ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ವತಮ್ಮ ಪ್ರಶಸ್ತಿ ಸ್ಥಾಪಿಸುತ್ತೇವೆ

Last Updated 8 ಜೂನ್ 2017, 19:18 IST
ಅಕ್ಷರ ಗಾತ್ರ

ಬೆಂಗಳೂರು: ‘ಪಾರ್ವತಮ್ಮ  ರಾಜ್‌ಕುಮಾರ್‌ ಹೆಸರಿನಲ್ಲಿ ₹1 ಲಕ್ಷ ಮೊತ್ತದ ಪ್ರಶಸ್ತಿಯೊಂದನ್ನು ಸ್ಥಾಪಿಸುತ್ತೇವೆ. ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡಿದ ಮಹಿಳೆಯೊಬ್ಬರಿಗೆ ಅದನ್ನು ಪ್ರತಿವರ್ಷ ನೀಡುತ್ತೇವೆ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಯು ನಗರದಲ್ಲಿ ಗುರುವಾರ ಏರ್ಪಡಿಸಿದ್ದ ‘ಪಾರ್ವತಮ್ಮ ರಾಜ್‌ಕುಮಾರ್‌–ಒಂದು ನೆನಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಂದು ಕಾಲದಲ್ಲಿ ಕೆ.ಜಿ.ರಸ್ತೆಯ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳನ್ನು ಪ್ರದರ್ಶಿಸಲು ಅವಕಾಶ ಇರಲಿಲ್ಲ. ಪಾರ್ವತಮ್ಮ ಅವರ ನೇತೃತ್ವದಲ್ಲಿ ಹೋರಾಟ ಮಾಡಿ ಚಿತ್ರಪ್ರದರ್ಶನಕ್ಕೆ ಅವಕಾಶ ಗಿಟ್ಟಿಸಿದೆವು’ ಎಂದು ಸ್ಮರಿಸಿದರು.

‘ಪಾರ್ವತಮ್ಮ ಅವರು ಹೆಚ್ಚು ಓದುತ್ತಿದ್ದರು. ಓದಿನ ಹವ್ಯಾಸವೇ ಅವರನ್ನು ಉತ್ತಮಚಿತ್ರಗಳ ನಿರ್ಮಾಪಕಿಯನ್ನಾಗಿ ಮಾಡಿತು’ ಎಂದು ತಿಳಿಸಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ, ‘ಸವಾಲಿನ ಶಕ್ತಿ ಮತ್ತು ರಾಜ್‌ಕುಮಾರ್‌ ಅವರ ಪ್ರಭಾವಳಿಯಿಂದಾಗಿ ಪಾರ್ವತಮ್ಮ ಬೆಳೆದರು. ಅವರು ಮನುಷ್ಯ ಸಂಬಂಧದಲ್ಲಿ ಕಾರುಣ್ಯ ಮತ್ತು ವ್ಯವಹಾರದಲ್ಲಿ ಕಾಠಿಣ್ಯದ ಗುಣಗಳನ್ನು ರೂಢಿಸಿಕೊಂಡಿದ್ದರು’ ಎಂದರು.

‘ಕೇಂದ್ರವು ಚಿತ್ರೋದ್ಯಮದ ಮೇಲೆ ಶೇ 28 ರಷ್ಟು ಸರಕು ಮತ್ತು ಸೇವಾ ತೆರಿಗೆ ವಿಧಿಸಿದೆ. ಚಿತ್ರರಂಗ ಅದನ್ನು ಒಕ್ಕೊರಲಿನಿಂದ ವಿರೋಧಿಸಬೇಕು’ ಎಂದು ಹೇಳಿದರು.

ಚಿತ್ರನಟ ರಾಘವೇಂದ್ರ ರಾಜ್‌ಕುಮಾರ್‌, ‘ಚಿತ್ರರಂಗಕ್ಕೆ ಅಮ್ಮ ಅಪರಿಚಿತರಾಗಿ ಬಂದು, ಚಿರಪರಿಚಿತರಾಗಿ ಹೋಗಿದ್ದಾರೆ. 1982ರಲ್ಲಿ ಊಟಿಯಲ್ಲಿ ಅಪ್ಪಾಜಿ ಮೇಲೆ ಹಲ್ಲೆ ನಡೆಯಿತು. ಅದನ್ನು ಬಹಳ ದಿನ ಯಾರಿಗೂ ಹೇಳದೆ ಶಾಂತಿ ಕಾಪಾಡಿದರು’ ಎಂದು ಘಟನೆಯೊಂದನ್ನು ಸ್ಮರಿಸಿದರು.

ಪುನೀತ್ ರಾಜ್‌ಕುಮಾರ್ ‘ಇವತ್ತು ನಾನೇನೇ ಆಗಿದ್ದರೂ ಅದಕ್ಕೆ ಅಮ್ಮನೇ  ಕಾರಣ. ಅವರು ಹಾಕಿಕೊಟ್ಟ ಹಾದಿಯಲ್ಲಿಯೇ ನಡೆಯುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT