3 ತಿಂಗಳಲ್ಲಿ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ

7
ಅರ್ಕಾವತಿ ಬಡಾವಣೆಗಾಗಿ ಜಾಗ ಕೊಟ್ಟವರು, ಕಳೆದುಕೊಂಡವರಿಗೆ ಅವಕಾಶ

3 ತಿಂಗಳಲ್ಲಿ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ

Published:
Updated:
3 ತಿಂಗಳಲ್ಲಿ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ

ಬೆಂಗಳೂರು: ಅರ್ಕಾವತಿ ಬಡಾವಣೆಯಲ್ಲಿ  ಹಂಚಿಕೆಯಾದ ನಿವೇಶನವನ್ನು ರಿಡೂ ಪ್ರಕ್ರಿಯೆಯಿಂದಾಗಿ ಕಳೆದುಕೊಂಡವರಿಗೆ, ಬಡಾವಣೆಗೆ ಜಾಗ ನೀಡಿದ ರೈತರಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂರು ತಿಂಗಳಲ್ಲಿ ನಿವೇಶನ ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಿದ್ಧತೆ ನಡೆಸಿದೆ.

‘ನಗರಾಭಿವೃದ್ಧಿ ಇಲಾಖೆಯ ನಿರ್ದೇಶನದಂತೆ  3,700  ಫಲಾನುಭವಿಗಳಿಗೆ  ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಲಾಗುತ್ತದೆ. ಕಂಪ್ಯೂಟರೀಕೃತ ಲಾಟರಿ ಹಾಕುವ ಮೂಲಕ ಹಂಚಿಕೆ ಪ್ರಕ್ರಿಯೆ ನಡೆಸುತ್ತೇವೆ’ ಎಂದು ಬಿಡಿಎ ಕಾರ್ಯದರ್ಶಿ ಎ.ಬಿ.ಬಸವರಾಜು ತಿಳಿಸಿದರು.

‘ಹಂಚಿಕೆಯು ಪಾರದರ್ಶಕವಾಗಿರಲಿದೆ. ಪ್ರಾಧಿಕಾರವು ಅರ್ಜಿದಾರರೊಂದಿಗೆ ವೈಯಕ್ತಿಕ ಸಂವಹನ ನಡೆಸುವುದಿಲ್ಲ. ನಿವೇಶನ ಹಂಚಿಕೆಯ ದಿನದಂದು ಮಾತ್ರ ಅವರೊಂದಿಗೆ ಮಾತುಕತೆ ನಡೆಸಲಾಗುತ್ತದೆ’ ಎಂದರು.

‘ಅರ್ಕಾವತಿ ಬಡಾವಣೆಯಲ್ಲಿನ ಅರ್ಜಿದಾರರಿಗೆ ಅದೇ ಅಳತೆಯ ನಿವೇಶನಗಳನ್ನು ಇಲ್ಲಿಯೂ ನೀಡಲಾಗುತ್ತದೆ. ಆದರೆ, ಯಾವುದೇ ಸ್ಥಳದ ಆಯ್ಕೆಗೆ ಅವಕಾಶ ಇರುವುದಿಲ್ಲ. ಈ ರೀತಿಯ ಹಂಚಿಕೆಯು ಬಿಡಿಎ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಡೆಯುತ್ತಿದೆ. ಖಾಲಿ ನಿವೇಶನಗಳನ್ನು ಗುರುತಿಸುವಂತೆ ಎಂಜಿನಿಯರಿಂಗ್ ವಿಭಾಗಕ್ಕೆ ಸೂಚಿಸಿದ್ದೇನೆ.

ಅಳತೆ ಮತ್ತು ಸ್ಥಳಕ್ಕೆ ಅನುಗುಣವಾಗಿ ಜುಲೈ ಒಳಗಾಗಿ ನಿವೇಶನಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ’ ಎಂದರು. ಆದರೆ, ಬಿಡಿಎ ಕ್ರಮಕ್ಕೆ ಅರ್ಕಾವತಿ ಬಡಾವಣೆಯ ಅರ್ಜಿದಾರರು ಆಕ್ಷೇಪ ಎತ್ತಿದ್ದಾರೆ.

‘ಕೆಂಪೇಗೌಡ ಬಡಾವಣೆಯು ನಗರದ ಹೊರವಲಯದಲ್ಲಿದ್ದು, ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿಲ್ಲ. ಅಲ್ಲದೆ, ಮೂಲಸೌಕರ್ಯಗಳನ್ನು ಕಲ್ಪಿಸಿಲ್ಲ. ಅರ್ಕಾವತಿ ಬಡಾವಣೆಯು ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲೇ ಇದೆ. ಹೀಗಾಗಿ ಅಲ್ಲಿಯೇ ನಿವೇಶನಗಳನ್ನು ನೀಡಬೇಕು’ ಎಂದು ಅರ್ಕಾವತಿ ಬಡಾವಣೆಯ ಅರ್ಜಿದಾರ ಮಹೇಶ್ ಒತ್ತಾಯಿಸಿದರು.

‘ನಾವು ನಗರದ ಉತ್ತರ ಭಾಗದಲ್ಲಿ ಹೂಡಿಕೆ ಮಾಡಿದ್ದೇವೆ. ಆದರೆ, ಸರ್ಕಾರ ಮತ್ತು ಬಿಡಿಎ ನಮ್ಮನ್ನು ಪಶ್ಚಿಮ ಬೆಂಗಳೂರಿಗೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ನಮ್ಮನ್ನು ಸಂತೈಸಲು ಪ್ರಯತ್ನಿಸುತ್ತಿದೆ. ಆದರೆ, ಬಿಡಿಎ ಕ್ರಮವನ್ನು ನಾವು ಒಪ್ಪುವುದಿಲ್ಲ’ ಎಂದು ಹೇಳಿದರು.

‘ಬಡಾವಣೆಯ 435 ಫಲಾನುಭವಿಗಳು ನಿವೇಶನಗಳನ್ನು ಬಿಡಿಎಗೆ ಈ ಹಿಂದೆಯೇ ವಾಪಸ್‌ ನೀಡಿದ್ದರು. ಅವುಗಳನ್ನೇ ಈಗ ಹಂಚಿಕೆ ಮಾಡಲಾಗುತ್ತಿದೆ’ ಎಂದು ಕೆಲವರು ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry