ಜಾನುವಾರು ಮಾರಾಟ ನಿರ್ಬಂಧ ವಿರುದ್ಧ ನಿರ್ಣಯ

7
ಆದೇಶ ವಾಪಸ್‌ ಪಡೆಯಲು ಒತ್ತಾಯ

ಜಾನುವಾರು ಮಾರಾಟ ನಿರ್ಬಂಧ ವಿರುದ್ಧ ನಿರ್ಣಯ

Published:
Updated:
ಜಾನುವಾರು ಮಾರಾಟ ನಿರ್ಬಂಧ ವಿರುದ್ಧ ನಿರ್ಣಯ

ತಿರುವನಂತಪುರ: ಮಾರುಕಟ್ಟೆಯಿಂದ ಕಸಾಯಿಖಾನೆಗೆ  ಜಾನುವಾರು ಮಾರಾಟ ಮತ್ತು ಖರೀದಿಗೆ ನಿರ್ಬಂಧ ಹೇರಿ ಕೇಂದ್ರ ಪರಿಸರ ಸಚಿವಾಲಯ ಮೇ 23ರಂದು ಹೊರಡಿಸಿರುವ ಅಧಿಸೂಚನೆಯನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ ಕೇರಳ ವಿಧಾನಸಭೆ ಗುರುವಾರ ನಿರ್ಣಯ ಅಂಗೀಕರಿಸಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಮಂಡಿಸಿದ ನಿರ್ಣಯವನ್ನು ಸಿಪಿಎಂ ನೇತೃತ್ವದ ಆಡಳಿತಾರೂಢ ಎಡರಂಗ ಮತ್ತು ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳು ಬೆಂಬಲಿಸಿದವು.  ಬಿಜೆಪಿಯ ಏಕೈಕ ಸದಸ್ಯ ಒ. ರಾಜಗೋಪಾಲ್‌ ಅವರು ಮಾತ್ರ ನಿರ್ಣಯವನ್ನು ತೀವ್ರವಾಗಿ ವಿರೋಧಿಸಿದರು.

ಕೇಂದ್ರ ಸರ್ಕಾರದ ‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಜಾನುವಾರು ಮಾರುಕಟ್ಟೆಗಳ ನಿಯಂತ್ರಣ) ನಿಯಮಗಳು–2017’ ಅಧಿಸೂಚನೆಯು ರಾಜ್ಯಗಳು, ಕೃಷಿ ಆರ್ಥಿಕತೆ, ಆಹಾರ ಭದ್ರತೆ ಮತ್ತು ಜಾನುವಾರುಗಳ ಮಾರಾಟದ ಮೇಲೆ ಬೀರುವ ನಕಾರಾತ್ಮಕ ಪರಿಣಾಮಗಳನ್ನು  ಈ ನಿರ್ಣಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ.

‘ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಕಾನೂನು ಮತ್ತು ನೀತಿಗಳನ್ನು ರೂಪಿಸುವ ರಾಜ್ಯಗಳ ಹಕ್ಕುಗಳನ್ನು ಕೇಂದ್ರ ಸರ್ಕಾರ ಗೌರವಿಸಬೇಕು’ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

‘ಗೋವು ಮತ್ತು ಎತ್ತುಗಳು ಪವಿತ್ರ ಎಂಬ ಸಿದ್ಧಾಂತವನ್ನು ಜನರ ಮೇಲೆ ಹೇರಲಾಗುತ್ತಿದೆ. ಈ ಸಿದ್ಧಾಂತವು ಡಾರ್ವಿನ್‌ ಅವರ ವಿಕಾಸವಾದಕ್ಕೂ ಸವಾಲು ಎಸೆದಿದೆ’ ಎಂದು ಸಿಪಿಎಂನ ಹಿರಿಯ ಮುಖಂಡ ವಿ.ಎಸ್‌. ಅಚ್ಯುತಾನಂದನ್‌ ಹೇಳಿದರು.

ನಿರ್ಣಯವನ್ನು ವಿರೋಧಿಸಿದ ಬಿಜೆಪಿ ಶಾಸಕ ಒ. ರಾಜಗೋಪಾಲ್‌, ಈ ವಿಚಾರದಲ್ಲಿ ಪಕ್ಷದ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡರು.

ರಾಜ್ಯದ ಆಡಳಿತ ಮತ್ತು ವಿರೋಧ ಪಕ್ಷಗಳು ಒಟ್ಟಾಗಿ ಕೇಂದ್ರವನ್ನು ಗುರಿಯಾಗಿಸಿಕೊಂಡಿವೆ. ಗಂಭೀರವಲ್ಲದ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದು ದೂರಿದರು.

ವಿಧಾನಸಭೆ ಕ್ಯಾಂಟೀನ್‌ನಲ್ಲಿ ಶಾಸಕರಿಗೆ ದನದ ಮಾಂಸದ ತಿಂಡಿ!

ಕೇರಳದ ಶಾಸಕರಿಗೆ ಗುರುವಾರ  ಬೆಳಿಗ್ಗೆ ವಿಧಾನಸಭೆಯ ಕ್ಯಾಂಟೀನ್‌ನಲ್ಲಿ ಅಚ್ಚರಿ ಕಾದಿತ್ತು. ಉಪಾಹಾರ ಪಟ್ಟಿಯಲ್ಲಿ ದನದ ಮಾಂಸ ಫ್ರೈ ಸೇರಿಕೊಂಡಿತ್ತು!

ಕೆಲವು ಶಾಸಕರು ಅದನ್ನು ತಿಂದು  ಕೇಂದ್ರ ಸರ್ಕಾರದ ಆದೇಶದ ವಿರುದ್ಧ  ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡರು.

ಕೇಂದ್ರದ ನಿರ್ಧಾರವನ್ನು ಪ್ರತಿಭಟಿಸುವುದಕ್ಕಾಗಿ ಉಪಾಹಾರಕ್ಕೆ ದನದ ಮಾಂಸದ ಫ್ರೈ (ಹುರಿದ ಮಾಂಸ) ತಿಂದಿದ್ದಾಗಿ ಸಿಪಿಎಂ ಶಾಸಕಿ ಯು. ಪ್ರತಿಭಾ ಹರಿ ಹೇಳಿದರು.

‘ಸಾಮಾನ್ಯವಾಗಿ ನಾನು ಬೆಳಗ್ಗಿನ ತಿಂಡಿಗೆ ದನದ ಮಾಂಸ ಸೇವಿಸುವುದಿಲ್ಲ. ಆದರೆ, ಇವತ್ತು ಒಂದು ದಿನ ಅದಕ್ಕೆ ವಿನಾಯಿತಿ ನೀಡಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿಧಾನಸಭೆಯ ಕ್ಯಾಂಟೀನ್‌ನಲ್ಲಿ ಮಧ್ಯಾಹ್ನದ ಊಟಕ್ಕೆ ಸಾಮಾನ್ಯವಾಗಿ ದನದ ಮಾಂಸದಿಂದ ಮಾಡಿದ ಆಹಾರ ಇರುತ್ತದೆ. ಗುರುವಾರದ  ಮಟ್ಟಿಗೆ  ಅದರ ಆಡಳಿತ ಬೆಳಗಿನ ಉಪಾಹಾರಕ್ಕೆ ದನದ ಮಾಂಸದ ಆಹಾರ ಸಿದ್ಧಪಡಿಸಿತ್ತು.

ಕೇಂದ್ರದ ಅಧಿಸೂಚನೆಯ ವಿರುದ್ಧ ಕೇರಳದಾದ್ಯಂತ ದನದ ಮಾಂಸದ  ಉತ್ಸವಗಳನ್ನು ಆಯೋಜಿಸಲಾಗಿತ್ತು. ಇದು ಸಂಘ ಪರಿವಾರದ ಟೀಕೆಗೂ ಗುರಿಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry