ರದಾಯದಂತೆ ಹೌಟನ್ ಹಾಗೂ ಈಶಾನ್ಯ ಬ್ರಿಟನ್‌ನ ದಕ್ಷಿಣ ಸೌಂಡರ್‌ಲ್ಯಾಂಡ್‌ ಕ್ಷೇತ್ರಗಳ ಫಲಿತಾಂಶ ಮೊದಲು ಪ್ರಕಟವಾಗಲಿದೆ. ಹಾಲಿ ಪ್ರಧಾನಿ ಕನ್ಸರ್ವೇಟಿವ ಪಕ್ಷದ ತೆರೆಸಾ ಮೇ ಹಾಗೂ ಲೇಬರ್ ಪಕ್ಷದ ಜೆರೆಮಿ ಕಾರ್ಬಿನ್‌ ಅವರು ಪರಸ್ಪರ ಸ್ಪರ್ಧಿಗಳು. ಪಕ್ಷವೊಂದು ಅಧಿಕಾರ ಹಿಡಿಯಲು 650ರ ಪೈಕಿ 326 ಸಂಸದರ ಬೆಂಬಲ ಅಗತ್ಯ.

ಉಗ್ರರ ಭೀತಿಯಿಂದ ಭಾರಿ ಭದ್ರತೆ: ಚುನಾವಣೆ ಘೋಷಣೆಯಾದ ಬಳಿಕ ಎರಡು ಬಾರಿ ವಿಧ್ವಂಸಕ ಕೃತ್ಯಗಳಿಗೆ ಬ್ರಿಟನ್ ಸಾಕ್ಷಿಯಾಗಿದೆ. ಮ್ಯಾಂಚೆಸ್ಟರ್‌ನಲ್ಲಿ 22 ಜನರು ಹಾಗೂ ಲಂಡನ್ ಬ್ರಿಡ್ಜ್ ದಾಳಿಯಲ್ಲಿ 8 ಮಂದಿ ಮೃತಪಟ್ಟಿದ್ದರು. ಇದು ಚುನಾವಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಹೀಗಾಗಿ ಮತಗಟ್ಟೆಗಳಲ್ಲಿ ಬಿಗಿ ಪೊಲೀಸ್ ಪಹರೆ ಇತ್ತು.

ದಾಳಿ ನಡೆದ ಎರಡೂ ಬಾರಿಯೂ ಚುನಾವಣಾ ಪ್ರಚಾರ ಸ್ಥಗಿತಗೊಳಿಸುವಂತೆ ರಾಜಕೀಯ ಪಕ್ಷಗಳು ಒತ್ತಾಯಿಸಿದ್ದವು. ಆದರೆ ಪ್ರಜಾತಂತ್ರ ಪ್ರಕ್ರಿಯೆಯನ್ನು ಭಯೋತ್ಪಾದನೆಯು ಹಳಿ ತಪ್ಪಿಸಲು ಅವಕಾಶ ನೀಡಬಾರದು ಎಂದು ಪ್ರಧಾನಿ ಮೇ ಹೇಳಿದ್ದರು.

2015ರಲ್ಲಿ ಬ್ರಿಟನ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷದ ಡೇವಿಡ್ ಕ್ಯಾಮರನ್ ಅವರು 331 ಸಂಸದರ ಬೆಂಬಲದೊಂದಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದರು.

2016ರಲ್ಲಿ ನಡೆದ ಬ್ರೆಕ್ಸಿಟ್ (ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ನಿರ್ಣಯ) ಜನಮತಗಣನೆಯಲ್ಲಿ ಸೋಲುಂಡು ರಾಜೀನಾಮೆ ನೀಡಿದ್ದರು. ಕ್ಯಾಮರನ್ ಸ್ಥಾನವನ್ನು ತೆರೆಸಾ ಮೇ ಅವರು ತುಂಬಿದ್ದರು.

ಅವಧಿಗಿಂತ ಮೂರು ವರ್ಷ ಮೊದಲೇ ತೆರೆಸಾ ಅವರು ಚುನಾವಣೆಯನ್ನು ಘೋಷಿಸಿದ್ದರು.  ಬ್ರೆಕ್ಸಿಟ್‌ ಜಯದ ಬಳಿಕ ಪ್ರಬಲ ಜನಾದೇಶ ಪಡೆಯುವುದು ತೆರೆಸಾ ಅವರ ಉದ್ದೇಶ.

ಯಾರ ಕಡೆಗಿದೆ ಒಲವು: ತೆರೆಸಾ ಅವರ ಕನ್ಸರ್ವೇಟಿವ್ ಪಕ್ಷವು ಜನದ ಸನಿಹಕ್ಕೆ ಬರಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಗೆಲ್ಲುವ ಪಕ್ಷ ಯಾವುದು ಎಂದು ಭಾರಿ ಬೆಟ್ಟಿಂಗ್ ಕೂಡಾ ನಡೆಯುತ್ತಿದೆ.

ಪ್ರಬಲ ಹಾಗೂ ಸ್ಥಿರ ನಾಯಕತ್ವವನ್ನು  ಪ್ರತಿಪಾದಿಸಿ ತೆರೆಸಾ ಮೇ ಅವರು ಜನರ ಬಳಿ ಮತ ಕೇಳಿದ್ದಾರೆ.

ಜೆರೇಮಿ ಅವರು ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಆದರೂ ಬ್ರೆಕ್ಸಿಟ್‌, ಚುನಾವಣೆಯ ಮುಖ್ಯ ವಿಷಯವಾಗಿದೆ.

ಅಂಕಿ–ಅಂಶ

* 4.9 ಕೋಟಿ ಮತದಾರರು

* 15 ಲಕ್ಷ ಭಾರತ ಮೂಲದ ಮತದಾರರು

* 650 ಆಯ್ಕೆಯಾಗಲಿರುವ ಸಂಸದರ ಸಂಖ್ಯೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry