ಮಂದಿರ, ಮಸೀದಿ, ಮಸಣ

7

ಮಂದಿರ, ಮಸೀದಿ, ಮಸಣ

Published:
Updated:
ಮಂದಿರ, ಮಸೀದಿ, ಮಸಣ

ಬೆಂಗಳೂರು: ‘ಫಲವತ್ತಾದ 1–2 ಎಕರೆ ಭೂಮಿಯಲ್ಲಿ ಮಂದಿರ, ಮಸೀದಿ, ಚರ್ಚು ಕಟ್ಟಲಾಗುತ್ತಿದೆ. ಅಭಿವೃದ್ಧಿಯ ದೃಷ್ಟಿಯಿಂದ ನೋಡಿದರೆ ಈ ಜಾಗಗಳೆಲ್ಲ ಮಸಣ ಇದ್ದಂತೆ’ ಎಂದು ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಹೇಳಿದರು. 2050ರ ಹೊತ್ತಿಗೆ ದೇಶಕ್ಕೆ 250 ದಶಲಕ್ಷ ಟನ್‌ ಆಹಾರ ಧಾನ್ಯ ಬೇಕಾಗುತ್ತದೆ ಎಂಬ ಅಂದಾಜಿದೆ. ಆಹಾರೋತ್ಪಾದನೆ ಹೆಚ್ಚಿಸುವ ಬಗ್ಗೆ ಚರ್ಚೆಯಾಗಬೇಕೇ ವಿನಾ ದೇವಸ್ಥಾನ, ಮಸೀದಿಗಳನ್ನು ಕಟ್ಟುವ ಬಗ್ಗೆಯಲ್ಲ ಎಂದರು.

‘ದಲಿತರ ಸಾಲ ಮನ್ನಾದಿಂದ ಅಂಬೇಡ್ಕರ್‌ಗೆ  ದ್ರೋಹ’

ಬೆಂಗಳೂರು:
‘ದಲಿತರ ಸಾಲಮನ್ನಾ ಮಾಡಿದರೆ ಅದು ಡಾ. ಅಂಬೇಡ್ಕರ್ ಅವರಿಗೆ ಎಸಗುವ ದ್ರೋಹ ’ ಎಂದು ಸಕಲೇಶಪುರ ಕ್ಷೇತ್ರದ(ಪರಿಶಿಷ್ಟ ಜಾತಿ ಮೀಸಲು) ಜೆಡಿಎಸ್ ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದರು. ವಿಧಾನಸಭೆಯಲ್ಲಿ ಇಲಾಖಾವಾರು ಬೇಡಿಕೆಗಳ ಕುರಿತು ಮಾತನಾಡಿದ ಅವರು ದಲಿತರ ಸಾಲಮನ್ನಾ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ‘ದಲಿತರ ಸಾಲ ಮನ್ನಾ ಮಾಡಬೇಕು ಎಂದು ಎಲ್ಲ ಸರ್ಕಾರದ ಅವಧಿಯಲ್ಲಿಯೂ ಹೋರಾಟ ನಡೆಸಿದ್ದೆ. 1970ರಿಂದ 2013ರವರೆಗೆ ಮಾಡಿದ್ದ ಸಾಲವನ್ನು ಕಾಂಗ್ರೆಸ್‌ ಸರ್ಕಾರ ಮನ್ನಾ ಮಾಡಿದೆ. ನೀನೂ ಅವರ ರೀತಿ (ಸವರ್ಣೀಯರ) ಮಾತನಾಡಬೇಡ’ ಎಂದು ಹೇಳಿದರು.

‘ನಾನೂ ದಲಿತ ಶಾಸಕನೇ. ದಲಿತರೂ ತಮ್ಮ ಕಾಲಮೇಲೆ ನಿಲ್ಲುವ ಶಕ್ತಿ ಪಡೆದುಕೊಳ್ಳಲಿ. ಸಾಲ ಮನ್ನಾ ಮಾಡುವ ಮೂಲಕ ನಮ್ಮ ಸ್ವಾಭಿಮಾನ ಕೆಣಕಬೇಡಿ’ ಎಂದು ಕುಮಾರಸ್ವಾಮಿ ಹೇಳಿದರು.

‘ಎಲ್ಲ ಕಡೆಯೂ ದಲ್ಲಾಳಿಗಳೇ ಹುಟ್ಟಿಕೊಂಡಿದ್ದಾರೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಸಾಲ ಪಡೆಯಬೇಕಾದರೆ  ನಿಮ್ಮ ಇಲಾಖೆಯ ದಲ್ಲಾಳಿಗಳ ಮೂಲಕವೇ ಹೋಗಬೇಕು. ಬ್ಯಾಂಕ್‌ಗಳು ಭ್ರಷ್ಟಾಚಾರದ ಕೇಂದ್ರಗಳಾಗಿದ್ದೂ ಮಧ್ಯವರ್ತಿಗಳ ನೆರವಿಲ್ಲದೆ ಸಾಲ ಸಿಗುವುದಿಲ್ಲ. ಹೀಗಾಗಿ ಸಾಲಮನ್ನಾ ಮಾಡಬೇಡಿ’ ಎಂದರು.

ಪ್ರಚಾರದ ಖರ್ಚು  ₹ 112 ಕೋಟಿ

ಬೆಂಗಳೂರು:
ಸರ್ಕಾರದ ಯೋಜನೆಗಳ ಪ್ರಚಾರಕ್ಕೆ ಎರಡು ವರ್ಷಗಳಲ್ಲಿ ₹112 ಕೋಟಿ ವೆಚ್ಚ  ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಆರ್‌. ಚೌಡರೆಡ್ಡಿ ತೂಪಲ್ಲಿ ಕೇಳಿದ ಪ್ರಶ್ನೆಗೆ ಅವರು ಲಿಖಿತ ಉತ್ತರ ನೀಡಿದ್ದಾರೆ.

2016–17ರಲ್ಲಿ ಪ್ರತಿ ಜಿಲ್ಲೆಗೆ ₹ 8 ಲಕ್ಷ ಬಿಡುಗಡೆ ಮಾಡಿ ಯೋಜನೆಗಳ ವಿವರ ಒಳಗೊಂಡ ಫಲಕಗಳನ್ನು ಅಳವಡಿಸಲಾಗಿದೆ.  ಇದಕ್ಕಾಗಿ ₹ 57.04 ಕೋಟಿ ವೆಚ್ಚ  ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಇದಲ್ಲದೇ, 2015–16ರಲ್ಲಿ ಮಾಧ್ಯಮಗಳ ಜಾಹೀರಾತಿಗಾಗಿ ₹ 21.17 ಕೋಟಿ ಮತ್ತು 2016–17ರಲ್ಲಿ ₹ 34 ಕೋಟಿ ಖರ್ಚು ಮಾಡಲಾಗಿದೆ ಎಂದು ಜೆಡಿಎಸ್‌ನ ಕಾಂತರಾಜು ಅವರ ಮತ್ತೊಂದು ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ಮೆಟ್ರೊ ಉದ್ಘಾಟನೆಗೆ ಪ್ರಣವ್

ಬೆಂಗಳೂರು:
ಉತ್ತರ–ದಕ್ಷಿಣ ಕಾರಿಡಾರ್‌ನ ಯಲಚೇನಹಳ್ಳಿ–ಸಂಪಿಗೆ ರಸ್ತೆ ಮಾರ್ಗದಲ್ಲಿ  ‘ನಮ್ಮ ಮೆಟ್ರೊ’ ಸಂಚಾರಕ್ಕೆ ಇದೇ 17ರ ಸಂಜೆ 6ಗಂಟೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಚಾಲನೆ ನೀಡಲಿದ್ದಾರೆ.

ವಿಧಾನಸಭೆಯಲ್ಲಿ ಹೇಳಿಕೆ ನೀಡಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ‘ಈ ಸಂಚಾರ ಆರಂಭವಾಗುವುದರೊಂದಿಗೆ ನಮ್ಮ ಮೆಟ್ರೊ ಮೊದಲ ಹಂತದ ಯೋಜನೆ ಮುಕ್ತಾಯವಾದಂತಾಗಲಿದೆ. ಜೂನ್ 18ರಿಂದ ಈ ಮಾರ್ಗದಲ್ಲಿ ಮೆಟ್ರೊ ಸೇವೆ ನಾಗರಿಕರಿಗೆ ಲಭ್ಯವಾಗಲಿದೆ’ ಎಂದು ಹೇಳಿದರು.

ಕಲಾಪ ಮುಂದೂಡಿದ ಬಳಿಕ ಉತ್ತರ ನೀಡಿದ ‘ಚಿಕ್ಕೆಜಮಾನ್ರು’

ಬೆಂಗಳೂರು:
ಕಲಾಪ ಮುಂದೂಡಿದ ಬಳಿಕ ಸದನಕ್ಕೆ ಉತ್ತರ ನೀಡಿ ತೋಟಗಾರಿಕೆ ಸಚಿವ ಎಸ್.ಎಸ್‌. ಮಲ್ಲಿಕಾರ್ಜನ್ ಅವರು ದಾಖಲೆ ಸೃಷ್ಟಿಸಿದರು.

‘ದೊಡ್ಡ ಯಜಮಾನ್ರು (ಶ್ಯಾಮನೂರು ಶಿವಶಂಕರಪ್ಪ) ಬದಲಿಗೆ ಸಚಿವರಾದ ಚಿಕ್ಕೆಜಮಾನ್ರು (ಮಲ್ಲಿಕಾರ್ಜುನ್) ಕಲಾಪ ನಡೆಯುವಾಗ ಇರುವುದಿಲ್ಲ, ಇದ್ದರೂ ಮಾತನ್ನೇ ಆಡುವುದಿಲ್ಲ. ಕಲಾಪ ಮುಗಿದ ಮೇಲೆ ಭಾಷಣ ಬಿಗಿಯಲು ಆರಂಭಿಸಿದ್ದಾರೆ’ ಎಂದು ಬಿಜೆಪಿ ಶಾಸಕರು ವ್ಯಂಗ್ಯ ಮಾಡುತ್ತಾ ಸದನದಿಂದ ಹೊರನಡೆದರು.

ತೆಂಗಿನ ಮರಗಳು ಒಣಗಿ ಹೋಗಿರುವ ಕುರಿತು ಸದನದಲ್ಲಿ ಅಲ್ಪಾವಧಿ ಚರ್ಚೆ ಮಂಗಳವಾರ ನಡೆದಿತ್ತು. ಬುಧವಾರ  ಸದನಕ್ಕೆ ಬಂದಿರದ ಮಲ್ಲಿಕಾರ್ಜುನ್‌ ಗುರುವಾರ ಸಂಜೆ ಕಲಾಪ ಮುಕ್ತಾಯವಾಗುವ ಹೊತ್ತಿಗೆ ಸದನಕ್ಕೆ ಬಂದಿದ್ದರು. ಆಲೂಗೆಡ್ಡೆ ಬಿತ್ತನೆ ಬೀಜದ ಕುರಿತ ಗಮನ ಸೆಳೆಯುವ ಸೂಚನೆಗೆ ಉತ್ತರವನ್ನೂ ನೀಡಿದರು. ಸಭಾಧ್ಯಕ್ಷ ಪೀಠದಲ್ಲಿದ್ದ ಎನ್.ಎಚ್‌. ಶಿವಶಂಕರ ರೆಡ್ಡಿ 6.20ರ ಸುಮಾರಿಗೆ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿರುವುದಾಗಿ ಘೋಷಿಸಿದರು. ಎಲ್ಲ ಸದಸ್ಯರೂ ಎದ್ದು ಹೊರಟಿದ್ದರು.

ಉಕ್ಕಿನ ಸೇತುವೆ ಬದಲು ಸುರಂಗ ಮಾರ್ಗ: ಜಾರ್ಜ್‌

ಬೆಂಗಳೂರು: 
ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಉಕ್ಕಿನ ಮೇಲ್ಸೇತುವೆ ಬದಲು ಸುರಂಗ ಮಾರ್ಗ (ಟನಲ್) ನಿರ್ಮಿಸುವ ಸಂಬಂಧ ಬಲ್ಗೇರಿಯ ಮೂಲದ ಕಂಪೆನಿಯೊಂದರ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಹೇಳಿದರು.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪ ವೇಳೆ ಕಾಂಗ್ರೆಸ್‌ನ ಕೆ.ಸಿ. ಕೊಂಡಯ್ಯ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ನಾಲ್ಕು ಮುಖ್ಯರಸ್ತೆ ಮತ್ತು  ಎರಡು ಸರ್ವೀಸ್‌ ರಸ್ತೆ ನಿರ್ಮಿಸುವ ಸಂಬಂಧ ಪ್ರಾಥಮಿಕ ವರದಿಯನ್ನು ಈಗಾಗಲೇ ಬಲ್ಗೇರಿಯಾದ ಕಂಪೆನಿ ನೀಡಿದೆ. ಇದಕ್ಕಾಗಿ ₹500 ಕೋಟಿ ವೆಚ್ಚ ಆಗಬಹುದೆಂದು ವರದಿಯಲ್ಲಿ ವಿವರಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಸುರಂಗ ಮಾರ್ಗ ನಿರ್ಮಿಸುವ ಚರ್ಚೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಮುಂದಿನ ವಾರ ಕಂಪೆನಿ ಪ್ರತಿನಿಧಿಗಳು ಮತ್ತೆ ಬರಲಿದ್ದಾರೆ. ಅಂತಿಮಗೊಂಡರೆ ಸಾರ್ವಜನಿಕರ ಅಭಿಪ್ರಾಯವನ್ನೂ ಪಡೆಯಲಾಗುವುದು ಎಂದು ಹೇಳಿದರು.

ಈ ಮಾರ್ಗದಲ್ಲಿ ಉಕ್ಕಿನ ಮೇಲ್ಸೇತುವೆ ನಿರ್ಮಿಸುವ ನಿರ್ಧಾರವನ್ನು ಸರ್ಕಾರ ವಾಪಸ್‌ ಪಡೆದಿದೆ. ಸಂಚಾರ ದಟ್ಟಣೆ ಉಂಟಾದರೂ ಜನ ಸರ್ಕಾರವನ್ನು ಟೀಕಿಸುತ್ತಾರೆ, ಅದಕ್ಕೆ ಪರಿಹಾರ ಕಂಡುಕೊಳ್ಳಲು ಹೋದರೆ ಕೆಲವರಿಂದ ಅದಕ್ಕೂ ವಿರೋಧ ಬರುತ್ತದೆ ಎಂದು ಸಚಿವ ಜಾರ್ಜ್‌ ಅವರು  ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry