ಸರ್ಕಾರಿ ಕೋಟಾದಡಿ ಸೀಟು ಪಡೆದ ವೈದ್ಯರಿಗೆ ‘ಕಡ್ಡಾಯ ಗ್ರಾಮೀಣ ಸೇವೆ’

7
ಕಾಯ್ದೆ ತಿದ್ದುಪಡಿಗೆ ಪ್ರಸಕ್ತ ಅಧಿವೇಶನದಲ್ಲೇ ಮಸೂದೆ ಮಂಡನೆ

ಸರ್ಕಾರಿ ಕೋಟಾದಡಿ ಸೀಟು ಪಡೆದ ವೈದ್ಯರಿಗೆ ‘ಕಡ್ಡಾಯ ಗ್ರಾಮೀಣ ಸೇವೆ’

Published:
Updated:
ಸರ್ಕಾರಿ ಕೋಟಾದಡಿ ಸೀಟು ಪಡೆದ ವೈದ್ಯರಿಗೆ ‘ಕಡ್ಡಾಯ ಗ್ರಾಮೀಣ ಸೇವೆ’

ಬೆಂಗಳೂರು: ಸರ್ಕಾರಿ ಕೋಟಾದಡಿ ಸೀಟು ಪಡೆದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಂದು ವರ್ಷ ‘ಕಡ್ಡಾಯ ಗ್ರಾಮೀಣ ಸೇವೆ’ ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಉದ್ದೇಶದಿಂದ ‘ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ ಕಾಯ್ದೆ- 2012’ಕ್ಕೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದ್ದು, ಪ್ರಸಕ್ತ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಸಿದ್ಧತೆ ನಡೆದಿದೆ.

ಈಗಾಗಲೇ ತಿದ್ದುಪಡಿ ಕಾಯ್ದೆಯಲ್ಲಿ ಇರಬೇಕಾದ ಅಂಶಗಳಿಗೆ ಅಂತಿಮ ರೂಪ ನೀಡಲಾಗಿದೆ. ಇದಕ್ಕೆ ಸಚಿವ ಸಂಪುಟವೂ ಒಪ್ಪಿಗೆ ನೀಡಿದೆ.

ವೈದ್ಯಕೀಯ ಪದವಿ ಕಲಿಕಾ ಅವಧಿ ಮತ್ತು ಪಠ್ಯಕ್ರಮವನ್ನು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ನಿರ್ಧರಿಸುತ್ತದೆ.

‘ಕಡ್ಡಾಯ ಸೇವಾ ತರಬೇತಿ ಕಾಯ್ದೆ –2012’ರ ಪ್ರಕಾರ ಒಂದು ವರ್ಷ ಕಡ್ಡಾಯ ಗ್ರಾಮೀಣ ಸೇವೆ ತರಬೇತಿ ಪಡೆಯಬೇಕೆಂಬ ಅಂಶ ಎಂಸಿಐ ಪಠ್ಯಕ್ರಮಕ್ಕೆ ಪೂರಕವಾಗಿಲ್ಲ. ಈ ಕಾರಣಕ್ಕೆ ಗೊಂದಲ ಮತ್ತು ವಿವಾದ ಸೃಷ್ಟಿಯಾಗುವುದನ್ನು ತಡೆಯಲು ಈ ಕಾಯ್ದೆ ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ’ ಎಂದೂ ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಕಡ್ಡಾಯ ಮಾಡಿ ಸರ್ಕಾರ 2015ರಲ್ಲಿ ಆದೇಶ ಹೊರಡಿಸಿತ್ತು. ಅದರಂತೆ, ‘ಒಂದು ವರ್ಷ ಕಡ್ಡಾಯವಾಗಿ ಗ್ರಾಮೀಣ ಸೇವೆ ಮಾಡುತ್ತೇವೆ’ ಎಂದು ವಿದ್ಯಾರ್ಥಿಗಳು ಪ್ರಮಾಣ ಪತ್ರ ಸಲ್ಲಿಸಬೇಕಿತ್ತು. ಇಲ್ಲದಿದ್ದರೆ ಎಂಬಿಬಿಎಸ್ ಪದವಿ ಪ್ರಮಾಣ ಪತ್ರ ದೊರೆಯುವುದಿಲ್ಲ ಎಂದು ಕಾಯ್ದೆ ಮಾಡಲಾಗಿತ್ತು.

ಸರ್ಕಾರದ ಆದೇಶ ಪ್ರಶ್ನಿಸಿ ಕೆಲವು ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಅನಂತರ  ಹೈಕೋರ್ಟ್  ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಈಗ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದು, ‘ಸರ್ಕಾರಿ ಕೋಟಾದಡಿ ಕಲಿಯುವ ವಿದ್ಯಾರ್ಥಿಗಳಿಗೆ ಮಾತ್ರ ಗ್ರಾಮೀಣ ಸೇವೆ ಕಡ್ಡಾಯ’ ಮಾಡಲು ಉದ್ದೇಶಿಸಿರುವುದಾಗಿ ತಿಳಿಸಿದೆ.

ತಿದ್ದುಪಡಿ ಕಾಯ್ದೆಯಲ್ಲಿ, ಮೂಲ ಕಾಯ್ದೆಯಲ್ಲಿರುವ  ಸೆಕ್ಷನ್‌ 3(2), 4(2) ಮತ್ತು 5 (2) ಕೈಬಿಡಲು ತೀರ್ಮಾನಿಸಲಾಗಿದೆ. ಈ ಸೆಕ್ಷನ್‌ಗಳ ಪ್ರಕಾರ ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಸೇವಾ ತರಬೇತಿ ಪಡೆಯದ ಅಭ್ಯರ್ಥಿಗಳಿಗೆ ಯಾವುದೇ ವಿಶ್ವವಿದ್ಯಾಲಯವು  ವೈದ್ಯಕೀಯ, ಸ್ನಾತಕೋತ್ತರ ವೈದ್ಯಕೀಯ, ಸೂಪರ್‌ ಸ್ಪೆಷಾಲಿಟಿ ಪದವಿ, ಡಿಪ್ಲೊಮಾ ನೀಡಬಾರದು ಎಂದು ಷರತ್ತು ವಿಧಿಸಲಾಗಿತ್ತು. ಆದರೆ, ಮೂಲ ಕಾಯ್ದೆಯಲ್ಲಿರುವ ಈ ಅಂಶಗಳು ಎಂಸಿಐ ನಿಯಮಗಳಿಗೆ ವಿರುದ್ಧವಾಗಿದ್ದು, ಕಾನೂನಾತ್ಮಕ ಸಮಸ್ಯೆಗಳನ್ನು ಸೃಷ್ಟಿಸುವುರಿಂದ ಈ ಅಂಶಗಳನ್ನು ಕೈಬಿಡಲು ತೀರ್ಮಾನಿಸಲಾಗಿದೆ.

ಪ್ರತಿಯೊಬ್ಬ ವೈದ್ಯಕೀಯ ವಿದ್ಯಾರ್ಥಿಗೆ ಸರ್ಕಾರ ಸುಮಾರು ₹ 6 ಲಕ್ಷ ವೆಚ್ಚ ಮಾಡುತ್ತಿದೆ. ಆದರೆ, ಈ ವಿದ್ಯಾರ್ಥಿಗಳು ರಾಜ್ಯದಲ್ಲಿ ಸೇವೆ ಸಲ್ಲಿಸಲು ಹಿಂಜರಿಯುತ್ತಾರೆ, ಇದರಿಂದಾಗಿ ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಕಾಡುತ್ತಿದೆ. 2017ನೇ ಸಾಲಿನಲ್ಲಿ ಸುಮಾರು 3 ಸಾವಿರ ವಿದ್ಯಾರ್ಥಿಗಳು ಎಂಬಿಬಿಎಸ್, ಎಂ.ಡಿ ಪದವಿ ಪಡೆದಿದ್ದು, ಕೇವಲ 18 ವಿದ್ಯಾರ್ಥಿಗಳು ಮಾತ್ರ ಗ್ರಾಮೀಣ ಸೇವೆ ಆಯ್ಕೆ ಮಾಡಿಕೊಂಡಿದ್ದಾರೆ.

ಗ್ರಾಮೀಣ ಸೇವೆಗೆ ವೈದ್ಯರು ಲಭ್ಯ

‘ಸರ್ಕಾರಿ ಕೋಟಾದಡಿ ಪ್ರತಿ ವರ್ಷ ಮೂರು ಸಾವಿರ ವಿದ್ಯಾರ್ಥಿಗಳು ಎಂಬಿಬಿಎಸ್‌ ಪೂರ್ಣಗೊಳಿಸುತ್ತಾರೆ. ಸರ್ಕಾರದ ಸೌಲಭ್ಯ ಪಡೆದು ಕೋರ್ಸ್ ಮುಗಿಸುವ ಈ ವೈದ್ಯರನ್ನು ಗ್ರಾಮೀಣ ಸೇವೆಗೆ ಬಳಸಿಕೊಂಡು ವೈದ್ಯರ  ಕೊರತೆ ನೀಗಿಸಲು ಉದ್ದೇಶಿಸಲಾಗಿದೆ. ಈ ಕಾರಣಕ್ಕೆ ತಿದ್ದುಪಡಿ ಮಾಡಲಾಗುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಈ ನಿಯಮ ಜಾರಿಗೆ ತರಲು ಉದ್ದೇಶಿಸಲಾಗಿದೆ’ ಎಂದು  ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry