ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷದಿಂದಲೇ 3 ವಿ.ವಿಗಳು ಕಾರ್ಯಾರಂಭ

ಕುಲಪತಿ, ಕುಲಸಚಿವರ ನೇಮಕ ಪ್ರಕ್ರಿಯೆ ಪ್ರಾರಂಭ
Last Updated 8 ಜೂನ್ 2017, 19:22 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಬೆಂಗಳೂರು ವಿಶ್ವವಿದ್ಯಾಲಯವು ದಕ್ಷಿಣ, ಕೇಂದ್ರ ಮತ್ತು ಉತ್ತರ ಮೂರು ವಿಭಾಗಗಳಾಗಿ ಕಾರ್ಯನಿರ್ವಹಿಸಲಿವೆ.

ಆಗಸ್ಟ್‌ನಿಂದ ಹೊಸ ವಿಶ್ವವಿದ್ಯಾಲಯಗಳು ಪ್ರಾರಂಭಗೊಳ್ಳಲಿವೆ. ಉತ್ತರ ವಿಶ್ವವಿದ್ಯಾಲಯದ ಆಡಳಿತ ಕಚೇರಿಯನ್ನು ಕೋಲಾರದಲ್ಲಿರುವ ಸ್ನಾತಕೋತ್ತರ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಲು ಯೋಜಿಸಲಾಗಿದೆ. ಕೇಂದ್ರ ವಿಶ್ವವಿದ್ಯಾಲಯ ಜ್ಞಾನಜ್ಯೋತಿ ಆವರಣದಲ್ಲಿ ಕಾರ್ಯನಿರ್ವಹಿಸಲಿದೆ.

ಎರಡೂ ವಿಶ್ವವಿದ್ಯಾಲಯಗಳಿಗೆ ಹೊಸ ಕೋರ್ಸ್‌ಗಳ ಸೇರ್ಪಡೆ, ಕುಲಪತಿ, ಕುಲಸಚಿವರು ಹಾಗೂ ಸಿಂಡಿಕೇಟ್‌ ಸದಸ್ಯರ ನೇಮಕ ಪ್ರಕ್ರಿಯೆಯೂ  ಪ್ರಾರಂಭಗೊಂಡಿದೆ.

‘ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗೆ 2017–18ರ ಬಜೆಟ್‌ನಲ್ಲಿ ಯಾವುದೇ ಅನುದಾನ ನೀಡಿಲ್ಲ. ಹೀಗಾಗಿ ಮುಂದಿನ ಅಧಿವೇಶನದ ಲೇಖಾನುದಾನದಲ್ಲಿ ಅದನ್ನು ಸೇರ್ಪಡೆ ಮಾಡಲಾಗುತ್ತದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಕೆಂಪರಾಜು, ‘ವಿಭಜನೆ ಪ್ರಕ್ರಿಯೆ ತಡವಾಗಬಾರದು ಎಂಬ ಕಾರಣಕ್ಕೆ ಡಿಸೆಂಬರ್‌ನಲ್ಲಿಯೇ ₹450 ಕೋಟಿಯ ಕ್ರಿಯಾಯೋಜನೆಯನ್ನು ಸಲ್ಲಿಸಿದ್ದೆವು. ಮೇ ಮೊದಲ ವಾರದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಭಜನೆ ಪ್ರಕ್ರಿಯೆಗೆ ಒಪ್ಪಿಗೆ ದೊರೆಯಿತು’ ಎಂದರು.

‘ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸಲು ಕನಿಷ್ಠ ₹200 ಕೋಟಿ ಬೇಕಾಗುತ್ತದೆ. ಆಡಳಿತ ಕಚೇರಿಗಳನ್ನು ಸ್ಥಾಪಿಸಿ, ಪ್ರಸಕ್ತ ವರ್ಷದಿಂದ ಹೊಸ ವಿಶ್ವವಿದ್ಯಾಲಯ ಪ್ರಾರಂಭಿಸಲು, ಉತ್ತರ ವಿಶ್ವವಿದ್ಯಾಲಯಕ್ಕೆ ₹15 ಕೋಟಿ ಹಾಗೂ ಕೇಂದ್ರ ವಿಶ್ವವಿದ್ಯಾಲಯಕ್ಕೆ ₹10 ಕೋಟಿ ಅನುದಾನ ನೀಡಬೇಕೆಂದು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.’

‘ಆಡಳಿತ ಕಟ್ಟಡಗಳ ನಿರ್ಮಾಣ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಪ್ರಕ್ರಿಯೆ, ಸಿಂಡಿಕೇಟ್ ರಚನೆ, ಪರೀಕ್ಷಾ ವಿಭಾಗ ರಚನೆ, ಮೂಲ ಸೌಕರ್ಯ ಒದಗಿಸುವ ಕೆಲಸಗಳಿಗೆ ಕಾಲಾವಕಾಶ ಬೇಕಾಗುತ್ತದೆ. ಅದಕ್ಕಾಗಿ ತಾತ್ಕಾಲಿಕವಾಗಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಎರಡೂ ವಿಶ್ವವಿದ್ಯಾಲಯಗಳಿಗೂ ತಲಾ 100 ಸಿಬ್ಬಂದಿಯನ್ನು ನೀಡುತ್ತಾರೆ.’

‘ಪದವಿ ತರಗತಿಗಳ ಪ್ರವೇಶ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಅದನ್ನು ಬೆಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿಯೇ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ನಂತರ ಆಯಾ ವಿಶ್ವವಿದ್ಯಾಲಯಗಳ ಅಡಿ ಬರುವ ಕಾಲೇಜುಗಳಿಗೆ ಅದನ್ನು ಹಸ್ತಾಂತರಿಸಲಾಗುತ್ತದೆ. ಸ್ನಾತಕೋತ್ತರ ಪ್ರವೇಶ ಪ್ರತ್ಯೇಕವಾಗಿಯೇ ನಡೆಯುತ್ತದೆ’ ಎಂದು ಅಧಿಕಾರಿಗಳು ಹೇಳಿದರು.

57 ಎಕರೆ ಜಮೀನು: ‘ದೇವನಹಳ್ಳಿ ಸಮೀಪ ಅಮರಾವತಿ ಬಳಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕಾಗಿ 57 ಎಕರೆ ಮಂಜೂರು ಆಗಿದೆ. ಇನ್ನೂ 115 ಎಕರೆ ಅಗತ್ಯ ಇದೆ. ಹಲವು ಮಂದಿಯ ಜಮೀನು ಅಲ್ಲಿದೆ. ಅವರಿಗೆ ಪರ್ಯಾಯ ಭೂಮಿ ನೀಡಿ ಒಟ್ಟಿಗೆ 172 ಎಕರೆ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ’ ಎಂದು ಕೆಂಪರಾಜು ಮಾಹಿತಿ ನೀಡಿದರು.

ನೇಮಕ ಪ್ರಕ್ರಿಯೆಗೆ ಆರು ತಿಂಗಳು: ‘ಪ್ರತಿ ವಿವಿಗೆ ಕನಿಷ್ಠ 200 ಸಿಬ್ಬಂದಿ ಅಗತ್ಯ ಇದೆ. ಸಿಬ್ಬಂದಿ ನೇಮಕಕ್ಕೆ ಕನಿಷ್ಠ ಆರು ತಿಂಗಳು ಬೇಕು. ವಿಶೇಷ ಬಜೆಟ್‌ನಲ್ಲಿ ₹400 ಕೋಟಿ ಅನುದಾನ ನೀಡುತ್ತಾರೆ ಎಂದು ಅನ್ನಿಸುವುದಿಲ್ಲ. ಹಾಗಾಗಿ ಈ ಬಾರಿಯೂ ಹೊಸ ವಿಶ್ವವಿದ್ಯಾಲಯ ಪ್ರಾರಂಭಗೊಳ್ಳುವುದು ಅನುಮಾನ’ ಎಂದು  ವಿಶ್ರಾಂತ ಕುಲಪತಿ ಪ್ರಭುದೇವ ತಿಳಿಸಿದರು.

ಲಾಂಛನ ಸಿದ್ಧವಾಗಿಲ್ಲ: ‘ಉತ್ತರ ಮತ್ತು ಕೇಂದ್ರ ವಿಶ್ವವಿದ್ಯಾಲಯಗಳಿಗೆ ಹೊಸ ಲಾಂಛನ ಸಿದ್ಧಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. 14 ಲಾಂಛನಗಳು ಬಂದಿವೆ. ಕಾಲಾವಕಾಶ ನೀಡಿ ಎಂದು ಕೆಲವರು ಕೇಳಿದ್ದಾರೆ. ಇನ್ನೂ ಇಲಾಖೆಯ ಅನುಮತಿ ದೊರೆತಿಲ್ಲವಾದ್ದರಿಂದ ಅವಕಾಶ ನೀಡಿದ್ದೇವೆ. ನಂತರ ಅದಕ್ಕೊಂದು ಸಮಿತಿ ರೂಪಿಸಿ, ಲಾಂಛನ ಆಯ್ಕೆ ಮಾಡುತ್ತೇವೆ’ ಎಂದು ಕೆಂಪರಾಜು ಮಾಹಿತಿ ನೀಡಿದರು.

ಯಾವ ಕ್ಷೇತ್ರ ಯಾವ ವಿ.ವಿ. ವ್ಯಾಪ್ತಿಗೆ?
ಬೆಂಗಳೂರು ದಕ್ಷಿಣ ವಿ.ವಿ:
ವಿಜಯನಗರ, ಬೊಮ್ಮನಹಳ್ಳಿ, ಪದ್ಮನಾಭನಗರ, ಆನೇಕಲ್, ಬೆಂಗಳೂರು ದಕ್ಷಿಣ, ಯಶವಂತಪುರ, ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಮಹಾಲಕ್ಷ್ಮಿ ಬಡಾವಣೆ, ನೆಲಮಂಗಲ, ಗೋವಿಂದರಾಜ ನಗರ, ಮಾಗಡಿ, ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ.

ಬೆಂಗಳೂರು ಕೇಂದ್ರ ವಿ.ವಿ: ಶಾಂತಿನಗರ, ಬ್ಯಾಟರಾಯನಪುರ, ಯಲಹಂಕ, ಮಲ್ಲೇಶ್ವರ, ಹೆಬ್ಬಾಳ, ಶಿವಾಜಿನಗರ, ಗಾಂಧಿನಗರ, ಚಿಕ್ಕಪೇಟೆ, ಬಸವನಗುಡಿ, ಬಿಟಿಎಂ ಬಡಾವಣೆ, ಜಯನಗರ, ರಾಜಾಜಿನಗರ.

ಬೆಂಗಳೂರು ಉತ್ತರ ವಿ.ವಿ: ಕೋಲಾರ, ಮಾಲೂರು, ಕೆ.ಆರ್‌. ಪುರ, ಪುಲಿಕೇಶಿನಗರ, ಸರ್ವಜ್ಞನಗರ, ಸಿ.ವಿ. ರಾಮನ್‌ ನಗರ, ಮಹದೇವಪುರ, ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ದೇವನಹಳ್ಳಿ, ಹೊಸಕೋಟೆ ಮತ್ತು ದೊಡ್ಡಬಳ್ಳಾಪುರ.

1993ರಲ್ಲೇ ವಿಭಜನೆ ಮಾತು
ಬೆಂಗಳೂರು ವಿಶ್ವವಿದ್ಯಾಲಯ ವಿಭಜಿಸಬೇಕೆಂಬ ಬೇಡಿಕೆ 1993ರಲ್ಲೇ ಇತ್ತು.  ನಂತರ ಈ ವಿಚಾರ ಮತ್ತೆ ಜೀವ ಪಡೆದಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ.

2009ರಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಅರವಿಂದ ಲಿಂಬಾವಳಿ ಅವರು ವಿಶ್ರಾಂತ ಕುಲಪತಿ ಪ್ರೊ.ಎನ್‌. ರುದ್ರಯ್ಯ ನೇತೃತ್ವದ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದ್ದರು. ಬೆಂಗಳೂರು ವಿವಿಯನ್ನು ವಿಭಜಿಸಿ ಮೂರು ವಿವಿಗಳನ್ನು ಸ್ಥಾಪನೆ ಮಾಡಬೇಕು ಎಂದು ಸಮಿತಿ ವರದಿ ಸಲ್ಲಿಸಿತ್ತು.

2015ರಲ್ಲೇ ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ಭಾಗಗಳಾಗಿ ವಿಭಜಿಸುವ ಮಸೂದೆಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ವಿಶೇಷ ಅಧಿಕಾರಿಗಳನ್ನು ನೇಮಿಸುವುದಕ್ಕೇ ಉನ್ನತ ಶಿಕ್ಷಣ ಇಲಾಖೆ ಒಂದು ವರ್ಷ ತೆಗೆದುಕೊಂಡಿದೆ.

ಅಂಕಿ ಅಂಶ

₹3 ಕೋಟಿ ನೂತನ ವಿ.ವಿಗಳಿಗೆ ಬೆಂಗಳೂರು ವಿ.ವಿ ನೀಡಿರುವ ಅನುದಾನ

2012ರಲ್ಲಿ ವಿ.ವಿ. ವಿಭಜನೆಗೆ ನಿರ್ಧಾರ

2015ರಲ್ಲಿ ಸಂಪುಟ ಸಮಿತಿ ಒಪ್ಪಿಗೆ

* ವಿ.ವಿ. ವಿಭಜನೆಗೇ ಐದು ವರ್ಷ ತೆಗೆದುಕೊಂಡರೆ ಉನ್ನತ ಶಿಕ್ಷಣದ ಗತಿಯೇನು? ವಿ.ವಿಗಳು ಈ ಶೈಕ್ಷಣಿಕ ವರ್ಷದಲ್ಲಿ ಆರಂಭವಾದರೂ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಐದು ವರ್ಷ ಬೇಕಾಗುತ್ತದೆ

-ಕೆ.ಆರ್‌.ವೇಣುಗೋಪಾಲ್, ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT